`ಮೀನುಗಾರಿಕೆ: ಜಾಗತಿಕ ಒಪ್ಪಂದ ಅಗತ್ಯ'

7

`ಮೀನುಗಾರಿಕೆ: ಜಾಗತಿಕ ಒಪ್ಪಂದ ಅಗತ್ಯ'

Published:
Updated:

ಮಂಗಳೂರು: ಮೀನಿನ ಸಂತತಿ ಮುಂದಿನ ತಲೆಮಾರಿಗೆ ಸಹ ಉಳಿಯಬೇಕಿದ್ದರೆ ಮೀನುಗಾರಿಕೆಯಲ್ಲಿ  ಕೆಲವೊಂದು ನಿಯಮಗಳನ್ನು ಪಾಲಿಸುವುದು ಅಗತ್ಯ. ರಾಜ್ಯದಲ್ಲಿ ಇದನ್ನು ಜಾರಿಗೆ ತಂದರೂ ಇತರ ರಾಜ್ಯಗಳು ಈ ನಿಯಮಗಳನ್ನು ಪಾಲಿಸುತ್ತಿಲ್ಲ. ಇದಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲೇ ಕಡಲ ಮೀನುಗಾರಿಕೆ ವಿಚಾರದಲ್ಲಿ ಒಪ್ಪಂದವೊಂದು ಏರ್ಪಡುವ ಅಗತ್ಯ ಇದೆ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರವಿಂದ ಜನ್ನು ಸಲಹೆ ನೀಡಿದರು.`ಆಳಸಮುದ್ರ ಮೀನುಗಾರಿಕೆಗೆ ತೆರಳುವಾಗ ನಿರ್ದಿಷ್ಟ ಎಂಜಿನ್ ಸಾಮರ್ಥ್ಯದ ದೋಣಿಗಳನ್ನು ಮಾತ್ರ ಬಳಸಬೇಕು ಎಂಬ ನಿಯಮ ರಾಜ್ಯದಲ್ಲಿದೆ. ಆದರೆ ಇತರ ರಾಜ್ಯಗಳು ಇದನ್ನು ಒಪ್ಪಲು ಸಿದ್ಧವಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳು ಭಾರಿ ಸಾಮರ್ಥ್ಯದ ದೋಣಿಗಳೊಂದಿಗೆ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸಿದಾಗ ನಮಗಷ್ಟೇ ನಿರ್ಬಂಧ ವಿಧಿಸುವುದು ಸರಿಯೇ ಎಂಬುದು ಎಲ್ಲರ ಪ್ರಶ್ನೆ.

ಇದಕ್ಕಾಗಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದೆಷ್ಟೋ ಒಪ್ಪಂದಗಳು ಆಗಿರುವಂತೆ ಮೀನುಗಾರಿಕೆಗೂ ಒಪ್ಪಂದವೊಂದು ಏರ್ಪಡುವ ಅಗತ್ಯ ಇದೆ' ಎಂದು ಅವರು ಸೋಮವಾರ ಇಲ್ಲಿನ ಮಿಲಾಗ್ರಿಸ್ ಸಭಾಂಗಣದಲ್ಲಿ ಆರಂಭವಾದ `ಹಸಿವು ಮತ್ತು ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಜಲಚರ ಸಂಪನ್ಮೂಲಗಳು; ಅವಕಾಶಗಳು ಮತ್ತು ಸವಾಲುಗಳು' ಎಂಬ ವಿಷಯದ ಮೇಲಿನ ಜಾಗತಿಕ ವಿಚಾರ ಸಂಕಿರಣದಲ್ಲಿ ತಿಳಿಸಿದರು. ಏಷ್ಯನ್ ಫಿಷರೀಸ್ ಸೊಸೈಟಿಯ ಭಾರತೀಯ ಘಟಕದ (ಎಎಫ್‌ಎಸ್‌ಐಬಿ) ರಜತ ಮಹೋತ್ಸವದ ಪ್ರಯುಕ್ತ ಈ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.ಮೀನುಗಳ ಸಂತಾನೋತ್ಪತ್ತಿ ಸಮಯದಲ್ಲಿ ಮೀನುಗಾರಿಕೆಗೆ ನಿಷೇಧ ವಿಧಿಸಲಾಗಿದೆ. ನಿರ್ದಿಷ್ಟ ಗಾತ್ರದ ಬಲೆಗಳನ್ನೇ ಬಳಸಿ ಚಿಕ್ಕಪುಟ್ಟ ಮೀನುಗಳನ್ನು ಸಮುದ್ರದಲ್ಲೇ ಬಿಟ್ಟು ಭವಿಷ್ಯಕ್ಕಾಗಿ ಉಳಿಸಬೇಕು ಎಂಬ ನಿಯಮವೂ ಇದೆ. ಇತರ ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹ ನಿಯಮಗಳು ಜಾರಿಗೆ ಬಾರದ ಹೊರತು ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಳ್ಳುವುದು ಸಾಧ್ಯವಿಲ್ಲ ಎಂದ ಅವರು, ಮೀನು ಮರಿ ಇಡುವಂತಹ ಕರಾವಳಿಯ ಕಾಂಡ್ಲಾ ಸಂಪತ್ತನ್ನು, ಹವಳ ದಿಬ್ಬಗಳನ್ನು ರಕ್ಷಿಸುವ ಅಗತ್ಯ ಇದೆ ಎಂದರು.

ಭಟ್ಕಳ ಸಮೀಪದ ನೇತ್ರಾಣಿ ದ್ವೀಪದಲ್ಲಿ ನೌಕಾ ಸಮರಾಭ್ಯಾಸ ನಡೆಸಬಾರದು. ಇದರಿಂದ ಅಪೂರ್ವ ಹವಳ ದಿಬ್ಬಗಳಿಗೆ ಅಪಾಯ ಉಂಟಾಗುತ್ತದೆ ಎಂದು ನ್ಯಾಯಾಲಯವೇ ತೀರ್ಪು ನೀಡಿರುವುದು ಮಹತ್ವದ ಬೆಳವಣಿಗೆ ಎಂದರು.ಬೀದರ್‌ನ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ರೇಣುಕಾ ಪ್ರಸಾದ್ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಜಲಚರ ಸಂಪನ್ಮೂಲದಲ್ಲಿ ಶೇ 6ರಿಂದ 8ರಷ್ಟು ಪ್ರಗತಿ ಇದ್ದು, ಈ ಗತಿಯನ್ನು ಸುಸ್ಥಿರವಾಗಿ ಉಳಿಸುವ ಅಗತ್ಯ ಇದೆ ಎಂದರು.ಎಎಫ್‌ಎಸ್‌ಐಬಿ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಚ್.ಪಿ.ಸಿ.ಶೆಟ್ಟಿ ವಿಚಾರ ಸಂಕಿರಣ ಉದ್ಘಾಟಿಸಿದರು. ಹೈದರಾಬಾದ್‌ನ ತಜ ಡಾ.ಎಂ.ವಿ.ಗುಪ್ತ, ಬ್ಯಾಂಕಾಕ್‌ನ `ನಾಕಾ' ನಿರ್ದೇಶಕ ಡಾ.ಎ.ಇ.ಏಕನಾಥ್, ರೋಮ್‌ನ ಎಫ್‌ಎಒ ಮುಖ್ಯಸ್ಥ ಡಾ.ಜಿಯನ್‌ಸನ್ ಜಿಯಾ, ಅಮೆರಿಕದ ಹಿರಿಯ ವಿಜ್ಞಾನಿ ಡಾ.ಕೆವನ್ ಎಲ್.ಮೈನ್, ಮಲೇಷ್ಯದದಲ್ಲಿರುವ ಎಎಫ್‌ಎಸ್‌ನ ಅಧ್ಯಕ್ಷ ಡಾ.ಡೆರೆಕ್ ಸ್ಟೇಪಲ್ಸ್, ಎಎಫ್‌ಎಸ್‌ಐಬಿ ಉಪಾಧ್ಯಕ್ಷ ಡಾ.ಜೆ.ಕೆ.ಜೇನಾ ಇತರರು ಮಾತನಾಡಿದರು.ಇದೇ ಸಂದರ್ಭದಲ್ಲಿ ಪ್ರೊಫೆಷನಲ್ ಫಿಷರೀಸ್ ಗ್ರ್ಯಾಜುವೇಷನ್ ಫೊರಂನ (ಪಿಎಫ್‌ಜಿಎಫ್) ಪ್ರತಿಷ್ಠಿತ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು.ಜಲಚರ ಆಹಾರ ಸಂರಕ್ಷಣೆ, ಅಪೌಷ್ಟಿಕತೆ ನಿವಾರಣೆ ವಿಚಾರವಾಗಿ ಇದೇ 6ರವರೆಗೆ ಜಗತ್ತಿನ ಹಲವಾರು ತಜ್ಞರು ವಿಷಯ ಮಂಡಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry