ಮೀಸಲಾತಿ ಸರಿಪಡಿಸಲು ಒತ್ತಾಯ

7

ಮೀಸಲಾತಿ ಸರಿಪಡಿಸಲು ಒತ್ತಾಯ

Published:
Updated:

ಚಿತ್ರದುರ್ಗ: ಯಾದವ (ಗೊಲ್ಲರ) ಜನಾಂಗಕ್ಕೆ ಮೀಸಲಾತಿಯಲ್ಲಿ ಉಂಟಾಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಜಿಲ್ಲಾ ಯಾದವ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಕಾರ್ಯಕರ್ತರು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.ಎಲ್ಲ ಸರ್ಕಾರಗಳು ಗೊಲ್ಲ ಜನಾಂಗ ಮತ್ತು ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗವನ್ನು ಕಡೆಗಣಿಸುತ್ತಾ ಬಂದಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಲ್ಲಿ ಮುಂದುವರಿದ ಜನಾಂಗಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದು ಒಂದೆಡೆಯಾದರೆ ಮುಂದುವರಿದ ಜನಾಂಗಗಳನ್ನು ಅವೈಜ್ಞಾನಿಕವಾಗಿ ವರ್ಗೀಕರಿಸಿ ಹಿಂದುಳಿದ ವರ್ಗಕ್ಕೆ ಸೇರಿಸುತ್ತಿರುವುದು ಖಂಡನೀಯವಾಗಿದೆ ಎಂದು ದೂರಿದರು.ಹಿಂದಿನ ಯಾವುದೇ ಸರ್ಕಾರಗಳು ಗೊಲ್ಲ ಸಮುದಾಯಕ್ಕೆ ಶೈಕ್ಷಣಿಕ, ಆರ್ಥಿಕ ಮತ್ತು ಉದ್ಯೋಗಕ್ಕೆ ಯಾವುದೇ ಆದಾಯ ಮಿತಿಯ ಮಾನದಂಡ ನಿಗದಿಪಡಿಸಿರಲಿಲ್ಲ. ಆದರೆ, ಬಿಜೆಪಿ ಸರ್ಕಾರ ಹೊಸ ಆದೇಶ ಹೊರಡಿಸಿ ಗೊಲ್ಲ ಸಮುದಾಯಕ್ಕೆ ಮೀಸಲಾತಿ ಸೌಲಭ್ಯಕ್ಕಾಗಿ ಒಂದು ಲಕ್ಷ ಗರಿಷ್ಠ ಆದಾಯ ಮಿತಿ ನಿಗದಿಪಡಿಸಿದೆ. ಇದು ಜನಾಂಗಕ್ಕೆ ಮಾಡಿದ ದ್ರೋಹವಾಗಿದೆ. ಅವೈಜ್ಞಾನಿಕವಾಗಿ ಹೊರಡಿಸಿರುವ ಈ ಸುತ್ತೋಲೆ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿಶಾಲೆಯ ಮೆಟ್ರಿಕ್‌ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಕಲ್ಪಿಸಲು ಸರ್ಕಾರ ಆದೇಶ ನೀಡಿದ್ದರೂ ಯಾವುದೇ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ದೊರೆತಿಲ್ಲ. ಕೂಡಲೇ, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಕ್ಕೆ ಸರ್ಕಾರ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು ಮತ್ತು ಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ವೈ. ಕಾಟಪ್ಪ, ಕಾರ್ಯದರ್ಶಿ ಶಿವು ಯಾದವ್, ಕಾಡುಗೊಲ್ಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಿ. ನಾಗಪ್ಪ, ವಿ. ಶಾಂತಮ್ಮ, ಟಿ. ಷಫೀವುಲ್ಲಾ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry