ಮುಂದುವರಿದ ಮನೆ ಮನೆ ಪ್ರಚಾರ

7

ಮುಂದುವರಿದ ಮನೆ ಮನೆ ಪ್ರಚಾರ

Published:
Updated:
ಮುಂದುವರಿದ ಮನೆ ಮನೆ ಪ್ರಚಾರ

ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿತ್ತು. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಇತರ ಮುಖಂಡರೊಂದಿಗೆ ಬೆಳಿಗ್ಗೆ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಚರಿಸಿ ಮತ ಯಾಚಿಸಿದರು.ರಾಜ್ಯಸಭಾ ಸದಸ್ಯೆ, ಚಿತ್ರನಟಿ ಹೇಮಾಮಾಲಿನಿ ನಗರದ ಕೌಲ್‌ಬಝಾರ್‌ನಲ್ಲಿ ಪಕ್ಷವು ಮಧ್ಯಾಹ್ನ ಏರ್ಪಡಿಸಿದ್ದ ರೋಡ್ ಶೋನಲ್ಲಿ ಪಾಲ್ಗೊಂಡು ಸಂಚಲನ ಉಂಟುಮಾಡಿದರು.`ಬಳ್ಳಾರಿಯ ಜನರನ್ನು ಕಂಡು ಅತೀವ ಸಂತಸವಾಗಿದೆ~ ಎಂದು ಅವರು ಹೇಳಿದರು.ಪಾದಯಾತ್ರೆ: ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಮತ್ತಿತರರು ನಗರವೂ ಒಳಗೊಂಡಂತೆ ಕ್ಷೇತ್ರದ ವಿವಿಧೆಡೆ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರೆ, ಪಕ್ಷೇತರ ಅಭ್ಯರ್ಥಿ ಬಿ.ಶ್ರೀರಾಮುಲು ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರದ ಕೌಲ್‌ಬಝಾರ್ ಪ್ರದೇಶದಲ್ಲಿ ರೋಡ್ ಶೋ ಮೂಲಕ ಬಹಿರಂಗ ಪ್ರಚಾರ ನಡೆಸಿದರು.ಕೆಲವು ದಿನಗಳಿಂದ ನಗರದಲ್ಲೇ ಠಿಕಾಣಿ ಹೂಡಿದ್ದ ಜೆಡಿಎಸ್ ಶಾಸಕ ಜಮೀರ್ ಅಹಮದ್ ಈ ಸಂದರ್ಭದಲ್ಲಿ ಶ್ರೀರಾಮುಲು ಪರ ಮತ ಯಾಚಿಸಿದರು.ಈ ಮೂಲಕ ಪಕ್ಷದ ಮುಖಂಡ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷೇತರ  ಅಭ್ಯರ್ಥಿಗೆ ಬೆಂಬಲ ನೀಡಿರುವುದನ್ನು ಅವರು ಸಾಬೀತುಪಡಿಸಿದರು. ಅಲ್ಲದೆ, ಸ್ಥಳೀಯ ಜೆಡಿಎಸ್ ಮುಖಂಡರೂ ಶ್ರೀರಾಮುಲು ಅವರಿಗೆ ಬಹಿರಂಗ ಬೆಂಬಲ  ವ್ಯಕ್ತಪಡಿಸಿದರು.ಆದರೆ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ಸೂರ್ಯನಾರಾಯಣ ರೆಡ್ಡಿ `ಪಕ್ಷ ಯಾರಿಗೂ ಬೆಂಬಲ ನೀಡಿಲ್ಲ. ಶ್ರೀರಾಮುಲುಗೆ ಬೆಂಬಲಿಸುವುದು ಅವರವರ ವೈಯಕ್ತಿಕ ನಿರ್ಧಾರ~ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.ಪ್ರತಿಭಟನೆ: ರೋಡ್ ಶೋ ನಂತರ ನಡೆದ ಬಹಿರಂಗ ಪ್ರಚಾರದಲ್ಲಿ ಮಾತನಾಡಿದ ಜಮೀರ್ ಅಹಮದ್, ಕಾಂಗ್ರೆಸ್ ಮುಖಂಡರ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೌಲ್‌ಬಝಾರ್ ಪೊಲೀಸ್ ಠಾಣೆ ಎದುರು ಕೆಲಕಾಲ ಪ್ರತಿಭಟನೆ ನಡೆಸಿ, ಜಮೀರ್ ಅಹಮದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಮತ್ತಿತರರನ್ನು ಜಮೀರ್ ಅಹಮದ್ ಉರ್ದುವಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆರೋಪವಾಗಿತ್ತು.ತರಾತುರಿ: ಕೊನೆಯ ಕ್ಷಣದ ಪ್ರಚಾರಕ್ಕೆ ಲಗುಬಗೆ ತೋರಿದ ಮುಖಂಡರು ಅಭ್ಯರ್ಥಿಗಳ ಸಮೇತ ವಿವಿಧೆಡೆ ತೆರಳಿ ಮತದಾರರ ಮನವೊಲಿಸಲು ಯತ್ನಿಸಿದರು.ನಗದು ವಶ: ಕೌಲ್‌ಬಝಾರ್‌ನ ಆಂಜನೇಯ ನಗರದಲ್ಲಿ ಮತದಾರರ ಮನೆಮನೆಗೆ ತೆರಳಿ ಹಣ ಹಂಚುತ್ತಿದ್ದ ಆರೋಪದ ಮೇಲೆ ಹನುಮಂತಪ್ಪ ಎಂಬಾತನನ್ನು ಬಂಧಿಸಿರುವ ಪೊಲೀಸರು ಆತನಿಂದ 3.52 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಯು ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಪರ ಹಣ ಹಂಚುತ್ತಿದ್ದ ಎಂದು ಚುನಾವಣಾಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದ್ದಾರೆ.ತಾಲ್ಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ಮತದಾರರಿಗೆ ಹಣ ಹಂಚುತ್ತಿದ್ದ ಇಬ್ಬರು ಯುವಕರು, ಪೊಲೀಸರನ್ನು ಕಂಡೊಡನೆಯೇ ಹಣವನ್ನು ಎಸೆದು ಪರಾರಿಯಾಗಿದ್ದಾರೆ.ಎಸೆಯಲಾಗಿದ್ದ ರೂ. 1.88 ಲಕ್ಷ ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಪರವಾನಗಿ ಇಲ್ಲದೆ ಬಳಸಲಾಗುತ್ತಿದ್ದ 3 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ಪ್ರಚಾರಕ್ಕಾಗಿ ಹೊರಗಿನಿಂದ ಬಂದಿದ್ದ ವಿವಿಧ ಪಕ್ಷಗಳ ಮುಖಂಡರು ಬಳ್ಳಾರಿಯಿಂದ ಸಂಜೆ ಹೊರ ನಡೆದರು.ರೆಡ್ಡಿಗಳಿಂದ ಬಿಜೆಪಿಗೆ ಕೆಟ್ಟ ಹೆಸರು: ಸಿಎಂ

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ಬಿಜೆಪಿ ಪ್ರಸ್ತುತ ಹಲವು ಹಗರಣಗಳ ಹಿನ್ನೆಲೆಯಲ್ಲಿ ಕೆಟ್ಟ ಹೆಸರು ಪಡೆಯಲು ಬಳ್ಳಾರಿ ಗಣಿ ಧಣಿಗಳು ಮೂಲ ಕಾರಣ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.ತಾಲ್ಲೂಕಿನ ಹಾನಗಲ್ ಪ್ರವಾಸಿ ಮಂದಿರ ಆವರಣದಲ್ಲಿ ಸೋಮವಾರ, ಬಳ್ಳಾರಿ ಉಪ ಚುನಾವಣೆ ಪ್ರಚಾರ ಕಾರ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಅವರು ಸುದ್ದಿಗಾರರ ಜತೆ ಮಾತನಾಡಿದರು.ಪ್ರಮುಖ ಜವಾಬ್ದಾರಿಗಳನ್ನು ಬಳ್ಳಾರಿ ಗಣಿ ಧಣಿಗಳಿಗೆ ನೀಡಿ ಪಕ್ಷ ತಪ್ಪು ಮಾಡಿತು. ಈಗ ಆ ತಪ್ಪಿನ ಅರಿವಾಗಿದೆ. ಈ ತಪ್ಪನ್ನು ತಿದ್ದಿಕೊಂಡು ಬಾಕಿ ಇರುವ ಒಂದೂವರೆ ವರ್ಷ ಅಧಿಕಾರ ಅವಧಿಯಲ್ಲಿ ಉತ್ತಮ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry