ಮುಂದುವರೆದ ಅಂಚೆ ನೌಕರರ ಮುಷ್ಕರ

7

ಮುಂದುವರೆದ ಅಂಚೆ ನೌಕರರ ಮುಷ್ಕರ

Published:
Updated:

ತುಮಕೂರು: ಕೆಲಸ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಮುಷ್ಕರ ಬುಧವಾರವೂ ಮುಂದುವರೆಯಿತು. ಮುಷ್ಕರದ ಕಾರಣ ಗ್ರಾಮಾಂತರ ಅಂಚೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.ತುಮಕೂರು, ಕುಣಿಗಲ್, ಮಧುಗಿರಿ, ಶಿರಾ, ಪಾವಗಡ ಸೇರಿದಂತೆ ವಿವಿಧೆಡೆ ಮುಷ್ಕರ ನಿರತ ಅಂಚೆ ನೌಕರರ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಘೋಷಣೆ ಕೂಗಿದರು. ನಮ್ಮ ಬೇಡಿಕೆ ನ್ಯಾಯಯುತವಾಗಿದ್ದು, ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಗರದ ಪ್ರಧಾನ ಅಂಚೆ ಕಚೇರಿ ಎದುರು ಧರಣಿ ನಡೆಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಇಲಾಖೆ ಸೇವೆಗಳನ್ನು ಸಕಾಲಕ್ಕೆ ನೀಡುತ್ತಾ ಇಲಾಖೆಯ ಇತರ ನೌಕರರಿಗಿಂತ ಹೆಚ್ಚಿನ ಕೆಲಸ ನಿರ್ವಹಿಸುತ್ತಿದ್ದೇವೆ. ಸರ್ಕಾರ ನಮ್ಮನ್ನು ಇಲಾಖೇತರ ನೌಕರರೆಂದು ಪರಿಗಣಿಸಿ, ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.ಗ್ರಾಮೀಣ ಅಂಚೆ ಇಲಾಖೇತರ ನೌಕರರನ್ನು ಕಾಯಂಗೊಳಿಸವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು. ಅಲ್ಲಿಯವರೆವಿಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಎಚ್ಚರಿಸಿದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಅಂಚೆ ವಿಭಾಗೀಯ ಅಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.ಪ್ರತಿಭಟನೆ ನೇತೃತ್ವವನ್ನು ಅಖಿಲ ಭಾರತ ಅಂಚೆ ಇಲಾಖೇತರ ನೌಕರರ ಸಂಘದ ಪದಾಧಿಕಾರಿಗಳಾದ ಎ.ವಿ.ರಮೇಶ್, ಜಮೀರ್, ರಂಗನಾಥ್, ಕೃಷ್ಣಮೂರ್ತಿ, ವಿಶ್ವನಾಥಮೂರ್ತಿ, ವಿಶ್ವನಾಥಾರಾಧ್ಯ ಇತರರು ವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry