ಮಂಗಳವಾರ, ಮೇ 18, 2021
31 °C

ಮುಂಗಾರು ಮಳೆಯೇ...

ಜಿ.ಎನ್. ಶಿವಕುಮಾರ Updated:

ಅಕ್ಷರ ಗಾತ್ರ : | |

`ಏ ತಮ್ಮಾ ಇನ್ನೊಂದು ತಾಸಲ್ಲಿ ಮಳೆ ಬರುತ್ತೆ. ಅಲ್ಲಿ ನೋಡು, ಕೆಮ್ಮುಗಿಲು ಮೇಲೆದ್ದೈತಿ. ಕೆರೆಯಂಗಳದಾಗ ಕೆಂದೂಳಿ ಏಳ್ತಾಐತಿ'... ಎಂದು ಹೇಳಿದ ದ್ಯಾವಜ್ಜ ಜಮೀನಿನ ಬದುವಿನಲ್ಲಿದ್ದ ಹೊಂಗೆ ಮರದ ಕೆಳಗೆ ದಣಿವಾರಿಸಿಕೊಳ್ಳುತ್ತಾ ಕುಳಿತರು.ಮುಕ್ಕಾಲು ಗಂಟೆ ಮುಗಿಯುವುದರೊಳಗೆ ಮುಂಗಾರು ಮಳೆ ಹನಿ ಹನಿಯಾಗಿ ಭೂಮಿಗೆ ಮುತ್ತಿಡತೊಡಗಿತು. ಕೆಲವೇ ಕ್ಷಣಗಳಲ್ಲಿ ಧಾರಾಕಾರವಾಗಿ ಸುರಿಯಿತು. ಅವರು ಮಳೆಯಲ್ಲಿ ನೆನೆದರು, ತಮ್ಮ ಬಳಿ ಇದ್ದ ಗೋಣಿ ಚೀಲದಲ್ಲಿ ಕೊಪ್ಪೆ ಮಾಡಿ ಹೊದ್ದು, ಅದರ ಒಂದು ಭಾಗವನ್ನು ನಮಗೂ ಹೊದಿಸಿದರು. ಮೊದಲ ಮಳೆಯ ಸಂಭ್ರಮದ ಕ್ಷಣ, ಕ್ಷಣವನ್ನೂ ಅನುಭವಿಸಿ ಖುಷಿಪಟ್ಟರು.ಏನು ಮಳೆಯ ಬಗ್ಗೆ ಇಷ್ಟು ಕರಾರುವಕ್ಕಾಗಿ ಹೇಳಿದ್ರಲ್ಲಾ ಎಂದು ಪ್ರಶ್ನಿಸಿದಾಗ, ದೊರೆತದ್ದು ಪ್ರಕೃತಿ ಅಧ್ಯಯನ ಅನುಭವದ ಪಾಠ.

`ಮುಂಗಾರಿಗೆ ಹರಿಶ್ಚಂದ್ರ (ಈಶಾನ್ಯ ಮೂಲೆ ಮತ್ತು ಉತ್ತರದ ದಿಕ್ಕಿನಿಂದ) ಗಾಳಿ ಬೀಸ್ತು ಅಂದ್ರೆ ಮುರ್ನಾಲ್ಕು ದಿನದಲ್ಲಿ ಮಳೆ ಹುಟ್ಟುತ್ತೆ. ದಟ್ಟ ಮೋಡ ಸಾಮಾನ್ಯ. ಗುಡುಗು, ಸಿಡಿಲಿನ ಅಬ್ಬರ ಇದ್ದದ್ದೇ, ಈಗ ಮೂಗಿಗೆ ಮಣ್ಣಿನ ವಾಸನೆ ಬಡಿಯುತ್ತಿದೆ. ಅದನ್ನು ಆಸ್ವಾದಿಸು' ಎಂದು ಮಳೆ ಗಾಳಿ ಹೊತ್ತು ತಂದ `ಮಣ್ಣಿನ ವಾಸನೆ'ಯ ಹಿತವನ್ನು ಅನುಭವಿಸುತ್ತಾ ಮುಖವನ್ನು ಅರಳಿಸಿದರು.`ಯುಗಾದಿ ನಂತರದ ರಾತ್ರಿಗಳಲ್ಲಿ ಆಗಸದಲ್ಲಿ ಕಾಣುವ ಚಂದ್ರ ದೂರದಲ್ಲಿ ಕಣಗಟ್ಟಿದರೆ ಮೂರ್ನಾಲ್ಕು ದಿನದಲ್ಲಿ ಮಳೆ ಬರುವ ಮುನ್ಸೂಚನೆ. (ಕಣ ಕಟ್ಟುವುದು ಎಂದರೆ ಚಂದಿರನ ಸುತ್ತ ತಿಳಿ ಬಿಳಿ ಬಣ್ಣದಲ್ಲಿ ರಚನೆಯಾಗುವ ವೃತ್ತಾಕಾರ) ಬಿಳಿಯ ವೃತ್ತ ಚಂದಿರನಿಗೆ ಸಮೀಪ ಇದ್ದರೆ ಮೂರ್ನಾಲ್ಕು ದಿನಗಳವರೆಗೆ ಮಳೆ ಬೀಳುವುದಿಲ್ಲ.ಇರುವೆ ತನ್ನ ಮೊಟ್ಟೆ ಕಚ್ಚಿಕೊಂಡು ಗೂಡು, ಮರದ ಪೊಟರೆಗಳಿಂದ ಹೊರ ಬಂದು ಸುರಕ್ಷಿತ ಸ್ಥಳಗಳಿಗೆ ತೆರಳುವುದು, ಕೆಂಪು ಹಾಗೂ ತಿಳಿ ನೀಲಿ ಬಣ್ಣದ `ವಿಮಾನ ಚಿಟ್ಟೆ' ಗೂಡಿನಿಂದ ಹೊರ ಬಂದು ಹಾರಾಡಿ ಬಳಿಕ ರೆಕ್ಕೆ ಕಳಚಿಕೊಂಡು ಕೆಳಕ್ಕೆ ಬೀಳುವುದು ಮಳೆ ಬರುವ ಮುನ್ಸೂಚನೆ' ಎಂದು ಅನುಭವದ ಬುತ್ತಿ ಅವರು ಬಿಚ್ಚಿದರು. ಮಳೆ ಬೀಳುವ ಮುನ್ನ ಕುಂಟೆ ಹೊಡೆದು, ಕಸ ಆರಿಸಿ ಜಮೀನು ಸ್ವಚ್ಛಗೊಳಿಸಬೇಕು. ಅಶ್ವಿನಿ, ಭರಣಿ, ಕೃತ್ತಿಕೆ ಮಳೆ ಬಿದ್ದರೆ ಭೂಮಿ ಹಸನು ಮಾಡಲು ಅನುಕೂಲ. ರೋಹಿಣಿ ಮಳೆಗೆ ಊಟದ ಜೋಳ ಬಿತ್ತನೆ ಮಾಡಬೇಕು. ರೋಹಿಣಿ ಮಳೆ ಬೀಳದಿದ್ದರೆ ಊಟದ ಜೋಳ ಬಿತ್ತನೆಗೆ ಹಿನ್ನಡೆಯಾಗುತ್ತದೆ ಎನ್ನುವುದು ಅವರ ನುಡಿ.`ಉಡಿಯೊಳಗಿನ ಬೀಜಕ್ಕಿಂತ ಹಿಡಿಯೊಳಗಿನ ಬೀಜ ಮುಂದು' ಎನ್ನುವ ಗಾದೆಯಂತೆ ಮೊದಲು ಬಿದ್ದ ಹದ ಮಳೆಗೆ ಕೈ ಮುಂದು ಮಾಡಿ ಬಿತ್ತನೆ ಮಾಡಬೇಕು. ಹದ ತಪ್ಪಿದರೆ ಇಳುವರಿ ಬಾರದು. ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಈಗಿನ ಹುಡುಗರು ಕೆಲಸಕ್ಕೆ ಕರೆದರೆ ಇಲ್ಲದ ಕೂಲಿ ಕೇಳುತ್ತಾರೆ. ಕೂಲಿ ಕೊಟ್ಟು ಕೆಲಸಕ್ಕೆ ಕರೆದರೆ ಜಮೀನಿನಲ್ಲಿ ಕೆಲಸಕ್ಕೆ ಬರುವ ಮತ್ತು ಮನೆಗೆ ಹೊರಡುವ `ಟೈಂ' ಕರೆಕ್ಟ್ ಇದ್ರ ಬರ್ತೀವಿ ಎನ್ನುತ್ತಾರೆ. ಆಯ್ತಪ್ಪ ಬನ್ರಿ ಎಂದರೆ ಅವರಿಗೆ ಸಲಿಕೆ, ಹಾರೆ, ಗುದ್ದಲಿಗಳನ್ನು ಸರಿಯಾಗಿ ಹಿಡಿಯೋಕೆ ಬರಲ್ಲ. ಇನ್ನೆಲ್ಲಿ ಕೆಲಸ ಮಾಡ್ತಾರೆ? ಸಣ್ಣ-ಪುಟ್ಟ ಕೆಲಸವೇ ಬರೊಲ್ಲ ಅಂದ್ರೆ ಇನ್ನು ನೇಗಿಲು, ಕುಂಟೆಯ ಮೇಳಿ ಹಿಡಿಯೋದು, ದಿನವೆಲ್ಲ ಕೆಲಸ ಮಾಡೋದು ಎಲ್ಲಿಂದ ಬಂತು?' ಎನ್ನುವ ಬೇಸರದ ಮಾತು ರೈತ ಬಸವರಾಜು ಅವರದ್ದು. ವೈಜ್ಞಾನಿಕ ಹಿನ್ನೆಲೆ

ಬೇಸಿಗೆಯಲ್ಲಿ ಸುಡು ಬಿಸಿಲಿಗೆ ಕಾದ ಮಣ್ಣಿನ ಮೇಲೆ ಮಳೆ ಹನಿ ಬೀಳುತ್ತಿದ್ದಂತೆ ಮಣ್ಣಿನ ವಾಸನೆ ಮೂಗಿಗೆ ಬಡಿಯುತ್ತದೆ. ರೈತನ ಮೊಗದಲ್ಲಿ ಮಗದೊಂದು ಮಂದಹಾಸ ಮೂಡಿಸುವ ಈ ಘಮಲಿನ ವೈಜ್ಞಾನಿಕ ಹಿನ್ನೆಲೆ ಕೆದಕಿದಾಗ ಅಚ್ಚರಿ ಎನಿಸುತ್ತದೆ.ಮಣ್ಣಿಗೆ ಮಳೆ ನೀರು ಬಿದ್ದೊಡನೆ ಮಣ್ಣಿನಲ್ಲಿರುವ `ಆ್ಯಕ್ಟಿನಾಮಸಿಸ್' ಎಂಬ ಬ್ಯಾಕ್ಟೀರಿಯಾ ಸಾಯುತ್ತದೆ. ಈ ಮೂಲಕ `ಬೀಜಕಣ'ಗಳ ಉತ್ಪಾದನೆ ವೇಳೆ `ಜಿಯೋಸಿನ್' ಎಂಬ ಸುಗಂಧ (ಪರ್ಫ್ಯೂಮ್) ಬಿಡುಗಡೆ ಮಾಡುತ್ತದೆ. ಇದು ಮಳೆ ಹನಿಗಳ ಮಧ್ಯೆ ಹಾದು ಬರುವ ತಂಗಾಳಿಯಲ್ಲಿ ಬೆರೆತು ಮೂಗಿಗೆ ಬಡಿಯುವ ವೇಳೆ ಮುಂಗಾರಿನ ಅನುಭವ ಮನಕ್ಕೆ ಮುದ ನೀಡುತ್ತದೆ.ಈ ಮಣ್ಣಿನ ವಾಸನೆಯ ಗುಣದ ಹಿನ್ನೆಲೆ ಬೆನ್ನಟ್ಟಿದ ತಂತ್ರಜ್ಞರು ಇದನ್ನು ಬಳಸಿ ಇಂದು ಮಾರುಕಟ್ಟೆಯಲ್ಲಿ `ಜಿಯೋಸಿನ್' ಒಳಗೊಂಡ ಸುಗಂಧ ದ್ರವ್ಯಗಳನ್ನು ಪೂರೈಸುತ್ತಿದ್ದಾರೆ. ಈ ಬಗೆಯ ಮಣ್ಣಿನ ವಾಸನೆ ಹಿಡಿದು, ನೀರಿನ ಮೂಲವನ್ನು ಪತ್ತೆ ಮಾಡುವ ಕಲೆ ಪ್ರಾಣಿಗಳಲ್ಲಿಯೂ ಇದೆ. ಅದು ವಿಶೇಷವಾಗಿ `ಮರಳುಗಾಡಿನ ಹಡಗು' ಒಂಟೆಗೆ ಕರಗತವಾಗಿದೆ ಎನ್ನುತ್ತಾರೆ ಬೆಂಗಳೂರು ಕೃಷಿ ವಿವಿಯ ಬೆಳೆ ಶರೀರ ಶಾಸ್ತ್ರ ವಿಭಾಗದ ಡಾ.ಪಿ. ಮೋಹನ್ ಕುಮಾರ್.ಮುಂಜಾಗ್ರತಾ ಕ್ರಮ

ಕೃಷಿ ಇಲಾಖೆ ನಿರ್ದೇಶಕ ಡಾ.ಸರ್ವೇಶ್ ಅವರು ಹೇಳುವಂತೆ ಮಳೆ ಬಿದ್ದ ಪ್ರದೇಶಗಳಲ್ಲಿ ರೈತರು ಜಮೀನಿನ ಹದಕ್ಕೆ ಸರಿಯಾಗಿ ಉಳುಮೆ ಮಾಡಬೇಕು. ಮಳೆ ಬೀಳದ ಪ್ರದೇಶದಲ್ಲಿ ರೈತರು ಜಮೀನನ್ನು ಹರಗುವ ಮೂಲಕ ಕಸ ತೆಗೆದು ಸ್ವಚ್ಛಗೊಳಿಸಬೇಕು.ಇವುಗಳ ಜೊತೆಗೆ-

* ಮಳೆ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಬದುಗಳನ್ನು ನಿರ್ಮಿಸಿ. ಭೂಮಿ ನೆನೆಯುತ್ತದೆ. ತೇವಾಂಶ ಬಹು ದಿನಗಳವರೆಗೆ ಉಳಿದು ಬೆಳೆಗೆ ತೇವಾಂಶದ ಕೊರತೆಯಾಗದಂತೆ ಕಾಯುತ್ತದೆ.* ಜಮೀನಿಗೆ ಸಾಗಿಸಿ ಗುಡ್ಡೆ ಹಾಕಿರುವ ಕೆರೆಯ ಗೋಡು ಮಣ್ಣು, ಸಗಣಿ ಗೊಬ್ಬರವನ್ನು ಭೂಮಿಗೆ ಚೆಲ್ಲಿದ ನಂತರ ಉಳುಮೆ ಮಾಡಿ.* ಬಿತ್ತನೆ ಮೊದಲಿನ ಉಳುಮೆ ಇಳಿಜಾರಿಗೆ ಅಡ್ಡಲಾಗಿ ಇರಲಿ. ಮರದ, ಕಬ್ಬಿಣದ ನೇಗಿಲು, ಕಲ್ಟಿವೇಟರ್, `ಫ್ಲೋ' ಬಳಸಿ ಉಳುಮೆ ಮಾಡಬಹುದು. ಅತಿ ಆಳವಾದ ಉಳುಮೆ ಅಗತ್ಯವಿಲ್ಲ. ಕಸ ಮಣ್ಣಿನಲ್ಲಿ ಬೆರೆಯುವಷ್ಟು ಉಳುಮೆ ಮಾಡಿದರೆ ಸಾಕು. ಒಟ್ಟಾರೆ ಮಳೆ ನೀರು ಅಲ್ಲೇ ನಿಂತು ಭೂಮಿಗೆ ಇಂಗುವಂತೆ ಕಾಯ್ದುಕೊಳ್ಳಿ.* ಪ್ರಮಾಣಿತ ಬಿತ್ತನೆ ಬೀಜ ಖರೀದಿಸಿ. ಅನಧಿಕೃತ ಮಾರಾಟಗಾರರಿಂದ ಖರೀದಿ ಮಾಡಬೇಡಿ. ನಿಗದಿ ಮಾಡಿದ ದರದಲ್ಲಿ ರಸಗೊಬ್ಬರ ಖರೀದಿಸಿ.* ಬಿತ್ತನೆ ಬೀಜಗಳನ್ನು ಸಂಗ್ರಹಿಸಿದ್ದರೆ ಅವುಗಳು ಹೇಗಿವೆ ಎಂದು ನೋಡಿ, ಅವುಗಳ ಮೊಳಕೆ ಪ್ರಮಾಣ ಪರೀಕ್ಷೆ ಮಾಡಿಕೊಳ್ಳಿ.* ಮಣ್ಣಿನ ಪರೀಕ್ಷೆ ಮಾಡಿಸಿ. ನಿಮ್ಮ ಜಮೀನಿಗೆ ಅಗತ್ಯವಿರುವ ಪೋಷಕಾಂಶ ಒಳಗೊಂಡ ರಸಗೊಬ್ಬರ ಸಂಗ್ರಹಿಸಿ.* ಬಿತ್ತನೆಗೆ ಸಾಂಪ್ರದಾಯಿಕ ಪದ್ಧತಿ ಮತ್ತು ಆಧುನಿಕ ಯಂತ್ರಗಳನ್ನು ಬಳಕೆ ಮಾಡಬಹುದು.* ಸಮೀಪದ ಕೃಷಿ ಸಂಪರ್ಕ ಕೇಂದ್ರ ಸಂಪರ್ಕಿಸಿ ಅಗತ್ಯ ಕಳೆನಾಶಕ ಬಳಸಿ ಕಳೆ ನಿಯಂತ್ರಿಸಿ.* ಜಮೀನಿನಲ್ಲಿ ಇರುವ ಕಸಕ್ಕೆ ಬೆಂಕಿ ಹಚ್ಚುವುದು ಬೇಡ. ಕಸವನ್ನು ಒಂದೆಡೆ ಬದುವಿನಲ್ಲಿ ಗುಡ್ಡೆ ಹಾಕಬೇಕು. ಅದರ ಮೇಲೆ ಒಂದಷ್ಟು ಮಣ್ಣು, ಸಗಣಿ ಗಂಜಲ ಹಾಕಿದರೆ ಮಳೆಯ ನೀರು ಮತ್ತು ತೇವಾಂಶಕ್ಕೆ ಕೊಳೆತು ಗೊಬ್ಬರವಾಗುತ್ತದೆ. ಅದು ಮುಂದಿನ ಬೆಳೆಗೆ ಸಾವಯವ ಗೊಬ್ಬರವಾಗಿ ಸಿದ್ಧವಾಗುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.