ಶನಿವಾರ, ಜುಲೈ 24, 2021
28 °C

ಮುಂದಿನ ವರ್ಷ ವಿಮಾನ ನಿಲ್ದಾಣ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಹುನಿರೀಕ್ಷಿತ ಗುಲ್ಬರ್ಗ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದ್ದು, ಈ ತಿಂಗಳ ಅಂತ್ಯದ ಒಳಗಾಗಿ ವಿಮಾನದ ಪ್ರಾಯೋಗಿಕ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು. 2012ರ ಜೂನ್ ವೇಳೆಗೆ ವಿಮಾನ ನಿಲ್ದಾಣ ವಾಣಿಜ್ಯ ಬಳಕೆಗೆ ಸಿದ್ಧವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ತಿಳಿಸಿದರು.ನಗರದ ಹೊರವಲಯದ ಶ್ರೀನಿವಾಸ ಸರಡಗಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಮಾನಯಾನ ಸೌಲಭ್ಯ ಕಲ್ಪಿಸುವ ಸಲುವಾಗಿ ಗುಲ್ಬರ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದ್ದು, ಇದೀಗ ಕಾಮಗಾರಿ ತ್ವರಿತವಾಗಿ ನಡೆಯುತ್ತಿದ್ದು, ಹಲವು ದಶಕಗಳ ಕನಸು ನನಸಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.“ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿ ಒಂದು ತಿಂಗಳಲ್ಲೇ ನಿರೀಕ್ಷೆಗೂ ಮೀರಿದ ಪ್ರಗತಿಯಾಗಿದೆ. ಈ ತಿಂಗಳ ಅಂತ್ಯದ ಒಳಗಾಗಿ ಗುಲ್ಬರ್ಗ ಏರ್‌ಸ್ಟ್ರಿಪ್‌ನಲ್ಲಿ ವಿಶೇಷ ವಿಮಾನದಲ್ಲಿ ಇಳಿಯುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಕಲ್ಪ ಮಾಡಿದ್ದಾರೆ. ಇಷ್ಟರಲ್ಲೇ ಪೈಲಟ್‌ಗಳ ತಂಡ ಆಗಮಿಸಿ ಪರಿಶೀಲನೆ ನಡೆಸಲಿದ್ದು, ಮಾಸಾಂತ್ಯಕ್ಕೆ ಪ್ರಾಯೋಗಿಕವಾಗಿ ವಿಮಾನ ಇಳಿಸುವ ನಿರೀಕ್ಷೆ ಇದೆ” ಎಂದು ಹೇಳಿದರು.ಮೊದಲ ಹಂತದಲ್ಲಿ ಸುಮಾರು 160 ಕೋಟಿ ರೂಪಾಯಿ ವೆಚ್ಚದಲ್ಲಿ ರನ್‌ವೇ, ಟರ್ಮಿನಲ್, ಅಗ್ನಿಶಾಮಕ ವ್ಯವಸ್ಥೆ ನಿರ್ಮಾಣ ಮಾಡುವ ಜತೆಗೆ ಹಾಗೂ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುವುದು.ಎರಡನೇ ಹಂತದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಮತ್ತು ಇತರ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎರಡು ಹಂತಗಳಲ್ಲಿ ಒಟ್ಟು 360 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ವಿವರಿಸಿದರು.ಸುಮಾರು ಒಂದು ಕಿಲೋಮೀಟರ್ ಉದ್ದದ ಹಾಗೂ 45 ಮೀಟರ್ ಅಗಲದ ರನ್‌ವೇ ಮೊದಲ ಹಂತದಲ್ಲಿ ನಿರ್ಮಾಣವಾಗಲಿದ್ದು, ರನ್‌ವೇಯ ಇಕ್ಕೆಲಗಳಲ್ಲಿ ತಲಾ 150 ಮೀಟರ್ ಅಗಲದ ಭೂಮಿಯನ್ನು ಸಮತಟ್ಟುಗೊಳಿಸಲಾಗುತ್ತಿದೆ. ಸುಮಾರು 50 ಮಂದಿ ನುರಿತ ಎಂಜಿನಿಯರ್‌ಗಳು ಸೇರಿದಂತೆ 100 ಕಾರ್ಮಿಕರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.ರೀಜನಲ್ ಏರ್‌ಪೋರ್ಟ್ ಹೋಲ್ಡಿಂಗ್ ಇಂಟರ್‌ನ್ಯಾಷನಲ್ (ಆರ್‌ಎಎಚ್‌ಐ) ಸಂಸ್ಥೆ ವಿಮಾನ ನಿಲ್ದಾಣದ ಕಾಮಗಾರಿ ನಿರ್ವಹಿಸುತ್ತಿದ್ದು, ರೋಮನ್ ಟರ್ಮಟ್ ಲಿಮಿಟೆಡ್ ಸಂಸ್ಥೆ ವಿಮಾನ ನಿಲ್ದಾಣವನ್ನು ನಿರ್ವಹಿಸಲಿದೆ. ಫ್ರಿಶ್‌ಮನ್ ಪ್ರಭು ಟೆಕ್ನಿಕಲ್ ಕನ್ಸಲ್ಟೆಂಟ್ ಸಂಸ್ಥೆ ವಿಮಾನ ನಿಲ್ದಾಣದ ವಿನ್ಯಾಸ ರೂಪಿಸಿದ್ದು, ಅಧಿಕೃತ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದೆ. 30 ವರ್ಷಕ್ಕೆ ಕಂಪೆನಿಗೆ ಗುತ್ತಿಗೆ ನೀಡಲಾಗಿದ್ದು, ನಿರ್ಮಾಣ- ನಿರ್ವಹಣೆ- ವರ್ಗಾವಣೆ (ಬಿಓಟಿ) ಆಧಾರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದರು.ವಿಮಾನ ನಿಲ್ದಾಣ ಆವರಣದಲ್ಲಿ ಹಾದುಹೋಗಿರುವ 220 ಕೆ.ವಿ. ವಿದ್ಯುತ್ ತಂತಿ ಹಾಗೂ ಕಂಬಗಳ ಸ್ಥಳಾಂತರ ಮತ್ತು 110 ಕೆ.ವಿ. ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಅಗತ್ಯವಾದ ಹಣವನ್ನೂ ಜಿಲ್ಲಾಡಳಿತ ತುಂಬಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ವಿಮಾನ ನಿಲ್ದಾಣದ 800 ಮೀಟರ್ ವ್ಯಾಪ್ತಿಯಲ್ಲಿ ಮಹಡಿ ಕಟ್ಟಡಗಳನ್ನು ನಿರ್ಮಿಸದಂತೆ ವಾಯುಯಾನ ಇಲಾಖೆ ಕಟ್ಟುನಿಟ್ಟಿನ ಆದೇಶ ನೀಡಿದೆ ಎಂದು ನಮೋಶಿ ಹೇಳಿದರು.ರೋಮನ್ ಟರ್ಮಟ್ ಲಿಮಿಟೆಡ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ವಿಜಯಕುಮಾರ್ ಗಲಗಲಿ, ನಿರ್ಮಾಣ ಸಂಸ್ಥೆಯ ತುಕಾರಾಂ ಸಾಬಳೆ, ಗಿರೀಶ ನಾಯಕ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.