ಮಂಗಳವಾರ, ಮೇ 18, 2021
30 °C
ಕೆಆರ್‌ಎಸ್, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳು ಇನ್ನೂ ಖಾಲಿ, ಖಾಲಿ

ಮುಂಗಾರು ಬಂದರೂ ಕುಡಿಯಲು ನೀರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಗಾರು ಬಂದರೂ ಕುಡಿಯಲು ನೀರಿಲ್ಲ

ಬೆಂಗಳೂರು: ಮುಂಗಾರಿನ ಆಗಮನವಾಗಿ ವಾರವೇ ಕಳೆದಿದ್ದರೂ ಕಾವೇರಿ ತಟದಿಂದ ನಗರದ ಜನಕ್ಕೆ ಇನ್ನೂ ಯಾವುದೇ ಆಶಾದಾಯಕ ವರ್ತಮಾನ ಸಿಕ್ಕಿಲ್ಲ. ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಮಳೆ ಬಾರದ್ದರಿಂದ ನಗರದ ಜಲಮೂಲಗಳಾದ ನಾಲ್ಕೂ ಜಲಾಶಯಗಳು ಈಗಲೂ ಖಾಲಿಯಾಗಿವೆ.`ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 0.9 ಟಿಎಂಸಿ ಅಡಿಗೆ ಕುಸಿದಿದೆ. ಹೇಮಾವತಿಯಲ್ಲಿ 2 ಟಿಎಂಸಿ ಅಡಿಯಷ್ಟು ಮಾತ್ರ ನೀರಿನ ಸಂಗ್ರಹ ಉಳಿದುಕೊಂಡಿದೆ. ಹಾರಂಗಿ ಮತ್ತು ಕಬಿನಿ ಜಲಾಶಯದ ಒಟ್ಟು ನೀರಿನ ಸಂಗ್ರಹದ ಪ್ರಮಾಣ 0.6 ಟಿಎಂಸಿ ಅಡಿಯಷ್ಟಿದೆ. ಕೇರಳದ ವೈನಾಡಿನಲ್ಲಿ ಚೆನ್ನಾಗಿ ಮಳೆ ಸುರಿದು ಜಲಾಶಯಗಳು ತುಂಬಿಕೊಳ್ಳುವವರೆಗೆ ಉಳಿದಿರುವ 3.5 ಟಿಎಂಸಿ ಅಡಿಯಷ್ಟು ನೀರಿನಲ್ಲೇ ದಿನ ನೂಕಬೇಕಿದೆ' ಎಂದು ಜಲ ಮಂಡಳಿಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.`ಕಬಿನಿ ಜಲಾಶಯಕ್ಕೆ ಮಾತ್ರ ಸಾವಿರ ಕ್ಯೂಸೆಕ್ಸ್‌ನಷ್ಟು ಒಳಹರಿವು ಇದೆ. ಮಿಕ್ಕ ಮೂರೂ ಜಲಾಶಯಗಳಿಗೆ ಇದುವರೆಗಿನ ಮಳೆಯಿಂದ ಏನೂ ಪ್ರಯೋಜನವಾಗಿಲ್ಲ. ಮುಂಗಾರಿನ ಆಗಮನವಾಗಿದ್ದರೂ ಕೆಆರ್‌ಎಸ್ ಜಲಾಶಯದ ಮಟ್ಟ ಮಾತ್ರ ಇನ್ನೂ ದಯನೀಯ ಸ್ಥಿತಿಯಲ್ಲೇ ಉಳಿದಿದೆ' ಎಂದು ಅವರು ವಾಸ್ತವ ಸಂಗತಿಯನ್ನು ತೆರೆದಿಡುತ್ತಾರೆ.ಕೆಆರ್‌ಎಸ್‌ನಿಂದ ನೀರು ಸಿಗುವ ಪ್ರಮಾಣ ಕುಸಿತಗೊಂಡ ಬಳಿಕ ನಗರದ ಬಹುತೇಕ ಪ್ರದೇಶಗಳಿಗೆ ದಿನ ಬಿಟ್ಟು ದಿನ ನೀರು ಪೂರೈಕೆ ಮಾಡಲಾಗುತ್ತಿದ್ದು, ಈಗಲೂ ಅದೇ ವ್ಯವಸ್ಥೆ ಮುಂದುವರಿದಿದೆ. ನಗರಕ್ಕೆ ನಿತ್ಯ 1,150 ದಶಲಕ್ಷ ಲೀಟರ್ ನೀರಿನ ಅಗತ್ಯವಿದ್ದು, ಜಲಾಶಯಗಳಿಂದ 800 ದಶಲಕ್ಷ ಲೀಟರ್ ನೀರು ಮಾತ್ರ ಸಿಗುತ್ತಿದೆ. ಪ್ರತಿನಿತ್ಯ 350 ದಶಲಕ್ಷ ಲೀಟರ್ ಕೊರತೆ ಎದುರಾಗಿದೆ. ಕೆಲವು ಬಡಾವಣೆಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ.`ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಸಭೆ ನಡೆಸಿ, ನೀರಿನ ಸಮಸ್ಯೆ ಕುರಿತಂತೆ ಸಮಗ್ರವಾಗಿ ಚರ್ಚಿಸಿದ್ದಾರೆ. ನಗರದಲ್ಲಿ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗುವುದು ಎನ್ನುವ ಭರವಸೆಯನ್ನೂ ನೀಡಿದ್ದಾರೆ. ಮಳೆಯಾಗದೆ ನೀರು ಬಾರದಿದ್ದರೆ ಸಮಸ್ಯೆ ಬಗೆಹರಿಸುವುದಾದರೂ ಹೇಗೆ' ಎಂದು ಜಲಮಂಡಳಿ ಅಧಿಕಾರಿಗಳು  ಪ್ರಶ್ನಿಸುತ್ತಾರೆ. `ಹೇಮಾವತಿ ನೆರವು ಸಿಗದಿದ್ದರೆ ಇಷ್ಟರಲ್ಲಿ ನಗರ ನೀರಿನ ಸಮಸ್ಯೆಯ ಬಿಸಿ  ಅನುಭವಿಸಬೇಕಾಗಿತ್ತು' ಎಂದು ಅವರು ಹೇಳುತ್ತಾರೆ. `ನಿರೀಕ್ಷಿತ ಪ್ರಮಾಣದ ನೀರು ದೊರೆಯದ ಕಾರಣ ಜಲಮಂಡಳಿ ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿ ಪಂಪಿಂಗ್ ಸ್ಟೇಶನ್‌ಗಳ 60 ಪಂಪ್‌ಗಳ ಪೈಕಿ 10ಕ್ಕೂ ಅಧಿಕ ಪಂಪ್‌ಗಳಿಗೆ ವಿಶ್ರಾಂತಿ ನೀಡಲಾಗಿದೆ. ಅವುಗಳನ್ನು ಮತ್ತೆ  ಚಾಲೂ ಮಾಡುವ ಅವಕಾಶ ಇದುವರೆಗೆ ದೊರೆತಿಲ್ಲ. ಹೀಗಾಗಿ ನಗರದ ಉತ್ತರ ಹಾಗೂ ಪೂರ್ವ ಭಾಗವಲ್ಲದೆ ದಕ್ಷಿಣದಲ್ಲೂ ನೀರಿನ ಅಭಾವ ಉಂಟಾಗಿದೆ' ಎಂದು ಜಲಮಂಡಳಿ ಮೂಲಗಳು ಒಳಗಿನ ಬೇಗುದಿಯನ್ನು ತೆರೆದಿಡುತ್ತವೆ.ಕೇರಳದ ಕರಾವಳಿಯಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದರೂ ವೈನಾಡಿನ ಘಟ್ಟ ಪ್ರದೇಶದಲ್ಲಿ ಇನ್ನೂ ಚುರುಕು ಪಡೆಯದೇ ಇರುವುದು ಜಲಮಂಡಳಿ ಅಧಿಕಾರಿಗಳಿಗೆ ಕಳವಳ ಉಂಟುಮಾಡಿದೆ. `ವೈನಾಡಿನಲ್ಲಿ ಮಳೆಯಾದರೆ ಕಾವೇರಿಗೆ ನೀರು ಹರಿದುಬರುತ್ತದೆ. ಮುಂದಿನ 4-6 ದಿನಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂಬ ಭರವಸೆಯನ್ನು ಹವಾಮಾನ ಇಲಾಖೆ ನೀಡಿದೆ. ಮಳೆ ಆಗುವವರೆಗೆ ಆತಂಕ ಇದ್ದುದೇ' ಎಂದು ಅಧಿಕಾರಿಗಳು ಹೇಳುತ್ತಾರೆ.ಸಂಜಯನಗರದಂತಹ ಬಡಾವಣೆಗಳಲ್ಲಿ ಪ್ರತಿ ಟ್ಯಾಂಕರ್‌ಗೆ ರೂ 800 ಕೊಟ್ಟು ನೀರು ಖರೀದಿ ಮಾಡಲಾಗುತ್ತಿದೆ. ನೀರಿನ ಸಮಸ್ಯೆ ಗೊತ್ತಿರದ ಮಲ್ಲೇಶ್ವರ, ಶೇಷಾದ್ರಿಪುರ ಮತ್ತಿತರ ಪ್ರದೇಶಗಳು ಸಹ ಈ ಸಲದ ನೀರಿನ ಕೊರತೆ ಬಿಸಿಯನ್ನು ಚೆನ್ನಾಗಿ ಅನುಭವಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.