ಶುಕ್ರವಾರ, ಮೇ 20, 2022
21 °C

ಮುಂಗಾರು ಕ್ಷೀಣ: ಮಳೆ ನಿರೀಕ್ಷೆಯಲ್ಲಿ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಜೂನ್ ಕೊನೆಗೊಳ್ಳುತ್ತಾ ಬಂದರೂ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದಿರುವ ಹಿನ್ನೆಲೆಯಲ್ಲಿ ಕುಶಾಲನಗರ ಹೋಬಳಿಯ ಮಳೆಯಾಶ್ರಿತ ಪ್ರದೇಶದ ರೈತರು ಕಂಗಾಲಾಗಿದ್ದಾರೆ.ಪ್ರತಿವರ್ಷ ಈ ವೇಳೆಗಾಗಲೇ ಮುಂಗಾರು ಮಳೆ ಉತ್ತಮವಾಗಿ ಬಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ.ಜೂನ್ ಮಧ್ಯಭಾಗದಲ್ಲಿ ಒಂದೆರಡು ದಿನ ಬಿದ್ದ ಮಳೆಯನ್ನೇ ನಂಬಿ ರೈತರು ಮುಸುಕಿನ ಜೋಳ ಮತ್ತಿತರ ಬಿತ್ತನೆ ಕೈಗೊಂಡಿದ್ದಾರೆ. ಮಳೆ ಬಾರದಿರುವ ಹಿನ್ನೆಲೆಯಲ್ಲಿ ಜೋಳ ಮತ್ತಿತರ ಬೆಳೆಗಳು ಬಿಸಿಲಿನಿಂದ ಒಣಗಲಾರಂಭಿಸಿವೆ.ಬಿತ್ತನೆ ಮಾಡಿರುವ ಬೆಳೆಗಳಿಗೆ ಮಳೆ ಕೊರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತರು ಮುಸುಕಿನ ಜೋಳ, ತಂಬಾಕು ಮತ್ತಿತರ ಬೆಳೆಗಳಿಗೆ ಹೊರಗಿನಿಂದ ನೀರು ಪೂರೈಕೆ ಮಾಡುತ್ತಿದ್ದಾರೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಹಾರಂಗಿ, ಚಿಕ್ಲಿಹೊಳೆ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಬತ್ತದ ಬಿತ್ತನೆ ಕಾರ್ಯ ವಿಳಂಬವಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.ಆದರೂ ರೈತರು ಭೂಮಿಯಲ್ಲಿ ಇರುವ ತೇವಾಂಶವನ್ನು ನಂಬಿ ಮಳೆ ನಿರೀಕ್ಷೆಯಲ್ಲಿಯೇ ಬಿತ್ತನೆ ಕಾರ್ಯದಲ್ಲಿ ತೊಡಗಿರುವುದು ಕಂಡುಬಂದಿದೆ.ಮಳೆ ಪ್ರಮಾಣ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಗೆ ನೀರಿನ ಒಳಹರಿವು ತೀವ್ರವಾಗಿ ಕುಸಿದಿದೆ.

ಗರಿಷ್ಠ 2859 ಅಡಿ ಸಾಮರ್ಥ್ಯದ ಹಾರಂಗಿ ಅಣೆಕಟ್ಟೆಯಲ್ಲಿ ಭಾನುವಾರ ಬೆಳಿಗ್ಗೆ 8 ಕ್ಕೆ 2810.22 ಅಡಿಗಳಷ್ಟು ನೀರು ಸಂಗ್ರಹಗೊಂಡಿದೆ. ಕಳೆದ ವರ್ಷ ಇದೇ ಅವಧಿಗೆ ಅಣೆಕಟ್ಟೆಯಲ್ಲಿ 2844.64 ಅಡಿಗಳಷ್ಟು ನೀರು ಸಂಗ್ರಹಗೊಂಡಿತ್ತು. ಅಣೆಕಟ್ಟೆಗೆ ಭಾನುವಾರ ಬೆಳಿಗ್ಗೆ 8 ಕ್ಕೆ 388 ಕ್ಯೂಸೆಕ್ಸ್‌ಗಳಷ್ಟು ನೀರು ಹರಿದು ಬರುತ್ತಿತ್ತು. ಹಾರಂಗಿ ಜಲಾನಯನ ಪ್ರದೇಶದಲ್ಲಿ ಭಾನುವಾರ ಮಳೆ ವರದಿಯಾಗಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.