ಸೋಮವಾರ, ಮೇ 10, 2021
21 °C
ಪೌರ ಸಂಸ್ಥೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಮೀಸಲು ಸಭೆ ವಿಫಲ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲು ಗುರುವಾರ ನಡೆದ ಸಂಪುಟ ಉಪ ಸಮಿತಿ ಸಭೆ ವಿಫಲವಾಯಿತು.ಚುನಾವಣೆ ನಡೆದು ನಾಲ್ಕು ತಿಂಗಳು ಆಗುತ್ತಿದ್ದು, ಮೀಸಲಾತಿ ನಿಗದಿ ದೊಡ್ಡ ಸಮಸ್ಯೆ ಆಗಿದೆ. ಮಾರ್ಗಸೂಚಿ ಪ್ರಕಾರ ಮೀಸಲು ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದು, ಅದಕ್ಕೆ ಒಪ್ಪಿಗೆ ನೀಡಲು ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ನೇತೃತ್ವದಲ್ಲಿ ನಡೆದ ಉಪ ಸಮಿತಿ ಸಭೆ ನಿರಾಕರಿಸಿತು ಎನ್ನಲಾಗಿದೆ.ಈ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ವಿನಯ್‌ಕುಮಾರ್ ಸೊರಕೆ, ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಈಗಿರುವ ಮೀಸಲಾತಿ ಪಟ್ಟಿಗೆ ಕಾಂಗ್ರೆಸ್‌ನ ಹಲವು ಶಾಸಕರು ವಿರೋಧ ವ್ಯಕ್ತಪಡಿಸುತ್ತಿರುವ ಕಾರಣ ಪಟ್ಟಿಯನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.ಮೀಸಲಾತಿಯನ್ನು ಸರಣಿ (ರೊಟೇಷನ್) ಪ್ರಕಾರ ನಿಗದಿಪಡಿಸಬೇಕು. ಇದಕ್ಕೆ ಪೂರಕವಾಗಿ ಮಾರ್ಗಸೂಚಿಗಳನ್ನೂ ರಚಿಸಲಾಗಿದೆ. ರಾಜಕೀಯ ಒತ್ತಡದ ಮೇಲೆ ಮೀಸಲಾತಿ ನಿಗದಿಪಡಿಸುವುದು ಅಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಾರೆ.ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಜಾತಿಯನ್ನು ಹೊರತುಪಡಿಸಿ ಬೇರೆ ಜಾತಿಗಳಿಗೆ ಮೀಸಲು ನಿಗದಿಪಡಿಸಿ, ಅದರ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಆ ಪಕ್ಷದ ಶಾಸಕರ ಬೆಂಬಲ ಕೂಡ ಇದೆ. ಆದರೆ, ಅವರ ಇಚ್ಛೆಯಂತೆ ಮೀಸಲು ನಿಗದಿಪಡಿಸುವುದು ಕಷ್ಟ ಎಂದು ಅಧಿಕಾರಿಗಳು ಹೇಳಿದರು ಎನ್ನಲಾಗಿದೆ.ಈ ಕಾರಣದಿಂದ ಮೀಸಲು ಪಟ್ಟಿಗೆ ಅಂತಿಮ ಅಂಕಿತ ಹಾಕಲು ಖಮರುಲ್ ನಿರಾಕರಿಸಿದರು. ಒಂದೆರಡು ದಿನದಲ್ಲಿ ಇತರ ಸಚಿವರ ಜತೆಗೂ ಚರ್ಚೆ ನಡೆಸಿ, ಅಂತಿಮ ನಿರ್ಧಾರಕ್ಕೆ ಬರೋಣ ಎಂದು ಸಭೆಯನ್ನು ಅಂತ್ಯಗೊಳಿಸಿದರು ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.