ಮುಂಜಾನೇಲಿ... ಸಿಹಿ ಕನಸಲ್ಲಿ...

7

ಮುಂಜಾನೇಲಿ... ಸಿಹಿ ಕನಸಲ್ಲಿ...

Published:
Updated:

ಎಸ್.ನಾರಾಯಣ್ ಮುಖದಲ್ಲಿ ಎಂದಿನ ಲವಲವಿಕೆಯ ನಗು ಇರಲಿಲ್ಲ. ಅವರದೇ ನಿರ್ದೇಶನ ಮತ್ತು ನಿರ್ಮಾಣದ ಚಿತ್ರವನ್ನು ತೆರೆಗೆ ಅರ್ಪಿಸುವ ಕಾಲ ಸನ್ನಿಹಿತವಾಗಿದ್ದರೂ ಅವರಲ್ಲಿ ಆ ಸಂಭ್ರಮದ ಉದ್ವೇಗವಿರಲಿಲ್ಲ.`ಶೈಲು~ ಹೆಸರು ಮಾಡಿದರೂ ನಿರೀಕ್ಷಿತ ಹಿಟ್ ನೀಡಲಿಲ್ಲ ಎಂಬ ನೋವು ಕಾಡುತ್ತಿತ್ತು. ಅದರ ಬೆನ್ನಲ್ಲೇ ಅವರ ಮತ್ತು ಗಣೇಶ್ ಜೋಡಿಯ ಮತ್ತೊಂದು ಚಿತ್ರ `ಮುಂಜಾನೆ~ ಮಾರ್ಚ್ ಮೊದಲ ವಾರ ಬಿಡುಗಡೆಯಾಗುತ್ತಿದೆ. ಚಿತ್ರದ ಬಗ್ಗೆ ಅವರಲ್ಲಿ ಅಪಾರ ನಿರೀಕ್ಷೆಗಳಂತೂ ಮನೆಮಾಡಿವೆ.ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದದ್ದು ಎಸ್. ನಾರಾಯಣ್ ಮತ್ತು ಗಣೇಶ್ ಮಾತ್ರ. ಹೆಚ್ಚಿನ ಮಾತುಗಳು ಪರಸ್ಪರ ಹೊಗಳಿಕೆಗೇ ಮೀಸಲಾಗಿದ್ದವು. ನನ್ನ ಎಲ್ಲಾ ಸಿನಿಮಾಗಳಲ್ಲಿಯೇ ಇದು ವಿಶೇಷ ಸ್ಥಾನದಲ್ಲಿ ನಿಲ್ಲುವ ಚಿತ್ರ ಎಂಬುದು ನಾರಾಯಣ್ ಮಾತು. ಈ ರೀತಿ ಹೇಳಲು ಹಲವು ಕಾರಣಗಳನ್ನು ನೀಡಿದರು.

 

ಗಣೇಶ್ ಚಿತ್ರದಲ್ಲಿ ತಮ್ಮನ್ನು ಆಳವಾಗಿ ತೊಡಗಿಸಿಕೊಂಡು ಅಭಿನಯಿಸಿದ್ದಾರೆ. ಪ್ರತಿ ಸನ್ನಿವೇಶವೂ ಕುತೂಹಲವನ್ನು ಉಳಿಸಿಕೊಂಡು ಸಾಗುತ್ತದೆ. ಮಿಗಿಲಾಗಿ ಅವರ ಸಿನಿಮಾ ಬದುಕಿನಲ್ಲಿ ಮೊದಲ ಬಾರಿಗೆ 40 ದಿನ ರೀರೆಕಾರ್ಡಿಂಗ್ ಮಾಡಲಾದ ಚಿತ್ರವಿದು. 70 ತಂತ್ರಜ್ಞರನ್ನು ಇಟ್ಟುಕೊಂಡು ಹಿನ್ನೆಲೆ ಸಂಗೀತ ತಯಾರಿಸಲಾಗಿದೆ.ಚಿತ್ರದ ಮಾತಿನ ಭಾಗಕ್ಕಿಂತಲೂ ಹಾಡುಗಳ ಚಿತ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಎರಡು ಹಾಡುಗಳಿಗಾಗಿಯೇ ಸುಮಾರು 60 ದಿನಗಳ ತಯಾರಿ ನಡೆಸಲಾಗಿದೆ. ಒಂದು ಹಾಡಿಗಾಗಿಯೇ ಮುಂಬೈನಿಂದ ವಿಶೇಷ ಕ್ಯಾಮೆರಾ ತರಿಸಲಾಗಿದೆ. ಹೀಗೆ ಸುದೀರ್ಘ ಪಟ್ಟಿ ಬಿಚ್ಚಿಟ್ಟರು.ಚಿತ್ರದ ಹಾಡುಗಳು ಜನರಿಗೆ ಹಿಡಿಸಿವೆ. ಹಾಡುಗಳು ಗೆದ್ದರೆ ಚಿತ್ರ ಗೆದ್ದಂತೆ ಎಂಬುದು ನಾರಾಯಣ್ ವಿಶ್ವಾಸದ ನುಡಿ. ಅವರ ಅನುಭವದಲ್ಲಿ ಗೆದ್ದ ಹಾಡುಗಳೆಲ್ಲವೂ ಸಿನಿಮಾವನ್ನೂ ಗೆಲ್ಲಿಸಿವೆ. ಹೀಗಾಗಿ `ಮುಂಜಾನೆ~ ಗೆಲುವಿನ ಹಿತ ನೀಡುತ್ತದೆ ಎಂಬುದು ಅವರ ಭರವಸೆ. ಮುಂಜಾನೆಯ ದೃಶ್ಯವೇ ಸುಂದರ.ಅದರಲ್ಲಿ ನಟಿಸಿ ಗಣೇಶ್ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದಾರೆ ಎಂಬ ಹೊಗಳಿಕೆ ಅವರದು. ಇಂತಹ ಪಾತ್ರದಲ್ಲಿ ಅಭಿನಯಿಸಲು ಅಗಾಧ ಪ್ರತಿಭೆ ಮತ್ತು ಅನುಭವ ಬೇಕು. ಈ ಎರಡೂ ಗಣೇಶ್‌ರಲ್ಲಿ ಇದೆ. ಅದನ್ನು ಹಾಗೆಯೇ ಬಳಸಿಕೊಳ್ಳಲಾಗಿದೆ ಎಂದು ಮಾತು ಮುಂದುವರೆಸಿದರು.ಇದು ಟೀಂ ವರ್ಕ್‌ನ ಶ್ರಮದಲ್ಲಿ ಮೂಡಿಬಂದ ಚಿತ್ರ ಎಂದು ವಿಶ್ಲೇಷಿಸಿದರು ನಟ ಗಣೇಶ್. ಅವರು ಟೀಂ ಅನ್ನು ಹೋಲಿಸಿದ್ದು ಎಸ್.ನಾರಾಯಣ್‌ರಿಗೆ. ಈ ಚಿತ್ರತಂಡವೇ ಅವರು. ನಿರ್ದೇಶನ, ನಿರ್ಮಾಣ, ಸಾಹಿತ್ಯ, ಸಂಭಾಷಣೆ ಹೀಗೆ ಎಲ್ಲದರ ಸಾರಥ್ಯವನ್ನೂ ನಿರ್ವಹಿಸಿರುವುದು ನಾರಾಯಣ್.ನಾನಿಲ್ಲಿ ಕೇವಲ ನಟ ಮಾತ್ರ. ಚಿತ್ರದ ಪ್ರತಿಯೊಂದು ಶ್ರೇಯಸ್ಸು ನಾರಾಯಣ್ ಅವರಿಗೇ ದಕ್ಕಬೇಕು ಎನ್ನುವುದು ಅವರ ಅಭಿಪ್ರಾಯ.ಮತ್ತೆ ಮೈಕ್ ಕೈಗೆತ್ತಿಕೊಂಡ ನಾರಾಯಣ್ ಮಾತನಾಡಿದ್ದು ಹೊಸ ನಿರ್ಮಾಪಕರ ಕಡೆಗಣನೆ ಬಗ್ಗೆ. `ಹೊಸ ನಿರ್ಮಾಪಕರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಆದರೆ ಅವರಿಗೆ ಸೂಕ್ತ ಪ್ರೋತ್ಸಾಹವೇ ಸಿಗುತ್ತಿಲ್ಲ. ಕಷ್ಟಪಟ್ಟು ಸಿನಿಮಾ ಮಾಡುವ ನಿರ್ಮಾಪಕ ಅದರ ಬಿಡುಗಡೆ ವೇಳೆಗೆ ಹೈರಾಣಾಗಿರುತ್ತಾನೆ.ನಿರ್ಮಾಪಕ ಮತ್ತು ನಿರ್ದೇಶಕ ಚಿತ್ರದ ಮೊದಲ ಮತ್ತು ಕೊನೆಯ ರೀಲು ಇದ್ದಂತೆ. ಅವರು ಗಟ್ಟಿಯಾದರೇ ತಾನೆ ಉತ್ತಮ ಚಿತ್ರ ಬರುವುದು. ಆಗಲೇ ತಾನೆ ಚಿತ್ರೋದ್ಯಮ ಗಟ್ಟಿಗೊಳ್ಳುವುದು...~ ಅವರ ಧ್ವನಿಯಲ್ಲಿ ಬೇಸರವಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry