ಶುಕ್ರವಾರ, ಆಗಸ್ಟ್ 14, 2020
21 °C

ಮುಂಗಾರು: ಗಿಡಗಳಿಗೆ ಹೆಚ್ಚಿದ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಗಾರು: ಗಿಡಗಳಿಗೆ ಹೆಚ್ಚಿದ ಬೇಡಿಕೆ

ತುಮಕೂರು: ಮುಂಗಾರು ಆರಂಭಗೊಂಡಿದೆ. ಹಸಿರು ಚಿಗುರುವ ಕಾಲ. ಮನದ ಮೂಲೆಯಲ್ಲಿ ಗಿಡ ಬೆಳೆಸುವ ಆಸೆ. ಆದರೆ ಬಹುತೇಕರದ್ದು ಒಂದೇ ಸಮಸ್ಯೆ. ಗಿಡ ಬೆಳೆಸಲು ಸೂಕ್ತ ಜಾಗ ಇಲ್ಲ.ನಗರ ವ್ಯಾಪ್ತಿಯಲ್ಲಿ ಕೈತೋಟ ಮಾಡಲು ಅವಕಾಶ ಕಡಿಮೆ. ಮನೆ ಮುಂಭಾಗ ಎರಡು ಗಿಡಗಳಾದರೂ ಇರಲಿ ಎಂಬ ಚಿಂತನೆಗೆ `ಹೂವಿನ ಕುಂಡ~ಗಳು ನೀರೆರೆಯುತ್ತಿವೆ. ಇವನ್ನೇ ಬಳಸಿ ಹೂವು-ತರಕಾರಿ ಗಿಡ ಬೆಳೆಸಲು ಮನೆ ಮಂದಿ ಮುಂದಾಗುತ್ತಿದ್ದಾರೆ.ನಗರದ ಮೂರ‌್ನಾಲ್ಕು ಕಡೆ ಸಿಮೆಂಟ್‌ನಿಂದ ನಿರ್ಮಿಸಿದ ಹೂವಿನ ಕುಂಡ, ಅಲಂಕಾರಿಕ ಗಿಡ, ಗುಲಾಬಿ, ದಾಸವಾಳ... ಸೇರಿದಂತೆ ಹತ್ತಾರು ಬಗೆಯ ವಿಭಿನ್ನ ಹೂವಿನ ಗಿಡ, ಹಣ್ಣಿನ ಗಿಡಗಳು ಮಾರಾಟಕ್ಕೆ ಸಿಗುತ್ತವೆ. ತೋಟಗಾರಿಕೆ ಇಲಾಖೆ ಸಹ ಆಸಕ್ತರಿಗೆ ರಿಯಾಯಿತಿ ದರದಲ್ಲಿ ಹೂವು, ಹಣ್ಣಿನ ಗಿಡ, ಗೊಬ್ಬರ ಪೂರೈಸುತ್ತಿದೆ.

ಭುವಿಗೆ ಮುಂಗಾರಿನ ಹನಿಗಳು ಮುತ್ತಿಕ್ಕುತ್ತಿದ್ದಂತೆ, ಗಿಡ ಬೆಳೆಸಲು ಆಸಕ್ತಿ ಇರುವವರು ಉತ್ಸುಕರಾಗುತ್ತಾರೆ.ಅದಕ್ಕಾಗಿ ವ್ಯಾಪಾರಿಗಳ ಬಳಿ ತೆರಳಿ ಖರೀದಿ ನಡೆಸುತ್ತಾರೆ. ಮಳೆಗಾಲದ ಆರಂಭದಲ್ಲಿ ಗಿಡ ನೆಟ್ಟರೆ, ನಿಶ್ಚಿಂತೆ. ಹೆಚ್ಚಿನ ಆರೈಕೆ ಬೇಕಿಲ್ಲ. ಅವು ಚಿಗುರಿ ಬೆಳೆಯುತ್ತವೆ. ಬೀಜ ಮೊಳಕೆಯೊಡುತ್ತವೆ. ಇದಕ್ಕೆ ವಾತಾವರಣವೂ ಸಹಕಾರಿ ಆಗಿದೆ ಎಂಬ ಅನಿಸಿಕೆ ಗೃಹಿಣಿ ಮಾಲಾ ಅವರದ್ದು.ನಗರದ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಎರಡು-ಮೂರು ಕಡೆ ಹೂವಿನ ಕುಂಡ ವ್ಯಾಪಾರಿಗಳು ತಮ್ಮ ನೆಲೆ ಕಂಡುಕೊಂಡಿದ್ದಾರೆ. ಉತ್ತರ ಪ್ರದೇಶದಿಂದ ಐದಾರು ವರ್ಷಗಳ ಹಿಂದೆ ವಲಸೆ ಬಂದು ಇಲ್ಲಿಯೇ ನೆಲೆಸಿದ್ದಾರೆ.ರಸ್ತೆ ಬದಿಯ ಒಂದು ಕಡೆ ತೊಟ್ಟಿ ನಿರ್ಮಿಸಿಕೊಂಡು, ಅದರಲ್ಲಿ ನೀರು ಸಂಗ್ರಹಿಸಿ ಕುಂಡ ತಯಾರಿಸುತ್ತಾರೆ. ಮರಳು, ಜಲ್ಲಿ, ಸಿಮೆಂಟ್ ಎಲ್ಲ ಕಚ್ಚಾ ವಸ್ತುಗಳನ್ನು ಬಯಲಲ್ಲೆ ಸಂಗ್ರಹಿಸಿಕೊಂಡು ಅಗತ್ಯಕ್ಕೆ ತಕ್ಕಂತೆ ಕುಂಡಗಳ ನಿರ್ಮಾಣ ಮಾಡುತ್ತಾರೆ.ಒಂದೊಂದು ಕಡೆ ಒಂದೊಂದು ಬೆಲೆ. 25ರಿಂದ 40ರ ತನಕ ಮಾರುತ್ತಾರೆ. ಕೆಲವೆಡೆ ಬರೇ ಕುಂಡ ಸಿಗುತ್ತವೆ. ಮತ್ತೆ ಕೆಲವು ಕಡೆ ಕುಂಡ-ಹೂವಿನ ಗಿಡ ಎರಡೂ ಲಭ್ಯ. ಚೌಕಾಸಿ ವ್ಯಾಪಾರ ಇಲ್ಲ. ಹೇಳಿದ್ದೇ ಬೆಲೆ.ಉತ್ತರ ಪ್ರದೇಶದ ಲಖನೌ ಮೂಲದ ಅಜಯ್ ಮತ್ತು ಪರದೇಶಿ ಮೂರು ವರ್ಷಗಳಿಂದ ಹೆದ್ದಾರಿ ಪಕ್ಕ ಕುಂಡ ತಯಾರಿಸಿ ಮಾರಾಟ ನಡೆಸುತ್ತಿದ್ದಾರೆ. ಇದರ ಜತೆ ಸಿಮೆಂಟ್ ತೊಟ್ಟಿ, ಬಳೆಗಳನ್ನು ತಯಾರಿಸಿ ಮಾರುತ್ತಾರೆ. ಮೂರು ವರ್ಷದಿಂದ ಇವರಿಗೆ ಇದೇ ಬದುಕು.ನಿತ್ಯ ನೂರಕ್ಕೂ ಹೆಚ್ಚು ಕುಂಡ ತಯಾರಿಸುತ್ತಾರೆ. 50ಕ್ಕೂ ಹೆಚ್ಚು ಕುಂಡಗಳನ್ನು ಮಾರುತ್ತಾರೆ. ಹತ್ತಿರದಲ್ಲೇ ಬಾಡಿಗೆ ರೂಮ್ ಮಾಡಿಕೊಂಡಿದ್ದರೂ; ಇಲ್ಲಿಯೇ ಹೆಚ್ಚು ಇರುತ್ತಾರೆ. ಊಟ-ತಿಂಡಿ ಎಲ್ಲವನ್ನು ಸ್ವತಃ ತಯಾರಿಸಿಕೊಳ್ಳುವ 20ರ ಆಸುಪಾಸಿನ ಯುವಕರ ಮೊಗದಲ್ಲಿ `ಬದುಕಿನ ನೆಲೆ~ ಕಂಡುಕೊಂಡ ನೆಮ್ಮದಿ ಕಾಣುತ್ತದೆ.ಬೆಂಗಳೂರು ಲಾಲಬಾಗ್ ಸೇರಿದಂತೆ ಇತರ ಸಸ್ಯಕ್ಷೇತ್ರಗಳಿಂದ ಹೂವಿನ ಗಿಡ ತಂದು ಇಲ್ಲಿ ಮಾರುತ್ತಾರೆ. ಕೆಲವರು ತಾವೇ ಕಸಿ ಮಾಡುವ ವಿಧಾನದ ಮೂಲಕ ಬೆಳೆಸಿ ಮಾರುತ್ತಾರೆ. ಹೂವಿನ ಗಿಡದ ಬೆಲೆಯೂ ದುಬಾರಿ. ತಿಂಗಳ ಕೊನೆಗೆ ತಮ್ಮೆಲ್ಲ ಖರ್ಚು ಕಳೆದು 8ರಿಂದ 10 ಸಾವಿರ ಗಳಿಸುತ್ತಾರೆ.ಇವರಂತೆಯೇ 7 ಮಂದಿಯ ಕುಟುಂಬವೊಂದು ಕೆಎಸ್‌ಎಫ್‌ಸಿ ಮುಂಭಾಗದಲ್ಲಿ 5 ವರ್ಷದಿಂದ ಬೀಡು ಬಿಟ್ಟು ಬದುಕಿನ ನೆಲೆ ಕಂಡುಕೊಂಡಿದೆ. ವರ್ಷಕ್ಕೆ 2-3 ಬಾರಿ ಉತ್ತರ ಪ್ರದೇಶಕ್ಕೆ ತೆರಳುತ್ತಾರೆ. ಆಗಾಗ್ಗೆ ಅಲ್ಲಿನ ತಮ್ಮ ಕುಟುಂಬಗಳಿಗೆ ಬ್ಯಾಂಕ್ ಮೂಲಕ ಹಣ ಹಾಕುತ್ತಾರೆ. ಹೇಗೋ ಬದುಕು ಸಾಗುತ್ತಿದೆ. ಚಿಕ್ಕ-ಪುಟ್ಟ ತೊಂದರೆ ಹೊರತು ಪಡಿಸಿದರೆ ಇನ್ನೇನು ಸಮಸ್ಯೆ ಇಲ್ಲ ಎನ್ನುತ್ತಾರೆ.`ಗ್ರೀನ್ ತುಮಕೂರು~ ಕನಸಿಗೆ ಎಲ್ಲಿಂದಲೋ ಬಂದು ಇಲ್ಲಿ ನೆಲೆ ಕಂಡುಕೊಂಡಿರುವ ಹೂಕುಂಡದ ವ್ಯಾಪಾರಿಗಳು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.