ಸೋಮವಾರ, ಆಗಸ್ಟ್ 26, 2019
28 °C

ಮುಂದುವರೆದ ಮಹಾಮಳೆ: ಗದ್ದೆಗಳು ಜಲಾವೃತ

Published:
Updated:

ಮೂಡಿಗೆರೆ: ತಾಲ್ಲೂಕಿನಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಜನಜೀವನ ಸ್ತಬ್ಧವಾಗಿದೆ. ಕಳೆದ ಮೂರು ದಿನಗಳಿಂದ ಎಡಬಿಡದೇ ಸುರಿಯುತ್ತಿರುವುದರಿಂದ ಕಳೆದ ಹತ್ತು ವರ್ಷಗಳಲ್ಲಿಯೇ ಇದು ದಾಖಲೆಯ ಮಳೆಯಾಗಿದ್ದು, ಅಪಾರ ಆಸ್ತಿ ಪಾಸ್ತಿ ಮತ್ತು ಬೆಳೆಗಳಿಗೆ ಹಾನಿಯಾಗಿದ್ದು, ನೂರು ಕೋಟಿಗೂ ಮಿಗಿಲಾದ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಹೇಮಾವತಿ ನದಿಯ ಉಗಮ ಸ್ಥಾನವಾದ ಜಾವಳಿಯಿಂದಲೇ ಹರಿಯುವ ಮಟ್ಟದಲ್ಲಿ ಹೆಚ್ಚಳವಾಗಿರುವುದರಿಂದ ತೀರದುದ್ದಕ್ಕೂ ಅಪಾಯದ ಮಟ್ಟ ಎದುರಾಗಿದ್ದು, ಉಗ್ಗೆಹಳ್ಳಿ, ಕೆಸವಳಲು, ಬಣಕಲ್‌ಗಳಲ್ಲಿ ಮನೆಗಳಿಗೆ ನೀರು ನುಗ್ಗುವ ಅಪಾಯ ಸೃಷ್ಟಿಯಾಗಿದೆ.ಬಕ್ಕಿ, ಹ್ಯಾರಗುಡ್ಡೆ, ಊರುಬಗೆ, ಈಚಹಳ್ಳಿ, ಬಂಕೇನಹಳ್ಳಿ, ಸಬ್ಬೇನಹಳ್ಳಿ ಮತ್ತು ಗೋಣಿಬೀಡುಗಳಲ್ಲಿ ಸೇತುವೆಗಳ ಮೇಲೆ ನದಿ ನೀರು ಬಂದಿದ್ದು, ಗೋಣೀಬೀಡು ಮತ್ತು ಬಕ್ಕಿ, ಬಂಕೇನಹಳ್ಳಿ ಸೇತುವೆಗಳು ಕೊಚ್ಚಿಹೋಗುವಂತಾಗಿದ್ದು, ಸಂಪರ್ಕ ಕಡಿತವಾಗುವ ಭೀತಿ ನಿರ್ಮಾಣವಾಗಿದೆ. ಹ್ಯಾರಗುಡ್ಡೆ ಮತ್ತು ಬಕ್ಕಿ ಗ್ರಾಮದಲ್ಲಿ ಸೇತುವೆಗಳು ಸಂಪೂರ್ಣ ಮುಳುಗಿರುವುದರಿಂದ ಮಳೆ ನೀರು ಹರಿಯಲಾಗದೇ ಗದ್ದೆ ಬಯಲಿನಲ್ಲಿ ಐದು ಅಡಿಯಷ್ಟು ನೀರು ನಿಂತಿದ್ದು, ಗದ್ದೆ ನಾಟಿ ಮತ್ತು ಅಗಡಿ ಮಾಡಿದ್ದ ಪೈರೆಲ್ಲವೂ ಸಂಪೂರ್ಣ ಮುಳುಗಿದ್ದು, ಕರಗಿ ಹೋಗುವ ಸಂಭವವಿದೆ. ಬಣಕಲ್, ಮುಗ್ರಹಳ್ಳಿ, ಹೊರಟ್ಟಿ, ಹ್ಯಾರಗುಡ್ಡೆ ಮುಂತಾದ ಗ್ರಾಮಗಳಲ್ಲಿ ಹೇಮಾವತಿ ನದಿ ತೀರದುದ್ದಕ್ಕೂ ಬಳೆದಿರುವ ಕಾಫಿ ತೋಟಗಳಲ್ಲಿ ಕಳೆದ ಮೂರು ದಿನಗಳಿಂದ ನಾಲ್ಕು ಅಡಿಯಷ್ಟು ನೀರು ನಿಂತಿದ್ದು, ಕಾಫಿಗಿಡಗಳಿಗೆ ಶೀತ ಹೆಚ್ಚಳವಾಗಿ ಗಿಡ ಸಾಯುವ ಲಕ್ಷಣ ಗೋಚರಿಸುತ್ತಿದೆ.ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಬಿದರಹಳ್ಳಿಯ ಶೇಷಪ್ಪ ಅವರ ಮನೆ ಕುಸಿದಿದೆ. ಹ್ಯಾರಗುಡ್ಡೆಯ ಕೃಷ್ಣೇಗೌಡ ಎಂಬುವವರ ಮನೆ ಸಂಪೂರ್ಣ ಜಖಂಗೊಂಡಿದೆ. ಮಳೆಯ ಹೊಡೆತಕ್ಕೆ ಸಿಲುಕಿ ಬಕ್ಕಿ ಬೆಟ್ಟಗೆರೆ ರಸ್ತೆ ಸಂಪೂರ್ಣ ಕೊಚ್ಚಿಹೋಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಐದು ಸಾವಿರ ಎಕರೆ ಪ್ರದೇಶದ ಬತ್ತದ ಗದ್ದೆಗಳು ನೀರಿನಲ್ಲಿ ಮುಳುಗಿದ್ದು, ಐವತ್ತಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ. ಮಳೆ ಹಾನಿ ಪ್ರದೇಶಕ್ಕೆ ತಾಲ್ಲೂಕು ಆಡಳಿತದಿಂದ ತಂಡಗಳನ್ನು ಕಳುಹಿಸಲಾಗುತ್ತಿದ್ದು, ಹಾನಿಯಾದ ಮನೆಗಳಿಗೆ ತುರ್ತು ಪರಿಹಾರ ನೀಡುವ ಕಾರ್ಯ ನಡೆಯುತ್ತಿದೆ.ದಾಖಲೆಯ ಮಳೆ:  ತಾಲ್ಲೂಕಿನಾದ್ಯಂತ ಕಳೆದ ಒಂದು ತಿಂಗಳಿನಲ್ಲಿ ದಾಖಲೆಯ ಮಳೆಯಾಗಿದ್ದು, ಕಳೆದ ಸಾಲಿನ ವರ್ಷಪೂರ್ತಿ ಸುರಿದಿದ್ದಷ್ಟು ಪ್ರಮಾಣದ ಮಳೆ, ಈ ಭಾರಿ ಜುಲೈ ಒಂದೇ ತಿಂಗಳಿನಲ್ಲಿ ಸುರಿದಿದೆ. ಜುಲೈ ಒಂದರಲ್ಲಿಯೇ ಕಳಸ 83, ಕೊಟ್ಟಿಗೆಹಾರ 88, ಜಾವಳಿ 60, ಮೂಡಿಗೆರೆ 51 ಹಾಗೂ ಗೋಣಿಬೀಡಿನಲ್ಲಿ 43 ಇಂಚು ಮಳೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಕಳಸ 19, ಕೊಟ್ಟಿಗೆಹಾರ 21, ಮೂಡಿಗೆರೆ 14, ಗೋಣಿಬೀಡು 10, ಜಾವಳಿ 15 ಇಂಚು ಮಳೆಯಾಗಿದೆ. ಹತ್ತು ವರ್ಷಗಳ ಹಿಂದೆ ಸುರಿದಿದ್ದ ಈ ಪ್ರಮಾಣದ ಮಳೆ ಈ ಬಾರಿ ಮತ್ತೆ ಸುರಿದು ನಷ್ಟವಾಗಿದೆ.

Post Comments (+)