ಶುಕ್ರವಾರ, ನವೆಂಬರ್ 15, 2019
21 °C

ಮುಂಡರಗಿ ಉತ್ಸವಕ್ಕೆ ಸಿದ್ಧತೆ

Published:
Updated:

ಮುಂಡರಗಿ: `ಜೂನ್10 ಹಾಗೂ 11ರಂದು ಜರುಗಲಿರುವ ಪ್ರಥಮ `ಮುಂಡರಗಿ ಉತ್ಸವ~ದ ಸಿದ್ಧತೆಗಳೆಲ್ಲ ಪೂರ್ಣಗೊಂಡಿದ್ದು ಜಾತ್ಯತೀತವಾಗಿ, ಪಕ್ಷಾತೀತವಾಗಿ ತಾಲ್ಲೂಕಿನ ಎಲ್ಲ ವರ್ಗದ ಜನತೆ ಉತ್ಸವದಲ್ಲಿ ಪಾಲ್ಗೊಳ್ಳ ಲಿದ್ದಾರೆ~ ಎಂದು ಮುಂಡರಗಿ ಉತ್ಸವದ ಅಧ್ಯಕ್ಷ ವೈ.ಎನ್.ಗೌಡರ ತಿಳಿಸಿದರು.ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾಲ್ಲೂಕಿನ ಎಲ್ಲ ಜನತೆ ಒಂದಾಗಿ `ನಭೂತೋ ನಃ ಭವಿಷ್ಯತಿ~ ಎಂಬಂತೆ ಉತ್ಸವ ಆಚರಿಸಲು ಉತ್ಸುಕರಾಗಿದ್ದು ಇತಿಹಾಸದ ಪುಟಗಳಲ್ಲಿ ಇದೊಂದು ಐತಿಹಾಸಿಕ ಸಮಾರಂಭವಾಗಲಿದೆ ಎಂದು ತಿಳಿಸಿದರು. `ಮುಂಡರಗಿ ಉತ್ಸವ~ದ ನಿಮಿತ್ತ ಇದೇ 10ರಂದು ಮುಂಜಾನೆ ಕೋಟೆ ಆಂಜನೇಯನ ದೇವಸ್ಥಾನದಿಂದ 501ಪೂರ್ಣಕುಂಭದೊಂದಿಗೆ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗಿದ್ದು, ಡೊಳ್ಳು, ಜಾನಪದ, ಕಂಸಾಳೆ ಮುಂತಾದ ರಾಜ್ಯ ಮಟ್ಟದ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದು ಅವರು ತಿಳಿಸಿದರು.ಸ್ಥಳೀಯ ಡಾ.ಅನ್ನದಾನೀಶ್ವರ ಸ್ವಾಮೀಜಿ, ಗದುಗಿನ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಹಾಗೂ ಎ.ಪಿ.ಪಾಟೀಲ ಸಾನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಮಾಜಿ ಸಚಿವ ಎಚ್.ಕೆ. ಪಾಟೀಲ, ಶಾಸಕರಾದ ರಾಮಣ್ಣ ಲಮಾಣಿ, ಬಸವರಾಜ ಹೊರಟ್ಟಿ ಮೊದಲಾದವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಎರಡು ದಿನ ಪರಿಸರ ಗೋಷ್ಠಿ, ಕೃಷಿ ಗೋಷ್ಠಿ, ಸಾಂಸ್ಕೃತಿಕ ಗೋಷ್ಠಿ, ಮಹಿಳಾ ಗೋಷ್ಠಿ, ಸ್ವಾತಂತ್ರ ಸೇನಾನಿಗಳ ಗೋಷ್ಠಿ ಗಳನ್ನು ಏರ್ಪಡಿಸಲಾಗಿದ್ದು  ನಾಡಿನ ಹಲವಾರು ತಜ್ಞರು ವಿವಿಧ ವಿಷಯ ಗಳನ್ನು ಕುರಿತು ಉಪನ್ಯಾಸ, ಚಿಂತನ, ಮಂಥನ ನಡೆಸಲಿದ್ದಾರೆ. ಉತ್ಸವವು ಮುಂದಿನ ಪೀಳಿಗೆಗೆ ನೆನಪುಳಿಯುವ ಉದ್ದೇಶದಿಂದ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತದೆ ಎಂದು  ತಿಳಿಸಿ ದರು.  ಶಿರಹಟ್ಟಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಎಪಿಎಂಸಿ ಸದಸ್ಯ ರವಿ ಉಪ್ಪಿನ ಬೆಟಗೇರಿ, ವಿ.ಎಲ್.ನಾಡಗೌಡ, ಚಂದ್ರು ಲಮಾಣಿ, ಕೊಟ್ರೇಶ ಅಂಗಡಿ, ಮಂಜುನಾಥ ಇಟಗಿ, ಎ.ಕೆ.ಬೆಲ್ಲದ, ರಾಮಕೃಷ್ಣ ದೊಡ್ಡಮನಿ, ನಬೀಸಾಬ್ ಕೆಲೂರ, ಶಿವನಗೌಡ್ರ ಗೌಡ್ರ, ಕಾಂತರಾಜ ಹಿರೇಮಠ, ರಾಮಚಂದ್ರ ಗಾರವಾಡ, ಬಸವರಾಜ ನವಲಗುಂದ, ದೇವಪ್ಪ ಇಟಗಿ ಉಪಸ್ಥಿತರಿದ್ದರು.   ಶಾಲೆಗಳಿಗೆ ರಜೆ: ಮುಂಡರಗಿ ಉತ್ಸವದಲ್ಲಿ ಭಾಗವಹಿಸಲು ಅನುಕೂಲವಾಗಲಿ ಎನ್ನುವ ಕಾರಣ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇದೇ 10 , 11ರಂದು ರಜೆ ಘೋಷಿಸಲಾಗಿದೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಲ್. ಬಾರಾಟಕ್ಕೆ `ಪ್ರಜಾವಾಣಿ~ಗೆ ತಿಳಿಸಿದರು. ಜೂನ್18ರ ಶನಿವಾರ ಪೂರ್ಣಾವಧಿ ಶಾಲೆ ನಡೆಸಲು ಎಲ್ಲ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)