ಗುರುವಾರ , ಮೇ 6, 2021
32 °C

ಮುಂದುವರಿದ ಚರ್ಚೆ: ಅಸ್ಪಷ್ಟ ಚಿತ್ರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಂದಿನ ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದ್ದು, ಪಕ್ಷಗಳ ಮುಖಂಡರು ವಿಭಿನ್ನ ನಿಲುವು ತಾಳಿರುವುದರಿಂದ ಸ್ಪಷ್ಟ ಚಿತ್ರಣ ಹೊರ ಬಂದಿಲ್ಲ.ಅಚ್ಚರಿ ಬೆಳವಣಿಯೊಂದರಲ್ಲಿ ಮಹಾತ್ಮ ಗಾಂಧಿ ಮೊಮ್ಮಗ, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಅವರನ್ನು ಭೇಟಿಯಾಗಿದ್ದು, ಈ ಭೇಟಿಯನ್ನು ರಾಷ್ಟ್ರಪತಿ ಚುನಾವಣೆಯೊಂದಿಗೆ ತಳುಕು ಹಾಕಲಾಗುತ್ತಿದೆ. ಆದರೆ ಪಟ್ನಾಯಿಕ್ ಅವರ ಪಕ್ಷ ಯಾರಿಗೆ ಬೆಂಬಲಿಸಲಿದೆ ಎನ್ನುವುದನ್ನು ಬಹಿರಂಗಪಡಿಸಿಲ್ಲ.`ರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ಸಮಾಜವಾದಿ ಪಕ್ಷ ಇದುವರೆಗೆ ಯಾರ ಹೆಸರನ್ನೂ ಅಂತಿಮಗೊಳಿಸಿಲ್ಲ~ ಎಂದು ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.ಈ ಸ್ಥಾನಕ್ಕೆ ಸೋಮವಾರ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಪರ ಒಲವು ವ್ಯಕ್ತಪಡಿಸಿದ್ದ ಪಕ್ಷದ ಮುಖಂಡ ಶಾಹಿದ್ ಸಿದ್ದಕಿ ಹೇಳಿಕೆ ಬಗ್ಗೆ ಯಾದವ್ ಅಂತರ ಕಾಯ್ದುಕೊಂಡಿದ್ದರಿಂದ ಈ ವಿಷಯ ಹೊಸ ತಿರುವು ಪಡೆದಂತಾಗಿದೆ.

ರಾಷ್ಟ್ರಪತಿ ಸ್ಥಾನಕ್ಕೆ ಕಲಾಂ ಪರ ಸಿದ್ದಕಿ ಒಲವು ವ್ಯಕ್ತಪಡಿಸಿರುವುದನ್ನು ತಳ್ಳಿ ಹಾಕಿದ ಅವರು, `ಇದು ಅವರ ವೈಯಕ್ತಿಕ ಹೇಳಿಕೆ ಹೊರತು ಪಕ್ಷದ ನಿರ್ಧಾರ ಅಲ್ಲ~ ಎಂದರು.ಸಿದ್ದಕಿ ಸಹ ಮಂಗಳವಾರವೇ ರಾಗ ಬದಲಿಸಿದ್ದು, `ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿ ವರದಿ ಮಾಡಿವೆ~ ಎಂದು ಹೇಳಿದ್ದಾರೆ.ಅನ್ಸಾರಿಗೆ ಬೆಂಬಲ: ಆರ್‌ಜೆಡಿ `ಉಪರಾಷ್ಟ್ರಪತಿ ಹಮೀದ್ ಅನ್ಸಾರಿ  ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾದರೆ ತಮ್ಮ ಪಕ್ಷ ಅವರನ್ನೇ ಬೆಂಬಲಿಸಲಿದೆ~ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಮಂಗಳವಾರ ಪ್ರಕಟಿಸಿದ್ದಾರೆ.ಬಿಎಸ್‌ಪಿ ಪ್ರತಿಕ್ರಿಯೆ: `ಜುಲೈನಲ್ಲಿ ಚುನಾವಣೆ ನಡೆಯಲಿದ್ದು, ಈಗ ಹೇಳಿಕೆ ನೀಡಿದರೆ ತುಂಬಾ ಮುಂಚೆ ಎನಿಸಿದಂತಾಗುವುದು. ಮೊದಲು ಅಭ್ಯರ್ಥಿ ಹೆಸರು ಪ್ರಕಟಿಸಲಿ ನಂತರ ನಮ್ಮ ನಿಲುವು ಪ್ರಕಟಿಸುತ್ತೇವೆ~ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.ಬಿಜೆಪಿ: `ನಾವು ಯಾರೊಬ್ಬರ ಬಗ್ಗೆ ವೈಯಕ್ತಿಕ ಹೇಳಿಕೆ ನೀಡುವುದಿಲ್ಲ. ರಾಷ್ಟ್ರಪತಿ ಅಭ್ಯರ್ಥಿ ಎಲ್ಲ ರಾಜಕೀಯ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಬೇಕು ಎನ್ನುವುದು ನಮ್ಮ ದೃಷ್ಟಿಕೋನ~ ಎಂದು ಬಿಜೆಪಿ ನಾಯಕ ರಾಜನಾಥ್ ಸಿಂಗ್ ಹೇಳಿದ್ದಾರೆ.ಜೆಡಿಯು: ಈ ಸ್ಥಾನಕ್ಕೆ ಯಾರ ಹೆಸರನ್ನೂ ಪ್ರಸ್ತಾಪಿಸಲು ಇಚ್ಛಿಸದ ಸಂಯುಕ್ತ ಜನತಾ ದಳ (ಜೆಡಿಯು) ನಾಯಕ ಶರದ್ ಯಾದವ್, `ಈ ವಿಷಯದ ಕುರಿತು ಮಾತುಕತೆ ನಡೆಯಲಿ~ ಎಂದಿದ್ದಾರೆ.ಒಮ್ಮತದ ಅಭ್ಯರ್ಥಿಗೆ ಬೆಂಬಲ: ಸಿಪಿಐ

`ಎಲ್ಲ ರಾಜಕೀಯ ಪಕ್ಷಗಳ ಒಮ್ಮತದ ಅಭ್ಯರ್ಥಿಗೆ ಸಿಪಿಐಎಂ ಬೆಂಬಲಿಸಲಿದೆ ಎಂದಿರುವ ಪಕ್ಷದ ನಾಯಕ ಸೀತಾರಾಂ ಯೆಚೂರಿ, ರಾಷ್ಟ್ರಪತಿ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಸಲು ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸುವ ಸಾರಥ್ಯವನ್ನು ಕಾಂಗ್ರೆಸ್ ವಹಿಸಿಕೊಳ್ಳಬೇಕು~ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.