ಸೋಮವಾರ, ಜೂನ್ 21, 2021
21 °C
ಅಭಿಪ್ರಾಯ ಸಂಗ್ರಹಿಸಲು ಜಿಲ್ಲಾ ಪ್ರವಾಸ ಆರಂಭಿಸಿದ ಮಹಿಮ

ಮುಂದಿನ ನಡೆ ವಾರದಲ್ಲಿ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ‘ಕೈ’ ತಪ್ಪಿದ್ದರಿಂದ ಬೇಸರಗೊಂಡಿರುವ ಮಾಜಿ ಶಾಸಕ ಮಹಿಮ ಜೆ.ಪಟೇಲ್‌, ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳಲು ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿದ್ದಾರೆ.ಚನ್ನಗಿರಿ ತಾಲ್ಲೂಕಿನ ಕಾರಿಗನೂರಿನಿಂದ ಪ್ರವಾಸ ಆರಂಭಿಸಿದ ಅವರು, ‘ಕಾರ್ಯಕರ್ತರು, ಬೆಂಬಲಿಗರೊಂದಿಗೆ ಚರ್ಚಿಸಿ, ಮುಂದಿನ ರಾಜಕೀಯ ನಡೆ ಬಗ್ಗೆ ವಾರದೊಳಗೆ ತೀರ್ಮಾನಕ್ಕೆ ಬರುತ್ತೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.‘ಪಕ್ಷದಿಂದ ಟಿಕೆಟ್ ನಿರೀಕ್ಷಿಸಿದ್ದೆ. ಆದರೆ, ಪಕ್ಷ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರನ್ನು ಆಯ್ಕೆ ಮಾಡಿದೆ. ಮುಂದೇನು ಮಾಡಬೇಕೆಂದು ಯೋಚಿಸುತ್ತಿದ್ದೇನೆ. ಕೆಲವರು ಪಕ್ಷ ಬಿಡಿ ಎನ್ನುತ್ತಾರೆ,  ಕೆಲವರು  ಜೆಡಿಎಸ್‌ ಸೇರಿ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಜೆಡಿಯು ಸೇರುವುದು ಒಳ್ಳೆಯದು ಎನ್ನುತ್ತಾರೆ.ಸ್ವತಂತ್ರ ಅಭ್ಯರ್ಥಿಯಾಗಿ ನಿಂತರೆ ಆತ್ಮಸಾಕ್ಷಿಗೆ ವಿರುದ್ಧವಾಗಿ ಚುನಾವಣೆಯಲ್ಲಿ ಹಣ ಖರ್ಚು ಮಾಡಬೇಕಾಗುತ್ತದೆಯಲ್ಲಾ ಎಂಬ ವಿಷವರ್ತುಲ ದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೆಯೇ ಎಂಬ ಭಯವಿದೆ. ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಮನಸ್ಸಿರುವ ನನಗೆ ಹಣ ಖರ್ಚು ಮಾಡುವ ಮನಸ್ಸಿಲ್ಲ. ಹೀಗಾಗಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ನಂತರ ಎಲ್ಲರಿಗೂ ಒಳ್ಳೆಯದಾಗುವಂಥ ನಿರ್ಧಾರ ಮಾಡುತ್ತೇನೆ’ ಎಂದು ಹೇಳಿದರು.‘ದಾವಣಗೆರೆ ಉತ್ತರ ವಲಯದಿಂದ ಆಯ್ಕೆಯಾಗಿರುವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧಿಸಿದ್ದರೆ ಚೆನ್ನಾಗಿರುತ್ತಿತ್ತು. ಪಕ್ಷ ಗೆದ್ದರೆ ಉತ್ತರ ಕ್ಷೇತ್ರದಲ್ಲಿಯಾದರೂ ಸ್ಪರ್ಧೆಗೆ ಅವಕಾಶವಿರುತ್ತಿತ್ತು. ನಿಮಗೆ ಸಮಾಧಾನಕರ ಬಹುಮಾನ ನೀಡಿದಂತೆ ಆಗುತ್ತಿತ್ತು’ ಎಂಬ ಅಭಿಪ್ರಾಯವನ್ನೂ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ ಎಂದು ಮಹಿಮ ತಿಳಿಸಿದರು.ಹಲವರ ಭೇಟಿ: ಈ ನಡುವೆ ಟಿಕೆಟ್‌

ಸಿಗದೇ ಬೇಸರದಲ್ಲಿರುವ ಮಹಿಮ ಪಟೇಲ್‌ ಅವರನ್ನು ತಮ್ಮ ಪಕ್ಷಗಳಿಗೆ ಕರೆದುಕೊಳ್ಳಲು ಹಲವರು ಗಾಳ ಹಾಕಲು ಆರಂಭಿಸಿದ್ದಾರೆ. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ದೂರವಾಣಿಯಲ್ಲಿ ಮಾತನಾಡಿ, ಮುಕ್ತ ಆಹ್ವಾನ ನೀಡಿದ್ದಾರೆ.ಜಿಲ್ಲಾ ಘಟಕದ ಅಧ್ಯಕ್ಷ ಟಿ.ದಾಸಕರಿಯಪ್ಪ ಅವರೂ ಮಾತನಾಡಿ ಹೋಗಿದ್ದಾರೆ. ಜೆಡಿಯು ಅಧ್ಯಕ್ಷ ಡಾ.ಎಂ.ಪಿ.ನಾಡಗೌಡರು ಸಹ ಮಾತುಕತೆ ನಡೆಸಿದ್ದಾರೆ. ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಅಬ್ದುಲ್‌ ಜಬ್ಬಾರ್‌ ಸಹ ಬಂದು ಮಾತನಾಡಿದರು ಎಂದು ತಿಳಿಸಿದರು.ತಲೆನೋವು: ಮಹಿಮ ಪಟೇಲ್‌ ಬೇಸರಗೊಂಡಿರುವುದು ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಪಕ್ಷದ ವರಿಷ್ಠರಿಗೆ ‘ತಲೆನೋವಾಗಿ’ ಪರಿಣಮಿಸಿದೆ.ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಟಿಕೆಟ್‌ ನೀಡುವುದಾಗಿ  ಖಾತ್ರಿಪಡಿಸಿದರೆ, ಪಕ್ಷದ ಗೆಲುವಿಗೆ ಬೆಂಬಲ ನೀಡಲು ಅಡ್ಡಿ ಇಲ್ಲ ಎಂಬ ನಿರ್ಧಾರಕ್ಕೆ ಮಹಿಮ ಬಂದಿದ್ದಾರೆ ಎಂದು ಬೆಂಬಲಿಗರು ತಿಳಿಸುತ್ತಾರೆ. ಈ ನಡುವೆ, ಶಿವಮೊಗ್ಗದಿಂದ ಮಹಿಮಗೆ ಟಿಕೆಟ್‌ ನೀಡಲಾಗುವುದು ಎಂಬ ಮಾತುಗಳು ಸಹ ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.