ಬುಧವಾರ, ಮೇ 18, 2022
25 °C

ಮುಂಗಾರು: 92,855 ಹೆಕ್ಟೇರ್ ಬಿತ್ತನೆ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕೃಷಿ ಇಲಾಖೆಯ ಕಾರ್ಯಕ್ರಮದಂತೆ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಒಟ್ಟು 92,855 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ ಏಕದಳ ಧಾನ್ಯ 6,390 ಹೆಕ್ಟೇರ್, ದ್ವಿದಳ ಧಾನ್ಯ 77,700 , ಎಣ್ಣೆಕಾಳು ಬೆಳೆ 7,265 ಹಾಗೂ ವಾಣಿಜ್ಯ ಬೆಳೆ 1,500 ಹೆಕ್ಟೇರ್ ಪ್ರದೇಶ ಗುರಿ ಹೊಂದಲಾಗಿದೆ ಎಂದು ಗುಲ್ಬರ್ಗ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.2012-13ನೇ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು ಈ ವರ್ಷದಲ್ಲಿ ಜೂನ್ ತಿಂಗಳ ವರೆಗಿನ ವಾಡಿಕೆ ಮಳೆ 197 ಮಿ.ಮೀ. ಇದ್ದು ಇಲ್ಲಿಯವರೆಗೆ 102.2 ಮಿ.ಮೀ. ಮಳೆಯಾಗಿದೆ. ಜೂನ್ ತಿಂಗಳ ವಾಡಿಕೆ ಮಳೆ 116ಮಿ.ಮೀ. ಇದ್ದು ಇಲ್ಲಿಯವರೆಗೆ 71.7ಮಿ.ಮೀ. ಮಳೆಯಾಗಿದೆ. ಈ ವರ್ಷ ಹಂಗಾಮು 15 ದಿನ ತಡವಾಗಿ ಪ್ರಾರಂಭವಾಗಿದ್ದು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.ರೈತರು ಬೀಜ ಮತ್ತು ರಸಗೊಬ್ಬರಗಳ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ಬಿತ್ತನೆ ಪ್ರಾರಂಭವಾಗಿದ್ದು, ಕಮಲಾಪುರ ವಲಯದಲ್ಲಿ ಒಣ ಬಿತ್ತನೆ ಪದ್ಧತಿಯಲ್ಲಿ ಸುಮಾರು 570 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ತಾಲ್ಲೂಕಿನಲ್ಲಿ ಮುಖ್ಯವಾಗಿ ಸಜ್ಜೆ 4,000 ಹೆಕ್ಟೇರ್, ಮೆಕ್ಕೆಜೋಳ 1,150 ಹೆಕ್ಟೇರ್, ತೊಗರಿ 68,100 ಹೆಕ್ಟೇರ್, ಉದ್ದು 6,000, ಹೆಸರು 3,000, ಎಳ್ಳು 1,000, ಸೂರ್ಯಕಾಂತಿ 6,000 ಹಾಗೂ ಕಬ್ಬು ಬೆಳೆ 1,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗಾಗಿ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ಈಗಾಗಲೇ ತಾಲ್ಲೂಕಿನ 6ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿರಿಸಲಾಗಿದ್ದು, ಈ ವರ್ಷದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರೊಂದಿಗೆ ದೊಡ್ಡ ರೈತರಿಗೂ ಕೂಡ ರಿಯಾಯಿತಿ ದರದಲ್ಲಿ 2 ಹೆಕ್ಟೇರ್‌ಗೆ ಮಿತಿಗೊಳಿಸಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ರೈತರು ಬಿತ್ತನೆ ಬೀಜಗಳನ್ನು ಅನುಮೋದಿತ ಸಂಸ್ಥೆಗಳಿಂದ ಸರಬರಾಜಾದ ಬೀಜಗಳಲ್ಲಿ ತಮ್ಮ ಸ್ವ-ಇಚ್ಛೆಯ ಮೇರೆಗೆ ಬಿತ್ತನೆ ಬೀಜಗಳನ್ನು ಆಯ್ಕೆ ಮಾಡಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.ರೈತರು ರೈತ ಸಂಪರ್ಕ ಕೇಂದ್ರಗಳಲ್ಲದೆ ವಿವಿಧ ಅಧಿಕೃತ (ಬೀಜ ಮಾರಾಟ ಪರವಾನಗಿ ಪಡೆದ) ಖಾಸಗಿ ಮಾರಾಟಗಾರರಿಂದಲೂ ಬಿತ್ತನೆ ಬೀಜಗಳನ್ನು ಖರೀದಿಸಬಹುದು. ಖರೀದಿಸಿದ ಪ್ರಮಾಣಕ್ಕೆ ರಶೀದಿಯನ್ನು ತಪ್ಪದೆ ಪಡೆಯಲು ಕೋರಲಾಗಿದೆ.ಖರೀದಿಸಿದ ಬೀಜಗಳಲ್ಲಿ ಬಿತ್ತನೆಗೆ ಪೂರ್ವದಲ್ಲಿ ಸುಮಾರು 100 ಗಾಂ ನಷ್ಟು ಬೀಜವನ್ನು ಪ್ರತ್ಯೇಕವಾಗಿ ತೆಗೆದಿರಿಸಿ ಅದರೊಂದಿಗೆ ಪ್ಯಾಕಿಂಗ್ ಮಾಡಿದ ಚೀಲ ಹಾಗೂ ಲೇಬಲ್‌ಗಳನ್ನು ಬೆಳೆ ಕಟಾವು ಆಗುವ ವರೆಗೆ ಕಾಯ್ದಿರಿಸಬೇಕು.ಎಲ್ಲ ರೈತರು ಕೃಷಿ ಇಲಾಖೆಯೊಂದಿಗೆ ಸಹಕರಿಸಿ ಉತ್ತಮ ಗುಣಮಟ್ಟದ ಬೀಜ ಖರೀದಿಸಿ ಹೆಚ್ಚಿನ ಇಳುವರಿ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಗುಲ್ಬರ್ಗ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ಭೇಟಿ ನೀಡಲು  ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆ ಮೂಲಕ ರೈತರಲ್ಲಿ ಮನವಿ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.