ಮುಂಡರಗಿಯಲ್ಲಿ ನೀರಿಗಾಗಿ ಪರದಾಟ

7

ಮುಂಡರಗಿಯಲ್ಲಿ ನೀರಿಗಾಗಿ ಪರದಾಟ

Published:
Updated:
ಮುಂಡರಗಿಯಲ್ಲಿ ನೀರಿಗಾಗಿ ಪರದಾಟ

ಮುಂಡರಗಿ: ಪಟ್ಟಣವನ್ನು ಒಳಗೊಂಡಂತೆ ತಾಲ್ಲೂಕಿನ ಕೊರ್ಲಹಳ್ಳಿ, ಬೀಡನಾಳ, ಕಲಕೇರಿ, ಮುಷ್ಠಿಕೊಪ್ಪ ಮೊದಲಾದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುತ್ತಿರುವ ತುಂಗಭದ್ರೆಯ ಒಡಲು ಬರಿದಾಗಿರುವುದರಿಂದ ಪಟ್ಟಣ ಹಾಗೂ ತುಂಗಭದ್ರಾ ನದಿ ನೀರು ಪೂರೈಕೆ ಹೊಂದಿರುವ ಗ್ರಾಮಗಳ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ.ಪಟ್ಟಣದ ಅಕ್ಕಪಕ್ಕದ ಕೆಲವು ಖಾಸಗಿ ಜಮೀನುಗಳಲ್ಲಿ ನೀರಾವರಿ ಉದ್ದೇಶಕ್ಕಾಗಿ ಕೊರೆಯಿಸಿದ ಕೊಳವೆ ಭಾವಿಗಳಲ್ಲಿ ಕೆಲವೇ ಕೆಲವು ಸಿಹಿ ನೀರಿನ ಕೊಳವೆ ಬಾವಿಗಳಿದ್ದು, ಕುಡಿಯುವ ನೀರನ್ನು ತರಲು ಜನತೆ ಪಟ್ಟಣದ ಅಕ್ಕಪಕ್ಕದ ಜಮೀನುಗಳಿಗೆ ಅಲೆಯಬೇಕಾಗಿದೆ. ಸಿಹಿ ನೀರಿಗಾಗಿ ಜನತೆ ಪಟ್ಟಣದಿಂದ ಸುಮಾರು ಒಂದು ಕಿಲೋ ಮೀಟರ್ ದೂರವನ್ನು ಕ್ರಮಿಸಬೇಕಾಗಿದ್ದು, ಅವರೆಲ್ಲ ಬೈಕ್, ಸೈಕಲ್ ಹಾಗೂ ದಬ್ಬುವ ಗಾಡಿಗಳನ್ನು ಅವಲಂಬಿಸಿದ್ದಾರೆ.ಪಟ್ಟಣದ ಗದಗ ರಸ್ತೆ ಹಾಗೂ ಕೊಪ್ಪಳ ರಸ್ತೆಗಳಲ್ಲಿ ಮುಂಜಾನೆ ನಸುಕಿನಲ್ಲಿ ಹಾಗೂ ಸಾಯಂಕಾಲ ಬೈಕ್, ಸೈಕಲ್ ಹಾಗೂ ದಬ್ಬುವ ಗಾಡಿಗಳ ಮೂಲಕ ಸರದಿಯಲ್ಲಿ ನಿಂತು ಜನರು ಕುಡಿಯುವ ನೀರು ತರುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬೇಸಿಗೆಯಲ್ಲಿ ನೀರಾವರಿ ಜಮೀನುಗಳಿಗೆ ಕೇವಲ ಆರು ತಾಸು ಮಾತ್ರ ತ್ರಿಫೇಸ್ ವಿದ್ಯುತ್ ಪೂರೈಕೆಯಾಗುತ್ತಿರುವುದರಿಂದ ಪಂಪ್‌ಸೆಟ್ ಚಾಲು ಇದ್ದ ಸಮಯವನ್ನು ನೋಡಿಕೊಂಡೆ ಜನರು ಕುಡಿಯುವ ನೀರು ತರಲು ಹೋಗಬೇಕಾಗಿದೆ.ಕುಡಿಯುವ ನೀರು ಪೂರೈಕೆಗಾಗಿ ಹತ್ತು ದಿನಗಳ ಹಿಂದೆಯೇ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಒಂದೂವರೆ ಟಿಎಂಸಿ ನೀರನ್ನು ಬಿಟ್ಟಿದ್ದು ನದಿಯ ಉದ್ದಕ್ಕೂ ಇರುವ ಮರಳು (ಉಸುಕು) ಸಂಗ್ರಹ ಹಾಗೂ ಸಾಗಣೆದಾರರಿಂದ ಅದು ಹರಿದು ಬರಲು ವಿಳಂಬವಾಗಿದೆ. ಇನ್ನು ಎರಡು-ಮೂರು ದಿನಗಳಲ್ಲಿ ನದಿಯ ನೀರು ಕೊರ್ಲಹಳ್ಳಿಯನ್ನು ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.ಬೇಸಿಗೆಯಲ್ಲಿ ಸಾರ್ವಜನಿಕರಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಾರದೆಂದು ಪುರಸಭೆ ಪಟ್ಟಣದಲ್ಲಿ ಲಭ್ಯವಿರುವ ಕೊಳವೆ ಬಾವಿಗಳನ್ನೆಲ್ಲ ಬಳಸಿಕೊಂಡು ಎರಡು ದಿನಗಳಿಗೊಮ್ಮೆ ನೀರು ಪೂರೈಸುತ್ತಿದ್ದಾರೆ. ಪುರಸಭೆಯ ಆಧೀನದಲ್ಲಿರುವ ಕೊಳವೆ ಬಾವಿಗಳಲ್ಲಿ ಲಭ್ಯವಿರುವ ನೀರೆಲ್ಲ ಸವುಳು (ಉಪ್ಪು) ಆಗಿರುವುದರಿಂದ ಅದು ಕುಡಿಯಲು ಬಾರದಂತಾಗಿದೆ. ಅನ್ಯ ಮಾರ್ಗ ಕಾಣದ ಕೆಲವು ಜನರು ಸವುಳು ನೀರನ್ನೇ ಕಣ್ಣು ಮುಚ್ಚಿಕೊಂಡು ಕುಡಿಯತೊಡಗಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry