ಸೋಮವಾರ, ಆಗಸ್ಟ್ 19, 2019
21 °C
ಕ್ರಿಕೆಟ್: ಮಿಂಚಿದ ಮೋಹಿತ್; ಜಿಂಬಾಬ್ವೆಗೆ ಮತ್ತೆ ಮುಖಭಂಗ

ಮುಂದುವರಿದ ಜಯದ ಓಟ

Published:
Updated:

ಬುಲವಾಯೊ (ಪಿಟಿಐ): ವಿರಾಟ್ ಕೊಹ್ಲಿ ಬಳಗದ ಗೆಲುವಿನ ಓಟ ಮುಂದುವರಿದಿದೆ. ಜಿಂಬಾಬ್ವೆ ತಂಡದ ಪ್ರದರ್ಶನದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲೂ ಅಧಿಕಾರಯುತ ಪ್ರದರ್ಶನ ನೀಡಿದ ಭಾರತ ಒಂಬತ್ತು ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು.ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡವನ್ನು 42.4 ಓವರ್‌ಗಳಲ್ಲಿ 144 ರನ್‌ಗಳಿಗೆ ಕಟ್ಟಿಹಾಕಿದ ಭಾರತ, ಆ ಬಳಿಕ 30.5 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 145 ರನ್ ಗಳಿಸಿ ಜಯ ಸಾಧಿಸಿತು. ಈ ಮೂಲಕ ಕೊಹ್ಲಿ ಬಳಗ ಸರಣಿಯಲ್ಲಿ ಮುನ್ನಡೆಯನ್ನು 4-0ಗೆ ಹೆಚ್ಚಿಸಿಕೊಂಡಿದೆ.ಚೊಚ್ಚಲ ಪಂದ್ಯದಲ್ಲೇ `ಪಂದ್ಯಶ್ರೇಷ್ಠ' ಗೌರವ ಪಡೆದ ಮೋಹಿತ್ ಶರ್ಮ (26ಕ್ಕೆ 2), ಅಮಿತ್ ಮಿಶ್ರಾ (25ಕ್ಕೆ 3), ರವೀಂದ್ರ ಜಡೇಜ (28ಕ್ಕೆ 2) ತೋರಿದ ಶಿಸ್ತಿನ ಬೌಲಿಂಗ್ ಹಾಗೂ ರೋಹಿತ್ ಶರ್ಮ (ಅಜೇಯ 64), ಸುರೇಶ್ ರೈನಾ (ಅಜೇಯ 65) ಗಳಿಸಿದ ಅರ್ಧಶತಕ ಭಾರತದ ಸುಲಭ ಗೆಲುವಿಗೆ ಕಾರಣವಾಯಿತು.ಟಾಸ್ ಗೆದ್ದ ಕೊಹ್ಲಿ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಈಗಾಗಲೇ ಸರಣಿ ಗೆಲುವಿನ ಮುನ್ನಡೆ ಸಾಧಿಸಿದ್ದ ಭಾರತ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯಿತು. ಚೇತೇಶ್ವರ ಪೂಜಾರ ಮತ್ತು ಮೋಹಿತ್ ಅವರು ಕ್ರಮವಾಗಿ ಶಿಖರ್ ಧವನ್ ಹಾಗೂ ಆರ್. ವಿನಯ್ ಕುಮಾರ್ ಬದಲು ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಪಡೆದರು.ಭಾರತದ ಪರ ಬೌಲಿಂಗ್ ಆರಂಭಿಸಿದ ಮೋಹಿತ್ ಮತ್ತು ಮೊಹಮ್ಮದ್ ಶಮಿ ಆತಿಥೇಯ ಬ್ಯಾಟ್ಸ್‌ಮನ್‌ಗಳಿಗೆ ರಟ್ಟೆಯರಳಿಸಲು ಅವಕಾಶ ನೀಡಲಿಲ್ಲ. ದೇಸಿ ಕ್ರಿಕೆಟ್‌ನಲ್ಲಿ ಕೇವಲ ಆರು ಏಕದಿನ ಪಂದ್ಯಗಳನ್ನಾಡಿದ ಅನುಭವ ಹೊಂದಿರುವ ಮೋಹಿತ್ ಮೊದಲ ಓವರ್‌ನಲ್ಲೇ ಇನ್‌ಸ್ವಿಂಗ್, ಔಟ್‌ಸ್ವಿಂಗ್ ಹಾಗೂ ಬೌನ್ಸರ್ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ನಡುಕ ಹುಟ್ಟಿಸಿದರು.ತಮ್ಮ ನಾಲ್ಕನೇ ಓವರ್‌ನಲ್ಲಿ ಮೋಹಿತ್ ಚೊಚ್ಚಲ ಅಂತರರಾಷ್ಟ್ರೀಯ ವಿಕೆಟ್ ಪಡೆದರು. ಅವರ ಎಸೆತದಲ್ಲಿ ಸಿಕಂದರ್ ರಾಜಾ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಆ ಬಳಿಕ ಬೆನ್ನುಬೆನ್ನಿಗೆ ವಿಕೆಟ್‌ಗಳು ಬಿದ್ದವು. 47 ರನ್ ಗಳಿಸುವಷ್ಟರಲ್ಲಿ ಐವರು ಪ್ರಮುಖ ಆಟಗಾರರು ಪೆವಿಲಿಯನ್‌ಗೆ ಮರಳಿದ್ದರು.

ಮಾಲ್ಕಂ ವಾಲರ್ (35) ಮತ್ತು ಎಲ್ಟಾನ್ ಚಿಗುಂಬರ ಆರನೇ ವಿಕೆಟ್‌ಗೆ 80 ರನ್ ಸೇರಿಸಿದ ಕಾರಣ ತಂಡದ ಮೊತ್ತ 100 ರನ್‌ಗಳ ಗಡಿ ದಾಟಿತು. ವಾಲರ್ ವಿಕೆಟ್ ಪಡೆದ ಮೋಹಿತ್ ಈ ಜೊತೆಯಾಟ ಮುರಿದರು. ಅಮಿತ್ ಮಿಶ್ರಾ ಮತ್ತು ರವೀಂದ್ರ ಜಡೇಜ ಅವರ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಜಿಂಬಾಬ್ವೆ ಬ್ಯಾಟ್ಸ್‌ಮನ್‌ಗಳು ವಿಫಲರಾದರು.ಮಿಂಚಿದ ರೋಹಿತ್, ರೈನಾ: ಸುಲಭ ಗುರಿ ಬೆನ್ನಟ್ಟುವಲ್ಲಿ ಭಾರತ ಯಾವುದೇ ಒತ್ತಡ ಎದುರಿಸಲಿಲ್ಲ. ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಚೇತೇಶ್ವರ ಪೂಜಾರ (13) ವಿಫಲರಾದರು. ಆ ಬಳಿಕ ಜೊತೆಯಾದ ರೋಹಿತ್ ಹಾಗೂ ರೈನಾ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಮೊದಲ ಮೂರೂ ಪಂದ್ಯಗಳಲ್ಲಿ ವಿಫಲರಾಗಿದ್ದ ರೋಹಿತ್ 90 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದ ರೈನಾ 71 ಎಸೆತಗಳನ್ನು ಎದುರಿಸಿ ಆರು ಬೌಂಡರಿ ಗಳಿಸಿದರು.

ಮೋಹಿತ್ ಶರ್ಮ ಸಾಧನೆ

ಹರಿಯಾಣದ ಮೋಹಿತ್ ಶರ್ಮ ಚೊಚ್ಚಲ ಏಕದಿನ ಪಂದ್ಯದಲ್ಲೇ `ಪಂದ್ಯಶ್ರೇಷ್ಠ' ಪ್ರಶಸ್ತಿಗೆ ಭಾಜನರಾದರು. ಪದಾರ್ಪಣೆ (ಏಕದಿನ) ಪಂದ್ಯದಲ್ಲೇ ಈ ಸಾಧನೆ ಮಾಡಿದ ಭಾರತ ಎರಡನೇ ಆಟಗಾರ ಎಂಬ ಗೌರವ ಅವರಿಗೆ ಒಲಿದಿದೆ. ಈ ಮುನ್ನ ಸಂದೀಪ್ ಪಾಟೀಲ್ ಮಾತ್ರ ಇಂತಹ ಅಪೂರ್ವ ಸಾಧನೆ ಮಾಡಿದ್ದರು. 1980 ರ ಡಿಸೆಂಬರ್ 6 ರಂದು ಎಂಸಿಜಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಅವರು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 

ಆ ಪಂದ್ಯದಲ್ಲಿ  70 ಎಸೆತಗಳಲ್ಲಿ 64 ರನ್ ಗಳಿಸಿದ್ದಲ್ಲದೆ, 31 ರನ್‌ಗಳಿಗೆ ಒಂದು ವಿಕೆಟ್ ಪಡೆದಿದ್ದ ಸಂದೀಪ್ ಪಾಟೀಲ್ `ಪಂದ್ಯಶ್ರೇಷ್ಠ' ಗೌರವ ಪಡೆದಿದ್ದರು. ಪಂದ್ಯದಲ್ಲಿ ಭಾರತ 66 ರನ್‌ಗಳ ಗೆಲುವು ಸಾಧಿಸಿತ್ತು. 24ರ ಹರೆಯದ ಮೋಹಿತ್ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆದಿದ್ದರು. ಇದೀಗ ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಸ್ಮರಣೀಯನ್ನಾಗಿಸಿಕೊಂಡಿದ್ದಾರೆ.

Post Comments (+)