ಗುರುವಾರ , ಆಗಸ್ಟ್ 22, 2019
26 °C

ಮುಂಡಗೋಡ-ಯಲ್ಲಾಪುರ ಸಂಚಾರ ಸ್ಥಗಿತ

Published:
Updated:

ಮುಂಡಗೋಡ: ಕಳೆದ ರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಯಲ್ಲಾಪುರ-ಮುಂಡಗೋಡ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು ಸುಮಾರು 50ಕ್ಕೂ ಹೆಚ್ಚು ಎಕರೆ ಭತ್ತದ ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.ನಿರಂತರ ಮಳೆಯಿಂದ ತಾಲ್ಲೂಕಿನ ಹಲವು ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಮಲವಳ್ಳಿ, ಬಡ್ಡಿಗೇರಿ, ಗುಂಜಾವತಿ ಸೇರಿದಂತೆ ಹಲವು ಭಾಗಗಳಲ್ಲಿ ನೀರು ಮನೆಗಳಿಗೆ ನುಗ್ಗಿದ ವರದಿಯಾಗಿದೆ. ತಾಲ್ಲೂಕಿನ ಸಾಲಗಾಂವ ಹಾಗೂ ಚಿಗಳ್ಳಿಯಲ್ಲಿ 5ಮನೆಗಳು ಭಾಗಶಃ ಕುಸಿತ ಕಂಡಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಕಳೆದ 24 ಗಂಟೆಗಳ ಅವಧಿಯಲ್ಲಿ 75ಮಿ.ಮೀ. ನಷ್ಟು ಮಳೆ ದಾಖಲಾಗಿದ್ದು ಗುರುವಾರವೂ ಮುಂದುವರಿದಿದೆ. ಬಡ್ಡಿಗೇರಿ ಸನಿಹದ ಯಲ್ಲಾಪುರ-ಮುಂಡಗೋಡ ರಸ್ತೆಯ ಮೇಲೆ ಮರಬಿದ್ದು ಸಂಚಾರಕ್ಕೆ ವ್ಯತ್ಯಯವಾಗಿತ್ತು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಜೆ.ಸಿ.ಬಿ.ಯಂತ್ರದ ಸಹಾಯದಿಂದ ರಸ್ತೆ ಸಂಚಾರ ಮುಕ್ತಗೊಳಿಸಿದರು.ಅರಣ್ಯ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು ರಸ್ತೆಮೇಲಿರುವ ಸಣ್ಣ ಸಣ್ಣ ಸೇತುವೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಕ್ಯಾಸನಕೇರಿ ಪ್ರಾಥಮಿಕ ಶಾಲೆಯ ಹತ್ತಿರದ ಸೇತುವೆ ಮೇಲಿಂದ 2-3ಅಡಿ ನೀರು ಹರಿಯುತ್ತಿದ್ದು ಇದರಿಂದ ಶಾಲಾ, ಕಾಲೇಜಗಳಿಗೆ ಹೋಗುವ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.ಬಡ್ಡಿಗೇರಿ, ಶಿಡ್ಲಗುಂಡಿ ಸನಿಹ ರಸ್ತೆ ಮೇಲೆ ಮಳೆಯ ನೀರು ಅಪಾರ ಪ್ರಮಾಣದಲ್ಲಿ ಹರಿಯತೊಡಗಿದ್ದರಿಂದ ಯಲ್ಲಾಪುರ-ಮುಂಡಗೋಡ ರಾಜ್ಯ ಹೆದ್ದಾರಿ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಸುಮಾರು 2-3 ಅಡಿಯಷ್ಟು ನೀರು ರಸ್ತೆ ಮೇಲೆ ಹರಿಯುತ್ತಿದೆ.ಶಿಡ್ಲಗುಂಡಿ ಸೇತುವೆ ನಿರ್ಮಾಣದ ಸಂದರ್ಭದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆಯು ಭಾಗಶಃ ನೀರಿನಲ್ಲಿ ಮುಳುಗಿದೆ.

ತಾಲ್ಲೂಕಿನ ಗುಂಜಾವತಿ ಹಾಗೂ ಮೈನಳ್ಳಿ ಭಾಗದಲ್ಲಿ ಸುಮಾರು 50ಎಕರೆಗೂ ಹೆಚ್ಚು ಭತ್ತದ ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು ಗದ್ದೆಯ ನೀರನ್ನು ಹೊರಹಾಕಲು ರೈತರು ಗದ್ದೆಯ ಒಡ್ಡನ್ನು ಒಡೆಯುತ್ತಿರುವ ದೃಶ್ಯ ಕಂಡುಬಂತು.ಸನವಳ್ಳಿ, ಅತ್ತಿವೇರಿ, ಚಿಗಳ್ಳಿ ಜಲಾಶಯ ಸೇರಿದಂತೆ ಇನ್ನುಳಿದ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.

Post Comments (+)