ಗುರುವಾರ , ಆಗಸ್ಟ್ 5, 2021
27 °C

ಮೀಸಲು ಅರಣ್ಯ ಸೇರಿದ ಆನೆಗಳ ಹಿಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹೊರವಲಯದ ಆನೇಕಲ್, ವೈಟ್‌ಫೀಲ್ಡ್, ಹುಸ್ಕೂರು ಭಾಗದಲ್ಲಿ ಸೋಮವಾರ ಕಾಣಿಸಿಕೊಂಡಿದ್ದ ಆನೆಗಳನ್ನು ಮಂಗಳವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ತಮಿಳುನಾಡಿನ ತಳಿ ಮೀಸಲು ಅರಣ್ಯಕ್ಕೆ ಅಟ್ಟಲಾಗಿದೆ.ರಾತ್ರಿ ಇಡೀ ನಡೆದ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, `ರಾತ್ರಿ ಒಂದು ಗಂಟೆ ಸುಮಾರಿಗೆ ಆನೆಗಳನ್ನು ಅತ್ತಿಬೆಲೆಯವರೆಗೆ ಅಟ್ಟಲಾಗಿತ್ತು. ಆನೆಗಳನ್ನು ಬೆಂಗಳೂರು - ಹೊಸೂರು ರಾಷ್ಟ್ರೀಯ ಹೆದ್ದಾರಿಯಿಂದ ಆಚೆಗೆ ದಾಟಿಸುವುದು ತುಸು ಕಷ್ಟವಾಯಿತು. ಹೆದ್ದಾರಿಯಲ್ಲಿ ಆನೆಗಳನ್ನು ನೋಡಲು ಮಧ್ಯರಾತ್ರಿಯೂ ಹೆಚ್ಚಿನ ಜನ ಸೇರಿದ್ದರು. ಇದರಿಂದ ಕಾರ್ಯಾಚರಣೆಗೆ ಸ್ವಲ್ಪ ತೊಂದರೆಯಾಯಿತು' ಎಂದು ತಿಳಿಸಿದರು.`ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ದಾಟಿದ ಆನೆಗಳನ್ನು ಮುತ್ಯಾಲಮಡುವು ಕಡೆಗೆ ಅಟ್ಟಲಾಯಿತು. ಬೆಳಿಗ್ಗೆ 5 ಗಂಟೆ ಸುಮಾರಿಗೆ 14 ಆನೆಗಳು ತಳಿ ಮೀಸಲು ಅರಣ್ಯ ಪ್ರದೇಶ ಸೇರಿದವು. ಅಭಿಮನ್ಯು, ಅರ್ಜುನ, ಶ್ರೀರಾಮ, ಗಜೇಂದ್ರ ಹಾಗೂ ವನರಾಜ ಆನೆಗಳು ಕಾರ್ಯಾಚರಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದವು' ಎಂದು ಅವರು ಮಾಹಿತಿ ನೀಡಿದರು.`ಆನೆಗಳು ಇಂಥದ್ದೇ ಕಾರಣಕ್ಕೆ ಬೇರೆ ಬೇರೆ ಅರಣ್ಯ ಭಾಗಗಳಿಗೆ ಸಂಚರಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಬನ್ನೇರುಘಟ್ಟ ಆನೆ ಕಾರಿಡಾರ್ ಸಮೀಪದಲ್ಲೇ ಇರುವುದರಿಂದ ಆನೆಗಳು ಮಾಲೂರು, ಹುಸ್ಕೂರು ಕಡೆಗೆ ನುಗ್ಗಿವೆ. ತಳಿ ಮೀಸಲು ಅರಣ್ಯದಿಂದ ಮುಂದೆ ಆನೆಗಳು ಬನ್ನೇರುಘಟ್ಟದ ಕಡೆಗೆ ಹೋಗಬಹುದು ಅಥವಾ ಮತ್ತೆ ತಮಿಳುನಾಡಿನ ಕಡೆಗೆ ಸಾಗಬಹುದು' ಎಂದು ಅವರು ಹೇಳಿದರು.`ಆನೇಕಲ್ ಸುತ್ತಮುತ್ತ ಮತ್ತೆ ನಾಲ್ಕು ಆನೆಗಳು ಕಾಣಿಸಿಕೊಂಡಿವೆ ಎಂಬುದು ಕೇವಲ ವದಂತಿ. 14 ಆನೆಗಳನ್ನು ತಳಿ ಮೀಸಲು ಅರಣ್ಯ ಪ್ರದೇಶಕ್ಕೆ ಅಟ್ಟಿದ ನಂತರ ಮಂಗಳವಾರ ಆನೇಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಾಯಿತು. ಆದರೆ, ಎಲ್ಲೂ ಆನೆಗಳು ಕಂಡುಬಂದಿಲ್ಲ. ಜನರು ವದಂತಿಗಳಿಗೆ ಕಿವಿಗೊಡಬಾರದು' ಎಂದು ಅವರು ಸ್ಪಷ್ಟಪಡಿಸಿದರು.ಸುಮಾರು ಆರು ದಿನಗಳ ಹಿಂದೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಿಂದ ಬಂದಿದ್ದ ಆನೆಗಳು ಕೋಲಾರ ಜಿಲ್ಲೆಯ ಮಾಲೂರು ಹಾಗೂ ಹೊಸಕೋಟೆ ತಾಲ್ಲೂಕಿನಲ್ಲಿ ಒಟ್ಟು ನಾಲ್ಕು ಮಂದಿಯನ್ನು ಬಲಿ ತೆಗೆದುಕೊಂಡಿದ್ದವು.ಸೋಮವಾರ ಹುಸ್ಕೂರು ಕೆರೆಯ ಬಳಿ ಕಾರ್ಯಾಚರಣೆ ವೇಳೆ ಇಬ್ಬರು ಸ್ಥಳೀಯರು ಆನೆಗಳ ದಾಳಿಯಿಂದ ಗಾಯಗೊಂಡಿದ್ದರು. ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ 150 ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.