ಶುಕ್ರವಾರ, ಏಪ್ರಿಲ್ 16, 2021
23 °C

ಮೀಸೆ ಮಣ್ಣಾಗಲಿಲ್ಲ ಅನ್ನುವ ವಿಜಯ್ ಮಲ್ಯ

ಎಸ್.ಆರ್.ರಾಮಕೃಷ್ಣ Updated:

ಅಕ್ಷರ ಗಾತ್ರ : | |

ಏಳು ತಿಂಗಳಿಂದ ಸಂಬಳ ಕೊಡದ ಕಿಂಗ್ ಫಿಷರ್ ಏರ್‌ಲೈನ್ಸ್ ಮಾಲೀಕ ವಿಜಯ್ ಮಲ್ಯ ಮತ್ತು ಅವರ ಪುತ್ರ ಸಿದ್ಧಾರ್ಥ ಆಡುತ್ತಿದ್ದುದನ್ನು ನೋಡಿ ಹಲವರು ದಂಗಾಗಿದ್ದಾರೆ. ಇಲ್ಲಿ ಸಾಲ ಸೋಲ ಮಾಡಿ ಸಂಕಟದಲ್ಲಿರುವ ಉದ್ಯೋಗಿಗಳು ಒಂದು ಕಡೆಯಾದರೆ, ಇನ್ನೊಂದು ಕಡೆ ಸಿದ್ಧಾರ್ಥ ಲಂಡನ್‌ನ ಪಬ್‌ಗಳಿಗೆ ಸಂಜೆ ಹೋಗುವುದು, ಬಿಕಿನಿ ತೊಟ್ಟ ಕ್ಯಾಲೆಂಡರ್ ಹುಡುಗಿಯರ ಜೊತೆಗೆ ಬೀಚ್‌ನಲ್ಲಿ ವಾಲಿಬಾಲ್ ಆಡುವುದು ಎಷ್ಟು ಮಜಾ ಎಂದು ಟ್ವೀಟ್ ಮಾಡುತ್ತಿದ್ದರು.ಇನ್ನು ಅಪ್ಪ ಎಷ್ಟೋ ದಿನ ಎಲ್ಲಿದ್ದಾರೆ ಎಂದು ಯಾರಿಗೂ ಗೊತ್ತೇ ಇರಲಿಲ್ಲ. ಈ ನಡುವೆ ಮುಂಬೈಯಲ್ಲಿ ಉದ್ಯೋಗಿಯೊಬ್ಬರ ಹೆಂಡತಿ ಬೇರೆ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟರು. ಬೇಸತ್ತ ಸಿಬ್ಬಂದಿ ಒಂದೆರಡು ಬಾರಿ ಕೆಲಸ ನಿಲ್ಲಿಸಿ ಪ್ರತಿಭಟಿಸಿದರು. ಆದರೂ ಮಲ್ಯ ಇದ್ಯಾವುದರ ಬಗ್ಗೆಯೂ ಅಷ್ಟು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.ಒಂದು ಕಾಲಕ್ಕೆ, ಧಾಮ್-ಧೂಮ್ ಮಾಡುವುದು ತಪ್ಪು ಎಂಬ ಕಲ್ಪನೆ ಭಾರತದಲ್ಲಿ ಇತ್ತು. ಇದಕ್ಕೆ ಮುಖ್ಯವಾಗಿ ಗಾಂಧೀಜಿ ಕಾರಣ. ಮೊರಾರ್ಜಿ ದೇಸಾಯಿ ಪ್ರಧಾನ ಮಂತ್ರಿಯಾದಾಗ ಮದುವೆಗೆ ಇಷ್ಟೇ ಜನರನ್ನು ಆಹ್ವಾನಿಸಬೇಕು, ದುಂದು ವೆಚ್ಚ ಮಾಡಬಾರದು ಎಂಬ ನಿಯಮಾವಳಿ ಇತ್ತು.

 

ಆದರೆ 1990ರ ನಂತರ ಆ ತತ್ವವನ್ನು ಮಾತಿನಲ್ಲೂ ಕೇಳುವುದು ವಿರಳವಾಗಿದೆ. `ಗ್ರೀಡ್ ಇಸ್ ಗುಡ್~ ಎಂಬ ವ್ಯಾಪಾರ, ಕೊಳ್ಳುಬಾಕತನದ ತತ್ವವನ್ನು ಜಾಗತೀಕರಣದ ನಂತರ ಕಂಡ ನಾವು ಬಡವರಾಗಿ ಕಾಣಿಸಿಕೊಳ್ಳುವುದರ ಬಗ್ಗೆ ನೈತಿಕ ವ್ಯಾಮೋಹ ಬಿಟ್ಟಿದ್ದೇವೆ.  ಹಾಗಾಗಿ, ಮಲ್ಯ ಮಾಡುವ ಶೋಕಿ ಯಾರಿಗೂ ಅಂಥ ಆಘಾತವನ್ನೇನೂ ಮಾಡಿರಲಿಲ್ಲ. ಆದರೆ ಎಲ್ಲರನ್ನೂ ನಡುಗಿಸಿರುವುದು ಅವರ ಶೋಕಿ ಪ್ರವೃತ್ತಿಯಲ್ಲಿ ಅಡಗಿರುವ ಕ್ರೌರ್ಯ.ಮಲ್ಯ ತಾವು ತೋರಿಸಿಕೊಳ್ಳುವಂತೆ ಧನಕನಕಗಳಲ್ಲಿ ಹೊರಳಾಡಬಲ್ಲ ಕುಬೇರರೇನಲ್ಲ. ಈಚಿನ ವರದಿಗಳ ಪ್ರಕಾರ ಅವರ ಏರ್‌ಲೈನ್ಸ್ ಸಂಸ್ಥೆಯ ಸಾಲ ರೂ 7,000 ಕೋಟಿ ದಾಟಿದೆ. ಹಾರಾಟ ಪರವಾನಗಿಯನ್ನು ಸರ್ಕಾರ ಕಸಿದುಕೊಂಡಿದೆ. ಇನ್ನೊಂದೆಡೆ ಮದ್ಯ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಆದರೆ ಅಲ್ಲಿನ ದುಡ್ಡು ಇಲ್ಲಿಗೆ ಹಾಕುವ ಮನಸ್ಸು ಅವರಿಗಿಲ್ಲ.ವಿಪರ್ಯಾಸ ನೋಡಿ: ಬ್ಯಾಂಕ್‌ಗಳು ಸಣ್ಣ ಪುಟ್ಟ ಸಾಲ ಕೊಟ್ಟರೂ ರಿಕವರಿ ಏಜೆಂಟ್ ಕಳಿಸಿ ಬೆದರಿಸಿ ಬಡ್ಡಿ ಸಮೇತ ವಸೂಲಿಮಾಡುತ್ತಾರೆ. ರೈತರು ಚಿಲ್ಲರೆ ಸಾಲವನ್ನೂ ತೀರಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ರೂ. 7,000 ಕೋಟಿ ಸಾಲ ಹೊತ್ತ ಮಲ್ಯ ನಡೆದುಕೊಳ್ಳುವ ರೀತಿ ಅವರಿಗೆ ಯಾರ ಸಹಾನುಭೂತಿಯನ್ನೂ ತರಲಾರದು.ಇಲ್ಲಿ ಸಿಬ್ಬಂದಿ ಪ್ರತಿಭಟಿಸುತ್ತಿದ್ದಾಗ ಕೊನೆಗೆ ಕೆಲವು ತಿಂಗಳ ಸಂಬಳ ಕೊಡುವುದಾಗಿ ಹೇಳಿ ಹಿರಿಯ ಮಲ್ಯ ಭಾರತಕ್ಕೆ ಮರಳಿದರು. ಇಲ್ಲಿ ಬಂದ ಕಾರಣ ದೆಹಲಿಯಲ್ಲಿ ಫಾರ್ಮುಲ ರೇಸ್ ನೋಡುವುದು. ಮಲ್ಯ ಭಾರತದ ರೇಸ್ ತಂಡದ ಮಾಲೀಕ ಕೂಡ. ಇಲ್ಲಿ ಬಂದೊಡನೆ ಮಲ್ಯ ಕೆಂಡ ಕಾರಿದ್ದು ಪತ್ರಕರ್ತರ ಮೇಲೆ.`ಕ್ರೀಡಾ ಪತ್ರಕರ್ತರೂ ನನ್ನ ಏರ್‌ಲೈನ್ಸ್ ಬಗ್ಗೆ ಬರೆದು ಮಾನನಷ್ಟ ಮಾಡುತ್ತಿದ್ದಾರೆ~ ಎಂದು ಹೇಳಿದರು. `ಭಾರತದಲ್ಲಿ ಐಶ್ವರ್ಯ ಪ್ರದರ್ಶನ ಮಾಡಬಾರದು ಎಂಬ ಪಾಠ ಕಲಿತಿದ್ದೇನೆ,~ ಎಂದು ಇನ್ನೊಂದು ಕಡೆ ಗೊಣಗಿದರು. ಫೋರ್ಬ್ಸ್ ಎಂಬ ಬಿಸಿನೆಸ್ ಪತ್ರಿಕೆ ಮಲ್ಯರನ್ನು ಮಹಾನ್ ಶ್ರೀಮಂತರ ಪಟ್ಟಿಯಿಂದ ಕಿತ್ತು ಹಾಕಿತ್ತು.ತಮ್ಮ ಮಾತಿನ ಅಸೂಕ್ಷ್ಮತೆ ಮಲ್ಯರಿಗೆ ಹೊಳೆಯಲೇ ಇಲ್ಲವೇ? ಅಷ್ಟೊಂದು ಐಶ್ವರ್ಯ ಇರುವಾತ ಸಂಬಳ ಕೊಡದೆ ಅವಿತು ಕೂತುಕೊಂಡಿದ್ದು ಯಾಕೆ ಎಂದು ಜನ, ಮಾಧ್ಯಮದವರು ಕೇಳುವುದರಲ್ಲಿ ಆಶ್ಚರ್ಯವೇನಿತ್ತು? ಮಲ್ಯರಂಥ ವ್ಯಾಪಾರಸ್ಥರು ಪಿ ಆರ್ (ಅಂದರೆ ಸಾರ್ವಜನಿಕ ಸಂಪರ್ಕ)ಗೆ ಕೊಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಇಂಥ ದಡ್ಡ ಹೇಳಿಕೆಗಳಿಂದ ತಮ್ಮ ತಲೆಯ ಮೇಲೆ ಚಪ್ಪಡಿ ಕಲ್ಲು ಎಳೆದುಕೊಳ್ಳುತ್ತಾರೆ!ಇಲ್ಲಿ ಬಂದ ಮೇಲೂ ಆತ ನಡೆದುಕೊಂಡ ರೀತಿ ಸಾಮಾನ್ಯವಾಗಿ ನಿರ್ಲಿಪ್ತವಾಗಿರುವ ಬಿಸಿನೆಸ್ ಪೇಪರ್‌ಗಳನ್ನೇ ಗಾಬರಿಗೊಳಿಸಿದೆ. ಸೊಗಸಾದ ಏರ್‌ಲೈನ್ಸ್ ಮಾಡಲು ಹೊರಟ ಮಲ್ಯ ಈ ಸ್ಥಿತಿಗೆ ಬಂದದ್ದೇಕೆ? ಈ ಪ್ರಶ್ನೆಯ ಬಗ್ಗೆ ವಿಶ್ಲೇಷಣೆ ನಡೆದಿದೆ. ಏರ್‌ಲೈನ್ಸ್ ವ್ಯಾಪಾರದಲ್ಲಿ ತೀರ ಕಡಿಮೆ ಲಾಭ. ಆದರೂ ಅದು ತರುವ ಪ್ರತಿಷ್ಠೆ ಹೆಚ್ಚು. ಮಲ್ಯ ಮಾಡಿದ ಲೆಕ್ಕಾಚಾರವೇ ಬೇರೆ.ವಿದೇಶಿ ಹಣ ಹೂಡಿಕೆ ತನ್ನ ವಲಯಕ್ಕೆ ಬರುವವರೆಗೂ ವೈಭವದಿಂದ ಏರ್‌ಲೈನ್ಸ್ ನಡೆಸಿ ದೊಡ್ಡ ಮೊತ್ತಕ್ಕೆ ಮಾರುವ ಯೋಜನೆ ಇತ್ತು ಎಂದು ಸಹವ್ಯಾಪಾರಿಗಳು ಅಂದಾಜು ಮಾಡಿದ್ದಾರೆ.ಕನ್ನಡಿಗರ ಪೈಕಿ ದೊಡ್ಡ ಉದ್ಯಮಿಗಳು ಕಡಿಮೆ. ಆದರೂ ಮೂರು ದಶಕದಲ್ಲಿ ದೇಶವೇ ಅಚ್ಚರಿಗೊಳ್ಳುವಂತೆ ಇಲ್ಲಿನ ಕೆಲವರು ಕೆಲಸ ಮಾಡಿದ್ದಾರೆ. ಎನ್ ಆರ್ ನಾರಾಯಣ ಮೂರ್ತಿ ಉದಾಹರಣೆ ನೋಡಿ. ತಮ್ಮದೇ ಬಂಡವಾಳ ಹೂಡಿ ಕಟ್ಟಿದ ಇನ್ಫೋಸಿಸ್ ಇತರ ಖಾಸಗಿ ಸಂಸ್ಥೆಗಳಿಗಿಂತ ಭಿನ್ನವಾಗಿ ಬೆಳೆದು ನಿಂತಿದೆ.ಉದ್ಯೋಗಿಗಳಿಗೆ ಲಾಭವನ್ನು ಹಂಚುವುದರಲ್ಲಿ ಉದಾರವಾಗಿದೆ. ಉದ್ಯೋಗಿಗಳನ್ನು ಪಾಲುದಾರರಾಗಿ ಕಾಣುವ ಅದರ ಪದ್ಧತಿ ಭಾರತಕ್ಕಂತೂ ತೀರ ಅಪರೂಪ. ಹಾಗೆಯೆ ಕ್ಯಾಪ್ಟನ್ ಗೋಪಿನಾಥ್ ಕೂಡ. ತಮ್ಮ ಅನುಭವ ಮತ್ತು ಕ್ರಿಯಾಶೀಲತೆಯನ್ನೇ ಬಂಡವಾಳವಾಗಿಟ್ಟುಕೊಂಡು ಶುರು ಮಾಡಿದ ವಿಮಾನಯಾನದ ವ್ಯಾಪಾರ ಭಾರತದ ಮಧ್ಯಮ ವರ್ಗ ಪ್ರಯಾಣ ಮಾಡುವ ರೀತಿಯನ್ನೇ ಬದಲಾಯಿಸಿಬಿಟ್ಟಿತು.ಇಂಥ ಉದ್ಯಮಿಗಳು ಸಾರ್ವಜನಿಕರ ಜೊತೆಗೆ ನಡೆದುಕೊಳ್ಳುವ ವರಸೆಯೇ ಬೇರೆ. ಪುಸ್ತಕ ಓದುವುದು-ಬರೆಯುವುದು, ಶಾಸ್ತ್ರೀಯ ಸಂಗೀತ ಕೇಳುವುದು ಇವರ ಹವ್ಯಾಸ. ತೀರ ಅಸೂಕ್ಷ್ಮವೆನಿಸುವ, ಕಷ್ಟ ಪಟ್ಟು ದುಡಿಯುವವರನ್ನು ಅಣಕಿಸುವ, ಅವಮಾನಿಸುವ ಹೇಳಿಕೆಗಳನ್ನು ಇವರಿಬ್ಬರು ಎಂದೂ ಕೊಟ್ಟಿಲ್ಲ.

 

ಮಧ್ಯಮ ವರ್ಗದ ಮೌಲ್ಯಗಳನ್ನು ಹೊತ್ತು ಬಂದ ಇವರಿಗೂ, ಕಿವಿಯಲ್ಲಿ ವಜ್ರದೋಲೆಯನ್ನು ಧರಿಸಿ, ಮುಳುಗಿ ಹೋಗುವಷ್ಟು ಸಾಲವಿದ್ದರೂ ಗಿಲೀಟು ಫೋಟೋ ತೆಗೆಸಿಕೊಲ್ಲುವುದರಲ್ಲೆೀ ಖುಷಿ ಪಡುವ ಮಲ್ಯರಿಗೂ ಎಷ್ಟು ವ್ಯತ್ಯಾಸವಿದೆ ಅಲ್ಲವೇ? 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.