ಮೀಸಲಾತಿ ಸದುಪಯೋಗಕ್ಕೆ ಸಲಹೆ

7

ಮೀಸಲಾತಿ ಸದುಪಯೋಗಕ್ಕೆ ಸಲಹೆ

Published:
Updated:

ಗದಗ: ಸರ್ಕಾರಿ ಹುದ್ದೆಗಳಲ್ಲಿ ಅಂಗವಿಕಲರಿಗೆ ಮೀಸಲಾತಿ ಕಲ್ಪಿಸಲಾಗಿದ್ದು, ಅವರು ಉತ್ತಮ ಶಿಕ್ಷಣ ಪಡೆದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ತುರಮರಿ ಸಲಹೆ ನೀಡಿದರು.ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರವು ಅಂಗವಿಕಲರಿಗಾಗಿ ಎ ಮತ್ತು ಬಿ ವರ್ಗದ ಉದ್ಯೋಗದಲ್ಲಿ ಶೇ. 3 ಹಾಗೂ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ 5ರಷ್ಟು ಮೀಸಲಾತಿ ಕಲ್ಪಿಸಿದೆ. ಅಂಗವಿಕಲರು ಇದರ ಲಾಭ ಪಡೆಯಬೇಕು ಎಂದು ಅವರು ತಿಳಿಸಿದರು.ಅಂಗವಿಕಲರ ಹಕ್ಕುಗಳ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕಿವುಡು ಹಾಗೂ ಅಂಧ ಮಕ್ಕಳಿಗಾಗಿ ವಿಶೇಷ ಶಾಲೆಗಳು, ಅಂಗವಿಕಲ ವಿದ್ಯಾರ್ಥಿಗಳಿಗಾಗಿ ಶಿಷ್ಯವೇತನ, ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ, ಸಾಧನ-ಸಲಕರಣೆಗಳ ಪೂರೈಕೆ, ಶಸ್ತ್ರಚಿಕಿತ್ಸೆಗೆ ನೆರವು, ಅಂಗವಿಕಲರಿಗಾಗಿ ಪುನರ್‌ವಸತಿ ಕೇಂದ್ರಗಳು, ಸಾಮೂಹಿಕ ವಿಮೆ ಮೊದಲಾದ ಯೋಜನೆಗಳು ಜಾರಿಗೆ ಬಂದಿವೆ. ಸ್ವಯಂ ಸೇವಾ ಸಂಸ್ಥೆಗಳು ಸಹ ಅಂಗವಿಕಲರ ಏಳಿಗೆಗೆ ಶ್ರಮಿಸುತ್ತಿವೆ ಎಂದು ಅವರು ನುಡಿದರು.ಜಿ.ಪಂ. ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ, ಸರ್ಕಾರವು ಅಂಗವಿಕಲರಿಗಾಗಿ ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣ, ಪುನರ್‌ವಸತಿ ಮೊದಲಾದ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.ವಿಕಲಚೇತನರ ಸಾಧನ-ಸಲಕರಣೆ ಯೋಜನೆಯಲ್ಲಿ ಈ ವರ್ಷ ಜಿಲ್ಲೆಯಲ್ಲಿ 4.21 ಲಕ್ಷ ರೂಪಾಯಿ ವೆಚ್ಚದಲ್ಲಿ 40 ಟ್ರೈಸಿಕಲ್, 25 ವೀಲ್‌ಚೇರ್, 30 ಕ್ರಚರ್ಸ್, 25 ಹ್ಯಾಂಡ್‌ಸ್ಟಿಕ್ ಇತ್ಯಾದಿಗಳನ್ನು ಖರೀದಿಸಿದ್ದು, ಟ್ರೈಸಿಕಲ್‌ಗಳನ್ನು ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಜೆ. ಚಂದ್ರಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಡಿ.ಎನ್. ಮೂಲಿಮನಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry