ಶುಕ್ರವಾರ, ಮೇ 20, 2022
24 °C

ಮೀಸಲಾತಿ ಕೋರಿದ್ದ ಅರ್ಜಿ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲು ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ಇತ್ಯರ್ಥಗೊಳಿಸಿರುವ ಹೈಕೋರ್ಟ್, `ಇದು ನೀತಿನಿರೂಪಣಾ ವಿಷಯವಾಗಿರುವುದರಿಂದ ನ್ಯಾಯಾಂಗದ ಮಧ್ಯಪ್ರವೇಶ ಅಸಾಧ್ಯ~ ಎಂದು ಹೇಳಿದೆ.ಕನ್ನಡಿಗರಿಗೆ ಈ ಲಾ ಸ್ಕೂಲ್‌ನಲ್ಲಿ ಮೀಸಲಾತಿ ಕಲ್ಪಿಸುವಂತೆ ಕೋರಿ ವಕೀಲರಾದ ಬಿ.ಶ್ರೀಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಗೊಳಿಸಿದ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಮತ್ತು ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರನ್ನೊಳಗೊಂಡ ವಿಭಾಗೀಯ ಪೀಠ, ಅರ್ಜಿದಾರರ ಕೋರಿಕೆಯಂತೆ ಕ್ರಮ ಕೈಗೊಳ್ಳುವ ಬಗ್ಗೆ ಸಂಸ್ಥೆಯ ಆಡಳಿತ ಮಂಡಳಿ ಗಂಭೀರವಾಗಿ ಪರಿಶೀಲಿಸಬೇಕು ಎಂದು ಅಭಿಪ್ರಾಯಪಟ್ಟಿದೆ.ದೇಶದಲ್ಲಿ ಒಟ್ಟು 11 ಎನ್‌ಎಲ್‌ಎಸ್‌ಐಯುಗಳಿವೆ. ಈ ಪೈಕಿ 7 ಕಡೆ ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯವಿದೆ. ಬೆಂಗಳೂರಿನ ಸಂಸ್ಥೆಯಲ್ಲಿ ವಿದೇಶಿ ವಿದ್ಯಾರ್ಥಿಗಳು ಮತ್ತು ಅಂಗವಿಕಲರಿಗೆ ಮೀಸಲಾತಿ ಇದೆ. ಸ್ಥಳೀಯರಿಗೆ ಮೀಸಲಾತಿ ನೀಡುತ್ತಿರುವ ಏಳು ಸಂಸ್ಥೆಗಳ ನೀತಿಯನ್ನು ಬೆಂಗಳೂರಿನ ಎನ್‌ಎಲ್‌ಎಸ್‌ಐಯು ಕೂಡ ಜಾರಿಗೊಳಿಸುವಂತೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.ಅರ್ಜಿಯನ್ನು ಇತ್ಯರ್ಥಗೊಳಿಸಿದ ನ್ಯಾಯಾಲಯ, `ಮೀಸಲಾತಿ ಆಯಾ ಸಂಸ್ಥೆಗಳ ನೀತಿಯ ಅಡಿಯಲ್ಲಿ ಬರುತ್ತದೆ. ಈ ವಿಷಯದಲ್ಲಿ ನ್ಯಾಯಾಂಗದ ಮಧ್ಯಪ್ರವೇಶ ಸಾಧುವಲ್ಲ. ಆದ್ದರಿಂದ ಮೀಸಲಾತಿ ನೀಡುವಂತೆ ನಿರ್ದಿಷ್ಟವಾಗಿ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ~ ಎಂದು ತಿಳಿಸಿದೆ.ಈಗಾಗಲೇ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸಿರುವ ಏಳು ಸಂಸ್ಥೆಗಳ ನೀತಿಯನ್ನು ಬೆಂಗಳೂರಿನ ಎನ್‌ಎಲ್‌ಎಸ್‌ಐಯು ಅನುಸರಿಸುವುದು ಉತ್ತಮವೇ. ಇದರಿಂದ ಸಂವಿಧಾನದ ಯಾವುದೇ ವಿಧಿಯನ್ನೂ ಉಲ್ಲಂಘಿಸಿದಂತಾಗುವುದಿಲ್ಲ. ಮೀಸಲಾತಿಯನ್ನು ಒಂದು ನೀತಿಯಾಗಿ ಜಾರಿಗೊಳಿಸಿದರೆ ಯಾರೂ ಪ್ರಶ್ನಿಸಲಾಗದು. ಅದರಿಂದ ಯಾವುದೇ ಋಣಾತ್ಮಕ ಪರಿಣಾಮವೂ ಆಗದು ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.ಈ ವಿಷಯವನ್ನು ಸಂಸ್ಥೆಯ ಆಡಳಿತ ಮಂಡಳಿ ಪರಿಶೀಲಿಸಬೇಕು. ಆಡಳಿತ ಮಂಡಳಿಯಲ್ಲಿ ಹಲವು ಗಣ್ಯರು ಇರುವುದರಿಂದ ಇಂತಹ ವಿಷಯಗಳಲ್ಲಿ ಸರಿಯಾದ ನಿಲುವು   ತೆಗೆದುಕೊಳ್ಳುವುದು ಸಾಧ್ಯವಿದೆ. ಮೀಸಲಾತಿ ಕಲ್ಪಿಸಿದ್ದೇ ಆದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.