ಭಾನುವಾರ, ಮೇ 9, 2021
26 °C

ಮುಂಗಾರು ಹಬ್ಬ: ಭರದ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಟಗುಪ್ಪಾ: ಮುಂಗಾರು ಹಬ್ಬ ಎಂದೇ ಕರೆಯಲ್ಪಡುವ ಕಾರ ಹುಣ್ಣಿಮೆ ಹಬ್ಬವನ್ನು ಭಾನುವಾರ ಆಚರಿಸಲು ಎಲ್ಲೆಡೆ ರೈತರು ಭರದ ಸಿದ್ಧತೆ ನಡೆಸ್ದ್ದಿದಾರೆ.ಈ ಬಾರಿ ಮುಂಗಾರು ಬೇಗನೆ ಆಗಮಿಸಿದ ಸಂತೋಷದಲ್ಲಿ ರೈತರು ಕಾರ ಹುಣ್ಣಿಮೆ ಆಚರಿಸುವ ಸಿದ್ಧತೆಯಲ್ದ್ದ್‌ದ್ದಾರೆ. ಗ್ರಾಮಗಳಿಂದ ಪಟ್ಟಣಗಳ ವರೆಗೂ ಮಾರುಕಟ್ಟೆಯಲ್ಲಿ ರೈತರು ತಮ್ಮ ಕೃಷಿ ಬದುಕಿನ ಸಂಗಾತಿಗಳಾಗಿರುವ ಎತ್ತುಗಳಿಗೆ ಸಿಂಗರಿಸಲು ಮತಾಟಿ, ಮಗಡಾ, ಮೂಗದಾಣಿ,  ಗಂಟೆ, ಭಾಸಿಂಗ ಮೊದಲಾದ  ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದಾರೆ. ವ್ಯಾಪಾರಿಗಳಿಗೂ ಭರ್ಜರಿ ವ್ಯಾಪಾರ ನಡೆಯುತ್ತಿದೆ.ಜೇಷ್ಠ ಮಾಸದಲ್ಲಿ ಬರುವ ಹುಣ್ಣಿಮೆಯ ಹಬ್ಬಕ್ಕೆ `ಕಾರಹಬ್ಬ' ಎಂದೂ ಕರೆಯುತ್ತಾರೆ. ಮಳೆಗಾಲದ ಮೊದಲ ಹುಣ್ಣಿಮೆಯಾಗಿ ಬರುವ ಈ ಹಬ್ಬವನ್ನು ರೈತರು ಸಂತೋಷದಿಂದ ಬರಮಾಡಿಕೊಳ್ಳುತ್ತಾರೆ.ಸಂಸ್ಕೃತ ಭಾಷೆಯಲ್ಲಿ  ಇದಕ್ಕೆ `ಅನಡ್ ವಾಹ ಪೌರ್ಣಿಮಾ' ಎಂದು ಹೆಸರಿದೆ. ಅನಡ್‌ವಾಹ ಎಂದರೆ ಎತ್ತು, ಸಾಂಸ್ಕೃತಿಕ ಪರಂಪರೆಯ ಇತಿಹಾಸದಲ್ಲಿ ಎತ್ತು ಕೃಷಿಕನ ಪ್ರಧಾನ ಮಿತ್ರನಾಗಿರುವುದರಿಂದ ಇದಕ್ಕೆ ಎತ್ತಿನ ಹುಣ್ಣಿಮೆ ಎಂದೂ ಕರೆಯಲಾಗುತ್ತಿದೆ.ಕಾರಹುಣ್ಣಿಮೆ ಹಬ್ಬ ಎರಡು ದಿನ ನಡೆಯುತ್ತದೆ. ಶುದ್ಧ ಚತುರ್ದಶಿ ಕಾರಹಬ್ಬದ ಪೂರ್ವಾಂಗ ದಿನವಾಗಿದ್ದು, ಹುಣ್ಣಿಮೆ ಉತ್ತರಾಂಗ ದಿನವಾಗಿರುತ್ತದೆ. ಚತುರ್ದಶಿಗೆ `ಹೊನ್ನುಗ್ಗೆ' ಎಂದು ಕರೆಯುತ್ತಾರೆ. ಈ ದಿನ ರೈತರು ತಮ್ಮ ಮನೆಯ ಎತ್ತು, ಹೋರಿ, ಆಕಳುಗಳಿಗೆ ಸಿಂಗರಿಸಿ, ಕೊರಳಿಗೆ ಹುರಿಗೆಜ್ಜೆ, ಕಿರುಗಂಟೆಗಳ ಸರ ಹಾಕಿ, ಹಣೆಗೆ ಕನ್ನಡಿ ಇರುವ ಹಣೆಪಟ್ಟಿ ಕಟ್ಟಿ ಮನೆಯ ಮುತ್ತೈದೆಯರು ಅವುಗಳಿಗೆ ಕಲಶದಾರತಿ ಮಾಡುತ್ತಾರೆ.ನೈವೇದ್ಯಕ್ಕೆಂದು ಜೋಳ ಕುಟ್ಟಿ, ಜೋಳದ ಅಕ್ಕಿಯಿಂದ ತಯಾರಿಸಿದ ಹುಗ್ಗಿ (ಕಿಚಡಿ) ಅಂಬಲಿಯನ್ನು ಎತ್ತುಗಳಿಗೆ ತಿನ್ನಿಸುತ್ತಾರೆ. ನಂತರ ಮನೆಯ ಎಲ್ಲರೂ ಒಟ್ಟಿಗೆ ಕುಳಿತು ಅಂಬಲಿ ಪ್ರಸಾದವೆಂದು ಊಟ ಮಾಡುತ್ತಾರೆ.ಹುಣ್ಣಿಮೆಯ ಸಂಜೆ ಕರಿ ಹರಿಯುವ ಸಂಪ್ರದಾಯ ನಡೆಯುತ್ತದೆ. ವಿವಿಧ ಬಣ್ಣಗಳ ಎತ್ತುಗಳನ್ನು ತಂದು ಊರ ಅಗಸಿಯಲ್ಲಿ ಕರಿ ಹರಿಯಲಾಗುತ್ತದೆ. ಅವುಗಳಲ್ಲಿ ಯಾವ ಬಣ್ಣದ ಎತ್ತು ಮುಂದಾಗುತ್ತದೆಯೋ ಆ ಬಣ್ಣದ ದವಸ ಧಾನ್ಯಗಳು ಮುಂಗಾರು ಬೆಳೆಯಲ್ಲಿ ಅಧಿಕ ಫಸಲು ಕೊಡುತ್ತವೆ ಎಂಬ ಭಾವನೆ ರೈತರಲ್ಲಿ ಬೆಳೆದುಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.