ಶನಿವಾರ, ಜೂನ್ 12, 2021
23 °C

ಮುಂದುವರಿದ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಲವು ರಾಜಕೀಯ ಪಕ್ಷಗಳನ್ನು ಅವಲಂಬಿಸಿದ ಸರ್ಕಾರ ಆರ್ಥಿಕ ಸುಧಾರಣೆಗೆ ಅವಶ್ಯಕವಾದ ದಿಟ್ಟ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಆದರೆ, ಅಭಿವೃದ್ಧಿ  ದರವನ್ನು ಹೆಚ್ಚಿಸುವ ಯತ್ನಗಳನ್ನು ನಿಲ್ಲಿಸಲೂ ಆಗದು. ಅದನ್ನೇ ಈ ಸಾಲಿನ ಮುಂಗಡ ಪತ್ರದಲ್ಲಿ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮುಂದುವರಿಸಿದ್ದಾರೆ. ಬಹು ಬ್ರಾಂಡ್‌ಗಳ ಚಿಲ್ಲರೆ ಮಾರಾಟ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಶೇ 51ರಷ್ಟಕ್ಕೆ ಮಿತಿಗೊಳಿಸುವುದಕ್ಕೆ ರಾಜ್ಯ ಸರ್ಕಾರಗಳ ಸಹಮತ ವ್ಯಕ್ತವಾಗುವ ಅವರ ನಿರೀಕ್ಷೆ ವಿದೇಶಿ ಹಣ ಹೂಡಿಕೆಯ ಕ್ಷೀಣ ಭರವಸೆ. ಜೊತೆಗೆ ಆರ್ಥಿಕ ಸುಧಾರಣೆಗೆ ಮೂಲವಾದ ನೇರ ತೆರಿಗೆ ಸಂಹಿತೆ ಹಾಗೂ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬರುವ ಆಗಸ್ಟ್ ವೇಳೆಗಾದರೂ ಅನುಷ್ಠಾನಗೊಳಿಸಲು ಸಾಧ್ಯವಾಗಬಹುದೆಂಬ ನಿರೀಕ್ಷೆ ಅವರದು. ಈ ಕ್ರಮಕ್ಕೆ ಯುಪಿಎ ಮಿತ್ರಪಕ್ಷಗಳಲ್ಲಿ ತಾತ್ವಿಕ ಭಿನ್ನಾಭಿಪ್ರಾಯ ಇಲ್ಲ, ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಆಕ್ಷೇಪ ಕಳೆದ ವರ್ಷದಿಂದಲೂ ಮುಂದುವರಿದಿದೆ. ಸರ್ಕಾರ ಈ ನಿಟ್ಟಿನಲ್ಲಿ ಖಚಿತ ಪ್ರಯತ್ನ ನಡೆಸದೆ ಇಂಥ ಗಡುವನ್ನು ಇಟ್ಟುಕೊಂಡಿರುವುದು ಅಸಂಗತ. ಷೇರು ವಿಕ್ರಯದ ಮೂಲಕ ಅಗತ್ಯ ಹಣ ಸಂಗ್ರಹದ ಗುರಿಯನ್ನು ನಿಗದಿಪಡಿಸಿದರಷ್ಟೆ ಸಾಲದು. ಈ ವಿಷಯದಲ್ಲಿ ಕಳೆದ ಸಾಲಿನ ಪ್ರಗತಿ ಶೇ 30ರಷ್ಟು ಮಾತ್ರ ಆಗಿತ್ತು ಎಂಬುದು ಗಮನಾರ್ಹ.

ನೇರ ತೆರಿಗೆ ವ್ಯಾಪ್ತಿಗೆ ಒಳಪಡುವ ವೈಯಕ್ತಿಕ ಆದಾಯ ತೆರಿಗೆ ಸ್ವರೂಪದಲ್ಲಿ ವೇತನದಾರರು ಸ್ವಲ್ಪಮಟ್ಟಿನ ಸಮಾಧಾನ ತಾಳುವ ಸಂಗತಿಗಳಿವೆ. ಆದಾಯ ತೆರಿಗೆಗೆ ಒಳಪಡುವ ಕನಿಷ್ಠ ಮಿತಿ ರೂ 2 ಲಕ್ಷಕ್ಕೆ ನಿಗದಿಯಾಗಿದ್ದು ಹೆಚ್ಚಿನ ಸಂಖ್ಯೆಯ ಸಣ್ಣ ವೇತನದಾರರು ತೆರಿಗೆ ವ್ಯಾಪ್ತಿಯಿಂದ ಮುಕ್ತವಾಗಲಿದ್ದಾರೆ.  ಶೇ 20ರ ತೆರಿಗೆ ದರದ ಗರಿಷ್ಠ ಮಿತಿಯನ್ನು ರೂ 10 ಲಕ್ಷಕ್ಕೆ ಹೆಚ್ಚಿಸಿರುವುದು ಮಧ್ಯಮ ಶ್ರೇಣಿಯ ವೇತನದಾರರೂ ಸ್ವಲ್ಪಮಟ್ಟಿನ ರಿಯಾಯಿತಿಯನ್ನು ಪಡೆಯುವಂತಾಗಿದೆ. ಬಡತನದ ರೇಖೆಯ ಕೆಳಗಿರುವವರಿಗೆ ಸೀಮೆಎಣ್ಣೆಗೆ ನೀಡುತ್ತಿರುವ ಸಹಾಯಧನವನ್ನು ನೇರವಾಗಿ ನಗದಿನ ರೂಪದಲ್ಲಿ ನೀಡುವ ಯೋಜನೆ ರಾಜಸ್ತಾನದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬಂದಿದ್ದರೂ ಅದು ಎಲ್ಲೆಡೆ ವಿಸ್ತರಣೆಯಾಗುವುದಕ್ಕೆ ಇನ್ನೂ ಅಡ್ಡಿ ಆತಂಕಗಳಿವೆ. ಈ ಯೋಜನೆಯೇ `ಆಧಾರ್~ ಗುರುತಿನ ಚೀಟಿಯನ್ನು ಅವಲಂಬಿಸಿದೆ. ಆಹಾರ ಭದ್ರತೆ ಕಾಯ್ದೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಅದನ್ನು ಅಂಗೀಕರಿಸಿ ಅನುಷ್ಠಾನ ಮಾಡುವುದಕ್ಕೂ `ಆಧಾರ್~ ವೇದಿಕೆಯಾಗಬೇಕು. ಪ್ರಸಕ್ತ ಸಾಲಿನಲ್ಲಿಯೇ 40 ಕೋಟಿ ಜನರಿಗೆ `ಆಧಾರ್~ ವಿತರಣೆಯಾಗುವ ಸರ್ಕಾರದ ಗುರಿ ಸುಲಭದ್ದೇನೂ ಅಲ್ಲ. ನಿಜವಾದ ಬಡವರನ್ನು ಗುರುತಿಸುವುದರಲ್ಲಿ ಆಡಳಿತ ವ್ಯವಸ್ಥೆಯ ಲೋಪ ಮತ್ತು ಪಡಿತರ ವ್ಯವಸ್ಥೆಯ ದುರುಪಯೋಗ ತಡೆಯುವುದಕ್ಕೆ ಎಲ್ಲವನ್ನೂ ಕಂಪ್ಯೂಟರೀಕರಣಗೊಳಿಸುವ ಉದ್ದೇಶ ಒಳ್ಳೆಯದೇ. ಇದು ಹೇಳಿದಷ್ಟು ಸುಲಭವಲ್ಲ ಎಂಬುದು ಇದುವರೆಗಿನ ಅನುಭವ.

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಹಣಕಾಸಿನ ಲಭ್ಯತೆ ಹೆಚ್ಚಿಸಲಾಗಿದೆ. ಗ್ರಾಮೀಣ ಆರ್ಥಿಕತೆ ಮತ್ತು ಆರೋಗ್ಯ ಸುಧಾರಣೆಗೆ ಪ್ರಕಟಿಸಿದ ಹಲವು ಯೋಜನೆಗಳು ಆಕರ್ಷಕವಾಗಿವೆ. ಸಕಾಲದಲ್ಲಿ ಮರುಪಾವತಿ ಮಾಡುವ ರೈತರಿಗೆ ಬಡ್ಡಿಯಲ್ಲಿ ರಿಯಾಯಿತಿ ನೀಡುವ ಯೋಜನೆ ಹೊಸದೇನೂ ಅಲ್ಲ. ಕೆಲವು ರಾಜ್ಯಗಳಲ್ಲಿ ಸಣ್ಣ ರೈತರು, ನೇಕಾರರು ಮತ್ತು ಕುಶಲಕರ್ಮಿಗಳಿಗೆ ಕಡಿಮೆ ಬಡ್ಡಿ ದರದ ಯೋಜನೆಗಳು ಜಾರಿಯಲ್ಲಿವೆ. ಉದ್ಯಮ ವಲಯಕ್ಕೆ ಅಗತ್ಯ ಹಣ ಒದಗಿಸಲು ಖಾಸಗಿ ಬ್ಯಾಂಕುಗಳಿಗೆ ಅನುಮತಿ ನೀಡುವ ಪ್ರಸ್ತಾಪ ಎಂದಿನಂತೆ ಮುಂದುವರಿದಿದೆ. ಕಪ್ಪುಹಣಕ್ಕೆ ಸಂಬಂಧಿಸಿ ಪ್ರಸಕ್ತ ಸಾಲಿನಲ್ಲಿ ಶ್ವೇತಪತ್ರ ಪ್ರಕಟಿಸುವುದು ಮಾಹಿತಿಯ ದೃಷ್ಟಿಯಿಂದ ಉಪಯುಕ್ತ. ವಿದೇಶಿ ಬ್ಯಾಂಕುಗಳಲ್ಲಿ ಅಡಗಿಸಿಟ್ಟ ಕಪ್ಪುಹಣವನ್ನು ದೇಶಕ್ಕೆ ಮರಳಿ ತರುವ ಬೇಡಿಕೆಗೆ ಇದು ಸಮರ್ಪಕ ಉತ್ತರವಾಗಲಾರದು. ಐಷಾರಾಮಿ ಕಾರುಗಳು ಮತ್ತು ಚಿನ್ನದ ಆಭರಣಗಳು ಹೆಚ್ಚಿನ ತೆರಿಗೆಯನ್ನು ಆಕರ್ಷಿಸುತ್ತವೆ. ಇದು ಚಿನ್ನದ ಕಳ್ಳಸಾಗಣೆಗೆ ಆಸ್ಪದವಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಅವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಹೈರಾಣಾಗಿ ಹೋಗಿರುವ ಜನಸಾಮಾನ್ಯರಿಗೆ ಬಜೆಟ್‌ನಲ್ಲಿ ಯಾವ ಪರಿಹಾರವೂ ಕಾಣುತ್ತಿಲ್ಲ.  ಬೆಲೆ ಏರಿಕೆಗೆ ಕಾರಣವಾಗುವ ತೈಲ ಬೆಲೆ, ಅಂತರ ರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುವುದರಿಂದ ಅದು ಸಚಿವರ ಕೈಯಲ್ಲೇನೂ ಇಲ್ಲ. ಏನೇ ಇದ್ದರೂ, ಜಾಗತಿಕ ಆರ್ಥಿಕ ಹಿಂಜರಿಕೆಯ ಮಧ್ಯೆಯೂ ಹೆಚ್ಚಿನ ಹೂಡಿಕೆಯ ಬೆಂಬಲವಿಲ್ಲದೆ, ಲಭ್ಯವಿರುವ ಅವಕಾಶದಲ್ಲಿ ಕೃಷಿ, ಕೈಗಾರಿಕೆ ಮತ್ತು ಕಾರ್ಪೊರೇಟ್ ವಲಯಗಳನ್ನು ಸಂತುಷ್ಟಗೊಳಿಸುವ ಕಸರತ್ತನ್ನು ಸಚಿವರು ಮಾಡಿದ್ದಾರೆ. ತಮ್ಮದು ಅಭಿವೃದ್ಧಿ ಮತ್ತು ಸ್ಥಿರತೆಗೆ ಒತ್ತು ನೀಡುವ ಮುಂಗಡಪತ್ರವೆಂದು ಸಚಿವರು ಹೇಳಿಕೊಂಡಿದ್ದಾರೆ. ಅದು ಸರ್ಕಾರದ ಸ್ಥಿರತೆಯನ್ನು ಉದ್ದೇಶಿಸಿದೆಯೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.