ಶನಿವಾರ, ಡಿಸೆಂಬರ್ 7, 2019
25 °C

ಮುಂಡಗೋಡದ ಹನುಮಪ್ಪ

Published:
Updated:
ಮುಂಡಗೋಡದ ಹನುಮಪ್ಪಉತ್ತರ ಕನ್ನಡ ಜಿಲ್ಲೆ ಮುಂಡಗೋಡದ ಹಳೂರಿನಲ್ಲಿದೆ ಶ್ರೀ ಆಂಜನೇಯ ದೇವಸ್ಥಾನ. ಸ್ಥಳೀಯರ ಬಾಯಲ್ಲಿ ಇದು ಹನುಮಂತದೇವರ ಗುಡಿ ಎಂದೇ ಜನಪ್ರಿಯ. ಇದನ್ನು ಸೋದೆ ಶ್ರೀ ವಾದಿರಾಜರು ನಿರ್ಮಿಸಿದರು ಎಂಬ ಪ್ರತೀತಿ. ಹೀಗಾಗಿಯೇ ಇಲ್ಲಿನ ವಾಯುದೇವರಲ್ಲಿ ವಿಶೇಷ ಶಕ್ತಿಯಿದೆ ಎಂಬುದು ಭಕ್ತಾದಿಗಳ ಅಚಲ ನಂಬಿಕೆ.ಈ ದೇವಾಲಯಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ. ಆರಂಭದಲ್ಲಿ ಇಲ್ಲಿ ಬ್ರಾಹ್ಮಣ ಕುಟುಂಬಗಳ ಅಗ್ರಹಾರ ಇತ್ತು. ಅವರಲ್ಲೊಬ್ಬರಾದ ಪರಮ ಭಕ್ತ ವೆಂಕಟದಾಸರ ಕನಸಿನಲ್ಲಿ ಒಮ್ಮೆ ಆಂಜನೇಯ ಕಾಣಿಸಿಕೊಂಡು, `ನಾನು ಈ ಸ್ಥಳದಲ್ಲಿ ನೆಲದಿಂದ ಉದ್ಭವಿಸುತ್ತೇನೆ.

 

ನನ್ನನ್ನು ಇಲ್ಲಿಯೇ ಪ್ರತಿಷ್ಠಾಪಿಸಿ ಪೂಜಿಸಬೇಕು~ ಎಂದು ಹೇಳುತ್ತಾನೆ. ಬೆಳಿಗ್ಗೆ ಆ ಸ್ಥಳದಲ್ಲಿ ಹನುಮಂತನ ಮೂರ್ತಿ ಉದ್ಭವಿಸಿತ್ತು. ಅದಕ್ಕೆ ಗುಡಿ ನಿರ್ಮಿಸಿ ದಾಸರು ಪೂಜೆ ಸಲ್ಲಿಸುತ್ತಿದ್ದರು. ಕಾಲಾನಂತರ ಅನ್ಯ ಧರ್ಮೀಯರ ದಾಳಿಗೆ ತುತ್ತಾಗಿ ದೇವರ ವಿಗ್ರಹದ ಮುಖದ ಭಾಗವು ಭಗ್ನವಾಯಿತಂತೆ.ಸಂಚಾರ ಮಧ್ಯದಲ್ಲಿ ಉಡುಪಿಯ ಶ್ರೀ ವಾದಿರಾಜರು ಇಲ್ಲಿಗೆ ಬರುತ್ತಾರೆ. ದೈವಿ ಪ್ರೇರಣೆಯಂತೆ ಭಗ್ನ ಮೂರ್ತಿಯ ಮುಂಭಾಗದಲ್ಲಿ ಹನುಮನನ್ನು ಪ್ರತಿಷ್ಠಾಪಿಸುತ್ತಾರೆ. ಇದು ಸುಮಾರು 6 ಅಡಿ ಎತ್ತರದ ಏಕಶಿಲಾ ವಿಗ್ರಹದಿಂದ ನಿರ್ಮಾಣವಾಗಿದೆ.ಮೇಲುಗಡೆ ಶ್ರೀ ನರಸಿಂಹದೇವರ ಮುಖ ಹಾಗೂ ಕೆಳಗೆ ಭವ್ಯ ನಿಲುವಿನ ವಾಯುದೇವರ ಆಕಾರ ಎಂಥವರಲ್ಲೂ ಭಕ್ತಿ ಉಕ್ಕಿಸುತ್ತದೆ. ಮಳೆ ಸಕಾಲದಲ್ಲಿ ಬರದಿದ್ದರೆ ಹನುಮಪ್ಪನಿಗೆ ಎಳೆನೀರು ಅಭಿಷೇಕ ಮಾಡುವುದು ವಾಡಿಕೆಯಲ್ಲಿದೆ ಎಂದು ಅರ್ಚಕ ರಾಮಾಚಾರ್ಯ ಮಧ್ವಾಚಾರ್ಯ ಜೋಶಿ ವಿವರಿಸುತ್ತಾರೆ.  ಏಕಶಿಲಾ ಸ್ತಂಭ, ನಾಗ

ದೇವಾಲಯದ ಆವರಣದಲ್ಲಿ ಸುಂದರವಾಗಿ ಕೆತ್ತಿದ ಸುಮಾರು 40 ಅಡಿ ಎತ್ತರದ ಏಕಶಿಲಾ ಗರುಡ ಸ್ತಂಭವಿದೆ. ಸೋದೆಯ ಭೂತರಾಜರು ಇದನ್ನು ಬದರಿಯಿಂದ ತಂದರು ಎಂದು ಪ್ರತೀತಿ. ಇದರ ಮೇಲೆ ದೇವರ ವಿಗ್ರಹಗಳ ಕೆತ್ತನೆಗಳು, ತುದಿಯಲ್ಲಿ ಚಿಕ್ಕ ಮಂಟಪವಿದೆ. ಸ್ತಂಭದ ಸುತ್ತಲೂ ಚೌಕಾಕಾರದ ಜಗುಲಿ ಇರುವುದು ವಿಶೇಷ.ದೇವಸ್ಥಾನದ ಆವರಣದಲ್ಲಿ ಭೂತರಾಜರ ಪಾದಗಳಿವೆ. ಅದಕ್ಕೆ ಮೊದಲ ಪೂಜೆ ಸಲ್ಲುತ್ತದೆ.

ದೇವಸ್ಥಾನದ ಹೊರ ಭಾಗದಲ್ಲಿ ಐದು ಅಡಿ ಅಗಲ ನಾಲ್ಕು ಅಡಿ ಎತ್ತರದ ಏಕ ಶಿಲಾ ನಾಗ ಮಂಡಲವನ್ನು ಕಾಣಬಹುದು. ಐದು ಹೆಡೆಯ ನಾಗರಹಾವನ್ನು ಬಾಲದಿಂದ ಹೆಡೆಯವರೆಗೆ ಒಂದೇ ರೇಖೆಯಲ್ಲಿ ಕೆತ್ತಲಾಗಿದ್ದು, ಶಿಲ್ಪಿಯ ಕೈಚಳಕ ಬೆರಗು ಹುಟ್ಟಿಸುತ್ತದೆ.ದೇವಸ್ಥಾನದ ಮುಂಭಾಗದಲ್ಲಿ ಸಣ್ಣ ಆಂಜನೇಯನ ಗುಡಿಯೊಂದಿದೆ. ಭಕ್ತರೇ ಇಲ್ಲಿ ಮುಟ್ಟಿ ಪೂಜಿಸಬಹುದು. ಹಿಂಭಾಗದಲ್ಲಿ ವೀರಗಲ್ಲು ಕಂಡು ಬರುತ್ತದೆ.

   

 ವಿಶೇಷ ಪೂಜೆಇಲ್ಲಿ ನಿತ್ಯ ಪೂಜೆಯಿದ್ದರೂ ಶನಿವಾರ ವಿಶೇಷ.ಶನಿದೋಷದ ಪರಿಹಾರಕ್ಕೆ ಶನಿವಾರದಂದು ಎಳ್ಳೆಣ್ಣೆಗೆ ಕರಿ ಎಳ್ಳು ಬೆರೆಸಿ ಅದರಲ್ಲಿ ಮುಖ ನೋಡಿ ಹೊರಗಡೆ ಪ್ರತಿಷ್ಠಾಪಿಸಿರುವ ಆಂಜನೇಯನಿಗೆ ಅದೇ ಎಣ್ಣೆಯಿಂದ ದೀಪ ಹಚ್ಚುತ್ತಾರೆ. ನವರಾತ್ರಿಯಲ್ಲಿ ಪಲ್ಲಕ್ಕಿ ಉತ್ಸವ, ರಾಮನವಮಿ, ಅಕ್ಷಯ ತೃತೀಯ, ಹನುಮ ಜಯಂತಿಯಂದು ಉತ್ಸವ ಹಮ್ಮಿಕೊಳ್ಳಲಾಗುತ್ತದೆ. ಕಾರ್ತಿಕ ಮಾಸದಲ್ಲಿ ನಿತ್ಯವೂ ಸಂಜೆ ನಡೆಯುವ ದೀಪಾರಾಧನೆ ಕಣ್ಣಿಗೆ ಹಬ್ಬ ನೀಡುತ್ತದೆ.

ಪ್ರತಿಕ್ರಿಯಿಸಿ (+)