ಮೀನ್‌ಗೆ ಮೀನೇ ತಿಂಡಿ

7

ಮೀನ್‌ಗೆ ಮೀನೇ ತಿಂಡಿ

Published:
Updated:ಖರೆ ಹೇಳೂದಾದ್ರೆ, ನಮ್ಮ ದ್ಯಾವ ಅಗ್ದಿ ಭೋಳೆ. ಚಿತ್ರಾನ್ನಕ್ಕೂ ಚಿಕನ್ ಪಲಾವ್‌ಗೂ ಫರಕ್ಕು ತಿಳಿಯದವ. ‘ಎಂಗವ್ಳೆ ಚಿತ್ರಾನ್ನ?’ ಎಂದು ಕೇಳಿದರೆ ಬುಲ್‌ಟೆಂಪಲ್ ಬಸವನಂತೆ ಗೋಣು ನಿಮಿರಿಸಿ ನಿಲ್ಲುತ್ತಾನೆ. ಸೊಲ್ಲಿಲ್ಲ. (ಅಂದಹಾಗೆ ಮುಳ್ಳೂರ ಮಂದಿಗೆ ಲಿಂಗಭೇದವಿಲ್ಲ. ಎಲ್ಲವೂ ಸ್ತ್ರೀಲಿಂಗವೆ!) ‘ಅಲ್ಲ ಕಣ್ಲಾ ಆ ಪಲಾವ್‌ಗಾನ ಬೋನ್‌ಲೆಸ್ ಆಗಿದ್ರೆ ಬೊಂಬಾಟ್! ಏನಮ್ತಿ?’ ಎಂದು ಕೇಳಿದಾಗಲೂ ಹೆಸರಘಟ್ಟದ ಹೋರಿಯಂತೆ ಗೋಣುಕೊಂಕಿಸಲಾರನೆ! ಏನಾಯ್ತು ಇವ್ನಿಗೆ? ‘ಮೈಯಾಗ ಕಸು ಕಳಕೊಂಡವ್ನೆ’ ಅಂತಾರೆ ಪ್ರಾಂಶುಪಾಲ ಪ್ರೊ. ಕಂಬ್ಳಿಉಳ. ‘ಅವನೆ ನಸೀಬ್‌ಖರಾಬಾಗೈತೆ’ ಅಂತಾಳೆ ಸಾಹೇಬರ ಆಪ್ತ ಸಹಾಯಕಿ ಕುಮಾರಿ ಲುಖ್‌ಸಾನಾ ಸುಲ್ತಾನಾ. ಅದು ಹಂಗಲ್ಲ ‘ಜಿಲ್ಟೆಡ್ ಲವ್’ ಅಂತ ಒಕ್ಕಣೆ ಛಪಾಯಿಸಿದ ಕಾಲೇಜಿನ ಪಡ್ಡೆ ಹೈಕಳು ಕಂಡಕಂಡಲ್ಲಿ ಭಿತ್ತಿಗಳನ್ನು ಪತ್ರಗಳಿಂದ ಅಲಂಕರಿಸಿದರು. ಕಾರಣಗಳು ನೂರೆಂಟು. ಲುಖ್‌ಸಾನಾ-ಕಂಬ್ಳಿ ಉಳ, ನಿಕಾ ಮಾಡ್ಕಂತವ್ರೆ ಎಂಬ ಗುಲ್ಲು. ಇತ್ತ ಆಂಗ್ಲ ಪ್ರಾಧ್ಯಾಪಕ ಅಳಸಿಂಗರ್ (ಯಾ ಉರಿಸಿಂಗರ್?) ಮೇಲುಕೋಟೆ ಮತ್ತು ಸಂಸ್ಕೃತ ಉಪನ್ಯಾಸಕಿ, ಆಂಡಾಳಮ್ಮನ ಎರಡನೆಯ ಗಂಡನ ಮೂರನೆಯ ಮಗಳು ಮಾರ್ಗರೇಟ್ ಮಂದಾಕಿನಿ ಇಬ್ರೂನೂವೆ ವೇಳಾಂಗನ್ನಿಯಲ್ಲಿ, ತದನಂತರ ಶ್ರೀರಂಗದಲ್ಲಿ ಪಾಣಿಗ್ರಹಣ ಮಾಡಿದ್ದೇ, ದ್ಯಾವನಮಿದುಳಿಗೆ ಗ್ರಹಣ ಬಡಿಯಿತೆ? ತಾನೊಬ್ಬನೆ ಹುಟ್ಟಾಬ್ರಹ್ಮಚಾರಿಯಾದೆನೆ?ಬದುಕಿನ ನಿಡುಹಾದಿಯಲ್ಲಿ ಒಂದು ಫ್ಲಾಷ್‌ಬ್ಯಾಕ್- ದ್ಯಾವನಲ್ಲಿ ಕನ್ನಡ ಕಲಿಯಲು ಬಂದ ಕಾರಮಡೈ ಕೃಷ್ಣವರ್ಣೆ ನ್ಯಾನ್ಸಿ ನಲ್ಲತಂಬಿಯನ್ನು ಗೋವಾದ ಛೆಫ್ ಗ್ರಿಗೊರಿಬ್ರೆಗಾನ್ಸಾ ಪಟಾಯಿಸಿ ಪಣಜಿಗೆ ಕೊಂಡೊಯ್ದ. ಅಂಬಿಗರ ಯೂನಿಯನ್ ಲೀಡರ್, ಮಾಜಿ ಹೀರೋಯಿಣಿ ಚಪಲಕುಮಾರಿಯತ್ತ ಮುಖ ಮಾಡಿದರೆ ‘ಒರೆ ಪಿಚ್ಚಿವಾಡ! ನಿನ್ನು ಇಕ್ಕಡ ರಮ್ಮನಿ ಎವರು ಪಿಲಿಸ್ಚಾರು? ನೇಡು ಪೋಯಿ ರೇಪು ರಾ’ ಎಂದು ಅಂದರ್ ಬಾಹರ್ ಆಡುತ್ತಾಳೆ. ಶಿವನೆ! ರಮ್ಮಿನಲ್ಲಿ ಶುರುಹಚ್ಚಿ ರೇಪಿಗೆ ಇಳಿದಳೆ ಈ ಚಿತ್ರಾಂಗಿ!ಒಂದು ನಸುಕು; ಕೆರೆಯೇರಿಯ ಕಲ್ಲುಬೆಂಚಿನ ಮೇಲೆ ಕುಂತು, ಮೂಡಲಬೆಟ್ಟದ ಮೇಲೆ ಮೂಡಲಿರುವ ನೇಸರನತ್ತ ಮುದುಡಿದ ಮೊಗತೋರಿ ನಿಡುಸುಯ್ದ ನಮ್ಮ ದ್ಯಾವ. ಹಿಂದಿನ ಸಂಜೆಯಷ್ಟೆ ಯಾರೋ ಕಿಡಿಗೇಡಿಗಳು ‘ವೃದ್ಧರನ್ನು ಗೌರವಿಸಿದರೆ ಹುಚ್ಚರನ್ನು ತಲೆಗೆ ಹಚ್ಚಿಕೊಂಡಂತೆ’ ಎಂಬ ಕುಹ ಕಿಡಿಯನ್ನು ಹೊಚ್ಚಹೊಸ ಪೆಯಿಂಟ್‌ನಲ್ಲಿ ಬರೆದಿದ್ದ ಅಕ್ಕರಗಳು ಇನ್ನೂ ಹಸಿಯಾಗಿಯೇ ಇದ್ದವು. ದ್ಯಾವ ತಿಳಿಯದೆ ಒರಗಿದ. ಬೆಂಬದಿಯಲ್ಲಿ, ಲೋಕಲ್ ಲೇಡಿ ಚಾಟರ್ಲಿಯೆಂದು ಖ್ಯಾತಿವೆತ್ತ ಸಮಾಜಸೇವಕಿ ಯಶೋದಾ ಕುಪ್ಸದ, ಕುಪ್ಪಸವಿಲ್ಲದ ತೋಳಿನಿಂದ ಕ್ಷಮಿಸಿ- ತೋಳಿಲ್ಲದ ಕುಪ್ಪಸ ತೊಟ್ಟು ಮೆದುವಾಗಿ, ಹದವಾಗಿ, ದ್ಯಾವನ ಬೆನ್ನು ಬಳಸಿ  ‘ಹಾಯ್ ದೇವ್’ ಎಂದು ಕುಕಿಲುತ್ತಿದ್ದಂತೆ ದ್ಯಾವ ಬೆಚ್ಚಿದ- ವಾಟ್ಸ್ ಕುಕಿಂಗ್‌ಉ! ಇ ಇ ಇಲ್ಕಣವ್ವ! ‘ನಮ್ಮವ್ವ ಅಡುಗೆ ಅಟ್ತವ್ಳೆ ನಾ ಕುಕ್ಕಾಂಗಿಲ್ಲ, ನೀಉಣ್ಣಾಕೆ ಬತ್ತೀಯೇನು ಒತ್ತಾರೆ?’ ಎಂದು ಕೇಳಿದ. ಯಶೋದೆಯ ಮುಖ ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಂತೆ ಕೆಂಪಡರಿ, ಏರಿಯತ್ತ ಮೊಗ ತಿರುವಿ ದೌಡು ಕಿತ್ತಳಾ ನಡುಹರೆಯದ ನೀರೆ. ‘ಇವ್ಳ ಬತ್ತಾಳೆ, ಮುದ್ದೆ, ಅವರೆಕಾಳು ಎಸರು ಮುಕ್ಕೋಕ್ಕೆ’ ಎಂದು ದ್ಯಾವ ಕನಸು ಕಾಣುತ್ತಲೆ ‘ರತ್ನನ ಪದದತ್ತ’ ಕಣ್ಣೋಡಿಸಿದ. (ಈಗೀಗ ಬೆಂಗ್ಳೂರಿನ ಬಾರುಗಳಿಗಿಂತ ರತ್ನನಪದ, ‘ಉಮರನ ಒಸಗೆ’ಯೇ ನಶಾ ಛಡಾಯಿಸುತ್ತವೆ ಎಂಬ ಭ್ರಮೆ) ‘ಅವೆಲ್ಲ ಕಿಲುಬುಹಿಡಿದ ಕವನಗಳು ಕಣ್ಲಾ. ಲಕ್ಷ್ಮಣರಾಯರ ಗೋಪಿಗಾಂಡಲೀನ ಓದು, ಕೊತಕೊತ ಕುದಿಯೋ ಎಣ್ಣೆ ಒಳಗೆ ಬುರ್ ಬುರ್ ಗಿರಕಾಯಿಸೋ ಬೋಂಡದ ಹಾಗೆ ತೆಲಿ ಗಿರಕಾಯಿಸ್ತೈತಿ’ ಎಂದು ಯಾರೋ ನಮ್ಮ ಕವಿ ಹೇಳಿದ ನೆನಪು. ಓದಿದರಾಯಿತು. ಸದ್ಯಕ್ಕೆ ರತ್ನ ‘ನಾಯ್ಗೆ ನಾಯೇ ತಿಂತೈತಂತೆ/ ಮೀನ್‌ಗೆ ಮೀನೇ ತಿಂಡಿ/ ಮನ್ಸನ್ ಮನ್ಸಾ ತಿಂತಾನೀಗ/ ಜೀವಪೂರ ಹಿಂಡಿ’/ ದ್ಯಾವ ಮೈ ಕೊಡವಿಕೊಂಡು ಎದ್ದವನೆ ‘ಯುರೇಕಾ’ ಎಂದರಚುತ್ತ ಮನೆಗೋಡಿದ ತಲೆಯೊಳಗೆ ನೂರಾರು ಮಿಂಚಿನ ಹುಳ. ಎಲ್ಲೋ ಕಂಡಂತಿದೆ ಈ ಸಾಲು. ಮನೆಯಿಂದ ಮಠಕ್ಕೆ, ಮಠದಿಂದ ಕಾಲೇಜಿಗೆ ಚಿಂಪಾಂಜಿಯಂತೆ ಛಂಗನೆ ನೆಗೆಯುತ್ತ ಪ್ರಾಂಶುಪಾಲರ ಕೋಣೆಯೊಳಗೆ ಕುಸಿದುಬಿದ್ದ. ಪಿ.ಏ. ಲುಖ್‌ಸಾನಳ ಬೆಂಡೆಕಾಯಿ ಬೆರಳಿನ ಸ್ಪರ್ಶಕ್ಕೆ ಚೇತರಿಸಿಕೊಂಡು ಮೇಲೆದ್ದ. ಪ್ರಾಂಶುಪಾಲರು ಕಕ್ಕಾಬಿಕ್ಕಿ- ‘ಹೇನಾಯ್ತು ದ್ಯಾವ್ರ? ಬಿನ್ನಮತೀಯರು ಕೇಸ್ ಗೆದ್ದರಾ?ಸರ್ಕಾರ ಕಳಚ್ಕಂಡ್ತಾ’? ದ್ಯಾವ- ‘ಗೋಲಿ ಒಡೀರೀ ಸಾರ್, ಕೇಸ್‌ಗೆ ಅದು ಬ್ರೀಫ್‌ಕೇಸು. ಇಲ್ಲೈತೆ ಸೂಟ್‌ಕೇಸು. ಇದು ರನ್ನ ಗದಾಯುದ್ಧ ಈ ಪದ್ಯ ನೋಡಿ. ‘ಮುಂಬಿಟ್ಟು ಕಾದಿ ಕೊಲೆ ಹೈ/ ಡಿಂಬಿಯನಾ ಸಮರರಂಗದೊಳ್ ಮೀನ್ ಮೀನಂ/ ತಿಂಬಂತಿರೆ ನಾಯ್ ನಾಯಂ/ ತಿಂಬಂತಿರೆ ತಿಂದರಲ್ಲಿ ರಕ್ಕಸಿಯರ್ಕಳ್’- ಅಲ್ನೋಡಿ ರತ್ನನಪದ ಐತೆ. ಎಲ್ಡೂ ಹೊಂದೆ, ಕೃತಿಚೌರ್ಯ- ಹೇನಮ್ತೀರಿ! ದ್ಯಾವನಪದ ಪುಂಜ ಧಾರಾಕಾರವಾಗಿ ಪುಟಿಯುತ್ತಿದ್ದಂತೆ ಕಂಬ್ಳಿಉಳ ಅವರ ಮಿದುಳು ಮಿಂಚಿನಂತೋಡಿತು.ಅದು ದೂರಾಲೋಚನೆಯೋ ದುರಾಲೋಚನೆಯೋ ಆ ಗುಲಗಂಜಿ ಮಲೆ ಮಾದೇವನೆ ಬಲ್ಲ- ‘ದ್ಯಾವು! ನಾನಿಂಗೆ ಹೊನ್‌ಮಂತ್ ಮೆಟರ್ನಿಟಿ ಲೀವ್ ಕೊಟ್ಟೇನು. ನೀನು ಇಂಗೆ ನಂಖನ್ನಡ ಕಾವ್ಯದೊಳಗೆ ಹೆಲ್ಲಿಲ್ಲಿ ಕಳ್ತನಾ ಹಾಗೈತಿ, ಹೆಕ್ಕಂಡ್ ಬಂದ್ ತೀಸಿಸ್ ಬರಿ, ನಾಗೈಡು ನಿಂಗೆ. ಡಾಕ್ಟರೇಟ್ ಕೊಡಿಸ್ತೀನಿ ದ್ಯಾವು! ಎಂದು ಬೆನ್ನುತಟ್ಟಿ ಕಳುಹಿಸಿದರು; ಬೆನ್ನಹಿಂದೆ ‘ಮಸೆ ಮಸೆ ಕೊಡಲಿಮಸೆ’ ಸಾಲುಗಳು ರಿಂಗಣಿಸುತ್ತಿದ್ದವು. ದ್ಯಾವ ಇಡೀ ಒಂದು ತಿಂಗಳು ಹಗಲಿರುಳು ಕಣ್ಣಿಗೆ ಹರಳೆಣ್ಣೆ ಹುಯಿದು ಆದಿಪುರಾಣದಿಂದ ಅಂತಿಗೊನೆವರೆಗೆ ಜಾಲಾಡಿ, ‘ಕದ್ದ ಮಾಲು’ಗಳ ಮೇಲೆ ದುರ್ಬೀನು ಹಿಡಿಯುತ್ತ ಬಂದ. ಅತ್ತನೇ ಸತಮಾನ ನಾಗವರ್ಮನ ಕರ್ನಾಟಕ ಕಾದಂಬರಿಯಲ್ಲಿ ಬುಡುಬುಡಿಕೆ ಉಡುಗಿ ಇಂಗವ್ಳೆ- ‘ಇದನರಿವೆಂ ಕಮಲಭವಂ/ ಮೊದಲೊಳ್ ಮಾತಂಗಿಯೆಂದಿಗಳ ಮುಟ್ಟದೆ ಮಾಡಿದನಕ್ಕುಂ/ ಅಂತಲ್ಲದೆ ಕೆಯ್ಯೆಳ್ ಮುಟ್ಟಿ ಮಾಡಿದೊಡೆಂದು/ ಡಂತಗ್ಗಳಿಸಿ ತೋರ್ಕುಮೆ ಲಾವಣ್ಯಂ?// ಅದು ಬುಡು. ಅದ್ನ ಅಂಗೆ ತಗಂಡು ಇಪ್ಪತ್ತರಲ್ಲಿ ಬಸವಪ್ಪ ಶಾಸ್ತ್ರಿಗಳು ‘ದಯಮಂತಿ ಸ್ವಯಂವರ’ದಾಗೆ ತಗುಲಿಸಿ ಇಟ್ಟವ್ರೆ! ‘ಸಂದೆಗಮೆಳ್ಳಿನಿತಿಲ್ಲಂ/ ಕಂದಿದಪಳ್ ಕೈಯೊಳ್ ಮುಟ್ಟಿ ಮಾಡಿದೊಡೆಂದು/ ಕುಂದಸುಮಕೋಮಲೆಯನರ/ ವಿಂದಭವಂ ಚಿತ್ತದಿಂದೆ ಮಾಡಿದನಕ್ಕುಂ//’ ಇದೆಂಗೈತೆ! ಅಗಲು ದರೋಡೆ. ಶಿಕ್ಕಂಡ್ರು ಎಲ್ರೂನೂವೇಯ! ಡಾಕ್ಟರೇಟ್ ಗ್ಯಾರಂಟಿ. ತೀಸೀಸ್‌ನ ಡಿ.ಟಿ.ಪಿ. ತೆಗಿಸಿ, ಸ್ಪೆಶಲ್ ಬೈಂಡಿಂಗ್ ಮಾಡಿಸಿ ಗುರು ಕಂಬ್ಳಿಉಳ ಅವರ ಪಾದಕ್ಕೊಪ್ಪಿಸಿದ. ಉಳ ಆನಂದತುಂದಿಲ. ಎಂದಿದ್ರೂ ಉಳ ಅಲ್ಲವೆ? ಮಹಾಪ್ರಬಂಧದ ಚೇತನವನ್ನೆ ಕೊರೆಯ ಹತ್ತಿದರು. ಕೊನೆಗೂ ಆರು ತಿಂಗಳು ಕಳೆದು ಡಾಕ್ಟರೇಟ್ ಸಿಕ್ಕೇಬಿಟ್ಟಿತು. ಅವತ್ತೆ ಮೂರೂವರೆ ಭಾಷಾ ಪ್ರವೀಣ ಪ್ರೊ. ಕಂಬ್ಳಿಉಳ ಅವರ ಕೋಣೆ- ಡಾ. ಕಂಬ್ಳಿಉಳ ಫಲಕದಿಂದ ಶೋಭಿಸಿತು! ‘ಮೀನ್‌ಗೆ ಮೀನೆ ತಿಂಡಿ’ ಎಂದದ್ದು ಇದನ್ನೆ/ ವಿ.ಸೂ: ಲಾಕ್ಷಣಿಕ ರಾಜಶೇಖರ ಉವಾಚ- ‘ನಾಸ್ತಿ ಅಚೋರಃ ಕವಿಜನಃ’.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry