ಸೋಮವಾರ, ಮೇ 17, 2021
25 °C

ಮುಂಡರಗಿ: ಬಿರುಸುಗೊಂಡು ಕೃಷಿ ಚಟುವಟಿಕೆ

ಪ್ರಜಾವಾಣಿ ವಾರ್ತೆ / ಕಾಶೀನಾಥ ಬಿಳಿಮಗ್ಗದ Updated:

ಅಕ್ಷರ ಗಾತ್ರ : | |

ಮುಂಡರಗಿ: ಕಳೆದ ಎರಡು ಮೂರು ದಿನಗಳಿಂದ ಪಟ್ಟಣವು ಸೇರಿದಂತೆ ತಾಲ್ಲೂಕಿನ ಕೊರ್ಲಹಳ್ಳಿ, ಗಂಗಾಪೂರ, ಶೀರನಹಳ್ಳಿ, ಹಮ್ಮಿಗಿ, ಬಿದರಳ್ಳಿ, ಮುಂಡವಾಡ ಮೊದಲಾದ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಬಿರುಸಿನಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿೊಂಡಿದ್ದಾರೆ. ಕಳೆದ ತಿಂಗಳು ಚುನಾವಣೆ ಭರಾಟೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಕೃಷಿ ಚಟುವಟಿಕೆಗಳಿಗೆ ಈಗ ಮರು ಜೀವ ಬಂದಿದ್ದು, ರೈತರೆಲ್ಲ ಬಿತ್ತನೆಗೆ ತಯಾರಿ ನಡೆಸಿದ್ದಾರೆ.ಹೈಬ್ರಿಡ್ ಜೋಳ, ಹೆಸರು ಹಾಗೂ ತೊಗರಿ ಬಿತ್ತನೆಗೆ ಇದು ಸಕಾಲವಾಗಿದ್ದು, ತಾಲ್ಲೂಕು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳು ಭರದಿಂದ ಮಾರಾಟವಾಗುತ್ತಲಿವೆ. ಇನ್ನು ಹದಿನೈದು ದಿನಗಳು ಕಳೆದರೆ ಶೇಂಗಾ ಬಿತ್ತನೆಗೆ ಉತ್ತಮ ದಿನಗಳು ದೊರೆಯಲ್ಲಿದ್ದು, ರೈತರು ಈಗಾಗಲೇ ಶೇಂಗಾ ಕಾಯಿಗಳನ್ನು ಒಡೆಯಿಸಿ ಬೀಜಗಳನ್ನು ಬೇರ್ಪಡಿಸುವಲ್ಲಿ ತಲ್ಲಿನರಾಗಿದ್ದಾರೆ.ಮುಂಡರಗಿ ಪಟ್ಟಣವು ಸೇರಿದಂತೆ ತಾಲ್ಲೂಕಿನ ಶೀರನಹಳ್ಳಿ, ಬಾಗೇವಾಡಿ ಹಾಗೂ ಮತ್ತಿತರ ಗ್ರಾಮಗಳಲ್ಲಿರುವ ಶೇಂಗಾ ಒಡೆಯುವ ಯಂತ್ರಗಳಿಗೆ ಈಗ ಭಾರಿ ಬೇಡಿಕೆ ಉಂಟಾಗಿದ್ದು, ಒಂದು ಚೀಲ ಶೇಂಗಾ ಕಾಯಿಗಳ ಬೀಜಗಳನ್ನು ಬೇರ್ಪಡಿಸಲು ರೈತರು 30 ರೂಪಾಯಿಯಿಂದ 70ರೂಪಾಯಿ ನೀಡಬೇಕಾಗಿದೆ. ಶೇಂಗಾ ಬೀಜ ಬೇರ್ಪಡಿಸಲು ಅಷ್ಟೊಂದು ಹಣ ನೀಡಲು ತಯಾರಿಲ್ಲದ ಬಡ ರೈತರು ತಮ್ಮ ಮನೆಯಲ್ಲಿಯೇ ಕೈಯಿಂದ ಶೇಂಗಾ ಒಡೆದು ಬೀಜಗಳನ್ನು ಬೇರ್ಪಡಿಸುತ್ತಿದ್ದಾರೆ.ಕಳೆದ ವಾರ ಸುರಿದ ಮಳೆಯಿಂದ ಭೂಮಿ ಹಸಿಯಾಗಿದ್ದು, ರೈತರು ರಂಟೆ-ಕುಂಟೆ ಹೊಡೆದು ಬಿತ್ತನೆಗೆ ಜಮೀನನ್ನು ಸಿದ್ಧಮಾಡಿಟ್ಟುಕೊಂಡಿದ್ದಾರೆ. ಈಗಾಗಲೇ ತಾಲ್ಲೂಕಿನ ಕೆಲವು ರೈತರು ಬಿಟಿ ಹತ್ತಿ, ಹೆಸರು, ತೊಗರಿ ಬಿತ್ತಿದ್ದು, ಉತ್ತಮ ಮಳೆ ಸುರಿದ ತಕ್ಷಣ ಶೇಂಗಾ ಬಿತ್ತಲಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ ರೈತರಿಗೆ ಹೈಬ್ರಿಡ್ ಜೋಳ, ತೊಗರಿ ಹಾಗೂ ಹೆಸರಿನ ಬಿತ್ತನೆ ಬೀಜಗಳನ್ನು ಪೂರೈಸಲಾಗುತ್ತಿದ್ದು, ಪ್ರತಿ ಕೆಜಿ ಹೈಬ್ರಿಡ್ ಜೋಳಕ್ಕೆ 25ರೂಪಾಯಿ, ಪ್ರತಿ ಕೆಜಿ ಹೆಸರು ಬೀಜಕ್ಕೆ 20ರೂಪಾಯಿ ಹಾಗೂ ಪ್ರತಿ ಕೆಜಿ ತೊಗರಿ ಬೀಜಕ್ಕೆ 20 ರೂಪಾಯಿ ಸಹಾಯ ಧನ ನೀಡಲಾಗುತ್ತಿದೆ. ಮಳೆಯಾದಂತೆ ತಾಲ್ಲೂಕಿನ ರೈತರಿಗೆ ಅಗತ್ಯವಿರುವ ಅಲಸಂದಿ, ಶೇಂಗಾ, ಸಜ್ಜಿ, ಸೂರ್ಯಕಾಂತಿ, ಮೆಕ್ಕೆಜೋಳ ಮೊದಲಾದ ಬಿತ್ತನೆ ಬೀಜಗಳನ್ನು ಸರಕಾರದ ನಿಯಮಾನುಸಾರ ಪೂರೈಸಲಾಗುವುದು ಎಂದು ರೈತ ಸಂಪರ್ಕ ಕೇಂದ್ರದ ಹಿರಿಯ ಅಧಿಕಾರಿ ಕುದುರಿಮೋತಿ `ಪ್ರಜಾವಾಣಿ'ಗೆ ತಿಳಿಸಿದರು.ಸಹಾಯ ಧನದ ಹೆಚ್ಚಳಕ್ಕೆ ಮನವಿ: ಮುಂಡರಗಿ ತಾಲ್ಲೂಕು ಕಳೆದ ಹಲವು ವರ್ಷಗಳಿಂದ ತೀವ್ರ ಬರಗಾಲಕ್ಕೆ ಈಡಾಗುತ್ತಿದ್ದು, ರೈತರಿಗೆ ಪೂರೈಸಲಾಗುತ್ತಿರುವ ಬಿತ್ತನೆ ಬೀಜಗಳಿಗೆ ನೀಡಲಾಗುತ್ತಿರುವ ಸಹಾಯಧನದ ಪ್ರಮಾಣ ಹೆಚ್ಚಿಸಬೇಕು. ಬರಗಾಲ ಪೀಡಿತ ಪ್ರದೇಶಗಳಲ್ಲಿ ಪೂರೈಸುವ ಬಿತ್ತನೆ ಬೀಜಗಳಿಗೆ ಶೇ.75ರಷ್ಟು ಸಹಾಯ ಧನ ನೀಡಬೇಕು. ರೈತರು ಶೇ.25ರಷ್ಟು ಹಣ ನೀಡಿ ಬಿತ್ತನೆ ಬೀಜ ಖರೀದಿಸುವಂತಾಗಬೇಕು ಎಂದು ದೇವಪ್ಪ ಇಟಗಿ ಒತ್ತಾಯಿಸಿದ್ದಾರೆ.

                                                                               

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.