ಮೀನುಗಾರಿಕೆ ಸಂಶೋಧನಾ ಕೇಂದ್ರ ಆರಂಭ

7

ಮೀನುಗಾರಿಕೆ ಸಂಶೋಧನಾ ಕೇಂದ್ರ ಆರಂಭ

Published:
Updated:

ವಿಜಾಪುರ: ಉತ್ತರ ಕರ್ನಾಟಕ ಭಾಗದಲ್ಲಿ ಅಲಂಕಾರಿಕ ಮೀನುಗಳು ಹಾಗೂ ಸಾಮಾನ್ಯ ಮತ್ಸ್ಯ ಕೃಷಿಗೆ ಉತ್ತೇಜನ ನೀಡಲು ಬೀದರನ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇಲ್ಲಿಯ ಭೂತನಾಳ ಕೆರೆ ಹತ್ತಿರ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರವನ್ನು ಆರಂಭಿಸಿದೆ.‘ಕೆರೆಯ ಕೆಳಬದಿಯಲ್ಲಿ ಸುಮಾರು ಎರಡೂವರೆ ಎಕರೆ ವಿಸ್ತೀರ್ಣದಲ್ಲಿ ಚಟುವಟಿಕೆ ಪ್ರಾರಂಭಿಸಲಾಗಿದೆ. ಸಂಶೋಧನಾ ಕೇಂದ್ರಕ್ಕೆ ಹೆಚ್ಚುವರಿಯಾಗಿ ಏಳು ಎಕರೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾ ಆಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಸಂಶೋಧನಾ ಕೇಂದ್ರದ ಮುಖ್ಯಸ್ಥ  ಡಾ. ಮೋಹಿರೆ ಹಾಗೂ ಸಹ ಪ್ರಾಧ್ಯಾಪಕ ಡಾ. ಬಿರಾದಾರ ಹೇಳಿದ್ದಾರೆ.‘ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ತರುವ ಉದ್ಯಮ ಇದಾಗಿದೆ. ಇತ್ತೀಚಿನ ದಿನಗಳಲ್ಲಿ ಅಲಂಕಾರಿಕ ಮೀನುಗಳಿಗೆ ಅಪಾರ ಬೇಡಿಕೆ ಇದೆ. ಒಂದು ಮೀನಿಗೆ 5 ರಿಂದ 1.75 ಲಕ್ಷ ರೂಪಾಯಿ ವರೆಗೆ ಬೆಲೆ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಮೀನುಮರಿಗಳ ಉತ್ಪಾದನೆ, ಸಂಶೋಧನೆ ಮತ್ತು ರೈತರಿಗೆ ಮಾಹಿತಿ ನೀಡುವ ಏಕೈಕ ಕೇಂದ್ರ ಇದಾಗಿದೆ’ ಎಂದರು.

‘ಮಾರ್ಚ್ ತಿಂಗಳಲ್ಲಿ  ಚಟುವಟಿಕೆ ಆರಂಭಿಸಿರುವ ಈ ಕೇಂದ್ರದಲ್ಲಿ  ಆರಂಭದಲ್ಲಿ 6 ಲಕ್ಷ ಮೀನು ಮರಿಗಳನ್ನು ಉತ್ಪಾದಿಸಲಾಗುತ್ತಿದೆ. ಜಿಲ್ಲೆಯಲ್ಲಿ 40 ಲಕ್ಷ ಮೀನುಮರಿಗಳಿಗೆ ಬೇಡಿಕೆ ಇದೆ.ಮತ್ಸ್ಯ ಸಂಶೋಧನಾ ಕೇಂದ್ರದಲ್ಲಿ 27 ವಿವಿಧ ಮಾದರಿಯ ಮೀನು ಉತ್ಪಾದನಾ ಕೊಳಗಳಿವೆ. ಸಂಶೋಧನಾ ಚಟಿವಟಿಕೆಗಳನ್ನು ವಿಸ್ತಾರಗೊಳಿಸಿ ನೀರು ಮತ್ತು ಮಣ್ಣು ತಪಾಸಣೆ ಪ್ರಯೋಗಾಲಯ, ಮೀನು ಆರೋಗ್ಯ ತಪಾಸಣೆ ಪ್ರಯೋಗಾಲಯ, ಜೈವಿಕ ತಂತ್ರಜ್ಞಾನ ಪ್ರಯೋಗಾಲಯ, ಮತ್ಸ್ಯಾಲಯ, ರೈತರ ತರಬೇತಿ ಕೇಂದ್ರ, ಮೀನುಮರಿ ಉತ್ಪಾದನಾ ಘಟಕ, ಮೀನುಮರಿ ಸಾಕುವ ಹೆಚ್ಚುವರಿ ಕೊಳಗಳ ನಿರ್ಮಾಣ ಒಳಗೊಂಡಂತೆ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ವಿಜಾಪುರ ವಾತಾವರಣಕ್ಕೆ ಸಹಜ ಮೀನುಕೃಷಿಗಾಗಿ ಹೊಂದುವ ತಳಿಗಳಾದ ಕಾಟಲಾ, ರೋಹು, ಮೃಗಾಲ, ಬೆಳ್ಳಿಗಂಡೆ, ಹುಲ್ಲುಗಂಡೆ ಹಾಗೂ ಸಾಮಾನ್ಯ ಗಂಡೆ ತಳಿಗಳನ್ನು ಉತ್ಪಾದಿಸಿ ರೈತರಿಗೆ ವಿತರಿಸಲಾಗುವುದು’ ಎಂದು ಹೇಳಿದರು.‘ಅತ್ಯಂತ ಲಾಭದಾಯಕವಾಗಿರುವ ಅಲಂಕಾರಿಕ ಮೀನು ಸಾಗಾಣಿಕೆ ಬಗ್ಗೆ ರೈತರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಯೋಜನೆ ಹಮ್ಮಿಕೊಳ್ಳ ಲಾಗಿದೆ. ಅಲಂಕಾರಿಕ ಮೀನು ತಳಿಗಳಾದ ರೆಡ್‌ಕ್ರಾಸ್, ಲಯನ್‌ಹೆಡ್, ಹಾರಿಮಂಚ್, ಬ್ಲಾಕ್‌ಮೂಲಿ, ವೈಟ್‌ಮೂಲಿ, ಗುರಾಮಿ, ಹೆಂಜಲ್‌ಫೀಶ್ ಇತರ ತಳಿಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ವಿತರಿಸುವ ಚಟುವಟಿಕೆ ನಡೆದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅಲಂಕಾರಿಕ ತಳಿಗಳು ಹಾಗೂ ಸಾಮಾನ್ಯ ತಳಿಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ’ ಎಂದರು.‘ಜಿಲ್ಲೆಯಲ್ಲಿ 126 ದೊಡ್ಡ ಕೆರೆಗಳು, 122 ಕಿ.ಮೀ. ವ್ಯಾಪ್ತಿಯ ಎರಡು ನದಿಭಾಗಗಳು, 120 ಹೆಕ್ಟರ್ ಪ್ರದೇಶವುಳ್ಳ ಸಮುದಾಯ ಆಧಾರಿತ ಕೆರೆಗಳು, 122 ಕಿ.ಮೀ. ನೀರಾವರಿ ಪ್ರದೇಶವುಳ್ಳ ಕೃಷ್ಣಾ ಎಡದಂಡೆ ಕಾಲುವೆ, 48 ಸಾವಿರ ಹೆಕ್ಟರ್ ಪ್ರದೇಶವುಳ್ಳ ಆಲಮಟ್ಟಿ ಜಲಾಶಯ, 13 ಸಾವಿರ ಹೆಕ್ಟರ್ ಪ್ರದೇಶವುಳ್ಳ ಬಸವ ಸಾಗರ ಜಲಾಶಯ ಹೀಗೆ ಮೀನು ಕೃಷಿಗೆ ಸಾಕಷ್ಟು ಸ್ಥಳಾವಕಾಶವಿದೆ.  ಜಿಲ್ಲೆಯಲ್ಲಿ 19 ಪ್ರಾಥಮಿಕ ಮೀನುಗಾರರ ಸಹಕಾರ ಸಂಘಗಳಿದ್ದು, 4848 ಸದಸ್ಯರಿದ್ದಾರೆ. 1773 ಜನರು ಪೂರ್ಣಪ್ರಮಾಣದ ಮೀನು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ’  ಎಂದು ಅವರು ವಿವರ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry