ಮುಂದುವರಿದ ಪ್ರತಿಭಟನೆ: ತಣಿಯದ ಕಾವೇರಿ ಕಾವು

7

ಮುಂದುವರಿದ ಪ್ರತಿಭಟನೆ: ತಣಿಯದ ಕಾವೇರಿ ಕಾವು

Published:
Updated:

ಶ್ರೀರಂಗಪಟ್ಟಣ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಮಂಡ್ಯ, ಮದ್ದೂರು ಇತರ ಕಡೆಗಳಿಂದ ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲು ತೆರಳುತ್ತಿದ ರೈತರು ಸುಮಾರು ಒಂದು ತಾಸು ಪಟ್ಟಣದಲ್ಲಿ ಹೆದ್ದಾರಿ ತಡೆ ನಡೆಸಿದರು.ಪ್ರತಿಭಟನಾಕಾರರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್‌ಗಳು, ಟೆಂಪೋ, ಕಾರು, ಲಾರಿಗಳು ಬೆಂಗಳೂರು-ಮೈಸೂರು ಹೆದ್ದಾರಿ ವೃತ್ತದಲ್ಲಿ ಜಮಾಯಿಸಿದರು. ಜಲ್ಲಿ ಕ್ರಷರ್ ಮಾಲೀಕರು ಸಂಘದವರು ತಮ್ಮ ವಾಹನಗಳನ್ನು ಹೆದ್ದಾರಿಯಲ್ಲಿ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.ಕಿರಂಗೂರು ಸರ್ಕಲ್‌ನಿಂದ ಪಟ್ಟಣದ ಕುವೆಂಪು ವೃತ್ತದ ವರೆಗೆ ಒಂದೂವರೆ ಕಿ.ಮೀ. ವರೆಗೆ ಪ್ರತಿಭಟನಾಕಾರರು ಇದ್ದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ರೈತರು ಬಸ್‌ಗಳ ಟಾಪ್ ಏರಿ ಕೆಆರ್‌ಎಸ್ ಕಡೆಗೆ ಸಾಗಿದರು. ಮಹಿಳೆಯರು ಸುನಂದಾ ಜಯರಾಂ ನೇತೃತ್ವದಲ್ಲಿ ಕುವೆಂಪು ಸರ್ಕಲ್‌ನಿಂದ ಸೆಸ್ಕ್ ಕಚೇರಿಯ ವರೆಗೆ ಕಾಲ್ನಡಿಗೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾವೇರಿ ನದಿ ಪ್ರಾಧಿಕಾರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು.ಹೆದ್ದಾರಿ ವೃತ್ತದಲ್ಲಿ ಒಮ್ಮೆಲೇ ನೂರಾರು ವಾಹನಗಳು, ಸಹಸ್ರಾರು ಪ್ರತಿಭಟನಾಕಾರರು ಜಮಾಯಿಸಿದ್ದರಿಂದ ಬೈಕ್‌ಗಳು ಸಂಚರಿಸುವುದೂ ಕಷ್ಟವಾಯಿತು. ಮತ್ತೊಂದೆಡೆ ಶ್ರೀರಂಗಪಟ್ಟಣ-ಬೀದರ್ ಹೆದ್ದಾರಿಯಲ್ಲಿ ಕೂಡ ಪ್ರತಿಭಟನೆ ನಡೆಯಿತು. ಬೆರಳೆಣಿಕೆಯಷ್ಟು ಇದ್ದ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂತು. ಮಂಡ್ಯ ಶಾಸಕ ಎಂ.ಶ್ರೀನಿವಾಸ್, ಜೆಡಿಎಸ್ ಮುಖಂಡ ಅಶೋಕ್ ಜಯರಾಂ ಇತರರು ಕೆಲಕಾಲ ಧರಣಿಯಲ್ಲಿ ಪಾಲ್ಗೊಂಡಿದ್ದರು.ಪೊರಕೆ, ತಮಟೆ ಚಳವಳಿ

ಶ್ರೀರಂಗಪಟ್ಟಣ:
ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಪಟ್ಟಣದ ಗಾಂಧಿನಗರದ ನಿವಾಸಿಗಳು ಬುಧವಾರ ಪಟ್ಟಣದಲ್ಲಿ ಪೊರಕೆ ಹಾಗೂ ತಮಟೆ ಚಳವಳಿ ನಡೆಸಿದರು.ಪುರಸಭೆ ವೃತ್ತದಿಂದ ಕುವೆಂಪು ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪೌರ ಕಾರ್ಮಿಕರು ಕೇಂದ್ರ ಹಾಗೂ ತಮಿಳುನಾಡು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಸುಮಾರು ಒಂದೂವರೆ ತಾಸು ತಮಟೆ ಬಾರಿಸುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯ ಜಿಲ್ಲಾ ಜಲ್ಲಿ ಕ್ರಷರ್ ಮತ್ತು ಕ್ವಾರಿ ಮಾಲೀಕರ ಸಂಘದಿಂದ ಪ್ರತಿಭಟನೆ ನಡೆಸಿದರು. ರಾಮದೇವ್, ಜಿ.ಎಲ್.ಲಕ್ಷ್ಮೇಗೌಡ, ಚಂದ್ರಶೇಖರ್, ಬಸವರಾಜು, ಶ್ರೀಕಂಠು ಇದ್ದರು.ಮತ್ತೊಂದೆಡೆ ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ ಕೃಷ್ಣಪ್ಪ ನೇತೃತ್ವದಲ್ಲಿ ಸದಸ್ಯರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಉಪಾಧ್ಯಕ್ಷೆ ಗಾಯತ್ರಿ, ಸದಸ್ಯರಾದ ಎಸ್. ಪ್ರಕಾಶ್, ವಿದ್ಯಾ ಉಮೇಶ್, ಪದ್ಮಮ್ಮ, ನಿಂಗಮ್ಮ, ಲಕ್ಷ್ಮಿನಾರಾಯಣ, ಪುರಸಭೆ ಮಾಜಿ ಅಧ್ಯಕ್ಷರಾದ ಗಂಜಾಂ ನರಸಿಂಹಸ್ವಾಮಿ, ಶೀಲಾ ನಂಜುಂಡಯ್ಯ ಇತರರು ಪಾಲ್ಗೊಂಡಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ, ಪ್ರವೀಣ್‌ಶೆಟ್ಟಿ ಬಣ, ದಲಿತ ಸಂಘರ್ಷ ಸಮಿತಿ, ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ಇತರ ಸಂಘಟನೆಗಳು ಪ್ರತಿಭಟನೆ ನಡೆಸಿದವು.ಎತ್ತಿನಗಾಡಿ ಮೆರವಣಿಗೆ: ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮಸ್ಥರು ತಮಿಳುನಾಡಿಗೆ ಕಾವೇರಿ ಹರಿಸುವುದನ್ನು ವಿರೋಧಿಸಿ ಬುಧವಾರ ಪಟ್ಟಣದಲ್ಲಿ ಎತ್ತಿನಗಾಡಿ ಮೆರವಣಿಗೆ ನಡೆಸಿದರು.ಕೂಡಲಕುಪ್ಪೆಯಿಂದ ಪಟ್ಟಣದ ವರೆಗೆ ಸುಮಾರು 4 ಕಿ.ಮೀ. ಪ್ರತಿಭಟನಾ ಮೆರವಣಿಗೆ ನಡೆಸಿದರು. ಪೂರ್ವ ಕೋಟೆ ಮಾರ್ಗವಾಗಿ ಪಟ್ಟಣದ ರಾಜ ಒಡೆಯರ್ ಬೀದಿಯಲ್ಲಿ ಎತ್ತಿನಗಾಡಿಗಳು ಸಾಗಿ ಬಂದವು.ಎತ್ತಿನ ಗಾಡಿಗಳನ್ನು ರಸ್ತೆಯಲ್ಲಿ  ನಿಲ್ಲಿಸಿ ರಸ್ತೆ ನಡೆಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಸಿ.ಸೋಮಶೇಖರ್, ನಾಗೇಂದ್ರಸ್ವಾಮಿ, ಗೋಪಾಲಗೌಡ, ತಮ್ಮಣ್ಣಗೌಡ ಸೇರಿದಂತೆ ಕೂಲಕುಪ್ಪೆ ಗ್ರಾಮದ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಟೆಂಪೋ ಮತ್ತು ಟ್ಯಾಕ್ಸಿ ಸಂಘ: ವಿನಾಯಕ ಗೂಡ್ಸ್ ಟೆಂಪೋ ಹಾಗೂ ಶ್ರೀರಂಗ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು. ಶ್ರೀರಂಗನಾಥಸ್ವಾಮಿ ದೇವಾಲಯ ಬಳಿಯಿಂದ ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದವರೆಗೆ ಟೆಂಪೋ, ಟ್ಯಾಕ್ಸಿಗಳ ಸಹಿತ ಪ್ರತಿಭಟನೆ ನಡೆಸಿದರು. ಎನ್.ಶಿವಸ್ವಾಮಿ, ಭಾಸ್ಕರ್, ಗೋಪಿ, ಕಾಳೇಗೌಡ ನೇತೃತ್ವ ವಹಿಸಿದ್ದರು.ಬೆಳಗೊಳದಲ್ಲಿ ರೈಲು ತಡೆ

ಶ್ರೀರಂಗಪಟ್ಟಣ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸುವಂತೆ ಅಗ್ರಹಿಸಿ ತಾಲ್ಲೂಕಿನ ಬೆಳಗೊಳ ಗ್ರಾಮಸ್ಥರು ಬುಧವಾರ ಮೈಸೂರು- ಶಿವಮೊಗ್ಗ ರೈಲು ತಡೆದು ಪ್ರತಿಭಟನೆ ನಡೆಸಿದರು.ಬೆಳಿಗ್ಗೆ 10.30ಕ್ಕೆ ಬರಬೇಕಾದ ಮೈಸೂರು- ಶಿವಮೊಗ್ಗ ರೈಲು 30 ನಿಮಿಷ ತಡವಾಗಿ ಬೆಳಗೊಳ ನಿಲ್ದಾಣಕ್ಕೆ ಆಗಮಿಸಿತು. 11.30ರಿಂದ 11.40 ವರೆಗೆ ರೈಲು ತಡೆ ನಡೆಸಿದ ಗ್ರಾಮಸ್ಥರು ಕಾವೇರಿ ನದಿ ಪ್ರಾಧಿಕಾರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆಲವರು ರೈಲು ಗಾಡಿಯ ಮೇಲೇರಿ ಘೋಷಣೆ ಕೂಗಿದರೆ ಮತ್ತೆ ಕೆಲವರು ಹಳಿಗಳ ಮೇಲೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.  ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಟಿ.ಶ್ರೀನಿವಾಸ್, ಪೈ.ನಂಜಪ್ಪ, ಯಜಮಾನ್ ವಿಷಕಂಠೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಶಶಿಕುಮಾರ್, ವಿಷಕಂಠು, ಸುನಿಲ್, ಬಲಮುರಿ ದೇವಾಲಯಗಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ, ಶ್ರೀನಿವಾಸೇಗೌಡ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಕೆ.ಆರ್.ಪೇಟೆ: ಕಾವೇರಿ ಚಳವಳಿ ಜೋರು

ಕೃಷ್ಣರಾಜಪೇಟೆ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಬುಧವಾರ ಪ್ರತಿಭಟನೆಗಳು ನಡೆದಿವೆ.ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ತಾಲ್ಲೂಕಿನ ರೈತಸಂಘದ ವತಿಯಿಂದ ನೂರಾರು ರೈತರು ಪ್ರತಿಭಟನೆ ನಡೆಸಿದರು.ಪ್ರಧಾನಮಂತ್ರಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿ ದಹನ ಮಾಡಿ, ಘೋಷಣೆ ಕೂಗಲಾಯಿತು. ಮುಖಂಡರಾದ ಎಂ.ವಿ.ರಾಜೇಗೌಡ, ಡಿ.ಎಸ್.ನಾಗೇಂದ್ರ, ನೀತಿಮಂಗಲ ಮಹೇಶ್, ಬೂಕನಕೆರೆ ನಾಗರಾಜು, ಸಿಂಧುಘಟ್ಟ ರವಿ, ಹೆಮ್ಮಡಹಳ್ಳಿ ದೇವೇಗೌಡ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಸಹ ಪಟ್ಟಣದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದರು.ಹೇಮಾವತಿ ನದಿಗಿಳಿದು ಪ್ರತಿಭಟನೆ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಚನ್ನಮ್ಮ ಅಭಿಮಾನಿ ಬಳಗದ ಅಧ್ಯಕ್ಷ ಕೆ.ಸಿ.ನಾರಾಯಣಗೌಡರ ನೇತೃತ್ವದಲ್ಲಿ ತಾಲ್ಲೂಕಿನ ಹೇಮಗಿರಿ ಬಳಿ ಹೇಮಾವತಿ ನದಿಗಿಳಿದು ಪ್ರತಿಭಟನೆ ಮಾಡಲಾಯಿತು. ಅಭಿಮಾನಿ ಬಳಗದ ಗೌರವಾಧ್ಯಕ್ಷ ನಾಟನಹಳ್ಳಿ ಗಂಗಾಧರ್, ಮುಖಂಡರಾದ ಕೆ.ಸಿ.ರೇವಣ್ಣ, ಕೆ.ಆರ್.ನೀಲಕಂಠ, ಬಂಡಿಹೊಳೆ ರಮೇಶ್, ಶೀಲನೆರೆ ದಿನೇಶ್ ಪಾಲ್ಗೊಂಡರು.ವಕೀಲರ ಪ್ರತಿಭಟನೆ : ತಾಲ್ಲೂಕಿನ ವಕೀಲರು ಬುಧವಾರ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಕಾವೇರಿ ಚಳವಳಿಗೆ ಬೆಂಬಲ ನೀಡಿದರು. ನ್ಯಾಯಾಲಯದ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷ ಎಸ್.ಸಿ.ವಿಜಯಕುಮಾರ್, ಕಾರ್ಯದರ್ಶಿ ಜಿ.ಆರ್.ಅನಂತರಾಮಯ್ಯ, ವಕೀಲರಾದ ಬಂಡಿಹೊಳೆ ಗಣೇಶ್, ವಿ.ಎಸ್.ಧನಂಜಯ, ಎಂ.ಆರ್.ಪ್ರಸನ್ನಕುಮಾರ್, ಎಸ್.ಆರ್.ನವೀನ್‌ಕುಮಾರ್, ಪಿ.ಬಿ.ಮಂಜುನಾಥ್, ಕೆರೆಮೇಗಲ ಕೊಪ್ಪಲು ಶಂಕರ್, ಎಂ.ಎಲ್.ಸುರೇಶ್, ವಳಗೆರೆ ಮೆಣಸ ಸತೀಶ್  ಭಾಗವಹಿಸಿದ್ದರು.ಅಕ್ಕಿಹೆಬ್ಬಾಳು, ಬೂಕನಕೆರಗಳಲ್ಲಿ ಬಂದ್: ತಾಲ್ಲೂಕಿನ ಹೋಬಳಿ ಕೇಂದ್ರಗಳಾದ ಅಕ್ಕಿಹೆಬ್ಬಾಳು ಮತ್ತು ಬೂಕನಕೆರೆಗಳಲ್ಲಿ ಸಹ ನಾಗರಿಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಬಂದ್ ಮಾಡಿ ಕಾವೇರಿ ಚಳವಳಿಗೆ ಬೆಂಬಲ ನೀಡಿದರು. ಆಟೋ ಚಾಲಕರು ಸಹ ಬಂದ್‌ಗೆ  ಬೆಂಬಲ ನೀಡಿದರು.ಪ್ರತಿಭಟನಾಕಾರರು ರಸ್ತೆಗಳಲ್ಲಿ ಕುಳಿತು ಅಡುಗೆ ತಯಾರಿಸಿ ಊಟ ಮಾಡಿದರು. ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬೂಕನಕೆರೆ ಜವರಾಯಿಗೌಡ, ಮುಖಂಡರಾದ ಬೋಳೇಗೌಡ, ಬಿ.ಟಿ.ವೆಂಕಟೇಶ್, ರಂಗನಾಥಪುರ ನಾಗರಾಜು, ಅಕ್ಕಿಹೆಬ್ಬಾಳು ಗ್ರಾಮಪಂಚಾಯ್ತಿ ಅಧ್ಯಕ್ಷ ವಾಹಿದ್‌ಖಾನ್, ಮುಖಂಡರಾದ ರಾಜನಾಯಕ್, ಜಯರಾಮನಾಯಕ್  ಇತರರು ಇದ್ದರು.ಮದ್ದೂರು: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಮದ್ದೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಖಂಡಿಸಿ ಬುಧವಾರ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿದೆಡೆ ಪ್ರತಿಭಟನೆಗಳ ನಡೆದವು.ಪಟ್ಟಣದ ಹಳೇ ಒಕ್ಕಲಿಗರ ಬೀದಿಯಿಂದ ಪುರಸಭಾಧ್ಯಕ್ಷ ಅಂಕಪ್ಪ ಎ.ಚಂದು ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಅಲ್ಲಿಂದ ಸಾರಿಗೆ ಬಸ್‌ನಿಲ್ದಾಣಕ್ಕೆ ಆಗಮಿಸಿದ ಪ್ರತಿಭಟನಾಕಾರರು ಅಲ್ಲಿ ಜಯಲಲಿತಾ ಪ್ರತಿಕೃತಿ ದಹಿಸಿ ಹೆದ್ದಾರಿ ತಡೆ ನಡೆಸಿದರು. ಪುರಸಭೆ ಮಾಜಿ ಅಧ್ಯಕ್ಷ ಅಂಕಪ್ಪ ಎ.ಚಂದು,  ಮುಖಂಡರಾದ ಚಿದುಕುಮಾರ್, ಶಿವಲಿಂಗು, ಕಿರಣ್, ಸಂತೋಷ್‌ಕುಮಾರ್, ಮಧುಕುಮಾರ್, ರಾಮಚಂದ್ರು ಸೇರಿದಂತೆ ಹಲವರು ಭಾಗವಹಿಸಿದ್ದರು.ವಕೀಲರ ಬೈಕ್ ರ‌್ಯಾಲಿ: ಪಟ್ಟಣದಲ್ಲಿ ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಬೈಕ್ ರ‌್ಯಾಲಿ ನಡೆಸಿದರು. ನ್ಯಾಯಾಲಯ ಆವರಣದಿಂದ ಶಿವಪುರ ಧ್ವಜಸತ್ಯಾಗ್ರಹಸೌಧದವರೆಗೆ ರ‌್ಯಾಲಿ ನಡೆಸಿದರು. ನಂತರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಖಂಡನಾ ನಿರ್ಣಯದ ಪ್ರತಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.ವಕೀಲರ ಸಂಘದ ಅಧ್ಯಕ್ಷ ಮಾದೇಗೌಡ, ಕಾರ್ಯದರ್ಶಿ ಪ್ರಶಾಂತ್, ಪ್ರಭಾಕರ್, ಸ್ವಾಮಿ, ಮಲ್ಲೇಶ್, ಕೆ.ಪಿ.ಶೋಭ, ವಿಲಾಸಿನಿ, ರಾಣಿ, ಶಿವಣ್ಣ, ಮಹದೇವು, ವಿಜಯಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಛಾಯಾಗ್ರಾಹಕರ ಸಂಘ: ಪಟ್ಟಣದಲ್ಲಿ ವೃತ್ತಿನಿರತ ಛಾಯಾಗ್ರಾಹಕರ ಸಂಘದ ಸದಸ್ಯರು ಬೈಕ್ ರ‌್ಯಾಲಿ ನಡೆಸಿದರು. ಶಿವಪುರ ಧ್ವಜಸತ್ಯಾಗ್ರಹ ಸೌಧದವರೆಗೆ ರ‌್ಯಾಲಿ ನಡೆಸಿದ ಅವರು, ನಂತರ ಟಿ.ಬಿ.ವೃತ್ತದಲ್ಲಿ ಹೆದ್ದಾರಿ ತಡೆ ನಡೆಸಿದರು. ಸಂಘದ ಅಧ್ಯಕ್ಷ ನಂದಕಿಶೋರ್, ಕಾರ್ಯದರ್ಶಿ ಶಶಿಗೌಡ, ಸದಸ್ಯರಾದ ಚಂದ್ರು, ಮೋನಿ, ಬಾಲಾಜಿ, ಮಹದೇವಪ್ಪ, ಮಂಜುನಾಥ್, ರಾಮಣ್ಣ, ನಿತ್ಯಾನಂದ, ಉಮೇಶ್, ವೈ.ಬಿ.ಶ್ರೀಕಂಠೇಗೌಡ, ಮಧು, ಪ್ರಶಾಂತ್, ಗಿರೀಶ್, ಲಿಂಗಣ್ಣ ಇದ್ದರು.ಕೆಸ್ತೂರು ವೃತ್ತ: ಪಟ್ಟಣದ ಕೆಸ್ತೂರು ವೃತ್ತದಲ್ಲಿ ಹೆಮ್ಮನಹಳ್ಳಿ ಹಾಗೂ ಹುಳಗನಹಳ್ಳಿ ಗ್ರಾಮಸ್ಥರು ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು. ಗ್ರಾಮದಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಅವರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್, ಸದಸ್ಯರಾದ ಚಂದ್ರಶೇಖರ್, ಕೃಷ್ಣೇಗೌಡ, ಹುಳಗನಹಳ್ಳಿಯ ಶಿವಕುಮಾರ್, ಸುರೇಶ್, ಸ್ವಾಮಿ, ಟ್ರಾಕ್ಟರ್ ಕುಮಾರ್, ರಮೇಶ್, ಎಚ್.ಕುಮಾರ್ ನೇತೃತ್ವ ವಹಿಸಿದ್ದರು.ಗೆಜ್ಜಲಗೆರೆ: ಸಮೀಪದ ಗೆಜ್ಜಲಗೆರೆ ಬಳಿ ಕುದುರಗುಂಡಿ ಗ್ರಾಮಸ್ಥರು ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು. ಗ್ರಾಮದ ಮುಖಂಡರದ ರಾಜಶೇಖರ್, ನಾಗರಾಜು, ನಾರಾಯಣ್, ಸುಬ್ರಹ್ಮಣ್ಯ, ಸುರೇಶ್,   ಸತೀಶ್,ಮಹೇಂದ್ರ, ಕೆಂಚೇಗೌಡ, ರಾಕೇಶ್, ಸಿದ್ದೇಗೌಡ ನೇತೃತ್ವ ವಹಿಸಿದ್ದರು.ಬೆಸಗರಹಳ್ಳಿ: ಕೋಣಸಾಲೆ ಮತ್ತು ಬೆಸಗರಹಳ್ಳಿ ಗ್ರಾಮಸ್ಥರು ಜಂಟಿಯಾಗಿ ಬೈಕ್ ರ‌್ಯಾಲಿ ನಡೆಸಿದರು. ರೈತಸಂಘದ ಅಧ್ಯಕ್ಷ ಕೋಣಸಾಲೆ ನರಸರಾಜು ನೇತೃತ್ವದಲ್ಲಿ ಟ್ರಾಕ್ಟರ್ ಮೂಲಕ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿಯೊಂದಿಗೆ ಪಟ್ಟಣಕ್ಕೆ ಆಗಮಿಸಿದ ಅವರು, ಬಸ್‌ನಿಲ್ದಾಣದ ಬಳಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ವರದರಾಜು, ಶ್ರೀಧರ್, ದೇವರಾಜು, ಶಿವಲಿಂಗು, ನಾಗೇಶ್, ಮಂಜು, ಸೋಮಶೇಖರ್, ಚಿದಾನಂದ, ಪ್ರಕಾಶ್ ಸೇರಿದಂತೆ ಹಲವರು ಇದ್ದರು.ಕೊಪ್ಪ: ಇಲ್ಲಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಕಾರ್ಮಿಕರು ಹಾಗೂ ನೌಕರರು ಕಾರ್ಖಾನೆ ಆವರಣದಿಂದ ಕೊಪ್ಪ ನಾಡ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು. ಕಾರ್ಖಾನೆ ಸಂಪರ್ಕಾಧಿಕಾರಿ ವಿಜಯಮಹಾಂತೇಶ್, ಗಿರೀಶ್, ಮನು, ಮಹೇಶ್, ಸೋಮಶೇಖರ್, ರಾಘವ, ಮಹೇಂದ್ರ ಸೇರಿದಂತೆ ಹಲವರು ನೇತೃತವ ವಹಿಸಿದ್ದರು.ವೈದ್ಯನಾಥಪುರ: ಇಲ್ಲಿಗೆ ಸಮೀಪದ ವೈದ್ಯನಾಥಪುರ ಗ್ರಾಮಸ್ಥರು ಟ್ರಾಕ್ಟರ್ ಮೂಲಕ ಜಯಲಲಿತಾ ಅವರ ಪ್ರತಿಕೃತಿಯ ಮೆರವಣಗೆ ನಡೆಸಿದರು. ನಂತರ ಪಟ್ಟಣಕ್ಕೆ ಆಗಮಿಸಿ ಹೆದ್ಧಾರಿಯಲ್ಲಿ ಅದನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಸಿದ್ದಪ್ಪ, ನಂಜಯ್ಯ, ಕರಿಯಪ್ಪ, ಜಯರಂ ನಾಥಪ್ಪ, ಚನ್ನಪ್ಪ, ಸ್ವಾಮಿ, ಸಿದ್ದು, ವಿ.ಟಿ.ಶಿವರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಒಟ್ಟಾಗಿ ಹೋರಾಡಲು ಮಧು ಕರೆ

ಹಲಗೂರು:
ತಮಿಳುನಾಡಿಗೆ ಕಾವೇರಿ ನೀರು ನಿಲ್ಲಿಸುವವರೆಗೂ ರಾಜ್ಯದ ಯಾವ ರಾಜಕಾರಣಿಯೂ ಜಿಲ್ಲೆಯ ಮಾರ್ಗವಾಗಿ ತೆರಳಲು ಅವಕಾಶ ಕೊಡಬಾರದು ಎಂದು ಮಧು ಜಿ.ಮಾದೇಗೌಡ ಪ್ರತಿಭಟನಾಕಾರರಿಗೆ ಕರೆ ನೀಡಿದರು.ಸಮೀಪದ ತೊರೆಕಾಡನಹಳ್ಳಿ ಗ್ರಾಮದ ಬೆಂಗಳೂರು ಜಲಮಂಡಲಿ ಮುತ್ತಿಗೆ ಮುನ್ನ ಶಿಂಷಾ ನದಿ ಸೇತುವೆ ಬಳಿ ಮಂಗಳವಾರ ರಸ್ತೆ ತಡೆ ನಡೆಸಿ ಮಾತನಾಡಿದರು. ಕಾವೇರಿ ಚಳುವಳಿ ಪ್ರಾರಂಭವಾಗಿ 20ದಿನಗಳು ಕಳೆದಿವೆ. ಸಂಸದರು, ಸಚಿವರು, ಶಾಸಕರು ಒಗ್ಗೂಡಿ ಪ್ರಧಾನಮಂತ್ರಿಗಳಿಗೆ ರಾಜ್ಯದ ಬರಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಡಿಲ್ಲ. ಕಾವೇರಿ ಹೋರಾಟದಲ್ಲಿ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗೂಡಬೇಕು ಎಂದರು.ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎ.ಎಸ್.ರಾಜೀವ, ಬಸವರಾಜು, ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಎಚ್.ಆರ್.ಪದ್ಮನಾಭ, ಎ.ಎಸ್.ಸಂಜೀವ್, ನವಕರ್ನಾಟಕ ಯುವಶಕ್ತಿಯ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಕೆ.ಕುಮಾರ್, ಜಿಲ್ಲಾ ಸಮಿತಿಯ ಕೆ.ಶಿವರಾಜು, ಭಾನುಕುಮಾರ್, ಕರವೇ ಪ್ರವೀಣ್‌ಶೆಟ್ಟಿ ಬಣದ ಚಂದ್ರು, ಗೊಲ್ಲರಹಳ್ಳಿಸತೀಶ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry