ಶುಕ್ರವಾರ, ಮೇ 7, 2021
23 °C

ಮುಂಗಾರು: ಒಂದು ಅಪೂರ್ಣ ಕಥೆ

ಅನಿರುದ್ಧ ಕೃಷ್ಣ Updated:

ಅಕ್ಷರ ಗಾತ್ರ : | |

ಮಾಧ್ಯಮ ವ್ಯಾಕರಣವನ್ನು ಬದಲಾಯಿಸಬೇಕೆನ್ನುವುದು ಯಾವತ್ತೂ ಮಾಧ್ಯಮ ವೃತ್ತಿಯಲ್ಲಿ ತೊಡಗಿರುವ ಪ್ರತಿಯೊಬ್ಬ ಕ್ರಿಯಾಶೀಲ ವ್ಯಕ್ತಿಯ ಸಾಮಾನ್ಯ ತುಡಿತ.ಕಾಲ ಮತ್ತು ದೇಶಗಳಿಗೆ ಅನುಗುಣವಾಗಿ ಇದು ಭಿನ್ನ ರೀತಿಯಲ್ಲಿ ಸಾಕಾರಗೊಳ್ಳುತ್ತಲೂ ಇರುತ್ತದೆ. ಪತ್ರಕರ್ತನೊಬ್ಬ ಪತ್ರಿಕೋದ್ಯಮಿಯಾಗುವ ಬದಲಾವಣೆಯ ಪ್ರಕ್ರಿಯೆ ಬಹಳ ಸಂಕೀರ್ಣವಾದುದು.ಪತ್ರಕರ್ತನಿಗಿರುವ ಸ್ವಾತಂತ್ರ್ಯ ಪತ್ರಿಕೋದ್ಯಮಿಗಿರುವುದಿಲ್ಲ. ವ್ಯಾಪಾರದ ಮಾದರಿ, ಸೈದ್ಧಾಂತಿಕ ಬದ್ಧತೆ ಮತ್ತು ಜನಪರ ನಿಲುವುಗಳನ್ನು ಒಟ್ಟೊಟ್ಟಿಗೇ ಸಂಭಾಳಿಸಬೇಕಾದ ಅನಿವಾರ್ಯತೆ ಪತ್ರಿಕೋದ್ಯಮಿಯದ್ದು.ವಡ್ಡರ್ಸೆ ರಘುರಾಮಶೆಟ್ಟಿ ತನ್ನೊಳಗಿನ ಜನಪರ ಪತ್ರಕರ್ತನನ್ನು `ಜನಪರ ಪತ್ರಿಕೋದ್ಯಮಿ~ಯಾಗಿಸುವ ಪ್ರಯತ್ನ ನಡೆಸಿದವರು. ಅದಕ್ಕಾಗಿ ಅವರು ಬೆಂಗಳೂರಿನಲ್ಲಿದ್ದ ಸುರಕ್ಷಿತ ಉದ್ಯೋಗವನ್ನು ತ್ಯಜಿಸಿ ತಮ್ಮಂತೆಯೇ ಉತ್ಸಾಹಿಗಳಾಗಿದ್ದ ತಂಡವೊಂದರ ಜೊತೆಗೆ ಮಂಗಳೂರಿಗೆ ಹೋದರು. ಅಲ್ಲಿ ಅವರು `ಮುಂಗಾರು~ ಪತ್ರಿಕೆಯನ್ನು ಆರಂಭಿಸಿದ್ದು ಒಂದು `ಪಬ್ಲಿಕ್ ಲಿಮಿಟೆಡ್ ಕಂಪೆನಿ~ಯಾಗಿ.

 

ಈ ಮೂಲಕ ಅವರು ಮಾಧ್ಯಮ ಸಂಸ್ಥೆಯ ಒಡೆತನದ ವ್ಯಾಕರಣವನ್ನೂ ಬದಲಾಯಿಸಲು ಪ್ರಯತ್ನಿಸಿದ್ದರು. ಆ ಕಾಲಕ್ಕೆ ಆಧುನಿಕವಾಗಿದ್ದ ತಂತ್ರಜ್ಞಾನವನ್ನು ಹೊರಗಿಟ್ಟು ಹೆಚ್ಚು ಜನರಿಗೆ ಉದ್ಯೋಗ ಕೊಡಬಹುದಾದ ತಂತ್ರಜ್ಞಾನವೊಂದನ್ನು ಪತ್ರಿಕೆ ಮುದ್ರಿಸಲು ಬಳಸಲು ನಿರ್ಧರಿಸಿದ್ದೂ ಒಂದು ಬಗೆಯ ಸಾಹಸವೇ.ತಂತ್ರಜ್ಞಾನವನ್ನು ಉದ್ಯೋಗ ಕಿತ್ತುಕೊಳ್ಳುವ ಮಾರ್ಗದಂತೆ ಕಾಣುವುದೇ ಆದರ್ಶವಾಗಿದ್ದ ಆ ದಿನಗಳಲ್ಲಿ `ಜನಪರ ನಿಲುವು~ ಈ ರೂಪು ಪಡೆದುಕೊಂಡದ್ದು ಸಹಜವೂ ಹೌದು. ಆದರೆ ಈಗ ನಾವು ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳುತ್ತಿರುವ ವಿಧಾನದಲ್ಲಿ ಇದೊಂದು ತಪ್ಪು ನಿರ್ಧಾರದಂತೆ ಕಾಣುತ್ತದೆ. ಈ `ತಪ್ಪನ್ನು~ `ಮುಂಗಾರು~ ತನ್ನ ಕೊನೆಯ ದಿನಗಳಲ್ಲಿ ತಿದ್ದಿಕೊಂಡಿತ್ತು ಎಂಬುದೂ ಗಮನಾರ್ಹ.`ಮುಂಗಾರು~ ರೂಪುಗೊಂಡ ಬಗೆ ಮತ್ತು ಅದು ಅಂತ್ಯದತ್ತ ಪಯಣಿಸಿದ ಮಾರ್ಗಗಳೆರಡನ್ನೂ ದಾಖಲಿಸುವ ಪ್ರಯತ್ನವೊಂದನ್ನು ಚಿದಂಬರ ಬೈಕಂಪಾಡಿ ಮಾಡಿದ್ದಾರೆ.ಆತ್ಮಕಥನಾತ್ಮಕ ಎಂದು ಕರೆಯಬಹುದಾದ ಈ ಬರವಣಿಗೆ ವಡ್ಡರ್ಸೆಯವರ ಬದುಕು, ಲೇಖಕರ ವೃತ್ತಿಜೀವನ ಹಾಗೂ `ಮುಂಗಾರು~ ಎಂಬ ಕನಸಿನ ಕಥೆಯನ್ನು ಒಟ್ಟೊಟ್ಟಿಗೇ ಹೇಳುತ್ತದೆ. ಈ ಕಾರಣದಿಂದಾಗಿಯೇ ಕನ್ನಡದಲ್ಲಿ ಈತನಕ ಬಂದಿರುವ ಮಾಧ್ಯಮ ಸಂಬಂಧಿ ಪುಸ್ತಕಗಳಿಗಿಂತ `ಇದು ಮುಂಗಾರು~ ವಿಶಿಷ್ಟವಾಗುತ್ತದೆ.`ಮುಂಗಾರು~ ಪತ್ರಿಕೆಯಲ್ಲಿ ಕೆಲಸಕ್ಕಾಗಿ ಸಂದರ್ಶನಕ್ಕೆ ಹೋಗುವುದರ ಮೂಲಕ ಕಥನವನ್ನು ಆರಂಭಿಸುವ ಚಿದಂಬರ ಬೈಕಂಪಾಡಿ ತಮ್ಮ ವೃತ್ತಿ ಜೀವನವನ್ನು ವಿವರಿಸುತ್ತಲೇ `ಮುಂಗಾರು~ ಎಂಬ ಕನಸು ಹುಟ್ಟಿಕೊಂಡದ್ದು ಮತ್ತು ಒಂದು ಕನಸು ಕೊನೆಗೊಂಡಂತೆ ಅದೂ ಕೊನೆಗೊಂಡದ್ದನ್ನು ಹೇಳುತ್ತಾರೆ.

 

`ರಾಮಪ್ಪಣ್ಣನವರ ಮನೆಯ ಕೋಲದ ಸುದ್ದಿ ತಂದ ಕಲಹ~ ಎಂಬ ಅಧ್ಯಾಯದಲ್ಲಿ ದಾಖಲಾಗಿರುವ ಸಂಗತಿಗಳು ಪತ್ರಕರ್ತನೊಬ್ಬ ಪತ್ರಿಕೋದ್ಯಮಿಯಾಗುವ ಪ್ರಕ್ರಿಯೆಯ ಸಂಕೀರ್ಣತೆಗೊಂದು ರೂಪಕ.ಪತ್ರಿಕೆ ಪ್ರಕಟಣೆ ಆರಂಭಿಸಿದ ಒಂದೇ ತಿಂಗಳಲ್ಲಿ ನಡೆದ ಈ ಘಟನೆ ಆದರ್ಶವನ್ನು ಸಾಕಾರಗೊಳಿಸುವ ಹಾದಿಗಳಲ್ಲಿರುವ ಭಿನ್ನತೆಗೂ ಒಂದು ಉದಾಹರಣೆ. ಪತ್ರಿಕೆಯ ನಿರ್ದೇಶಕರೊಬ್ಬರ ಮನೆಯಲ್ಲಿ ನಡೆಯುವ ಭೂತ ಕೋಲದ ಸುದ್ದಿಯನ್ನು ಪ್ರಕಟಿಸಬೇಕೇ ಬೇಡವೇ ಎಂಬ ಕುರಿತ ವಿವಾದವೇ ಪತ್ರಿಕೆಯ ಕನಸನ್ನು ಸಾಕಾರಗೊಳಿಸಿದ್ದ ಗುಂಪೊಂದು ಹೊರಗೆ ಹೋಗುವುದಕ್ಕೂ ಕಾರಣವಾಗುತ್ತದೆ.ಸ್ವಲ್ಪ ಅತಿ ಎನಿಸುವಂಥ ನೈತಿಕತೆಯನ್ನು ಆರೋಪಿಸಿಕೊಂಡು ಯೋಚಿಸಿದ್ದೇ ಈ ವಿವಾದಕ್ಕೆ ಕಾರಣವಾಗಿರಬೇಕೆನಿಸುತ್ತದೆ. ಅಥವಾ ದಕ್ಷಿಣ ಕನ್ನಡದ ಭೂತ ಕೋಲಕ್ಕೆ ಇರುವ ಸಾಮಾಜಿಕ ಆಯಾಮವನ್ನು ಬೆಂಗಳೂರಿನಿಂದ ಬಂದಿದ್ದ ಉತ್ಸಾಹಿಗಳ ಗುಂಪು ಅರ್ಥ ಮಾಡಿಕೊಳ್ಳಲಿಲ್ಲವೇನೋ? ಕಾರಣ ಏನೇ ಆಗಿದ್ದರೂ ಪತ್ರಿಕೆ ಆರಂಭವಾದ ಒಂದೇ ತಿಂಗಳಲ್ಲಿ ವಡ್ಡರ್ಸೆಯವರು ಪತ್ರಿಕೋದ್ಯಮಿಯಾಗಿ ಮೊದಲ ಸೋಲು ಅನುಭವಿಸಿದ್ದಂತೂ ನಿಜ.ಪತ್ರಿಕೆಯೊಂದು ವ್ಯವಸ್ಥಿತವಾಗಿ ಒಮ್ಮೆ ಪ್ರಕಟಣೆ ಆರಂಭಿಸಿಬಿಟ್ಟರೆ ಅದಕ್ಕೆ ವ್ಯಕ್ತಿಗಳು ಮುಖ್ಯವಾಗುವುದಿಲ್ಲ. ಅನುಭವಿಗಳ ತಂಡವೊಂದನ್ನು `ಮುಂಗಾರು~ ಬಿಟ್ಟು ಹೋದದ್ದು ಆ ಕ್ಷಣಕ್ಕೆ ದೊಡ್ಡ ಆಘಾತವಾಗಿದ್ದರೂ ಪತ್ರಿಕೆಯ ಪ್ರಕಟಣೆಯೇನೂ ನಿಲ್ಲಲಿಲ್ಲ.ಕಿರಿಯರ ಉತ್ಸಾಹ ಮತ್ತು ವಡ್ಡರ್ಸೆಯವರ ಸೋಲೊಪ್ಪದ ಮನಸ್ಥಿತಿಗಳೆರಡೂ ಒಂದಾಗಿ ಪತ್ರಿಕೆ ಹೊರಬರುತ್ತಲೇ ಹೋಯಿತು. ಒಂದು ದಿನ ವಡ್ಡರ್ಸೆ ರಘುರಾಮ ಶೆಟ್ಟರೂ ಪತ್ರಿಕೆಯನ್ನು ತೊರೆದರು. ಆಮೇಲೂ ಕುಟುಕು ಜೀವ ಉಳಿಸಿಕೊಂಡು ಪತ್ರಿಕೆಯ ಪ್ರಕಟಣೆ ಮುಂದುವರಿಯಿತು. ಎಲ್ಲಾ ಕನಸುಗಳಿಗೆ ಒಂದು ಕೊನೆಯಿದ್ದಂತೆ ಮುಂಗಾರಿನ ಕನಸೂ ಮುಗಿಯಿತು.ಮುಂಗಾರಿನ ಆರಂಭದಿಂದ ಅದರ ಕೊನೆಯ ದಿನಗಳ ತನಕದ ಎಲ್ಲಾ ಬೆಳವಣಿಗೆಗಳನ್ನು ಹತ್ತಿರದಿಂದ ನೋಡಿದ್ದ ಚಿದಂಬರ ಬೈಕಂಪಾಡಿ ಜನಪರ ಪತ್ರಿಕೋದ್ಯಮದ ಹೊಸ ಮಾದರಿಯೊಂದು ಏಕೆ ಯಶಸ್ವಿಯಾಗಲಿಲ್ಲ ಎಂಬುದರ ಕುರಿತಂತೆ ಹೊಸ ಒಳನೋಟಗಳನ್ನೇನೂ ಕೊಡುವುದಿಲ್ಲ.ಮೊದಲ ಅಧ್ಯಾಯದಲ್ಲಿ ಅವರೇ ವಿವರಿಸುವ `ಆದರ್ಶ~ದ ಕುರಿತ ಚರ್ಚೆಯೇ ಈ ಮಿತಿಯನ್ನು ಬಹಳ ಚೆನ್ನಾಗಿ ಧ್ವನಿಸುತ್ತದೆ. ಆತ್ಮಕಥನಾತ್ಮಕ ಮಾದರಿಯಲ್ಲಿ ಕಾಲದ ಇತಿಹಾಸವನ್ನು ಹೇಳುವ ಅನೇಕ ಯಶಸ್ವೀ ಪ್ರಯತ್ನಗಳ ಉದಾಹರಣೆ ಕನ್ನಡದ ಓದುಗರ ಮುಂದಿವೆ.

 

ಲಂಕೇಶ್ ಮತ್ತು ಅನಂತಮೂರ್ತಿಯವರ ಬರೆಹಗಳು ಈ ತಂತ್ರದ ಯಶಸ್ವೀ ಬಳಕೆಯ ಉದಾಹರಣೆಗಳು. ಚಿದಂಬರ ಬೈಕಂಪಾಡಿ ಈ ತಂತ್ರವನ್ನು ಬಳಸಲು ಹೊರಟಿದ್ದಾರಾದರೂ ಹೆಚ್ಚಿನ ಸಂದರ್ಭಗಳಲ್ಲಿ ಮುಂಗಾರಿನ ಭಿತ್ತಿಯಲ್ಲಿ ತನ್ನ ಚಿತ್ರವನ್ನು ಬರೆಯುವ ಪ್ರಯತ್ನವಷ್ಟೇ ಆಗಿ ಉಳಿದಿರುವುದು ಈ ಪುಸ್ತಕದ ಬಹುದೊಡ್ಡ ಮಿತಿ.ಇದು `ಮುಂಗಾರು~

ಲೇ: ಚಿದಂಬರ ಬೈಕಂಪಾಡಿ

ಪು: 104; ಬೆ: ರೂ. 70

ಪ್ರ: ಅಂಕಿತ ಪುಸ್ತಕ, 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560 004

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.