ಶನಿವಾರ, ಮೇ 8, 2021
19 °C
ಜಗಳೂರು ತಾಲ್ಲೂಕಿನಲ್ಲಿ ಮಿತಿಮೀರಿದ ಅಂತರ್ಜಲ ಬಳಕೆ

ಮುಂಗಾರು ಕೈಕೊಟ್ಟರೆ ಅಂತರ್ಜಲಕ್ಕೆ ಕುತ್ತು!

ಪ್ರಜಾವಾಣಿ ವಾರ್ತೆ/ ಎಂ. ಮಹೇಶ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯಲ್ಲಿ ವರ್ಷವೂ ಮುಂಗಾರು ಮಳೆ ಕೈಕೊಟ್ಟರೆ ಅಂತರ್ಜಲ ಮತ್ತಷ್ಟು ಕುಸಿತ ಕಾಣಲಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದೆ.

- ಇದು ಗಣಿ ಮತ್ತು ಭೂವಿಜ್ಞಾನ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಆತಂಕ.ಕಳೆದ ವರ್ಷ ಸಮರ್ಪಕವಾಗಿ ಮಳೆಯಾಗದ ಪರಿಣಾಮ, ಅಂತರ್ಜಲ ಪ್ರಮಾಣ ಕುಸಿತ ಕಂಡಿದೆ. ಈ ಬಾರಿಯೂ ಇದು ಮುಂದುವರಿದಲ್ಲಿ ಕೃಷಿ ಚಟುವಟಿಕೆಯ ಮೇಲೂ ಪರಿಣಾಮ ಉಂಟಾಗಲಿದ್ದು, ಉತ್ಪಾದನೆಯ ಸೂಚ್ಯಂಕವೂ ಇಳಿಕೆ ಕಾಣುವ ಸಾಧ್ಯತೆ ಇದೆ. ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿಯುತ್ತಿರುವುದು ಕೊಂಚ ಪ್ರಮಾಣದ ಆಶಾಭಾವ ಮೂಡಿಸಿದೆಯಾದರೂ, ಜಿಲ್ಲೆಯ ಅಂತರ್ಜಲ ಮಟ್ಟ ಉತ್ತಮ ಮುಂಗಾರು ಮಳೆಯನ್ನು ಅವಲಂಬಿಸಿದೆ ಎಂಬುದು ತಜ್ಞರ ಅನಿಸಿಕೆ.ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ, ಪ್ರತಿ ವರ್ಷ ಅಂತರ್ಜಲಮಟ್ಟದ ವರದಿ ಸಿದ್ಧಪಡಿಸಲಾಗುತ್ತದೆ. 2007ರಿಂದ 2009ರವರೆಗೆ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀರಾ ಕೆಟ್ಟ ಪರಿಸ್ಥಿತಿಗೆ ತಲುಪಿತ್ತು. 2007ರಲ್ಲಿ 12.67 ಮೀಟರ್ ಇತ್ತು. 2008ರಲ್ಲಿ 11.08 ಮೀಟರ್ ಕಂಡುಬಂದಿದ್ದು, ಸ್ವಲ್ಪ ಏರಿಕೆಯಾಗಿದ್ದು ದಾಖಲಾಗಿತ್ತು. 2009ರಲ್ಲಿ ಮತ್ತೆ 13.67 ಮೀಟರ್‌ಗೆ ಕುಸಿತಕಂಡಿತ್ತು. 2010ರಲ್ಲಿ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟದ ಪ್ರಮಾಣ ರಾಜ್ಯದಲ್ಲಿಯೇ ಏರಿಕೆ ಕಂಡಿತ್ತು. 6.14 ಮೀಟರ್‌ಗೆ ಅಂತರ್ಜಲ ಮಟ್ಟ ಸುಧಾರಣೆ ಆಗಿರುವುದು ಕಂಡುಬಂದಿತ್ತು. 2011ರಲ್ಲಿ 6.99 ಮೀಟರ್ ಇತ್ತು. ಇದಕ್ಕೆ ಕಾರಣ, 2010 ಹಾಗೂ 2011ರಲ್ಲಿ ಉತ್ತಮ ಮಳೆಯಾಗಿದ್ದು. ಇದರಿಂದ ಅಂತರ್ಜಲ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆ ಕಂಡಿತ್ತು. ಆದರೆ, ನಂತರ ಮಳೆಯಾಗದೇ ಆತಂಕದ ಸ್ಥಿತಿ ಉಂಟಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವರದಿಯಿಂದ ವ್ಯಕ್ತವಾಗಿದೆ.`2011ರಲ್ಲಿ ದಾವಣಗೆರೆ ತಾಲ್ಲೂಕಿನಲ್ಲಿ (ಸರಾಸರಿ) 6.26 ಮೀ., ಹರಿಹರದಲ್ಲಿ 3.87 ಮೀ., ಜಗಳೂರಿನಲ್ಲಿ 12.78 ಮೀ., ಹರಪನಹಳ್ಳಿಯಲ್ಲಿ 6.48 ಮೀಟರ್, ಚನ್ನಗಿರಿಯಲ್ಲಿ ಶೇ 7.63 ಮೀಟರ್ ಹಾಗೂ ಹೊನ್ನಾಳಿಯಲ್ಲಿ ಶೇ 4.95 ಮೀಟರ್ ಅಂತರ್ಜಲ ಮಟ್ಟ ಇರುವುದು ದಾಖಲಾಗಿತ್ತು. 2012ರಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಕುಸಿತ ಹೆಚ್ಚಿನ ರೀತಿಯಲ್ಲಿ ಆಗಿದೆ. ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಬಾರಿ ಸಮರ್ಪಕವಾಗಿ ಮಳೆಯಾಗದೇ ಇದ್ದಲ್ಲಿ ಅಂತರ್ಜಲಮಟ್ಟ ಮತ್ತಷ್ಟು ಕುಸಿತ ಕಾಣಲಿದೆ. ಜನ ಜಾನುವಾರಿಗೆ ಕುಡಿಯುವ ನೀರಿಗೂ ತೊಂದರೆ ಉಂಟಾಗುವ ಸಂಭವ ಉದ್ಭವಿಸುವ ಸಾಧ್ಯತೆ ಇದೆ' ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಎಸ್.ಪಿ.ಮಲ್ಲೇಶ್ `ಪ್ರಜಾವಾಣಿ'ಗೆ ತಿಳಿಸಿದರು.`ರಾಜ್ಯದ 35 ತಾಲ್ಲೂಕುಗಳಲ್ಲಿ, ಮನಬಂದಂತೆ ಕೊಳವೆಬಾವಿ ಕೊರೆಯುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ಅತಿಹೆಚ್ಚು ಅಂತರ್ಜಲ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಜಿಲ್ಲೆಯ ಜಗಳೂರು ತಾಲ್ಲೂಕು ಸಹ ಸೇರಿದೆ. ಅಂತರ್ಜಲ ಬಳಕೆ ಮಾಡುವುದಕ್ಕೂ ಮಿತಿ ಇದೆ. ಆದರೆ, ರಾಜ್ಯದ 35 ಜಿಲ್ಲೆಯಲ್ಲಿ ಪ್ರಸ್ತುತ ಶೇ 100ರಷ್ಟು ಅತಿಯಾಗಿ ಅಂತರ್ಜಲ ಬಳಕೆ ಮಾಡಲಾಗಿದೆ. ಇದರಿಂದ ಅಲ್ಲಿ ಅಂತರ್ಜಲ ಅಪಾಯದ ಮಟ್ಟ ತಲುಪಿದೆ. ಹೀಗಾಗಿ, ಕೊಳವೆಬಾವಿ ಕೊರೆಯುವುದನ್ನು ನಿರ್ಬಂಧಿಸಿ ಸರ್ಕಾರ ಕ್ರಮ ಕೈಗೊಂಡಿದೆ. ಈ ಸಾಲಿನಲ್ಲಿ ಅಂತರ್ಜಲ ಮಟ್ಟದ ವರದಿ ಸಿದ್ಧಗೊಂಡ ನಂತರ, ಅತಿಹೆಚ್ಚು ಅಂತರ್ಜಲ ಬಳಕೆಯಾಗಿದ್ದರೆ ಇತರ ತಾಲ್ಲೂಕುಗಳಲ್ಲಿಯೂ ನಿರ್ಬಂಧ ವಿಧಿಸಲಾಗುತ್ತದೆ' ಎಂದು ಹೇಳಿದರು.ಹರಿಹರ ಮತ್ತು ಹೊನ್ನಾಳಿ ತಾಲ್ಲೂಕುಗಳು ಸಂಪೂರ್ಣ ಅಚ್ಚುಕಟ್ಟು ಪ್ರದೇಶಗಳಾಗಿವೆ. ದಾವಣಗೆರೆ, ಹರಪನಹಳ್ಳಿ ಹಾಗೂ ಚನ್ನಗಿರಿಯಲ್ಲಿ ಕೆಲ ಭಾಗಗಳು ಅಚ್ಚಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿವೆ.  ಆದರೆ, ಜಗಳೂರು ಅಚ್ಚುಕಟ್ಟು ವ್ಯಾಪ್ತಿಗೆ ಸೇರುವುದಿಲ್ಲ. ಮಳೆಯಾಗುವುದು ಸಹ ಕಡಿಮೆ. ಇದರಿಂದಾಗಿ, ಅಂತರ್ಜಲ ಪ್ರಮಾಣ ಅಲ್ಲಿ ಬಹಳ ಇಳಿಕೆ ಕಂಡುಬರುತ್ತದೆ. ದಾವಣಗೆರೆ ತಾಲ್ಲೂಕಿನಲ್ಲಿ ನೀರಾವರಿ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿದೆ. ಶೀತಲ ಪ್ರದೇಶವೂ ಆಗಿರುವುದರಿಂದ, ಇದು ಅಂತರ್ಜಲಕ್ಕೆ ಪೂರಕ ಎನ್ನುತ್ತಾರೆ ಅವರು.ಜಿಲ್ಲೆಯಲ್ಲಿ 656.9 ಮೀಟರ್ ವಾಡಿಕೆ ಮಳೆ ಆಗಬೇಕು. ಮುಂಗಾರುಪೂರ್ವ ಮಳೆ ಉತ್ತಮವಾಗಿ ಆಗಿರುವುದರಿಂದ, ಉತ್ತಮ ಮುಂಗಾರು ಮಳೆಯ ನಿರೀಕ್ಷೆ ಇದೆ ಎಂಬ ಆಶಾಭಾವ ಕೃಷಿ ಇಲಾಖೆಯದ್ದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.