ಮುಂಜಾನೆಯ ಸಿಹಿ ಗುಂಗಲ್ಲಿ...

7

ಮುಂಜಾನೆಯ ಸಿಹಿ ಗುಂಗಲ್ಲಿ...

Published:
Updated:
ಮುಂಜಾನೆಯ ಸಿಹಿ ಗುಂಗಲ್ಲಿ...

`ಮುಂಜಾನೆ~ಯ ಬೆಚ್ಚನೆಯ ಕಿರಣಗಳ ಸ್ಪರ್ಶಕ್ಕಾಗಿ ತಮ್ಮ ಅರಳಿದ ಮುಖವೊಡ್ಡಿ ನಿಂತಿದ್ದಾರೆ ನಟ ಗಣೇಶ್. ಸದ್ಯ ಚುಮುಚುಮು ಮುಂಜಾವಿನಲಿ ಅರುಣೋದಯದ ಗಳಿಗೆಗಾಗಿ ಕಾದು ನಿಂತ ಯುವ ಪ್ರೇಮಿ ಅವರು. `ಮುಂಜಾನೆ~ ಮಂಜು ಪ್ರೇಮಿಗಳ ಹೃದಯಕ್ಕೆ ತಂಪೆರೆಯುತ್ತದೆ ಎಂಬ ಭರವಸೆ ಅವರ ಸಂಗಾತಿ.ಗಣೇಶ್ ಮತ್ತು ನಿರ್ದೇಶಕ ಎಸ್.ನಾರಾಯಣ್ ಜೋಡಿಯ ಮೂರನೇ ಚಿತ್ರ `ಮುಂಜಾನೆ~ ಮುಂದಿನವಾರ ತೆರೆ ಕಾಣುತ್ತಿದೆ. ಅವರೇ ಹೇಳುವಂತೆ ಅದೊಂದು ನವಿರು ಪ್ರೇಮ ಕಥನ. ಚಿಕ್ಕದೊಂದು ಎಳೆಯನ್ನಿಟ್ಟುಕೊಂಡು ಎಸ್.ನಾರಾಯಣ್ ಅದ್ಭುತವಾದ ಚಿತ್ರಕಥೆ ಹೆಣೆದಿದ್ದಾರಂತೆ. ನಾನಿಲ್ಲಿ ನಟ ಮಾತ್ರ. ನಿರ್ದೇಶಕರು ಹೇಳಿದ್ದಂತೆ ನಟಿಸಿದ್ದೇನೆ.ಒಟ್ಟಾರೆಯಾಗಿ ಇದು ಪರಿಪೂರ್ಣ ನಿರ್ದೇಶಕರ ಸಿನಿಮಾ ಎನ್ನುತ್ತಾರೆ ಅವರು. `ಚೆಲುವಿನ ಚಿತ್ತಾರ~ ಮತ್ತು `ಶೈಲೂ~ ಚಿತ್ರಗಳ ಬಳಿಕ ಈ ಜೋಡಿಯ ಮೂರನೇ ಚಿತ್ರವಿದು. ಹೀಗಾಗಿ ಚಿತ್ರದ ಬಗ್ಗೆ ಅವರಿಗೆ ಸಾಕಷ್ಟು ನಿರೀಕ್ಷೆ.ಗಣೇಶ್ ಚಿತ್ರವೆಂದರೆ ಅದು ದುರಂತ ಅಂತ್ಯದ ಚಿತ್ರವೆಂಬ ಭಾವನೆ ಜನರಲ್ಲಿದೆ. ಇದು ಹಾಗೆಯೇ ಎಂದು ಕೇಳಿದರೆ ಅವರು `ಇದು ಹ್ಯಾಪಿ ಎಂಡಿಂಗ್ ಸಿನಿಮಾ~ ಎಂದು ನಗುತ್ತಾರೆ. ತಮ್ಮ ಚಿತ್ರಗಳನ್ನು ದುರಂತ ಅಂತ್ಯದ ಚಿತ್ರಗಳೆಂದು ಅವರು ಒಪ್ಪುವುದಿಲ್ಲ. ಪ್ರೀತಿಸಿದವಳಿಂದ ದೂರವಾಗುವ `ಮುಂಗಾರು ಮಳೆ~ಯ ಕ್ಲೈಮ್ಯಾಕ್ಸ್ ದುರಂತವಲ್ಲ. ಅದೊಂದು `ಅಬ್ರಪ್ಟ್~ ಅಂತ್ಯವಷ್ಟೆ. `ಚೆಲುವಿನ ಚಿತ್ತಾರ~ದಲ್ಲೂ ಪ್ರೀತಿ ಒಂದಾಗುತ್ತದೆ- ತಮ್ಮ ಚಿತ್ರಗಳನ್ನು ಅವರು ವಿಶ್ಲೇಷಿಸುವುದು ಹೀಗೆ.`ಮುಂಜಾನೆ~ಯಲ್ಲಿ ಗಣೇಶ್ ಎಲ್ಲಾ ಒತ್ತಡಗಳನ್ನೂ ಸಹಿಸಿಕೊಳ್ಳುವ ಮೃದು ಮನಸಿನ ಯುವಕ. ತಂದೆ ತಾಯಿಗಳ ಮಾತನ್ನು ಮೀರುವುದಿಲ್ಲ. ಯಾರಿಗೂ ನೋವನ್ನುಂಟು ಮಾಡುವುದಿಲ್ಲ. ಬದುಕಿನಲ್ಲೊಂದು ಪ್ರೀತಿಯ ಚಿಲುಮೆ ಹುಟ್ಟುತ್ತದೆ. ಅದು ಕಾಣದ ಹುಡುಗಿಯ ಪ್ರೀತಿ. ಶುರುವಾಗುವುದು ಬಸ್‌ನಲ್ಲಿ. ಬದುಕು ಮತ್ತು ದೂರದ ಪ್ರೀತಿ ಎರಡರ ತೂಗುಯ್ಯಾಲೆಯ ನಡಿಗೆಯೇ ಮುಂಜಾನೆಯ ಕಥಾವಸ್ತು. ಪ್ರತಿ ಸನ್ನಿವೇಶವೂ ಕುತೂಹಲವನ್ನು ಕಾಯ್ದುಕೊಳ್ಳುತ್ತದೆ ಎನ್ನುತ್ತಾರೆ ಅವರು.ಅಂದಹಾಗೆ ಚಿತ್ರದಲ್ಲಿ ಗಣೇಶ್‌ಗಾಗಿಯೇ ನಾರಾಯಣ್ ಹಾಡೊಂದನ್ನು ಹೊಸೆದಿದ್ದಾರಂತೆ. ನಾಯಕಿಗಾಗಿ ಹಾಡೊಂದನ್ನು ಚಿತ್ರಿಸಲಾಗಿತ್ತು. ನಾಯಕನಿಗಾಗಿಯೂ ಒಂದು ಹಾಡು ಇರಲಿ. ಅದು ಆಡಿಯೊ ಇದ್ದರೆ ಸಾಕು ಎಂದು ಗಣೇಶ್ ನಾರಾಯಣ್‌ರನ್ನು ಕೇಳಿದ್ದರಂತೆ. ಗಣೇಶ್‌ಗಾಗಿ `ಓ ಮನಸೇ~ ಎಂಬ ಹಾಡು ಬರೆದ ನಾರಾಯಣ್ ಅದರ ಚಿತ್ರೀಕರಣವನ್ನೂ ಮಾಡಿದರಂತೆ.ಎಸ್.ನಾರಾಯಣ್ ಅವರ ಶಿಸ್ತಿನ ಗರಡಿಯ ಅನುಭವ ಖುಷಿ ಕೊಡುತ್ತದೆ ಎನ್ನುತ್ತಾರೆ ಗಣೇಶ್. `ಶೈಲೂ~ ಚಿತ್ರ ಗೆದ್ದಿದೆ. ನನಗೆ ಒಳ್ಳೆ ಹೆಸರನ್ನೂ ತಂದು ಕೊಟ್ಟಿದೆ. ನನ್ನೊಳಗಿನ ನಟನನ್ನು ಪರೀಕ್ಷೆಗೆ ಒಡ್ಡುವ ಚಿತ್ರವದು. ಚಿತ್ರರಂಗದಲ್ಲಿ ಹೊಸ ಭರವಸೆಯನ್ನೂ ನನಗೆ ಮೂಡಿಸಿದೆ ಎನ್ನುತ್ತಾರೆ.ಭಾವನಾ (ಜಾಕಿ) ಜೊತೆ ನಟಿಸಿರುವ `ರೋಮಿಯೋ~ ಚಿತ್ರದ ಬಗ್ಗೆ ಸಹ ಗಣೇಶ್ ಅಪಾರ ನಿರೀಕ್ಷೆ ವ್ಯಕ್ತಪಡಿಸುತ್ತಾರೆ. ಇದೊಂದು ಕ್ಯೂಟ್ ಲವ್ ಸ್ಟೋರಿ. ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ ಎಂಬುದು ಅವರ ವಿಶ್ವಾಸ. ಸದ್ಯ ಡಬ್ಬಿಂಗ್ ಹಂತದಲ್ಲಿರುವ ಈ ಚಿತ್ರ ಶೀಘ್ರದಲ್ಲೇ ತೆರೆಕಾಣಲು ಸಜ್ಜಾಗುತ್ತಿದೆ. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ `ಮಿಸ್ಟರ್ 420~ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಬಳಿಕ ಬಿ.ಸುರೇಶ್ ನಿರ್ಮಾಣದ ಚಿತ್ರವೊಂದರಲ್ಲಿ ಸಹ ಗಣೇಶ್ ನಟಿಸಲಿದ್ದಾರೆ.ತಮ್ಮದೇ ನಿರ್ಮಾಣದ `ಕೂಲ್~ ಚಿತ್ರ ಸೋತದ್ದು ಅವರಿಗೆ ತೀವ್ರ ನಿರಾಸೆ ಉಂಟುಮಾಡಿದೆ. ಆದರೆ ಚಿತ್ರರಂಗದಲ್ಲಿ ಸೋಲು ಗೆಲುವು ಇದ್ದದ್ದೇ. ಮಾಡುವ ಪ್ರತಿ ಚಿತ್ರವೂ ಸೂಪರ್‌ಹಿಟ್ ಆಗಬೇಕೆಂಬ ಫಾರ್ಮುಲಾವನ್ನು ಯಾರೂ ಕಂಡುಹಿಡಿದಿಲ್ಲ. ನಟನಾಗಿ ಶೇಕಡಾ 100ರಷ್ಟು ಪ್ರಯತ್ನ ಪಟ್ಟು ನಟಿಸುವುದು ನನ್ನ ಕರ್ತವ್ಯ. ಚಿತ್ರದ ಪಾತ್ರ ಮತ್ತು ಅದು ಬಯಸುವ ಅಭಿನಯಕ್ಕೆ ಎಂದಿಗೂ ನಾನು ಮೋಸ ಮಾಡುವುದಿಲ್ಲ ಎಂದು ಹೇಳುತ್ತಾರೆ.ಗಣೇಶ್‌ಗೆ `ಮುಂಗಾರು ಮಳೆ~ ಇಮೇಜಿನಿಂದ ಹೊರಬರಲು ಸಾಧ್ಯವಾಗಿಲ್ಲವೇ? ಅಥವಾ ಅದರಿಂದ ಹೊರಬರುವುದನ್ನು ಜನ ಇಷ್ಟಪಡುವುದಿಲ್ಲವೇ ಎಂದು ಪ್ರಶ್ನಿಸಿದರೆ ಗಣೇಶ್ ಪ್ರತಿಕ್ರಿಯಿಸುವುದು ಹೀಗೆ: `ಮುಂಗಾರು ಮಳೆ~ ಇಮೇಜಿನ ಚಿತ್ರಗಳ ಪಾತ್ರಗಳನ್ನು ಕಂಡಾಗ ಅದರಿಂದ ಹೊರಬರಲು ಗಣೇಶ್‌ಗೆ ಆಗುವುದಿಲ್ಲ ಎಂದು ಟೀಕಿಸುತ್ತಾರೆ. ಬೇರೆ ತರಹದ ಪಾತ್ರಗಳನ್ನು ಮಾಡಿದಾಗ `ಆ~ ಇಮೇಜೇ ಸರಿ ಎನ್ನುತ್ತಾರೆ. ಜನರನ್ನು ಮೆಚ್ಚಿಸುವುದು ಸುಲಭವಲ್ಲ.ಒಂದು ಬಗೆಯ ಪಾತ್ರಕ್ಕೆ ಅಂಟಿಕೊಳ್ಳುವ ಜಾಯಮಾನ ನನ್ನದಲ್ಲ. ವಿಭಿನ್ನ ಪಾತ್ರಗಳನ್ನು ಬಯಸುತ್ತೇನೆ. ಅಂತಹ ಪಾತ್ರಗಳಲ್ಲಿ ನಟಿಸಿದ್ದೇನೆ. ಉತ್ತಮ ಮನರಂಜನೆ ನೀಡುವ ಚಿತ್ರ ನೀಡುವುದಷ್ಟೇ ನನ್ನ ಗುರಿ ಎನ್ನುವ ಗಣೇಶ್ ಗುಂಗು ಮತ್ತೆ `ಮುಂಜಾನೆ~ಯ ಅರುಣರಾಗದೆಡೆಗೆ ಜಾರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry