ಮುಂದುವರಿದ ಕಸ ವಿಂಗಡೆ ಕಾರ್ಯ

7

ಮುಂದುವರಿದ ಕಸ ವಿಂಗಡೆ ಕಾರ್ಯ

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಕಸ ವಿಂಗಡಣೆ ಕಾರ್ಯ ಮುಂದುವರೆದಿದ್ದು, ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಪ್ರತಿ ದಿನ ಬೆಳಿಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.ಭಾನುವಾರ ಗಿರಿನಗರ ವಾರ್ಡ್‌ನಲ್ಲಿ ಪಾಲಿಕೆ ಸದಸ್ಯೆ ಎಚ್.ಎಸ್. ಲಲಿತಾ ಅವರು ನಗೆಕೂಟದ ಸದಸ್ಯರು, ಹಿರಿಯ ನಾಗರಿಕರು, ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರೊಂದಿಗೆ ಹಲವಾರು ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿ, ಕಡ್ಡಾಯವಾಗಿ ಕಸ ವಿಂಗಡಿಸಿ ಪೂರೈಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.ಈ ನಡುವೆ, ಯಲಹಂಕ ವಲಯದಲ್ಲಿನ ಎಲ್ಲ 11 ವಾರ್ಡ್‌ಗಳಲ್ಲಿ ಕಸ ವಿಂಗಡಣೆಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಇಲ್ಲಿ ಸಂಗ್ರಹಿಸಲಾದ ಹಸಿ ಕಸವನ್ನು ಯಾವುದೇ ಸಮಸ್ಯೆಯಿಲ್ಲದೆ ರೈತರು ಕೊಂಡೊಯ್ಯುತ್ತಿದ್ದಾರೆ. ಯಲಹಂಕ ವಲಯದ ವಾರ್ಡ್ ನಂ. 1, 2, 3, 4, 5, 7, 8, 9 ಮತ್ತು 10 ವಾರ್ಡ್‌ಗಳಲ್ಲಿ ನಾಗರಿಕರು ಶೇಕಡ 98 ರಷ್ಟು ಕಸ ವಿಂಗಡಿಸಿ ಪಾಲಿಕೆಯ ಪೌರ ಕಾರ್ಮಿಕರಿಗೆ ನೀಡುತ್ತಿದ್ದಾರೆ.ವಾರ್ಡ್ ನಂ. 6 ಮತ್ತು 11 ರಲ್ಲಿ ಹೆಚ್ಚಿನ ಪ್ರದೇಶಗಳು ಕೊಳಚೆ ಪ್ರದೇಶಗಳಾಗಿರುವುದರಿಂದ ಅಲ್ಲಿ ಸಾರ್ವಜನಿಕರು ನಿಧಾನಗತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಈ ಎರಡು ವಾರ್ಡ್‌ಗಳಲ್ಲಿ ಶೇಕಡ 50 ರಷ್ಟು ಸಾರ್ವಜನಿಕರು ಕಸವನ್ನು ವಿಂಗಡಿಸಿ ನೀಡುತ್ತಿದ್ದಾರೆ. ಈ ಎರಡು ವಾರ್ಡ್‌ಗಳಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಯಲಹಂಕ ವಲಯದ ಹೆಚ್ಚುವರಿ ಆಯುಕ್ತ ವೈ.ಎಂ. ರಾಮಚಂದ್ರಮೂರ್ತಿ ತಿಳಿಸಿದ್ದಾರೆ.ಇಂದು ಭೈರಸಂದ್ರ ವಾರ್ಡ್‌ನಲ್ಲಿ ಜಾಥಾ: ಸೋಮವಾರ ಕೂಡ ವಾರ್ಡ್ ಭೈರಸಂದ್ರ ವಾರ್ಡ್‌ನಲ್ಲಿ ಪಾಲಿಕೆ ಆಡಳಿತ ಪಕ್ಷದ ನಾಯಕ ಎನ್. ನಾಗರಾಜು ನೇತೃತ್ವದಲ್ಲಿ ಬೃಹತ್ ಜಾಥಾ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಈ ಜಾಥಾ ಭೈರಸಂದ್ರದ ಎಲ್.ಐ.ಸಿ. ಪಾರ್ಕ್‌ನಿಂದ ಹೊರಟು ಬೆಳಿಗ್ಗೆ 10 ಗಂಟೆಗೆ ಜಯನಗರ ವಾಣಿಜ್ಯ ಸಂಕೀರ್ಣದ ಬಳಿ ಅಂತ್ಯಗೊಳ್ಳಲಿದೆ. ಜಾಥಾದಲ್ಲಿ ಮೇಯರ್ ಡಿ.ವೆಂಕಟೇಶಮೂರ್ತಿ, ಆಯುಕ್ತ ರಜನೀಶ್ ಗೋಯಲ್, ಸ್ಥಳೀಯ ಶಾಸಕ ಬಿ.ಎನ್. ವಿಜಯಕುಮಾರ್ ಹಾಗೂ ಶಾಲಾ ಮಕ್ಕಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry