ಮುಂದುವರಿದ ಜಯದ ಓಟ

7
ಕ್ರಿಕೆಟ್‌: 15 ವರ್ಷದ ಸರ್ಫ್‌ರಾಜ್‌ ಅಬ್ಬರದ ಶತಕ

ಮುಂದುವರಿದ ಜಯದ ಓಟ

Published:
Updated:

ವಿಶಾಖ ಪಟ್ಟಣ (ಪಿಟಿಐ): ಸರ್ಫ್‌ರಾಜ್‌ ಖಾನ್‌ ಗಳಿಸಿದ ಶತಕದ ಬಲದಿಂದ ಭಾರತ ಕ್ರಿಕೆಟ್‌ ತಂಡ (19 ವರ್ಷದೊಳಗಿನವರು) ಚತುಷ್ಕೋನ ಕ್ರಿಕೆಟ್‌ ಟೂರ್ನಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿತು.ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ 50 ಓವರುಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 270 ರನ್‌ ಕಲೆ ಹಾಕಿತು. ಆತಿಥೇಯ ತಂಡ ಈ ಗುರಿಯನ್ನು 39.3 ಓವರ್‌ಗಳಲ್ಲಿ ಸುಲಭ­ವಾಗಿ ತಲುಪಿತು. ಇದಕ್ಕೆ ಕಾರಣ­ವಾಗಿದ್ದು ತಂಡದ ಕಿರಿಯ ಆಟಗಾರ ಮುಂಬೈನ ಸರ್ಫ್‌ರಾಜ್‌ ಶತಕದ ಅಬ್ಬರ.ದಕ್ಷಿಣ ಆಫ್ರಿಕಾ ಆರಂಭದಲ್ಲಿಯೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಅರಂಭಿಕ ಬ್ಯಾಟ್ಸ್‌ಮನ್‌ ಕ್ಲೈಡ್‌ ಫರ್ಚೂನ್‌ (90, 99ಎಸೆತ, 15 ಬೌಂಡರಿ) ಆಸರೆಯಾದರು. ಲಾಯ್ಡ್‌ ಬ್ರೌನ್‌  (69, 103 ಎಸೆತ, 5 ಬೌಂಡರಿ, 2 ಸಿಕ್ಸರ್‌) ಕೂಡಾ ನೆರವಾದರು. ಭಾರತದ ಅಭಿಮನ್ಯು ಲಾಂಬಾ ಮತ್ತು ಚಾಮಾ ಮಿಲಿಂದ್‌ ತಲಾ ಮೂರು ವಿಕೆಟ್ ಉರುಳಿಸಿ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ನಿಯಂತ್ರಿಸಿದರು.ಶತಕದ ಅಬ್ಬರ: 15 ವರ್ಷದ ಯುವ  ಬ್ಯಾಟ್ಸ್‌ಮನ್‌ ಸರ್ಫ್‌ರಾಜ್ ಶತಕ ಸಿಡಿಸಿ ದಕ್ಷಿಣ ಆಫ್ರಿಕಾದ ಬೌಲರ್‌ಗಳ ಮೇಲೆ ದಂಡೆತ್ತಿ ಹೋದರು. ಕೇವಲ 66 ಎಸೆತಗಳಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿದಂತೆ 101 ರನ್‌ ಗಳಿಸಿದ್ದು ಅವರ ಸ್ಪೋಟಕ ಬ್ಯಾಟಿಂಗ್‌ಗೆ ಸಾಕ್ಷಿಯಾಗಿದೆ.ಮಧ್ಯಪ್ರದೇಶದ ರಿಕಿ ಭುಯೆ (ಔಟಾಗದೆ 94, 95 ಎಸೆತ, 12 ಬೌಂಡರಿ, 3 ಸಿಕ್ಸರ್‌) ಭಾರತವನ್ನು ಗೆಲುವಿನ ದಡ ಸೇರಿಸಿದರು. ರಿಕಿ ಮತ್ತು ಸರ್ಫ್‌ರಾಜ್‌ ಐದನೇ ವಿಕೆಟ್‌ ಜೊತೆಯಾಟದಲ್ಲಿ 119 ಎಸೆತಗಳಲ್ಲಿ 159 ರನ್‌ ಕಲೆ ಹಾಕಿ ಎದುರಾಳಿ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಇದರಿಂದ ಭಾರತ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಸೋಲಿಸಿತ್ತು.ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 270. (ಕ್ಲೈಡ್‌ ಫರ್ಚೂನ್‌ 90, ಲಾಯ್ಡ್‌ ಬ್ರೌನ್‌ 69, ಬ್ರೆಡ್ಲಿ ಡಯಲ್‌ 35,  ಗ್ರೇಗ್‌ ಓಲ್ಡ್‌ಫೀಲ್ಡ್‌ 30; ಅಭಿಮನ್ಯು ಲಾಂಬಾ 55ಕ್ಕೆ3, ಚಾಮಾ ಮಿಲಿಂದ್‌ 52ಕ್ಕೆ3).ಭಾರತ 39.3 ಓವರ್‌ಗಳಲ್ಲಿ 6  ವಿಕೆಟ್‌ಗೆ 275. (ಅಖಿಲ್‌ ಹರ್ವಾಡ್ಕರ್‌ 26, ಶ್ರೇಯಸ್‌ ಅಯ್ಯರ್‌ 22, ರಿಕಿ ಭುಯೆ ಔಟಾಗದೆ 94, ಸರ್ಫರಾಜ್‌ ಖಾನ್‌ 101; ಬ್ರೆಡ್ಲಿ ಡಯಲ್‌ 34ಕ್ಕೆ2). ಫಲಿತಾಂಶ: ಭಾರತಕ್ಕೆ 4  ವಿಕೆಟ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry