ಬುಧವಾರ, ನವೆಂಬರ್ 20, 2019
27 °C

ಮುಂದುವರಿದ ಪಕ್ಷಾಂತರ: ಮುಂಜಾನೆ ಇಲ್ಲಿ, ಸಂಜೆ ಅಲ್ಲಿ!

Published:
Updated:

ಹೂವಿನಹಡಗಲಿ: ದಿನದಿಂದ ದಿನಕ್ಕೆ ಚುನಾವಣಾ ಕಾವು ಏರುತ್ತಿರುವಂತೆಯೇ ಕೆಲ ಮುಖಂಡರಾದಿಯಾಗಿ ಸಣ್ಣ ಪುಟ್ಟ ಕಾರ್ಯಕರ್ತರು ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದಾರೆ.ವಿಪರ್ಯಾಸವೆಂದರೆ ಅದೇ ಮುಖ, ಅದೇ ಗುಂಪು ಬೆಳಿಗ್ಗೆ ಒಂದು ಪಕ್ಷದ ಹಾರಕ್ಕೆ ಕೊರಳೊಡ್ಡುತ್ತಿದ್ದರೆ, ಸಂಜೆ ಇನ್ನೊಂದು ಪಕ್ಷದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕರ್ತರ ಪಕ್ಷಾಂತರದಿಂದ ಅಭ್ಯರ್ಥಿಗಳು ಒಂದೆಡೆ ಒತ್ತಡಕ್ಕೆ ಸಿಲುಕಿದ್ದರೆ, ಖಾಲಿ ಸ್ಥಾನಗಳ ಭರ್ತಿ ಮಾಡಿಕೊಳ್ಳುವುದಕ್ಕಾಗಿ ಎದುರಾಳಿ ಪಕ್ಷಗಳ ಕಾರ್ಯಕರ್ತರಿಗೆ ಗಾಳ ಹಾಕುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ತಮ್ಮ ಪರ ಅಲೆ ಎಬ್ಬಿಸಿಕೊಳ್ಳಲು ಅಭ್ಯರ್ಥಿಗಳಿಗೆ ಇದು ಅನಿವಾರ್ಯವೂ ಆಗಿದೆ.ಬಿಜೆಪಿ, ಕಾಂಗ್ರೆಸ್, ಕೆಜೆಪಿ, ಬಿಎಸ್‌ಆರ್ ಪಕ್ಷಗಳಲ್ಲಿ ಪ್ರತಿ ದಿನ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ನಡೆಯುತ್ತಿವೆ. ಗುಂಪು ಗುಂಪಾಗಿ ಪಕ್ಷ ಸೇರುವ  ಕಾರ್ಯಕರ್ತರ ತಲೆ ಎಣಿಸಿ, ಚುನಾವಣಾ ಖರ್ಚಿನ ಹೆಸರಿನಲ್ಲಿ ಕಾಸು ನೀಡುವ ಪದ್ದತಿ ಜಾರಿಯಲ್ಲಿ ರುವುದರಿಂದ  ಈ ಪಕ್ಷದಲ್ಲಿ  ಕಾಣುವ ಮುಖ ಮತ್ತೊಂದು ಪಕ್ಷದಲ್ಲಿಯೂ ಕಾಣಬಹುದಾಗಿದೆ.ಆಡಳಿತರೂಢ ಪಕ್ಷದ ಮುಖ್ಯವಾಹಿನಿಯಲ್ಲಿದ್ದವರು ಕೂಡ ತಾವಿರುವ ಪಕ್ಷದ ಗೆಲುವಿನಲ್ಲಿ ವಿಶ್ವಾಸವಿಲ್ಲದೇ ಗೆಲ್ಲಬಹುದಾದ ಪಕ್ಷದತ್ತ ಮುಖ ಮಾಡಿದ್ದಾರೆ. ಕೆಲವರು ಅಧಿಕಾರದ ಲಾಲಸೆಗಾಗಿ ಗೆಲ್ಲುವ ಕುದುರೆ ಹಿಂಬಾಲಿಸುತ್ತಿದ್ದರೆ, ಇನ್ನು ಕೆಲವರು ಎಲ್ಲ ರೀತಿಯ ಅಧಿಕಾರ ಅನುಭವಿಸಿ, ಲಾಭ ಮಾಡಿಕೊಂಡವರು ಮತ್ತೆ ಅಧಿಕಾರ ಹಿಡಿಯುವ  ಪಕ್ಷದಸಂಪರ್ಕ ಬೆಳೆಸುತ್ತಿದ್ದಾರೆ. ಇಡೀ ಊರು, ಸಮುದಾಯ ನನ್ನ ನಿಯಂತ್ರಣದಲ್ಲಿದೆ ಎಂದು ಹೇಳಿಕೊಂಡು ಸ್ವಾರ್ಥ ಸಾಧನೆಗಾಗಿ ಪಕ್ಷ ಬದಲಿಸುವವರ ಸಂಖ್ಯೆಯೂ ಹೆಚ್ಚಾಗಿದೆ.

ಕಣದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ  ಪಕ್ಷಾಂತರ ಕಾರ್ಯಕ್ರಮ ಸಾಮಾನ್ಯವಾಗಿದೆ. ಪ್ರಚಾರಕ್ಕೆ ಹೋದಲೆಲ್ಲಾ ಸಣ್ಣಪುಟ್ಟ ಕಾರ್ಯ ಕರ್ತರನ್ನು ಪಕ್ಷಕ್ಕೆ ಸೇರಿಸಿಕೊಂಡು ತಮ್ಮ ಬಲ ಹೆಚ್ಚಿಸಿ ಕೊಂಡಿರುವುದಾಗಿ ಪುಕ್ಕಟೆ ಪ್ರಚಾರ ಪಡೆಯ ಲಾಗುತ್ತಿದೆ.

ಪುಡಿ ಕಾರ್ಯಕರ್ತರಿಂದ ಹಿಡಿದು ಕೆಲ ನಾಯಕರು ಕೂಡ ಬೇರೆ ಬೇರೆ ಪಕ್ಷದತ್ತ ಮುಖ ಮಾಡಿರು ವುದರಿಂದ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಆರಂಭ ವಾಗಿದೆ. ಆದರೆ ಅವು ಮತಗಳಾಗಿ ಪರಿವರ್ತನೆ ಯಾಗುತ್ತವೆಯೇ ಎಂಬ ಅನುಮಾನ ಎಲ್ಲ ರಾಜಕೀಯ ಪಕ್ಷಗಳನ್ನು ಕಾಡುತ್ತಿದೆ.

ಪ್ರತಿಕ್ರಿಯಿಸಿ (+)