ಮೀಸಲಾತಿಗೆ ಆಗ್ರಹಿಸಿ ಪತ್ರ ಚಳವಳಿ

7

ಮೀಸಲಾತಿಗೆ ಆಗ್ರಹಿಸಿ ಪತ್ರ ಚಳವಳಿ

Published:
Updated:

ಚಿತ್ರದುರ್ಗ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಪಂಗಡದವರಿಗೆ ಶೇ. 7.5 ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ  ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಂಗಳವಾರ ಪತ್ರ ಚಳವಳಿ ನಡೆಸಿದರು.ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ, ಉದ್ಯೋಗ, ರಾಜಕೀಯವಾಗಿ ಶೇ. 7.5 ಮತ್ತು ಆರ್ಥಿಕವಾಗಿ ಶೇ. 6.55 ಮೀಸಲಾತಿಯನ್ನು 2001ರ ಜನಗಣತಿ ಆಧಾರದ ಮೇಲೆ ನೀಡುತ್ತಿದೆ. ಆದರೆ, ಕರ್ನಾಟಕ ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ 2001ರ ಜನಗಣತಿ ಆಧಾರದ ಮೇಲೆ ರಾಜಕೀಯವಾಗಿ, ಆರ್ಥಿಕವಾಗಿ 7.5 ಮೀಸಲಾತಿಯನ್ನು ನೀಡುತ್ತಿದೆ. ಆದರೆ, ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕೇವಲ ಶೇ. 3ರಷ್ಟು ಮೀಸಲಾತಿಯನ್ನು ನೀಡುತ್ತಿದೆ ಎಂದು ಪದಾಧಿಕಾರಿಗಳು ದೂರಿದರು.ದೇಶದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ 108 ಜಾತಿಗಳಿವೆ. ರಾಜ್ಯದಲ್ಲಿ 51 ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಸುಪ್ರಿಂಕೊರ್ಟ್ ಆದೇಶದಂತೆ ಶೇ.50ರಷ್ಟು ಮೀಸಲಾತಿ ಮೀರದಂತೆ ಕೇಂದ್ರ ಸರ್ಕಾರವು 2001ರ ಜಾತಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹಂಚಿಕೆ ಮಾಡಿದೆ.

 

ರಾಜ್ಯ ಸರ್ಕಾರ ಸಹ 2001ರ ಜಾತಿ ಜನಸಂಖ್ಯೆ ಆಧಾರ ಮೇಲೆ ಮೀಸಲಾತಿಯನ್ನು ಶೇ. 50ರಷ್ಟು ಮೀಸಲಾತಿ ಮೀರದಂತೆ ಹಂಚಿಕೆ ಮಾಡಬೇಕಾಗಿತ್ತು. ಆದರೆ, ಇದುವರೆಗೂ ಮೀಸಲಾತಿ ಹಂಚಿಕೆ ಮಾಡಿಲ್ಲ. 1950ರಲ್ಲಿ ಮೈಸೂರು ಗೆಜೆಟ್‌ನಲ್ಲಿ ಕೇವಲ 7ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಶೇ. 3ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು. ನಂತರ ಹಂತ ಹಂತವಾಗಿ ಒಟ್ಟು 50ಕ್ಕೂ ಹೆಚ್ಚು ಜಾತಿಗಳನ್ನು ಸೇರಿಸಲಾಗಿದೆ. ಆದರೂ ಸಹ ರಾಜ್ಯ ಸರ್ಕಾರ ಕೇವಲ ಶೇ.3ರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗಕ್ಕೆ ನೀಡುತ್ತಿದೆ ಎಂದು ತಿಳಿಸಿದರು.ಈ ಹಿಂದೆ ಹಂತ ಹಂತವಾಗಿ ಹಲವಾರು ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು, ಸೇರಿಸುವ ಸಂದರ್ಭದಲ್ಲಿ ಜಾತಿಗಳನ್ನು ಹಾಗೂ ಜಾತಿ ಜನಸಂಖ್ಯೆಯನ್ನು ಮಾತ್ರ ಸೇರಿಸಲಾಗಿತ್ತು, ಆದರೆ ಈ ಜಾತಿಗಳು ಹಿಂದೆ ಹೊಂದಿದ ಮೀಸಲಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಿಲ್ಲ. ಆದ್ದರಿಂದ ಸಂವಿಧಾನವಾಗಿ ಸಿಗಬೇಕಾದ ಮೀಸಲಾತಿಯಿಂದ ವಂಚಿತರಾಗಿದ್ದೆೀವೆ ಎಂದು ತಿಳಿಸಿದರು.ಚಿತ್ರದುರ್ಗ ತಾಲ್ಲೂಕು ಘಟಕ ಪದಾಧಿಕಾರಿಗಳು ಜಿಲ್ಲೆಯ ಪ್ರವಾಸ ಮಾಡಿ ಆಯಾ ಸಮಾಜದ ಮುಖಂಡರಿಂದ ಪತ್ರಗಳ ಮುಖಾಂತರ ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ಕಾರ್ಯದರ್ಶಿಗಳಿಗೆ ಸಂಬಂಧಪಟ್ಟ ಸಚಿವರಿಗೆ ರಾಜ್ಯ ಸರ್ಕಾರಕ್ಕೆ ಅಂಚೆಯಿಂದ ರವಾನಿಸುವ ಮೂಲಕ ಮನವಿ ನೀಡಲಾಗುತ್ತಿದೆ. ಸರ್ಕಾರ ಈ ಮನವಿ ಪರಿಶೀಲಿಸಬೇಕು ಎಂದರು.ಎಲ್.ಜಿ. ಹಾವನೂರು ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಗೌರಿರಾಜು ಕುಮಾರ್, ಮದಕರಿ ರಾಜವೀರ ಮದಕರಿನಾಯಕ ವೇದಿಕೆ ಸಂಘಟನಾ ಕಾರ್ಯದರ್ಶಿ ರೇವಣ್ಣ, ಜಯಭಾರತ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾಗಭೂಷಣ್, ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಲಕ್ಷ್ಮೀಸಾಗರ ರಾಜಣ್ಣ, ವಾಲ್ಮೀಕಿ ವಾಣಿ ಕಾರ್ಯದರ್ಶಿ ಅಂಜಿನಪ್ಪ, ಮದಕರಿನಾಯಕ ವಿದ್ಯಾರ್ಥಿ ಯುವ ಮೋರ್ಚಾ ಕಾರ್ಯದರ್ಶಿ ಪ್ರವೀಣ್, ವಾಲ್ಮೀಕಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಟಿ.ಎಚ್. ವಿಜಯಕುಮಾರ್ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry