ಮುಂದಿನ ವರ್ಷದಿಂದ ವಿದೇಶಗಳಲ್ಲೂ ವಚನಸುಧೆ

7

ಮುಂದಿನ ವರ್ಷದಿಂದ ವಿದೇಶಗಳಲ್ಲೂ ವಚನಸುಧೆ

Published:
Updated:

ಬೀದರ್: ಇಂಗ್ಲೆಂಡ್‌ನ ಮ್ಯಾಂಚಸ್ಟೆರ್ ವಿಶ್ವವಿದ್ಯಾಲಯವು ಬರುವ ವರ್ಷ ಬಸವ ಸ್ಪಡಿ ಸೆಂಟರ್ ಆರಂಭಿಸಲಿದ್ದು, ವಿದೇಶಗಳಲ್ಲಿಯು ಬಸವಣ್ಣನವರ ವಚನಗಳನ್ನು ಕೆಳಬಹುದಾಗಿದೆ ಎಂದು ಅಥಣಿಯ ವಿಮೋಚನಾ ಸಂಘದ ಅಧ್ಯಕ್ಷ ಬಿ.ಎಲ್. ಪಾಟೀಲ್ ಹೇಳಿದರು.ನಗರದ ಹೊರವಲಯದ ಪಾಪನಾಶ ದೇವಸ್ಥಾನದ ಹಿಂದುಗಡೆ ಇರುವ ಬಸವಗಿರಿಯಲ್ಲಿ ವಚನ ವಿಜಯೋತ್ಸವ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಕಲ್ಯಾಣ ಕಾಂತ್ರಿ ಗೋಷ್ಠಿಯಲ್ಲಿ ಮಾತನಾಡಿದರು.ಬಸವಣ್ಣನವರ ವಚನಗಳನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ 1990ರಲ್ಲಿ ಇಂಗ್ಲೆಂಡ್‌ನಲ್ಲಿ ಅಂತರರಾಷ್ಟ್ರೀಯ ಬಸವ ಕೇಂದ್ರ ಸ್ಥಾಪಿಸಲಾಗಿದೆ. ಇಂಗ್ಲೆಂಡ್‌ನಲ್ಲಿಯೇ ವಾಸಿಸುವ ಬೆಂಗಳೂರಿನ ನಿವಾಸಿಯೊಬ್ಬರಿಗೆ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಅವರು ವಿಶ್ವವಿದ್ಯಾಲಯದೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದರಿಂದ ಬರುವ ವರ್ಷದಿಂದ ಬಸವ ಸ್ಟಡಿ ಸೆಂಟರ್ ಆರಂಭವಾಗಲಿದೆ ಎಂದು ತಿಳಿಸಿದರು.ವಚನ ಸಾಹಿತ್ಯವನ್ನು ಎಲ್ಲ ಭಾಷೆಗಳಿಗೆ ಅನುವಾದ ಮಾಡುವ ಅಗತ್ಯ ಇದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಾಬು ವಾಲಿ ಅಭಿಪ್ರಾಯಪಟ್ಟರು.ವಚನ ಸಾಹಿತ್ಯ ಬೇರೆ ಬೇರೆ ಭಾಷೆಗಳಿಗೆ ಅನುವಾದ ಮಾಡಿದ್ದಲ್ಲಿ ಮಾತ್ರ ಶರಣರ ಅನುಭಾಮೃತದ ಲಾಭ ಎಲ್ಲರು ಪಡೆಯಲು ಸಾಧ್ಯ ಎಂದು ಹೇಳಿದರು.ವಚನ ಸಾಹಿತ್ಯ ಸಮಾಜದ ಸ್ವತ್ತು. ಅದರ ಮೇಲೆ ಎಲ್ಲರ ಹಕ್ಕು ಅಷ್ಟೇ ಪ್ರಮಾಣದ್ದು. ಈ ಸ್ವತ್ತನ್ನು ಸವಿಯಲು ಜಾತಿ, ಮತ ಪಂಥದ ನಿರ್ಬಂಧನೆಯಿಲ್ಲ ಎಂದು ತಿಳಿಸಿದರು.ಜೀವನಕ್ಕೆ ಏನೇನು ಬೇಕೋ ಅದೆಲ್ಲವು ವಚನಗಳಲ್ಲಿ ಇವೆ. ಕಾಯಕ ತತ್ವವಿದೆ, ಅರಿವಿನ ಬೆಳಕಿದೆ, ಸಾಮಾಜಿಕ ಬದುಕಿನ ತಳಹದಿಯ ತತ್ವಗಳು ಅದರಲ್ಲಿ ಅಡಗಿವೆ ಎಂದು ಹೇಳಿದರು. ನಡೆ, ನುಡಿ ಒಂದಾಗಿ ಬಾಳಿರುವ ಶರಣರ ವಚನಗಳು ಎಲ್ಲರಿಗೂ ಆದರ್ಶವಾಗಬೇಕು ಎಂದು ಸಿಂಧನೂರಿನ ಸಾಹಿತಿ ಡಾ. ಮಧುಮತಿ ದೇಶಪಾಂಡೆ ಅಭಿಪ್ರಾಯಪಟ್ಟರು.ಬದುಕು ಸುಂದರವಾಗಿ ಹೇಗೆ ಕಟ್ಟಿಕೊಳ್ಳಬೇಕೆಂದರೆ ಶರಣ ವಚನದಿಂದ ಕಲಿಯಬೇಕು. ಮಹಿಳೆಯರಿಗೆ ಧ್ವನಿ ಕೊಟ್ಟಿದ್ದು ಬಸವಣ್ಣನವರು. ಹೆಣ್ಣು ಸಹ ಪುರುಷನಿಗೆ ಮಿಗಿಲಾಗಿ ಸಾಧನೆ ಮಾಡಿ ವಿಶ್ವಕ್ಕೆ ತೋರಿಸಬಹುದು ಎಂದು ತೋರಿಸಿಕೊಟ್ಟವರು ಬಸವಣ್ಣನವರು ಎಂದು ಹೇಳಿದರು. ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನ್ನಿಧಿ ವಹಿಸಿದ್ದರು. ಡಾ. ಗಂಗಾಂಬಿಕೆ ಅಕ್ಕ ನೇತತ್ವ ವಹಿಸಿದ್ದರು. ಪ್ರೊ. ಸಿದ್ದಣ್ಣ ಲಂಗೋಟಿ ಅಧ್ಯಕ್ಷತೆ ವಹಿಸಿದ್ದರು.ಗುಲ್ಬರ್ಗದ ವಾಣಿಜ್ಯ ತೆರಿಗೆ ಉಪ ಆಯುಕ್ತ ಪದ್ಮಾಕರ ಕುಲಕರ್ಣಿ, ಬಿ.ಜಿ. ಶೆಟಕಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ನೀಲಮ್ಮ ರೊಗನ್, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ್, ಪ್ರಮುಖರಾದ ಕಾಶಪ್ಪ ಧನ್ನೂರು, ಮತ್ಯುಂಜಯ ಸಿ. ಮುದ್ದಿ, ಬಿ.ಎಂ. ಅಮರವಾಡಿ, ಚಂದ್ರಕಾಂತ ನಿರ್ಮಳೆ, ಮಂಜುನಾಥ ಬಂಡಿ ಉಪಸ್ಥಿತರಿದ್ದರು. ಸಿಂಧನೂರಿನ ಡಾ. ಎಸ್.ಎಚ್.ಎ. ಖಾದ್ರಿ ಅವರು ತತ್ತ್ವಪದ ನಡೆಸಿಕೊಟ್ಟರು. ಸೋನಾಕ್ಷಿ ಪಾಟೀಲ್ ವಚನ ಗಾಯನ ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry