ಮೀರುವ ಹಂಬಲದ ಶಕ್ತಕಥೆಗಳು

7

ಮೀರುವ ಹಂಬಲದ ಶಕ್ತಕಥೆಗಳು

Published:
Updated:
ಮೀರುವ ಹಂಬಲದ ಶಕ್ತಕಥೆಗಳು

ಸ್ವಲ್ಪ ಭಾವಪರವಶವೆನ್ನಬಹುದಾದ, ಹಳೆಯದೆನ್ನಬಹುದಾದ, ಕೊಂಚ ನಾಟಕೀಯ ಸ್ವಗತದ ಮಾದರಿಯ ಇಂಥ ಸಾಲುಗಳ ಸಮೂಹದಿಂದ ಅಚ್ಚರಿ ಹುಟ್ಟಿಸುವ ಕಥೆಗಾರ್ತಿ ಅನಸೂಯ ಸಿದ್ಧರಾಮ, ಇದನ್ನೇ ತಮ್ಮ ತಾಜಾ ಭಾಷಾ ಕಸುವಿಗೆ ಪೂರಕವಾಗಿ ದುಡಿಸಿಕೊಂದು ಹನ್ನೆರಡು ಕಥೆಗಳ ಸಂಕಲನವನ್ನು ನಮ್ಮ ಕೈಯಲ್ಲಿರಿಸಿದ್ದಾರೆ. ಭಾಷಿಕ ಶಕ್ತಿ ಮತ್ತು ಭಾವನಾ ಸೂಕ್ಷ್ಮಗಳ ಪರಿಚಯಯುಕ್ತ ನಿರೂಪಣೆ ಈ ಕಥೆಗಾರ್ತಿಯ ಸಾಮರ್ಥ್ಯ. `ತಾನು ಎಂಬ ತೊಡಕು~ ಎಂಬ ಹಿಂದಿನ ಸಂಕಲನ ಬಂದ ಹದಿನಾಲ್ಕು ವರ್ಷಗಳ ನಂತರ ಹೊರತಂದಿರುವ ಈ ಸಂಕಲನ ಉತ್ತರ ಕರ್ನಾಟಕದ ಶಕ್ತ ಮಹಿಳಾ ಕಥೆಗಾರ್ತಿಯರ ಅಭಾವ ನೀಗುವ ಹಿನ್ನೆಲೆಯಲ್ಲಿಯೂ ಮುಖ್ಯವೆನಿಸುತ್ತದೆ.ಸಹಜವಾಗಿ ಅನಸೂಯ ಅವರು ಸ್ತ್ರೀಲೋಕದ ಅನಾವರಣ ನಡೆಸಿರುವರಾದರೂ ಅದು ಸ್ತ್ರೀವಾದದ ಬೆನ್ನು ಹತ್ತುವುದಿಲ್ಲ. ಅದರ ಅಗತ್ಯವೂ ಇಲ್ಲವೇನೋ ಎಂಬಂತೆ ಬರೆಯುವ ಅವರು ಅದೇ ಲೋಕದ ನೇತ್ಯಾತ್ಮಕ ಇಚ್ಛೆಗಳನ್ನೂ ಸಹಜವೆಂಬಂತೆ ಚಿತ್ರಿಸಿದ್ದಾರೆ. ಬಾಳಿನ ಹೆಣಗುವಿಕೆಯಲ್ಲಿ ಮನೋವಿಪ್ಲವಗಳ ಸ್ಥಾನವೇನು ಎಂಬುದರ ಪ್ರಾಮಾಣಿಕ ಹುಡುಕಾಟದಲ್ಲಿ ಅವರು ತೊಡಗಿದ್ದಾರೆ. ಪ್ರತಿ ಕುಟುಂಬದ ಒಳಗಿರಬಹುದಾದ ತಣ್ಣನೆಯ ಕ್ರೌರ್ಯ ಮತ್ತು ಅದು ಹುಟ್ಟುಹಾಕುವ ಸೂಕ್ಷ್ಮ ಸಂಚಲನಗಳನ್ನು ಅರ್ಥೈಸುವ ವಿಪರ್ಯಾಸದಲ್ಲಿ ಅವರ ಕಥೆಗಳು ನಿಲ್ಲುತ್ತವೆ. ದಾಂಪತ್ಯದುರಿತ, ಒಂಟಿತನ, ಸಂಬಂಧ ಪಲ್ಲಟಗಳು ಬಹುತೇಕ ಎಲ್ಲ ಕಥೆಗಳನ್ನೂ ಆಳಿವೆ. ನೋವಾಗಲಿ, ಪ್ರೀತಿಯಾಗಲಿ, ತಲೆಬಾಗುವಿಕೆಯಾಗಲಿ, ಪ್ರತಿಭಟನೆಯಾಗಲಿ ಕೊನೆಗೂ ಜೀವ ಸಂದಿಗ್ಧತೆಗೆ ಉಳಿಸಿಕೊಡುವುದು ಏನು ಎಂಬ ತಾತ್ವಿಕ ಪ್ರಶ್ನೆಯನ್ನು ಹಾಕಿಕೊಳ್ಳುವ ಅವರಿಗೆ `ಕಳ್ಳಗಿಂಡಿಯ ಕೊರೆದು~ ಎಂಬ ಕಥೆಯನ್ನು ಅದರ ಮಾದರಿಯೆಂಬಂತೆ ಮುಕ್ತಾಯಗೊಳಿಸುವುದು ಸಾಧ್ಯವಾಗಿದೆ.ಅಪ್ರಯೋಜಕ, ಕಾಮವಾಂಛೆಯ ಗಂಡ ಮತ್ತು ಅವನ ಅನೈತಿಕ ಸಂಬಂಧಗಳನ್ನು ಸಹಿಸಿಕೊಂಡೇ ಬಾಳಿದ ಹೆಣ್ಣೊಬ್ಬಳು ಅವನ ಮರಣದ ನಂತರ ಮಗ ಸೊಸೆಯರ ಜೊತೆ ಪಟ್ಟಣದಲ್ಲಿ ಬಾಳಬೇಕಾಗುತ್ತದೆ. ಅರ್ಥಮಾಡಿಕೊಳ್ಳದ ಹೊಸ ತಲೆಮಾರು, ಅರ್ಥವಾಗದ ಪಟ್ಟಣದ ಯಾಂತ್ರಿಕತೆ, ಮಾತಿಗೆ ಹುಡುಕಬೇಕಾದ ಸಂದರ್ಭ ಮತ್ತು ಕೆಟ್ಟ ಒಂಟಿತನಗಳಲ್ಲಿ ನರಳುತ್ತಿರುವಾಗ ಗಂಡ ಇಟ್ಟುಕೊಂಡಿದ್ದ ಕಾಳಿ ಎಂಬಾಕೆ ಆಕಸ್ಮಿಕವೆಂಬಂತೆ ಪ್ರತ್ಯಕ್ಷಳಾಗುತ್ತಾಳೆ. ಅವಳನ್ನು ಅಟ್ಟಿಸಿಕೊಂಡು ಹೋಗಿ ತೆಕ್ಕೆಗೆಬಿದ್ದು ಕಳೆದುಹೋಗಿದ್ದ ಸುಖದುಃಖಗಳನ್ನು ಹಂಚಿಕೊಂಡು ಗೆಳತಿಯರಂತೆ ಅತ್ತು ಕರೆಯುತ್ತ ನಗುವಲ್ಲಿಗೆ ಕಥೆ ಮುಗಿಯುತ್ತದೆ. ಕಥೆಯ ಮುಕ್ತಾಯ ಹೀಗಿದೆ. 

ಹೀಗೆ ನಿಲುವುಗಳಿಲ್ಲದೆಯೂ ಸಮಸ್ಯೆಯನ್ನು ಎಲ್ಲರದನ್ನಾಗಿಸುವ ಪ್ರಯತ್ನದಲ್ಲಿ ಕಥೆಗಾರ್ತಿ ಇದ್ದಾರೆ. ಅವರ ಕಥಾಲೋಕದಲ್ಲಿ ವೈವಿಧ್ಯಪೂರ್ಣ ಸ್ವಭಾವ ಹಾಗೂ ಪಾತ್ರಗಳು ಕಾಣಸಿಗುತ್ತವೆ. `ಚಂದಮಾಮದಿಂದ ಇಳಿದು ಬಂದ ಕಥೆ~ಯಲ್ಲಿ ತನಗೆ ಓದಲು ಅವಕಾಶ ಕೊಡದ ಗಂಡ ಹಾಗು ಅತ್ತೆಯ ಸಣ್ಣತನದ ನಡುವೆ ತಲೆದಿಂಬಿನಡಿ ಒಂದು `ಚಂದಮಾಮ~ ಹಾಗೂ ಬಾಲ್ಯದ ಒಂದು ಮಾಸಿದ ಅಕ್ಷರದ ಕಥೆಯನ್ನೇ ಓದಿಕೊಂಡು ಜೀವ ತೆತ್ತುಕೊಳ್ಳುವ ಸೊಸೆಯೊಬ್ಬಳಿದ್ದಾಳೆ. `ವಿನ್ಯಾಸ~ ಕಥೆಯಲ್ಲಿ ಗಂಡನನ್ನು ಕಳೆದುಕೊಂಡ ಸೋದರತ್ತೆಯು ಗಂಡನೆಂದೇ ಭಾವಿಸಿಕೊಂಡು ಗಿಡಗಳಿಗೆ ನೀರೆರೆದು ಸಾಕುವುದನ್ನು ಕಾಣುತ್ತೇವೆ. `ದೇವರೇ ಅವರನ್ನು ಕ್ಷಮಿಸು~ ಎಂಬ ಕಥೆಯಲ್ಲಿ ಕೆಳಗೆ ಬಾಗಿ ಕೆಲಸ ಮಾಡುತ್ತಿದ್ದ ಹೆಂಡತಿಯ ಮೇಲೆ ಗೊತ್ತಿಲ್ಲದಂತೆ ನಟಿಸುತ್ತ ನೀರು ತುಂಬಿದ ಜಗ್‌ ಅನ್ನು ಬೀಳಿಸಿ ಬೆನ್ನು ಮುರಿಯುವ ಸುಶಿಕ್ಷಿತ ಗಂಡನಿದ್ದಾನೆ. `ಅವ್ವ~ ಎಂಬ ಕಥೆ ವಿದ್ರಾವಕವಾದುದು. ಸೊಸೆ ಇದ್ದಾಗಲೂ ಇದುರು ಮನೆಯ ಗೃಹಿಣಿಯನ್ನು ಒಳಬಿಟ್ಟುಕೊಂಡು ಮಗನ ಅನೈತಿಕತೆಗೆ ಇಂಬುಕೊಡುವ ತಾಯಿಯಿದ್ದಾಳೆ. ಅಷ್ಟೇಅಲ್ಲ, ಟ್ರೈನಿಂಗ್‌ಗೆ ದೂರ ಹೋಗಿರುವ ಮಗನ ಏಳಿಗೆಗೆ ತೊಂದರೆಯಾಗಬಾರದೆಂದು ಸೊಸೆ ಸತ್ತು ಹೋದರೂ ಅದನ್ನು ಮಗನಿಗೆ ತಿಳಿಸದೆ ಅವಳು ಮಾತೃಹೃದಯ ಮೆರೆಯುತ್ತಾಳೆ. ಮಿಲಿಟರಿಯಲ್ಲಿ ದುಡಿಯುತ್ತಿರುವ ಮಗನ ದುಡ್ಡಿನ ಸುಖಕ್ಕೆ ಒಗ್ಗಿಕೊಂಡ ಅಪ್ಪ ಅಮ್ಮಂದಿರು `ಮಿಟ್ರೀ ಮಾರ್ತಿ~ ಕಥೆಯಲ್ಲಿ ಮಗನ ಮದುವೆಯನ್ನೇ ಮುಂದೂಡುತ್ತ ಹೋಗುತ್ತಾರೆ.`ಕಡೆಗೂ ದೇವರಾಗದೆ ಹೋದೆ~ ಒಂದು ದುರಂತ ಕಥೆ. ಬೆಳೆಯುತ್ತಿರುವ ಬುದ್ಧಿಮಾಂದ್ಯ ಹೆಣ್ಣುಮಗಳನ್ನು ಬೆಳೆಸಲು ಸಹಾಯಕವಾಗದ ಕುಟುಂಬ, ಮಗುವಿನ ಸರ್ವ ಸಂಕಟಗಳು, ತಾಯಿಯ ಪಡಿಪಾಟಲು ಇವೆಲ್ಲವೂ ಸೇರಿ ದಾರಿಯಿಲ್ಲದ ನಾಳೆಗಳು ನಿರ್ಮಾಣವಾಗುತ್ತವೆ.  ಕೊನೆಗೆ ಯಾತ್ರಾಸ್ಥಳವೊಂದರಲ್ಲಿ ತಾಯಿಮಗುವಿಬ್ಬರೂ ದೇವರ ಕರುಣೆಗಾಗಿ ಹಾತೊರೆಯುತ್ತ ನದಿಯೊಳಗೆ ಹೋಗುತ್ತಾರೆ. ದೈವ ಮತ್ತು ಅಸಹಾಯಕತೆಯ ತಿಕ್ಕಾಟದಲ್ಲಿ ಸರಿತಪ್ಪುಗಳು ವಾಸ್ತವವಾಗಿ ಇಲ್ಲಿ ಮುಳುಗುತ್ತವೆ. ಕಥೆ ಮೂಕವಾಗುತ್ತದೆ. ಸಂಕೇತವಾಗುತ್ತದೆ.ನೀಗಿಕೊಳ್ಳುವ ಪಾತ್ರಗಳು ಹಾಗೂ ನೀಗಿಸುವ ಪಾತ್ರಗಳ ನಡುವಿನ ದ್ವಂದ್ವ ಸಂಕಲನದುದ್ದಕ್ಕೂ ತೀವ್ರವಾಗಿ ಕಾಡುತ್ತದೆ. ಬದುಕಾಗಲಿ ನೈತಿಕತೆಯಾಗಲಿ ಒಳಿತಾಗಲಿ ಕೆಡುಕಾಗಲಿ ವಾಸ್ತವತೆ ಎಂಬ ದಾರುಣ ನಿಕಷದಲ್ಲಿ ಅದರ ಪಾತ್ರವೇನು ಎಂಬುದನ್ನು ಸಮರ್ಥವಾಗಿ ತಮ್ಮ ಕಥೆಗಳಲ್ಲಿ ಹುಡುಕಹೊರಟಿರುವ ಅನಸೂಯ ಸಿದ್ಧರಾಮರು ಅದಕ್ಕೆ ಕಟ್ಟಿಕೊಳ್ಳುವ ಶಿಲ್ಪದಲ್ಲಿ ಮಾತ್ರ ಸ್ವಲ್ಪ ಗೊಂದಲಕ್ಕೊಳಗಾದಂತಿದೆ.  ಕಥೆಯ ಕಲಾತ್ಮಕತೆ ಇದರಿಂದ ಅಲ್ಲಲ್ಲಿ ಮಾಸಿದೆ. ಕಥೆಯೊಳಗೊಂದು ಕಥೆಯನ್ನು ಜೋಡಿಸಿ ಹೇಳುವಾಗ ಅಲ್ಲಲ್ಲಿ ಆಯ ತಪ್ಪಿದೆ. ಇವುಗಳ ಹೊರತಾಗಿಯೂ ಸಂಕಲನ ಹುಟ್ಟಿಸಿರುವ ನಿರೀಕ್ಷೆ ದೊಡ್ಡದು. ಸ್ತ್ರೀಲೋಕ ನೋಡುವಾಗಲೂ ಕಾಯ್ದುಕೊಳ್ಳುವ ಅಲಿಪ್ತತೆ ಇದರ ಮುಖ್ಯಗುಣ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry