ಮಂಗಳವಾರ, ಮೇ 18, 2021
24 °C

ಮುಂದಿನ ವರ್ಷದಿಂದ ಕೌಶಲವೃದ್ಧಿ ಶಿಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರೌಢಶಾಲೆ, ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳ ಅಭಿರುಚಿಗೆ ಅನುಗುಣವಾಗಿ ಕೌಶಲವನ್ನು ವೃದ್ಧಿಸಲು ರೂಪಿಸಿರುವ ಕೇಂದ್ರ ಸರ್ಕಾರದ ರಾಷ್ಟ್ರೀಯ ವೃತ್ತಿಶಿಕ್ಷಣ ನಿರ್ವಹಣಾ ಚೌಕಟ್ಟು ಯೋಜನೆ 2012-13ನೇ ಸಾಲಿನಿಂದ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಇಲ್ಲಿ ಹೇಳಿದರು.ಈ ಯೋಜನೆಯನ್ನು ರಾಜ್ಯದಲ್ಲಿ ಯಾವ ರೀತಿ ಜಾರಿ ಮಾಡಬೇಕು ಎಂದು ಚರ್ಚಿಸುವ ಸಲುವಾಗಿ ಅಕ್ಟೋಬರ್ ಒಂದರಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ರಾಜ್ಯ ಕೌಶಲ ಆಯೋಗದ ಮುಖ್ಯಸ್ಥ ವಿಷ್ಣುಕಾಂತ ಚಟಪಲ್ಲಿ ನೇತೃತ್ವದ ಸಮಿತಿ ಈ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಿದೆ. ಕೈಗಾರಿಕಾ ಸಂಸ್ಥೆಗಳು, ವಿವಿಧ ಇಲಾಖೆಗಳ ಅಭಿಪ್ರಾಯಗಳನ್ನು ಪಡೆಯಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.ಕೇಂದ್ರದ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರ ಕಾಳಜಿಯಿಂದಾಗಿ ಇದು ಜಾರಿಗೆ ಬರುತ್ತಿದೆ. ಹತ್ತು ರಾಜ್ಯಗಳ ಶಿಕ್ಷಣ ಸಚಿವರ ತಂಡ ಕೇಂದ್ರಕ್ಕೆ ಕರಡು ಸಿದ್ಧಪಡಿಸಿಕೊಟ್ಟಿದ್ದು, ನವೆಂಬರ್ ಒಂದರಿಂದ ಪ್ರಾಯೋಗಿಕವಾಗಿ ಹರಿಯಾಣದಲ್ಲಿ ಈ ಯೋಜನೆ ಜಾರಿಗೆ ಬರುತ್ತಿದೆ ಎಂದರು.ಐಟಿಐ, ಪಾಲಿಟೆಕ್ನಿಕ್‌ಗಳಲ್ಲಿ ಸದ್ಯ ಕೆಲವೇ ಮಂದಿಗೆ ಮಾತ್ರ ತರಬೇತಿ ಸಿಗುತ್ತಿದೆ. ಈಗಿನ ಅಗತ್ಯಗಳಿಗೆ ಅನುಗುಣವಾಗಿ ಇದನ್ನು ವಿಸ್ತರಿಸುವ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ. 9ನೇ ತರಗತಿಯಿಂದಲೇ ಶುರುವಾಗಲಿದ್ದು, ಒಟ್ಟು ಐದು ಹಂತಗಳಲ್ಲಿ ತರಬೇತಿ ನೀಡಲಾಗುತ್ತದೆ. ಪ್ರೌಢಶಾಲಾ ಹಂತದಲ್ಲಿ ವಿಷಯಗಳನ್ನು ತಿಳಿಸಿಕೊಡಲಾಗುತ್ತದೆ. ಪಿಯು ಹಂತದಲ್ಲಿ ತರಬೇತಿ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ತಾತ್ವಿಕವಾಗಿ ಒಪ್ಪಿದೆ. ಇದರ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ನೀಡುವ ಹಣಕಾಸಿನ ನೆರವು ಎಷ್ಟು ಎಂಬುದು ಮೊದಲು ಸ್ಪಷ್ಟವಾಗಬೇಕು. ರಾಜ್ಯ ಸರ್ಕಾರಕ್ಕೆ ಇತಿಮಿತಿಗಳು ಇರುವುದರಿಂದ ಹೊರೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ ಎಂಬುದಾಗಿ ಅವರು ಉತ್ತರಿಸಿದರು.`ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ. ಹಲಗೇರಿಯಲ್ಲಿ ಮತಯಾಚಿಸುವ ಸಂದರ್ಭದಲ್ಲಿ ಸಾರ್ವಜನಿಕರು, ಶಿಕ್ಷಕರು ಪಾಲ್ಗೊಂಡಿದ್ದರು. ಶಿಕ್ಷಕರ ಬಳಿ ಮತ ಯಾಚಿಸಬಾರದು ಎಂಬ ನಿಯಮ ಇಲ್ಲ. ಪ್ರಚಾರ ಮಾಡುವ ಸ್ವಾತಂತ್ರ್ಯವಿದೆ. ಆ ಪ್ರಕಾರ ನಡೆದುಕೊಂಡಿದ್ದೇನೆ~ ಎಂದು ಸ್ಪಷ್ಟಪಡಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.