ಶನಿವಾರ, ಮೇ 8, 2021
18 °C

ಮುಂಗಾರು ಪ್ರವೇಶ: ರೈತರಲ್ಲಿ ಸಂತಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜಿಟಿಜಿಟಿ ಮಳೆಯೊಂದಿಗೆ ಜಿಲ್ಲೆಗೆ ಮುಂಗಾರು ಪ್ರವೇಶವಾಗಿದೆ. ಈಗಾಗಲೇ ಕೇರಳ ಪ್ರವೇಶ ಮಾಡಿರುವ ಮುಂಗಾರು ಭರ್ಜರಿ ಮಳೆಯಾಗುವುದರೊಂದಿಗೆ ಜಿಲ್ಲೆಗೆ ಪ್ರವೇಶ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ನಿರೀಕ್ಷೆ ಹುಸಿಯಾಗಿದೆ.ಜಿಲ್ಲೆಯಾದ್ಯಂತ ಗುರುವಾರ ದಿನವಿಡಿ ದಟ್ಟ ಮೋಡ ಕವಿದಿತ್ತು. ಈ ಕಾರ್ಮೋಡಗಳು ಭರ್ಜರಿ ಮಳೆ ಸುರಿಸಲಿವೆ ಎಂದು ಜನ ಊಹಿಸಿದ್ದರು. ಆದರೆ, ಆಗಾಗ ಜಿಟಿಜಿಟಿ ಮಳೆ ಬಿಟ್ಟರೆ ದಟ್ಟವಾದ ಮಳೆ ಎಲ್ಲೂ ಸುರಿಯಲಿಲ್ಲ. ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರದಲ್ಲಿ ಸಂಜೆಯ ಹೊತ್ತು ಸ್ವಲ್ಪ ಬಿರುಸಿನಿಂದ ಕೂಡಿದ ಮಳೆಯಾದರೆ ಉಳಿದೆಡೆಗಳಲ್ಲಿ ಬಾನುತುಂಬ ಮೋಡಗಳು ಆವರಿಸಿದ್ದರೂ ಮಳೆಯಾಗಲಿಲ್ಲ.ಮುಂಗಾರಿನ ಪ್ರವೇಶ ಜಿಲ್ಲೆಯ ರೈತರಲ್ಲಿ ಹರ್ಷ ತಂದಿದೆ. ಹೊಲ, ಗದ್ದೆಗಳಲ್ಲಿ ಕೃಷಿ ಕಾರ್ಯಗಳು ಚುರುಕು ಪಡೆದುಕೊಂಡಿವೆ. ಭತ್ತ ನಾಟಿ ಮಾಡಬೇಕಾದರೆ ಒಂದು ದೊಡ್ಡ ಮಳೆಯಾಗಬೇಕು ಎನ್ನುತ್ತಾರೆ ತಾಲ್ಲೂಕಿನ ಬಿಣಗಾದ ರೈತರು.`ಮುಂಗಾರು ಜಿಲ್ಲೆ ಪ್ರವೇಶ ಮಾಡಿದೆ. ಬಾನು ತುಂಬ ಕವಿದಿದೆ. ಆದರೆ, ಮೋಡಗಳು  ಚದುರಿಕೊಂಡಿದೆ. ಶುಕ್ರವಾರ ಉತ್ತಮ ಮಳೆ ಆಗುವ ಸಂಭವ ಇದೆ' ಎಂದು ಹವಾಮಾನ ಇಲಾಖೆ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.ಗುರುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡು ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 2.3 ಸೆಂ.ಮೀ. ಮಳೆಯಾಗಿದೆ. ಭಟ್ಕಳ- 6.6ಮಿ.ಮೀ,  ಹೊನ್ನಾವರ 2.6ಮಿ.ಮೀ, ಕಾರವಾರ- 13.8ಮಿ.ಮೀ, ಕುಮಟಾ- 1.4ಮಿ.ಮೀ, ಮುಂಡಗೋಡ- 1.0ಮಿ.ಮೀ, ಜೂನ್ 1 ರಿಂದ 6 ರ ವರೆಗೆ ಸರಾಸರಿ 58.6 ಮಿ.ಮೀ ಮಳೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.