ಗುರುವಾರ , ಮೇ 13, 2021
16 °C

ಮುಂಗಾರು ಬಿತ್ತನೆಗೆ `ಕೃಷಿ ಮಠ' ಶ್ರೀಕಾರ

ಪ್ರಜಾವಾಣಿ ವಾರ್ತೆ / ವಿಶೇಷ ವರದಿ/ ಜಗದೀಶ ಎಂ. ಗಾಣಿಗೇರ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯಾದ್ಯಂತ ಹದ ಮಳೆಯಾಗತೊಡಗಿದೆ. ರೈತ ಸಮೂಹ ನೇಗಿಲು ಹಿಡಿದು ಜೋಡೆತ್ತುಗಳೊಂದಿಗೆ ಹೊಲದತ್ತ ಮುಖ ಮಾಡಿದ್ದಾರೆ. ಬೀಜ ಬಿತ್ತನೆಗೆ ಭರದ ಸಿದ್ಧತೆ ಕೈಗೊಂಡಿದ್ದಾರೆ. ಉತ್ತಮ ಸಮಯ ನೋಡಿ ಹೊಲಕ್ಕೆ ಬೀಜ ಬಿತ್ತಲು ಅಣಿಯಾಗಿದ್ದಾರೆ.ಅಂತೆಯೇ ತಾಲ್ಲೂಕಿನ ಅಚನೂರ ಗ್ರಾಮದ ರೈತರು ಬಿತ್ತನೆಗೂ ಮುನ್ನ `ಕೃಷಿ ಮಠ' ಎಂದೇ ಪ್ರಸಿದ್ಧವಾದ ಮಳೆರಾಜೇಂದ್ರ ಮಠದ ಶ್ರೀಗಳಿಂದ ಬೀಜ ಪಡೆದು ಪ್ರತಿ ವರ್ಷ ಬಿತ್ತನೆ ಮಾಡುವುದು ರೂಢಿ.ಮಳೆರಾಜೇಂದ್ರ ಸ್ವಾಮಿ ಮಠದ ಸ್ವಾಮೀಜಿಗಳು ಮುಂಗಾರು ಬೆಳೆಗಳ ಬೀಜವನ್ನು ವಿತರಿಸಿದ ನಂತರವೇ ಅಚನೂರ ಗ್ರಾಮದ ರೈತರು ಬಿತ್ತನೆಗೆ ಸಜ್ಜಾಗುವುದು ಹಿಂದಿನಿಂದಲೂ ಆಚರಣೆಯಲ್ಲಿದೆ.ಮಳೆರಾಜೇಂದ್ರ ಸ್ವಾಮೀಜಿ ಗ್ರಾಮಕ್ಕೆ ಬರುತ್ತಾರೆ; ಬಿತ್ತಲು ಬೀಜ ನೀಡುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ರೈತರೆಲ್ಲ ಗ್ರಾಮದೇವತೆಯ ದೇವಸ್ಥಾನದತ್ತ ಹೆಜ್ಜೆ ಹಾಕುತ್ತಾರೆ. ಬೀಜ ವಿತರಣೆ ಮಾಡುವ ಸಂದರ್ಭದಲ್ಲಿ ಗ್ರಾಮದ ಯುವಕರು ಡೊಳ್ಳು ಬಾರಿಸುತ್ತಾರೆ.ಮೊದಲು ಪೂಜೆ: ಗ್ರಾಮದ ಹೃದಯ ಭಾಗದಲ್ಲಿರುವ ಗ್ರಾಮದೇವತೆ ದೇವಸ್ಥಾನದಲ್ಲಿ ಸೇರುವ ರೈತರು ಮೊದಲು ಗ್ರಾಮದೇವತೆಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾರೆ.ಗ್ರಾಮದೇವತೆಯ ಮುಂದೆ ಜೋಳ, ತೊಗರಿ, ಹುರುಳಿ, ಹೆಸರು, ಅಲಸಂದಿ ಸೇರಿದಂತೆ ವಿವಿಧ ಧಾನ್ಯಗಳನ್ನು ಮಿಶ್ರಣ ಮಾಡಿ ಗುಂಪು ಮಾಡಲಾಗಿರುತ್ತದೆ.ಈ ಬೀಜಗಳಿಗೆ ಮೊದಲು ಪೂಜೆ ಪುನಸ್ಕಾರ ನಡೆಯುತ್ತದೆ. ಬಳಿಕ ದವಸಧಾನ್ಯಗಳ ಮುಂದೆ ಕುಳಿತು ಸ್ವಾಮೀಜಿಗಳ ಆಶೀರ್ವಾದ ಪಡೆಯುವ ಗ್ರಾಮದ ಮಹಿಳೆಯರು, ಪುರುಷರು ಸರತಿಯಲ್ಲಿ ನಿಂತು ಶ್ರಿಗಳು ನೀಡುವ ಬೀಜಗಳನ್ನು ಪಡೆದುಕೊಂಡು ಹೋಗುವುದು ವಾಡಿಕೆ.`ನಮ್ಮೂರಿಗೆ ಸ್ವಾಮೀಜಿಗಳು ಆಗಮಿಸಿ ಸಾಮೂಹಿಕವಾಗಿ ಬೀಜ ವಿತರಣೆ ಮಾಡಿದ ನಂತರವೇ ಮುಂಗಾರು ಬೆಳೆ ಬಿತ್ತಾಕ ಚಾಲೂ ಮಾಡತೀವ್ರೀ, ಸ್ವಾಮೀಜಿಗಳು ನೀಡಿದ ಬೀಜದಿಂದ ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆ ಐತಿರ‌್ರಿ. ಈ ಸಲ ಸ್ವಲ್ಪ ಮಳೆ ಚೊಲೊ ಆಗೈತ್ರಿ ಇನ್ನೂ ಜಾಸ್ತಿಯಾದರೆ. ಚೊಲೊ ಬೆಳೆ ಬರತೈತ್ರಿ. ಎಲ್ಲಾರ ಬದುಕಾಕ ಒಳ್ಳೆದಾಗ್ತೇತ್ರಿ' ಎನ್ನುತ್ತಾರೆ ಅಚನೂರ ಗ್ರಾಮದ ಹಿರಿಯ ಕೂಡ್ಲೆಪ್ಪ ಪಾಟೀಲ.`ನಮ್ಮ ಊರಾಗ ರೈತರು ಸ್ವಾಮೀಜಿಗಳಿಂದ ಬೀಜ ಪಡದ ಬಿತ್ತಾಕ ಕೈಹಾಕತೀವಿ. ತಲೆತಲಾಂತರಗಳಿಂದ ಗ್ರಾಮದಲ್ಲಿ ಈ ಸಂಪ್ರದಾಯ ಇದೆ. ಇದನ್ನೇ ಮುಂದುವರಿಸಿಕೊಂಡು ಹೋಗುತ್ತೇವೆ' ಎನ್ನುತ್ತಾರೆ ಗ್ರಾಮದ ಯುವಕ ಅಪ್ಪು ಗುಮಡಿ.`ನಮ್ಮ ಕೈಯಿಂದ ಬೀಜವನ್ನು ಪಡೆದುಕೊಂಡ ಬಳಿಕವೇ ಅಚನೂರ ಗ್ರಾಮದ ರೈತರು ಮುಂಗಾರು ಬೆಳೆ ಬಿತ್ತನೆಗೆ ಮುಂದಾಗುತ್ತಾರೆ. ಇದು ಪ್ರತಿವರ್ಷ ಇಲ್ಲಿ ನಡೆಯುವ ಸಂಪ್ರದಾಯ. ಗ್ರಾಮದವರೆಲ್ಲ ಸೇರಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ತಮ್ಮ ಮನೆಗೆ ಬೀಜವನ್ನು ತೆಗೆದುಕೊಂಡು ಹೋಗಿ ಮಿಶ್ರಣ ಮಾಡಿಕೊಂಡು ಬಿತ್ತನೆ ಮಾಡುತ್ತಾರೆ. ಇದರಿಂದ ಒಳ್ಳೆಯ ಫಸಲು ದೊರೆಯಲಿದೆ' ಎನ್ನುತ್ತಾರೆ ಗುರುನಾಥ ಸ್ವಾಮೀಜಿ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.