ಗುರುವಾರ , ಮೇ 13, 2021
39 °C
ಏಕದಿನ ಕ್ರಿಕೆಟ್: ಎಲ್ಲ ಪ್ರಮುಖ ಪ್ರಶಸ್ತಿ ಗೆದ್ದುಕೊಟ್ಟ ಮಹೇಂದ್ರ ಸಿಂಗ್ ದೋನಿ

ಮುಂದುವರಿದ ಭಾರತದ ಪಾರಮ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಮಿಂಗ್‌ಹ್ಯಾಂ: ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪಾರಮ್ಯ ಮತ್ತೆ ಮುಂದುವರಿದಿದೆ. 2011 ರಲ್ಲಿ ಐಸಿಸಿ ವಿಶ್ವಕಪ್ ಜಯಿಸಿ ಕ್ರಿಕೆಟ್ ಜಗತ್ತಿನ ಉತ್ತುಂಗದ ಶಿಖರವನ್ನೇರಿದ್ದ ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಅಲ್ಲಿಂದ ಕೆಳಗಿಳಿಯಲು ಮನಸ್ಸಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಉದ್ದಕ್ಕೂ ಅಜೇಯ ಓಟ ನಡೆಸಿದ ಭಾರತ ಅಂತಿಮವಾಗಿ ಪ್ರಶಸ್ತಿ ಗೆದ್ದದ್ದು ಅಮೋಘ ಸಾಧನೆಯೇ ಹೌದು. ಭಾನುವಾರ ನಡೆದ  ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಐದು ರನ್‌ಗಳ ರೋಚಕ ಗೆಲುವು ಸಾಧಿಸಿದ್ದ ಭಾರತ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.ಮೊದಲು ಬ್ಯಾಟ್ ಮಾಡಿದ್ದ ಭಾರತ 20 ಓವರ್‌ಗಳಲ್ಲಿ ಕೇವಲ 129 ರನ್ ಮಾತ್ರ ಪೇರಿಸಲು ಯಶಸ್ವಿಯಾಗಿತ್ತು. ಈ ವೇಳೆ ದೇಶದ ಕೋಟ್ಯಂತರ ಅಭಿಮಾನಿಗಳು ಅಲ್ಪ ಆತಂಕ ಎದುರಿಸಿದ್ದು ನಿಜ. ಆದರೆ ದೋನಿ ಬಳಗ ಅಮೋಘ ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂಲಕ ಇಂಗ್ಲೆಂಡ್ ತಂಡವನ್ನು 124 ರನ್‌ಗಳಿಗೆ ಕಟ್ಟಿಹಾಕಿ ಟ್ರೋಫಿ ಎತ್ತಿಹಿಡಿದು ಅಭಿಮಾನಿಗಳ ಹೃದಯ ಗೆದ್ದಿದೆ.ಕ್ಷೇತ್ರರಕ್ಷಣೆಗೆ ಇಳಿಯುವ ಮುನ್ನ ನಾಯಕ ದೋನಿ ಸಹ ಆಟಗಾರರಿಗೆ ಕಿವಿಮಾತು ಹೇಳಿದ್ದರು. ಇದರಿಂದ ಉತ್ತೇಜನ ಪಡೆದ ಆಟಗಾರರು ಅಂಗಳದಲ್ಲಿ ಚೇತೋಹಾರಿ ಪ್ರದರ್ಶನ ತೋರಿದ್ದರು.`ಇದು ಏಕದಿನ ಪಂದ್ಯ ಎಂಬ ಭಾವನೆಯನ್ನು ಮನಸ್ಸಿನಿಂದ ಕಿತ್ತುಹಾಕಿ. ಇದೊಂದು ಟ್ವೆಂಟಿ-20 ಪಂದ್ಯವೆಂದು ತಿಳಿದು ಆಡಿ. ಐಪಿಎಲ್ ಹಾಗೂ ಟ್ವೆಂಟಿ-20 ಪಂದ್ಯಗಳಲ್ಲಿ ಕೆಲವೊಮ್ಮೆ 130 ರನ್‌ಗಳು ಕೂಡಾ ಕಠಿಣ ಸವಾಲಾಗಿ ಪರಿಣಮಿಸುತ್ತದೆ' ಎಂದು ಫೀಲ್ಡಿಂಗ್‌ಗೆ ಇಳಿಯುವ ಮುನ್ನ ಸಹ ಆಟಗಾರರಿಗೆ ತಿಳಿಸಿದ್ದಾಗಿ ದೋನಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.`ಮಳೆ ಬರಲಿ ಎಂದು ಆಗಸದತ್ತ ನೋಡುವುದು ಬೇಡ ಎಂದು ಆಟಗಾರರಲ್ಲಿ ಹೇಳಿದೆ. ನಾವು ಒಬ್ಬರಿಗೊಬ್ಬರು ಸಹಾಯ ಮಾಡಿದರೆ ಮಾತ್ರ ದೇವರು ನಮಗೆ ಸಹಾಯ ಮಾಡುವನು ಎಂದೆ. ಟ್ರೋಫಿ ಗೆಲ್ಲಬೇಕಾದರೆ ಕಠಿಣ ಪ್ರಯತ್ನ ನಡೆಸುವುದೇ ನಮ್ಮ ಮುಂದಿರುವ ಏಕೈಕ ದಾರಿ ಎಂಬುದನ್ನು ಎಲ್ಲರಿಗೂ ನೆನಪಿಸಿದೆ' ಎಂದಿದ್ದಾರೆ.`ಅಗ್ರ ರ‍್ಯಾಂಕ್ ಹೊಂದಿರುವ ನಾವು ವಿಶ್ವಚಾಂಪಿಯನ್ನರು ಕೂಡಾ ಹೌದು. ಆದ್ದರಿಂದ ಎದುರಾಳಿ ತಂಡ 130 ರನ್ ಗಳಿಸದಂತೆ ನೋಡಿಕೊಳ್ಳಿ. ಮಳೆ ಅಥವಾ ಹೊರಗಿನ ಯಾವುದೇ ಸಹಾಯವನ್ನು ನಿರೀಕ್ಷಿಸಬೇಡಿ' ಎಂದು ದೋನಿ ನುಡಿದಿದ್ದರು. ನಾಯಕನು ನುಡಿದಂತೆ ಎಲ್ಲರೂ ಶ್ರೇಷ್ಠ ಪ್ರದರ್ಶನ ನೀಡಿದ್ದರಿಂದ ತಂಡಕ್ಕೆ ಟ್ರೋಫಿ ಗೆಲ್ಲಲು ಸಾಧ್ಯವಾಗಿದೆ.`ಪಂದ್ಯಶ್ರೇಷ್ಠ' ರವೀಂದ್ರ ಜಡೇಜ ಮತ್ತು ಟೂರ್ನಿಯಲ್ಲಿ ಅತ್ಯಧಿಕ ರನ್ ಪೇರಿಸಿದ ಶಿಖರ್ ಧವನ್ ಪ್ರದರ್ಶನದ ಬಗ್ಗೆ ದೋನಿ ಮೆಚ್ಚುಗೆಯ ಮಾತನ್ನಾಡಿದರು. `ಜಡೇಜ ಯಾವುದೇ ಸವಾಲನ್ನೂ ಸುಲಭವಾಗಿ ಸ್ವೀಕರಿಸುವ ವ್ಯಕ್ತಿ. ಫೈನಲ್‌ನಲ್ಲಿ ಅವರು ಬ್ಯಾಟಿಂಗ್‌ನಲ್ಲೂ ಮಿಂಚಿದ್ದು ಸಂತಸದ ಸಂಗತಿ' ಎಂದಿದ್ದಾರೆ.ಭಾರತ ಎರಡನೇ ಸಲ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಈ ಮೊದಲು 2002 ರಲ್ಲಿ ಪ್ರಶಸ್ತಿ ಜಯಿಸಿತ್ತು. ಆದರೆ ಅಂದು ಫೈನಲ್ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಶ್ರೀಲಂಕಾ ಜೊತೆ ಜಂಟಿ ಚಾಂಪಿಯನ್ ಎನಿಸಿಕೊಂಡಿತ್ತು.ಇಂಗ್ಲೆಂಡ್‌ನ ನೆಲದಲ್ಲಿ ಕಿರೀಟ ಮುಡಿಗೇರಿಸಿಕೊಂಡಿರುವ ಕಾರಣ ಗೆಲುವಿನ ಸಿಹಿ ಸಹಜವಾಗಿ ಅಲ್ಪ ಹೆಚ್ಚಿದೆ. ಏಕೆಂದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಪರದಾಟ ನಡೆಸಿದ್ದೇ ಹೆಚ್ಚು. ಆದರೆ ಯುವ ಆಟಗಾರರನ್ನು ಒಳಗೊಂಡ ತಂಡ ಈ ಬಾರಿ ಇಂಗ್ಲೆಂಡ್‌ನ ಪರಿಸ್ಥಿತಿಗೆ ಬೇಗನೇ ಹೊಂದಿಕೊಂಡು, ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದೆ.`ಪರಿಸ್ಥಿತಿಗೆ ತಕ್ಕಂತೆ ಆಡುವವನೇ ಶ್ರೇಷ್ಠ ಆಟಗಾರ. ಹೆಚ್ಚಿನವರು ಆಟಗಾರನ ಕೌಶಲದ ಬಗ್ಗೆ ಮಾತನಾಡುವರು. ಆದರೆ ನನ್ನ ಪ್ರಕಾರ, ಪರಿಸ್ಥಿತಿಯ ಬೇಡಿಕೆಗೆ ತಕ್ಕಂತೆ ಆಡುವವರು ತಂಡದಲ್ಲಿರಬೇಕಾದದ್ದು ಮುಖ್ಯ' ಎಂದು ಹೇಳಿದ್ದಾರೆ.ಧೈರ್ಯದ ನಿರ್ಧಾರ: ಫೈನಲ್‌ನಲ್ಲಿ ದೋನಿ ತೆಗೆದುಕೊಂಡ ಕೆಲವು ಧೈರ್ಯದ ನಿರ್ಧಾರಗಳು ಕ್ರಿಕೆಟ್ ಪಂಡಿತರ ಮೆಚ್ಚುಗೆಗೆ ಪಾತ್ರವಾಗಿದೆ. 18ನೇ ಓವರ್ ಬೌಲರ್ ಮಾಡುವ ಜವಾಬ್ದಾರಿಯನ್ನು ಇಶಾಂತ್ ಶರ್ಮಗೆ ನೀಡಿದ್ದು ಅವರ ಪ್ರಮುಖ ನಿರ್ಧಾರಗಳಲ್ಲಿ ಒಂದು.ದೆಹಲಿಯ ವೇಗಿ ತಮ್ಮ ಮೊದಲ ಮೂರು ಓವರ್‌ಗಳಲ್ಲಿ 27 ರನ್ ಬಿಟ್ಟುಕೊಟ್ಟಿದ್ದರಲ್ಲದೆ, ಆತ್ಮವಿಶ್ವಾಸ ಕಳೆದುಕೊಂಡಿದ್ದರು. ಆದರೆ ದೋನಿ ಮಾತ್ರ ಇಶಾಂತ್ ಮೇಲಿನ ನಂಬಿಕೆ ಕಳೆದುಕೊಂಡಿರಲಿಲ್ಲ. ಉಮೇಶ್ ಯಾದವ್ (2-0-10-1) ಮತ್ತು ಭುವನೇಶ್ವರ್ ಕುಮಾರ್ (3-0-19-0) ಅವರಿಗೆ ಚೆಂಡು ನೀಡುವ ಬದಲು ಇಶಾಂತ್‌ಗೆ ನೀಡಿದ್ದರು.ನಾಯಕ ಇಟ್ಟಂತಹ ಭರವಸೆಯನ್ನು ಅವರು ಹುಸಿಗೊಳಿಸಲಿಲ್ಲ.18ನೇ ಓವರ್‌ನ ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಎಯೊನ್ ಮಾರ್ಗನ್ ಹಾಗೂ ರವಿ ಬೋಪಾರ ವಿಕೆಟ್ ಪಡೆದ ಇಶಾಂತ್ ಇಂಗ್ಲೆಂಡ್‌ಗೆ ಬಲವಾದ ಪೆಟ್ಟುನೀಡಿದ್ದರು. ಐದನೇ ವಿಕೆಟ್‌ಗೆ 64 ರನ್ ಸೇರಿಸಿದ್ದ ಮಾರ್ಗನ್ (33) ಮತ್ತು ಬೋಪಾರ (30) ವಿಕೆಟ್‌ಗಳ ಪತನದಿಂದಾಗಿ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.ಇದೀಗ ದೋನಿ ಎಲ್ಲ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದುಕೊಟ್ಟು ಭಾರತ ಕಂಡಂತಹ ಅತ್ಯಂತ ಶ್ರೇಷ್ಠ ಎನಿಸಿಕೊಂಡಿದ್ದಾರೆ. `ಮಹಿ' ನಾಯಕತ್ವದಲ್ಲಿ ಭಾರತ 2007ರ ಟ್ವೆಂಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಜಯಿಸಿತ್ತು.ಆಟಗಾರರಿಗೆ ತಲಾ ರೂ.1ಕೋಟಿ

ನವದೆಹಲಿ (ಪಿಟಿಐ
): ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಎಲ್ಲ ಸದಸ್ಯರಿಗೆ ತಲಾ ಒಂದು ಕೋಟಿ ರೂಪಾಯಿ ನೀಡುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ.ಅದೇ ರೀತಿ, ಕೋಚ್ ಒಳಗೊಂಡಂತೆ ತಂಡದ ಸಹಾಯಕ ಸಿಬ್ಬಂದಿಗೆ ತಲಾ 30 ಲಕ್ಷ ರೂ. ನೀಡಲಾಗುವುದು ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.ದಾಲ್ಮಿಯ ಅಭಿನಂದನೆ

ನವದೆಹಲಿ (ಪಿಟಿಐ): 
ಬಿಸಿಸಿಐ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರು ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಸಾಧನೆಯನ್ನು ಕೊಂಡಾಡಿದ್ದಾರೆ.`ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡ ಭಾರತ ತಂಡದ ಎಲ್ಲ ಸದಸ್ಯರಿಗೆ ಅಭಿನಂದನೆಗಳು' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

`ಭಾರತ ಟೂರ್ನಿಯಲ್ಲಿ ಅಜೇಯವಾಗಿದ್ದುಕೊಂಡು ಟ್ರೋಫಿ ಜಯಿಸಿದ್ದು ಮೆಚ್ಚುವಂತಹ ಅಂಶ' ಎಂದಿದ್ದಾರೆ.ಆಟಗಾರರ ಟ್ವಿಟ್ ನುಡಿ

`ಎಲ್ಲರಿಗೂ ಧನ್ಯವಾದ.... ಜಯವನ್ನು ಸಂಭ್ರಮಿಸಿ.... ನಮ್ಮ ಜಯ ಉತ್ತರಾಖಂಡ ದುರಂತದ ನೋವನ್ನು ಕಡಿಮೆಗೊಳಿಸಲಿದೆ ಎಂಬ ನಿರೀಕ್ಷೆ'     -ಸುರೇಶ್ ರೈನಾ`ಚಾಂಪಿಯನ್ಸ್ ಟ್ರೋಫಿ  ಗೆದ್ದಿದ್ದು ಒಂದು ವಿಸ್ಮಯದ ಘಟನೆ. ಈಗಲೂ ನಂಬಲಾಗುತ್ತಿಲ್ಲ. ಈ ಗೆಲುವು ಭಾರತದ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗೆ ಅರ್ಪಣೆ'  - ಆರ್.ಅಶ್ವಿನ್ `ಮತ್ತೊಂದು ಟ್ರೋಫಿ ಗೆದ್ದಿರುವ ಭಾರತ ತಂಡಕ್ಕೆ ಧನ್ಯವಾದಗಳು. ಅಂತಿಮವಾಗಿ ನಾವು ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ನರಾಗಿದ್ದೇವೆ. ಅದ್ಭುತ ಪ್ರದರ್ಶನ ತೋರಿದ ಶಿಖರ್, ಐ ಲವ್‌ಯು...'

-ಉನ್ಮುಕ್ತ್ ಚಾಂದ್, ದೆಹಲಿ ಬ್ಯಾಟ್ಸ್‌ಮನ್ಆತಂಕದಲ್ಲಿದ್ದೆ: ಇಶಾಂತ್ ಶರ್ಮ

ಬರ್ಮಿಂಗ್‌ಹ್ಯಾಂ (ಐಎಎನ್‌ಎಸ್
): ಫೈನಲ್ ಪಂದ್ಯದಲ್ಲಿ 18ನೇ ಓವರ್ ಎಸೆಯುವ ಮುನ್ನ ಅಲ್ಪ ಆತಂಕಗೊಂಡಿದ್ದೆ ಎಂದು ವೇಗದ ಬೌಲರ್ ಇಶಾಂತ್ ಶರ್ಮ ಹೇಳಿದ್ದಾರೆ.ಇಂಗ್ಲೆಂಡ್ ಗೆಲುವಿಗೆ ಕೊನೆಯ ಮೂರು ಓವರ್‌ಗಳಲ್ಲಿ 28 ರನ್‌ಗಳ ಅವಶ್ಯಕತೆಯಿತ್ತು. ದೋನಿ ಈ ವೇಳೆ ಇಶಾಂತ್ ಕೈಗೆ ಚೆಂಡು ನೀಡಿದ್ದರು. ದೆಹಲಿಯ ವೇಗಿ ಆ ಓವರ್‌ನಲ್ಲಿ ಎರಡು ವಿಕೆಟ್ ಪಡೆದು ಪಂದ್ಯಕ್ಕೆ ಮಹತ್ವದ ತಿರುವು ನೀಡುವಲ್ಲಿ ಯಶಸ್ವಿಯಾಗಿದ್ದರು.`ಆ ಕ್ಷಣದಲ್ಲಿ ನಾನು ಸ್ವಲ್ಪ ಆತಂಕದಲ್ಲಿದ್ದೆ. ಏಕೆಂದರೆ ಮೊದಲ ಮೂರು ಓವರ್‌ಗಳಲ್ಲಿ ನನಗೆ ಎಂದಿನ ಲಯದಲ್ಲಿ ಬೌಲಿಂಗ್ ಮಾಡಲು ಆಗಿರಲಿಲ್ಲ. ಆದರೂ ಒತ್ತಡವನ್ನು ಮೆಟ್ಟಿನಿಂತು ಸವಾಲನ್ನು ಸ್ವೀಕರಿಸಿದೆ. ಈ ಹಿಂದೆ ಕೂಡಾ ನಾನು ಇಂತಹ ಒತ್ತಡದ ಸಂದರ್ಭಗಳಲ್ಲಿ ಯಶಸ್ವಿ ಬೌಲಿಂಗ್ ದಾಳಿ ನಡೆಸಿದ್ದೆ. ಇದೇ ಕಾರಣದಿಂದ ದೋನಿ ನನಗೆ ಚೆಂಡು ನೀಡಿರುವ ಸಾಧ್ಯತೆಯಿದೆ' ಎಂದು ಇಶಾಂತ್ ಪ್ರತಿಕ್ರಿಯಿಸಿದ್ದಾರೆ.

***

ಪ್ರವಾಹದಲ್ಲಿ ಸಾವಿಗೀಡಾದವರಿಗೆ ಅರ್ಪಣೆ

ಬರ್ಮಿಂಗ್‌ಹ್ಯಾಂ:
ಟೂರ್ನಿಯಲ್ಲಿ ಅತ್ಯಧಿಕ ರನ್ ಪೇರಿಸಿ `ಚಿನ್ನದ ಬ್ಯಾಟ್' ಗೌರವ ಪಡೆದ ಆರಂಭಿಕ    ಬ್ಯಾಟ್ಸ್‌ಮನ್ ಶಿಖರ್ ಧವನ್ ತಮ್ಮ ಪ್ರಶಸ್ತಿಯನ್ನು ಉತ್ತರಾಖಂಡದಲ್ಲಿ ಪ್ರವಾಹಕ್ಕೆ ಸಿಲುಕಿ ಸಾವಿಗೀಡಾದವರಿಗೆ ಅರ್ಪಿಸಿದ್ದಾರೆ.`ನನ್ನ ಪ್ರದರ್ಶನ ಹಾಗೂ ಈ ಪ್ರಶಸ್ತಿಯನ್ನು ಪ್ರವಾಹದಲ್ಲಿ ಸಾವನಪ್ಪಿದವರಿಗೆ ಹಾಗೂ ಸಂತ್ರಸ್ತರಾದವರಿಗೆ ಅರ್ಪಿಸುತ್ತೇನೆ. ನನ್ನ ಪ್ರಾರ್ಥನೆಯೂ ಅವರ ಜೊತೆಗಿದೆ' ಎಂದು ಭಾರತದ ಹೊಸ ಬ್ಯಾಟಿಂಗ್ `ಹೀರೊ' ಧವನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದ್ದಾರೆ.ಧವನ್ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಿಂದ 90.75ರ ಸರಾಸರಿಯಲ್ಲಿ 363 ರನ್ ಪೇರಿಸಿದ್ದಾರೆ. ಎರಡು ಶತಕ ಹಾಗೂ ಒಂದು ಅರ್ಧಶತಕ ಇದರಲ್ಲಿ ಒಳಗೊಂಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.