ಶುಕ್ರವಾರ, ನವೆಂಬರ್ 15, 2019
21 °C

ಮುಂದುವರಿದ ಬರ; ಬಾರದ ಮಳೆ;ಬತ್ತುತ್ತಿದೆ ಕೊಳವೆ ಬಾವಿ; ಆತಂಕದಲ್ಲಿ ರೈತರು

Published:
Updated:

ಚಿಕ್ಕಬಳ್ಳಾಪುರ: ಆಕಾಶದತ್ತ ಮುಖ ಮಾಡಿ ಕೂತಿರುವ ರೈತರು ಒಂದೆಡೆ ಮಳೆ ಬಾರದ ಕಾರಣ ನಿರಾಸೆಗೊಂಡಿದ್ದರೆ, ಇನ್ನೊಂದೆಡೆ ಬರಿದಾಗುತ್ತಿರುವ ಕೊಳವೆಬಾವಿಗಳು ಇನ್ನಷ್ಟು ಕಂಗಾಲಾಗಿಸಿದೆ.ಮಳೆಯಿಲ್ಲದ ಕಾರಣ ದಿಕ್ಕೇ ತೋಚದ ಸ್ಥಿತಿಗೆ ತಲುಪಿರುವ ರೈತರಿಗೆ ಕೊಳವೆವಾವಿಗಳಲ್ಲಿಯೂ ಸಹ ನೀರು ಬಾರದಿರುವುದು ಇನ್ನಷ್ಟು ಆತಂಕ ಮೂಡಿಸಿದೆ. ಸಕಾಲಕ್ಕೆ ಮಳೆ ಬಾರದಿದ್ದರೆ, ಬದುಕು ಮತ್ತೆ ಚೇತರಿಸಿಕೊಳ್ಳುವುದು ಕಷ್ಟ ಎಂಬ ಭೀತಿ ಅವರಲ್ಲಿ ಆವರಿಸತೊಡಗಿದೆ.ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆ ಬಾವಿಗಳನ್ನು ಕೊರೆಸಿದರೂ ಯಾವುದೇ ರೀತಿಯಲ್ಲೂ ಪ್ರಯೋಜನವಾಗದ ಕಾರಣ ತಲೆ ಮೇಲೆ ಕೈಹೊತ್ತು ಕೂತಿರುವ ರೈತರು ಸಾಲ ತೀರಿಸುವುದಾದರೂ ಹೇಗೆ ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ಇತ್ತ ಕೃಷಿ ಚಟುವಟಿಕೆ ನೆಚ್ಚಿಕೊಳ್ಳಲಾಗದೇ ಮತ್ತು ಕುಟುಂಬ ನಿರ್ವಹಿಸಲಾಗದೇ ಸಂಕಷ್ಟಕ್ಕೀಡಾಗಿರುವ ರೈತರು ಸೂಕ್ತ ಪರಿಹಾರೋಪಾಯಗಳಿಗೆ ಪರಿತಪಿಸುತ್ತಿದ್ದಾರೆ. ಶಾಶ್ವತವಲ್ಲದಿದ್ದರೂ ತಾತ್ಕಾಲಿಕ ಪರಿಹಾರ ನಿರೀಕ್ಷಿಸುತ್ತಿದ್ದಾರೆ.ಕೊಳವೆಬಾವಿ ಕೊರೆಸಲು 5 ಲಕ್ಷ ರೂಪಾಯಿ ಖರ್ಚಾಗುತ್ತದೆ. ನೀರು ಪತ್ತೆ ಮಾಡಲೆಂದೇ ಸುಮಾರು ಒಂದು ಲಕ್ಷ ರೂಪಾಯಿ ಖರ್ಚಾದರೆ, ನಂತರ ಸುಮಾರು 4 ಲಕ್ಷ ರೂಪಾಯಿವರೆಗೆ ಖರ್ಚು ಮಾಡಬೇಕಾಗುತ್ತದೆ. ಒಂದು ವೇಳೆ ಸಂಪೂರ್ಣವಾಗಿ 5 ಲಕ್ಷ ರೂಪಾಯಿ ಖರ್ಚು ಮಾಡಿದರೂ ಎಷ್ಟು ದಿನಗಳ ಕಾಲ ನೀರು ಬರುತ್ತದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇರುವುದಿಲ್ಲ.`ಜಿಲ್ಲೆಯು ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗೆ ವರ್ಷಗಳಿಂದ ಕೊಳವೆಬಾವಿಗಳನ್ನೇ ಅವಲಂಬಿಸಿದ್ದೇವೆ. ಆದರೆ ಇತ್ತೀಚಿನ ಕೆಲ ದಿನಗಳಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೊಳವೆ ಬಾವಿಗಳು ಸಹ ಬತ್ತುತ್ತಿವೆ. ಲಕ್ಷಾಂತರ ರೂಪಾಯಿ ಮಾಡಿರುವ ಸಾಲ ತೀರಿಸುವ ಮೊದಲೇ ಕೊಳವೆ ಬಾವಿ ಬತ್ತಿರುತ್ತದೆ.

 

ನೀರು ಲಭ್ಯವಾಗುವ ಸ್ಥಳವನ್ನು ಪರಿಶೀಲಿಸಿ, ಹೊಸ ಕೊಳವೆ ಬಾವಿಯನ್ನು ಕೊರೆಸಲು ಮತ್ತೆ 5 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಕೃಷಿ ಚಟುವಟಿಕೆಯಲ್ಲಿ ನಷ್ಟ ಹೊಂದಿರುವ ಬಹುತೇಕ ರೈತರು ಬದುಕುವ ಚೈತನ್ಯವನ್ನೇ ಕಳೆದುಕೊಂಡಿದ್ದಾರೆ ~ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಬಿ.ಎನ್.ಮುನಿಕೃಷ್ಣಪ್ಪ `ಪ್ರಜಾವಾಣಿ~ಗೆ ತಿಳಿಸಿದರು.ಇದರಿಂದ ಇನ್ನಷ್ಟು ಸಮಸ್ಯೆಗಳು ಹೆಚ್ಚುತ್ತಿವೆ. ಕುಡಿಯಲು ಮತ್ತು ಕೃಷಿ ಚಟುವಟಿಕೆಗೂ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಶ್ವತ ನೀರಾವರಿ ಯೋಜನೆ ಯಾವಾಗ ಜಾರಿಯಾಗುವುದೋ ಗೊತ್ತಿಲ್ಲ. ಆದರೆ ಯೋಜನೆ ಜಾರಿಯಾಗುವ ಹೊತ್ತಿಗೆ ಕೊಳವೆಬಾವಿಗಳು ಸಂಪೂರ್ಣವಾಗಿ ಬತ್ತಿ ಹೋಗುವುದೇ ಎಂಬ ಭೀತಿ ಕಾಡುತ್ತಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಸದ್ಯಕ್ಕೆ 5069 ಕೊಳವೆಬಾವಿಗಳಿದ್ದು, 2010ರಲ್ಲಿ 133 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಆದರೆ ಈಗ ಒಂದೊಂದಾಗಿ ಕೊಳವೆ ಬಾವಿಗಳು ಬತ್ತುತ್ತಿವೆ.ದೊಡ್ಡಮರಳಿ, ಯಲುವಹಳ್ಳಿ, ದೇವಶೆಟ್ಟಹಳ್ಳಿ, ಅಂಗಾಟ, ಕುಪ್ಪಹಳ್ಳಿ, ಚದುಲಪುರ, ಗೋಗೇನಹಳ್ಳಿ, ಕೊಳವನಹಳ್ಳಿ, ನಂದಿ, ಸುಲ್ತಾನ್‌ಪೇಟೆ ಮುಂತಾದ ಕಡೆ ಸುಮಾರು 80ಕ್ಕೂ ಹೆಚ್ಚು ಕೊಳವೆಬಾವಿಗಳು ಸಂಪೂರ್ಣವಾಗಿ ಬತ್ತಿಹೋಗಿವೆ. ಕೃಷಿಗೆ ಅಷ್ಟೇ ಅಲ್ಲ, ಕುಡಿಯಲು ಸಹ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ  ಎನ್ನುತ್ತಾರೆ ಮಂಜುನಾಥ್.ಕೊಳವೆಬಾವಿಗೆ ಖರ್ಚು

ಒಂದು ಕೊಳವೆಬಾವಿಯನ್ನು ಕೊರೆಸಲು ಮತ್ತು ಸಿದ್ಧಪಡಿಸಲು ಗರಿಷ್ಠ ಎರಡು ದಿನಗಳು ಬೇಕಾಗುತ್ತವೆ. ಕೊಳವೆಬಾವಿ ಕೊರೆಯುವ (ಡ್ರಿಲಿಂಗ್) ಖರ್ಚು ಒಂದು ಲಕ್ಷ ರೂಪಾಯಿ. ಒಂದು ವೇಳೆ ನೀರು ಸಿಕ್ಕರೆ, ಕೊರೆಯುವುದನ್ನು ಮುಂದುವರೆಸಲಾಗುತ್ತದೆ. ಆಳದಲ್ಲಿರುವ ನೀರನ್ನು ಮೇಲೆತ್ತಲು ಸುಮಾರು 4 ಲಕ್ಷ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ.200 ಅಡಿಗಳಷ್ಟು ಕೇಸಿಂಗ್ ಮಾಡಲು 40 ಸಾವಿರ ರೂಪಾಯಿ, ಮೋಟರ್‌ಪಂಪ್ ಬಳಕೆಗೆ 70 ಸಾವಿರ ರೂಪಾಯಿ, ಕೇಬಲ್‌ಗೆ 70 ಸಾವಿರ ರೂಪಾಯಿ, ಪೈಪ್‌ಗೆ ಒಂದು ಲಕ್ಷ ರೂಪಾಯಿ, ಪ್ಯಾನೆಲ್ ಬೋರ್ಡ್‌ಗೆ 30 ಸಾವಿರ ರೂಪಾಯಿ ಮತ್ತು ವಿದ್ಯುತ್ ಕಂಬ ಸೌಲಭ್ಯಕ್ಕೆ 20 ಸಾವಿರ ರೂಪಾಯಿ ಖರ್ಚು.

ಪ್ರತಿಕ್ರಿಯಿಸಿ (+)