ಮುಂಗಾರು ಹೋಯ್ತು, ಹಿಂಗಾರು ಹೆಂಗೋ?

7
ಬೀಸಿದ ಗಾಳಿಗೆ ಮೋಡದೊಂದಿಗೆ ಬದುಕೂ ತೇಲಿತು

ಮುಂಗಾರು ಹೋಯ್ತು, ಹಿಂಗಾರು ಹೆಂಗೋ?

Published:
Updated:

ಚಿತ್ರದುರ್ಗ: ಕಿಲೋಮೀಟರ್‌ಗಳಷ್ಟು ದೂರ ದಿಟ್ಟಿ­ಸಿ­ದರೂ ಜಮೀನುಗಳೆಲ್ಲ ಖಾಲಿ ಕ್ರೀಡಾಂಗಣದಂತೆ ಕಾಣುತ್ತಿವೆ. ಹೂವು ಅರಳುವ ಸಮಯದಲ್ಲಿ ಹೆಬ್ಬೆರುಳು ಉದ್ದ ಬೆಳೆದಿರುವ ಶೇಂಗಾ ಗಿಡಗಳು ‘ಮಳೆಯ ಕೊರತೆ’ಯಿದೆ ಎಂದು ಸಾಕ್ಷೀಕರಿಸುತ್ತಿವೆ. ಬೀಜ ಉದುರಿಸ­ಬೇಕಾದ ಸೂರ್ಯಕಾಂತಿ ಗಿಡಗಳಲ್ಲಿ ಹೂವೇ ಅರಳಿಲ್ಲ. ಕೊಳವೆಬಾವಿ ನಂಬಿ ಬಿತ್ತಿದ್ದ ಈರುಳ್ಳಿ ಬೆಳೆಯೂ ಒಣಗುತ್ತಿದೆ...ಇದು ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳ ಹಲವು ಹಳ್ಳಿಗಳಲ್ಲಿ ಕಂಡು ಬಂದ ದೃಶ್ಯಗಳು. ಈ ತಾಲ್ಲೂಕುಗಳಲ್ಲಿ ಪ್ರಸಕ್ತವರ್ಷ ಕನಿಷ್ಠ ನಾಲ್ಕು ದಿನವೂ ಮಳೆ ಸುರಿದಿಲ್ಲ. ಶೇ 50ರಷ್ಟು ಪ್ರದೇಶದಲ್ಲಿ ಬಿತ್ತನೆ­ಯಾಗಿಲ್ಲ. ಬಿತ್ತಿದ ಪ್ರದೇಶದಲ್ಲಿ ಬೆಳೆ ಮೊಳಕೆ ಒಡೆದಿಲ್ಲ. ಜಿಲ್ಲೆಯಲ್ಲಿ ಒಟ್ಟು ಆರು ತಾಲ್ಲೂಕು­ಗಳಿವೆ.

ಹೊಸದುರ್ಗ, ಹೊಳಲ್ಕೆರೆ ಮತ್ತು ಚಿತ್ರದುರ್ಗ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಶೇಂಗಾ, ರಾಗಿ, ಮೆಕ್ಕೆಜೋಳ, ಬಿಳಿಜೋಳ ತಕ್ಕಮಟ್ಟಿಗೆ ಫಲಕೊಡುವ ನಿರೀಕ್ಷೆ ಕಾಣುತ್ತಿದೆ. ಆದರೆ, ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಆಗಸ್ಟ್‌ವರೆಗಿನ ಮಳೆ ಪ್ರಮಾಣ ಶೇ 50ಕ್ಕಿಂತ ಕಡಿಮೆ-­ಯಾಗಿದ್ದು, ಬರದ ಕಾರ್ಮೋಡ ದಟ್ಟೈಸಿದೆ.ಮುಂಗಾರು ಮಳೆ ಜಿಲ್ಲೆಯಲ್ಲಿ ಆರಂಭ ಶೂರತ್ವ ತೋರಿತು. ಹತ್ತಿ, ಶೇಂಗಾ, ಈರುಳ್ಳಿ ಬೆಳೆಗಾರರ ಮನದಲ್ಲಿ ಭರಪೂರ ಇಳುವರಿಯ ಕನಸುಗಳನ್ನೂ ಬಿತ್ತಿತು. ವಾರಗಟ್ಟಲೆ ದಟ್ಟೈಸುತ್ತಿದ್ದ ಮೋಡಗಳು ಕನಸುಗಳಿಗೆ ರೆಕ್ಕೆಪುಕ್ಕ ಜೋಡಿಸಿದ್ದವು. ಆದರೆ, ಬೀಜ ಮೊಳೆಯಬೇಕಾದ ಸಂದರ್ಭದಲ್ಲಿ ಮಳೆ ಕೈಕೊಟ್ಟಿತು. ಹದ ಮಳೆ ನೋಡಿ ಬಿತ್ತಿದ್ದ ಬೀಜಗಳು ಮೊಳೆಯುವ ಮುನ್ನವೇ ಮಣ್ಣುಪಾಲಾದವು. ‘ದೊಡ್ಡ ಮಳೆಗಳೆಲ್ಲ ಕೈಕೊಟ್ಟಿವೆ. ಶೇ 75ರಷ್ಟು ಮಳೆಗಾಲ ಮುಗಿದಿದೆ. ಉಳಿದ ಶೇ 25ರಷ್ಟು ಮಳೆ ಬರಬೇಕಿದೆ. ಇದೂ ಕೈಕೊಟ್ಟರೆ, ನಮಗೆ ದೇವರೇ ಗತಿ’ ಎನ್ನುತ್ತಾರೆ ರಾಮಜೋಗಿಹಳ್ಳಿ ರೈತ ತಿಪ್ಪೇಸ್ವಾಮಿ.ಮೂರು ತಾಲ್ಲೂಕುಗಳಲ್ಲಿ ‘ಮಳೆ’ ಅತಿಥಿಯಾದರೆ, ‘ಬರ’ ಕಾಯಂ ನೆಂಟ. ಈ ತಾಲ್ಲೂಕುಗಳ ಕೆಲವು ಗ್ರಾಮಗಳಲ್ಲಿ ಹತ್ತು ವರ್ಷಗಳಿಂದ ಸಮರ್ಪಕ ಮಳೆಯಾಗಿಲ್ಲ. ಉಳಿದವುಗಳು ನಾಲ್ಕು ವರ್ಷಗಳಿಂದ ತೀವ್ರ ಬರ ಎದುರಿಸುತ್ತಿವೆ. ಪ್ರತಿವರ್ಷ ಒಬ್ಬೊಬ್ಬ ಶೇಂಗಾ ಬೆಳೆಗಾರ ಕನಿಷ್ಠ ₨ 30 ಸಾವಿರ ಸಾಲ ಮಾಡಿ ಬಿತ್ತನೆ ಮಾಡುತ್ತಾನೆ. ಬೆಳೆ ಬಾರದಿದ್ದರೆ ಆ ಸಾಲ ಸಾಲವಾಗಿಯೇ ಉಳಿಯುತ್ತಿದೆ.ಆರು ಎಕರೆ ಜಮೀನಿನ ಒಡೆಯ ಆರ್.ಜೆ.ಹಳ್ಳಿಯ ಪ್ರಹ್ಲಾದ, ಈ ಬಾರಿ ಎರಡು ಎಕರೆ ಈರುಳ್ಳಿ ಬಿತ್ತಲು ₨ 10 ಸಾವಿರ ಸಾಲ ಮಾಡಿದ್ದಾರೆ. ಬಿತ್ತನೆಯ ನಂತರ ಮಳೆ ಕೈಕೊಟ್ಟಿದೆ. ನಂಬಿದ್ದ ಕೊಳವೆ ಬಾವಿಯಲ್ಲಿ ನೀರು ಬತ್ತಿದೆ. ಕಳೆದ ವರ್ಷವೂ ಹೀಗೆ ಆಗಿತ್ತು. ಎರಡು ವರ್ಷದಿಂದ ₨ 30 ರಿಂದ 35 ಸಾವಿರ ಸಾಲ ಮಾಡಿದ್ದಾರೆ. ಈ ಸಾಲ ತೀರಿಸು­ವುದ­ಕ್ಕಾಗಿ ಸಾಲ ಕೊಟ್ಟವರ ಜಮೀನಿ­ನಲ್ಲೇ ಕೂಲಿ ಮಾಡುತ್ತಿದ್ದಾರೆ.

ಈ ಬರದ ತಾಲ್ಲೂಕುಗಳಲ್ಲಿ ಎಕರೆಗಟ್ಟಲೆ ಜಮೀನಿರುವವರೂ ಬೆಳೆ ಸಾಲ ತೀರುವಳಿಗಾಗಿ ಬೇರೆಯವರ ಹೊಲದಲ್ಲಿ ಕೂಲಿ ಮಾಡುತ್ತಿದ್ದಾರೆ. ಕೂಲಿ ಅವಮಾನವೆಂದು ಭಾವಿಸು­ವವರು, ದೂರದ ಊರಿಗೆ ಗುಳೆ ಹೋಗಿ, ಅಲ್ಲಿ ಕೂಲಿ ಮಾಡುತ್ತಿದ್ದಾರೆ. ಇದು ಪ್ರಹ್ಲಾದರೊಬ್ಬರ ಕಥೆಯಲ್ಲ. ಇಂಥ ನೂರಾರು ಕೃಷಿಕರ ಜಿಲ್ಲೆಯಲ್ಲಿ ಕಂಡು ಬರುತ್ತಾರೆ.ಒಂದು ಎಕರೆ ಶೇಂಗಾ ಬಿತ್ತಿದರೆ, ಇದರ ಸಂಗಾತಿ ಬೆಳೆಗಳಾಗಿ ಹೆಸರು, ಉದ್ದು, ಹುರುಳಿ, ಅವರೆ, ಸಜ್ಜೆ, ಹರಳು, ಮೆಣಸಿನಕಾಯಿ, ತೊಗರಿ ಬಿತ್ತುತ್ತಾರೆ. ಶೇಂಗಾ ಬಿತ್ತನೆಯ ಗಡಿ ಬೆಳೆಯಾಗಿ ಬೆಂಡೆ, ಜವಳಿಕಾಯಿ, ಸೊಪ್ಪಿನಂತಹ ತರಕಾರಿ ಬೆಳೆಯುತ್ತಾರೆ. ‘ಮೂರ್ನಾಲ್ಕು ವರ್ಷದ ಬರದ ಹೊಡೆತಕ್ಕೆ ಶೇಂಗಾದ ಜೊತೆಗೆ ಉಣ್ಣುವ ಆಹಾರ ಧಾನ್ಯ, ತರಕಾರಿಯೂ ನಷ್ಟವಾಗಿದೆ. ಶೇಂಗಾ ಬಿತ್ತನೆಗೆ ಮಾಡಿದ ಸಾಲದ ಜೊತೆಗೆ, ದಿನಸಿ, ತರಕಾರಿಯನ್ನೂ ಖರೀದಿಸುವ ಸ್ಥಿತಿ ಬಂದೊದಗಿದೆ.ಬರಕ್ಕೆ ಎದೆಯೊಡ್ಡುವ ಭಂಡ ಧೈರ್ಯ: ‘ಈ ವರ್ಷದ ಬರದ ತೀವ್ರತೆ ನೋಡಿದರೆ ಇನ್ನೊಂದೆರಡು ತಿಂಗಳಲ್ಲಿ ಊರಿಗೆ ಊರೇ ಗುಳೆ ಹೋದರೂ ಅಚ್ಚರಿ ಪಡುವ ಹಾಗಿಲ್ಲ. ನಮ್ಮ ಸ್ಥಿತಿ ಮಹಾರಾಷ್ಟ್ರದ ವಿದರ್ಭಕ್ಕಿಂತ ಕಠೋರವಾಗಿದೆ. ಅಲ್ಲಿ ಬರಕ್ಕೆ ಹೆದರಿ ಪ್ರಾಣ ಕಳೆದುಕೊಳ್ಳುತ್ತಾರೆ. ಇಲ್ಲಿ ಬರಕ್ಕೆ ಎದೆಯೊಡ್ಡಿ ಭಂಡ ಧೈರ್ಯದಿಂದ ಮತ್ತೆ ಮತ್ತೆ ಹೊಲಕ್ಕೆ ಹೋಗಿ ದುಡಿಯುತ್ತಾರೆ. ಅಷ್ಟೇ ವ್ಯತ್ಯಾಸ’ ಎನ್ನುತ್ತಾರೆ ಆರ್‌ಜೆ ಹಳ್ಳಿಯ ಮಂಜಪ್ಪ.

ಗುಳೆ ಹೋಗುವ ಭೀತಿ

ನೀರಾವರಿ ಸೌಲಭ್ಯದ ರೈತರಷ್ಟೇ ಕಷ್ಟ ಪಟ್ಟು ಈರುಳ್ಳಿ, ಮೆಕ್ಕೆಜೋಳ ಬೆಳೆಯು­ತ್ತಿದ್ದಾರೆ. ಮಳೆ ಆಶ್ರಿತ ಕೃಷಿಕರು ಬರದ ಹೊಡೆತಕ್ಕೆ ಸೋತಿದ್ದಾರೆ. ಪರ್ಯಾಯ ಉದ್ಯೋಗ ಸಿಕ್ಕಿದರೆ ಇಲ್ಲೇ ಉಳಿಯು ತ್ತಾರೆ. ಇಲ್ಲದಿ ದ್ದರೆ ಊರಿಗೆ ಊರೇ ಗುಳೆ ಹೋಗುತ್ತಾರೆ.  ಎಲ್ಲಾ ಮಂತ್ರಿ ಗಳು ತುಂಬಿರುವ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಂದಾಗುತ್ತಾರೆ. ಮಳೆ ಇಲ್ಲದೇ ಕೆರೆ ಅಂಗಳವೆಲ್ಲ ಬಿರುಕು ಬಿಟ್ಟಿ ರುವ ನಮ್ಮ ತಾಲ್ಲೂಕುಗಳಿಗೂ ಯಾರೂ ತಲೆ ಹಾಕುವುದಿಲ್ಲ. ----- ‌

  -ಮಲ್ಲಿಕಾರ್ಜುನ, ರಾಮಜೋಗಿಹಳ್ಳಿ ಹಿರಿಯೂರು ತಾಲ್ಲೂಕು.

ಬರಪೀಡಿತ ಪ್ರದೇಶ ಘೋಷಣೆಗೆ ಪ್ರಸ್ತಾವ

ಮಳೆ ಕೊರತೆಯಿಂದಾಗಿ ಜಿಲ್ಲೆಯ 60,858 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಹಾನಿಯಾಗಿದೆ. ಇದರ ಜೊತೆಗೆ 8,234 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಚಳ್ಳಕೆರೆ, ಹಿರಿಯೂರು ಮತ್ತು ಮೊಳಕಾಲ್ಮುರು ತಾಲ್ಲೂಕಿನ 10 ಹೋಬಳಿಗಳಲ್ಲಿ ಮಧ್ಯಂತರ ಬರವಿದೆ. 7 ಹೋಬಳಿಗಳಲ್ಲಿ ತೀವ್ರ ಬರವಿದೆ. ಈ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಪರಿಹಾರಕ್ಕಾಗಿ ₨ 20 ಕೋಟಿ ಬಿಡುಗಡೆಗೂ ಮನವಿ ಮಾಡಿದ್ದೇವೆ.

- ವಿ.ಪಿ. ಇಕ್ಕೇರಿ, ಜಿಲ್ಲಾಧಿಕಾರಿ, ಚಿತ್ರದುರ್ಗ.

ಹಿಂಗಾರು ಮಳೆ ಉತ್ತಮವಾದಲ್ಲಿ ಇಳುವರಿ ಸುಧಾರಣೆ

ಚಳ್ಳಕೆರೆ, ಮೊಳಕಾಲ್ಮುರು ಮತ್ತು ಹಿರಿಯೂರು ತಾಲ್ಲೂಕುಗಳಲ್ಲಿ ಇತ್ತೀಚೆಗೆ ಉತ್ತಮ ಮಳೆಯಾಗುತ್ತಿದೆ. ಮೊಳಕೆ­ಯೊಡೆದಿದ್ದ ಶೇಂಗಾ ಗಿಡಗಳು ಸುಧಾರಿಸುತ್ತಿವೆ. ಈ ಮಳೆಗೆ ಗಿಡಗಳು ಸೊಂಪಾಗಿ ಬೆಳೆಯುತ್ತಿದ್ದು, ಮೇವಿಗೆ ಅನುಕೂಲವಾಗುತ್ತದೆ. ಆದರೆ ನೆಲಗಡಲೆ ಶೇ 40ರಿಂದ 50ರಷ್ಟು ಮಾತ್ರ ಫಸಲು ದೊರೆಯಲಿದೆ.

ಹಿಂಗಾರು ಮಳೆ ಉತ್ತಮವಾದರೆ ಇಳುವರಿಯೂ ಸುಧಾರಿಸುವ ಸಾಧ್ಯತೆ ಇದೆ. ಬರ ಹಾಗೂ ಬೆಳೆ ಪರಿಸ್ಥಿತಿ ಕುರಿತು 2 ವಾರಗಳಿಂದ ಅಧಿಕಾರಿಗಳು ಹಳ್ಳಿಗಳಲ್ಲಿ ಸಮೀಕ್ಷೆ ಕೈಗೊಂಡಿದ್ದಾರೆ ತಿಂಗಳಾಂತ್ಯದಲ್ಲಿ ಪೂರ್ಣಗೊಂಡು ವರದಿ ಸಿದ್ಧವಾಗುತ್ತದೆ.

-ಕೃಷ್ಣಮೂರ್ತಿ, ಜಂಟಿ ಕೃಷಿ ನಿರ್ದೇಶಕರು.

ಜಿಲ್ಲೆಯಲ್ಲಿ ಬಿತ್ತನೆ-ಬೆಳೆ ಪ್ರಮಾಣ

(ಮುಂಗಾರು ಗುರಿ 3.58 ಲಕ್ಷ ಹೆ., ಬಿತ್ತನೆ 3.14 ಲಕ್ಷ ಹೆ)

ತಾಲ್ಲೂಕು ಗುರಿ ಬಿತ್ತನೆ

ಚಳ್ಳಕೆರೆ 99200 88810

ಚಿತ್ರದುರ್ಗ 66500 63351

ಹಿರಿಯೂರು 49200 30378

ಹೊಳಲ್ಕೆರೆ 54900 51299

ಹೊಸದುರ್ಗ 60500 55997

ಮೊಳಕಾಲ್ಮುರು 28200 24966.

ಜಿಲ್ಲೆಯ ಪ್ರಮುಖ ಬೆಳೆಗಳ ಬಿತ್ತನೆ ವಿವರ (ಹೆಕ್ಟೇರ್‌ಗಳಲ್ಲಿ)

ಬೆಳೆ ಗುರಿ ಸಾಧನೆ

ಭತ್ತ 6800 1161

ಜೋಳ 8300 3693

ರಾಗಿ 46800 35926

ಮೆಕ್ಕೆಜೋಳ 83100 96860

ಸಜ್ಜೆ 1850 1996

ಸಾವೆ 6250 8406

ತೊಗರಿ 14000 8884

ಹುರುಳಿ 5800 3138

ಹೆಸರು 4900 4519

ಶೇಂಗಾ 146500 111188

ಸೂರ್ಯಕಾಂತಿ 9400 13588

ಹತ್ತಿ 11300 20525.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry