ಶನಿವಾರ, ಮೇ 15, 2021
24 °C

ಮುಂಚೂಣಿಯಲ್ಲಿ ಹೋರಾಡುವೆ: ನಯ್ಯರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನ್ಯಾಯಾಲಯ ಕಲಾಪಗಳ ವರದಿಗಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಮಾಧ್ಯಮಗಳಿಗೆ ಮಾರ್ಗಸೂಚಿ ರೂಪಿಸಿದರೆ ಅಂತಹ ಕ್ರಮದ ವಿರುದ್ಧ ನಾನು ಮುಂಚೂಣಿಯಲ್ಲಿ ನಿಂತು ಹೋರಾಡುವೆ~  ಎಂದು ಹಿರಿಯ ಪತ್ರಕರ್ತ ಕುಲದೀಪ ನಯ್ಯರ್ ಘೋಷಿಸಿದರು.



ಪತ್ರಕರ್ತ ವಿ.ಕೆ.ನರಸಿಂಹನ್ ಅವರ ಜನ್ಮಶತಾಬ್ದಿ ದಿನದ ಸ್ಮರಣಾರ್ಥ ಭಾರತೀಯ ವಿದ್ಯಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.



`ಸುಪ್ರೀಂ ಕೋರ್ಟ್‌ನ ಉದ್ದೇಶಿತ ಕ್ರಮವು ಸ್ವತಂತ್ರ ಪತ್ರಿಕೋದ್ಯಮದ ಆಶಯಗಳಿಗೆ ವಿರುದ್ಧವಾದುದಾಗಿದೆ~ ಎಂದು ಅಭಿಪ್ರಾಯಪಟ್ಟ ಅವರು, `ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನರಸಿಂಹನ್ ಪತ್ರಕರ್ತರಾಗಿದ್ದರು. ಆಗ ಅವರ ಸಹೋದ್ಯೋಗಿಗಳಾಗಿದ್ದವರು ಮಾಧ್ಯಮವನ್ನು ಹತ್ತಿಕ್ಕುವ ಪ್ರಯತ್ನಗಳ ವಿರುದ್ಧ ಹೋರಾಡಬೇಕು, ಸರ್ಕಾರ ಮತ್ತು ಕಾರ್ಪೊರೇಟ್ ಹಂಗಿನಿಂದ ಮಾಧ್ಯಮ ಹೊರಬರಲು ಸಹಕರಿಸಬೇಕು~ ಎಂದು ಕರೆ ನೀಡಿದರು.



`ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಸುಪ್ರೀಂ ಕೋರ್ಟ್ ಯಾಕೆ ಮುಂದಾಗಿದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಕಪಾಡಿಯ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಆದರೆ ಈ ವಿಚಾರದಲ್ಲಿ ಅವರ ನಿಲುವು ನನಗೆ ಸರಿಕಾಣುತ್ತಿಲ್ಲ~ ಎಂದು ಅವರು ಹೇಳಿದರು.



`ಎ.ಪಿ.ಭರೂಚ ಅವರು ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಒಂದೊಮ್ಮೆ ಕೋರ್ಟ್‌ನ ಮಾರ್ಗಸೂಚಿಗಳು ಜಾರಿಗೆ ಬಂದರೆ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾಧ್ಯಮ ಮಾತನಾಡಲು ಸಾಧ್ಯವಾಗದು. ಇದು ಮತ್ತೊಂದು ರೀತಿಯ ತುರ್ತು ಸ್ಥಿತಿ ಆಗಲಿದೆ~ ಎಂದು ಅವರು ಆತಂಕ ವ್ಯಕ್ತಪಡಿಸಿದರು.



`ನರಸಿಂಹನ್ ಅವರು ದಿ ಹಿಂದು, ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಫೈನಾನ್ಸಿಯಲ್ ಎಕ್ಸ್‌ಪ್ರೆಸ್ ಪತ್ರಿಕೆಗಳಲ್ಲಿ ಮುಖ್ಯ ಸಂಪಾದಕೀಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ನರಸಿಂಹನ್ ಅವರಂತಹವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಈಗಿನ ಮಾಧ್ಯಮ ಅನುಸರಿಸುತ್ತಿಲ್ಲ. ಅದುವೇ ಈಗಿನ ಪತ್ರಿಕೋದ್ಯಮದ ಕೊರತೆಯಾಗಿದೆ~ ಎಂದು ಅವರು ವಿಷಾದಿಸಿದರು.



ನರಸಿಂಹನ್ ಅವರ ಜತೆ ಕೆಲಸ ಮಾಡಿದ್ದ ನಯ್ಯರ್, `ನರಸಿಂಹನ್ ಅವರ ಬಗ್ಗೆ ನನಗೆ ಪೂಜ್ಯ ಭಾವನೆ ಇದೆ~ ಎಂದರು. ಆಂಧ್ರಪ್ರದೇಶದ ರಾಜ್ಯಪಾಲ ಇ.ಎಸ್.ಎಲ್.ನರಸಿಂಹನ್ ಮಾತನಾಡಿ, `ಇಂದು ನಾನು ಏನಾಗಿದ್ದೇನೆಯೋ ಅದಕ್ಕೆಲ್ಲ ವಿ.ಕೆ.ನರಸಿಂಹನ್ ಅವರೇ ಕಾರಣ. ಅವರ ಸಲಹೆ ಮೇರೆಗೆ ನಾನು ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದೆ. ನನ್ನ ರಾಜಕೀಯ ಜೀವನ ರೂಪುಗೊಳ್ಳುವಲ್ಲಿ ಅವರು ವಹಿಸಿದ ಪಾತ್ರವನ್ನು ಎಂದೆಂದಿಗೂ ಮರೆಯಲಾರೆ~ ಎಂದರು.



ಇದೇ ಸಂದರ್ಭದಲ್ಲಿ ನರಸಿಂಹನ್ ಪುತ್ರ ವಿ.ಎನ್.ನಾರಾಯಣನ್ ಬರೆದ `ಗಾಡ್ಸ್ ಓನ್ ಮಾರ್ಕ್ಸಿಸ್ಟ್~ ಕೃತಿಯನ್ನು ರಾಜ್ಯಪಾಲರು ಬಿಡುಗಡೆ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.