ಮಂಗಳವಾರ, ಜನವರಿ 21, 2020
20 °C

ಮುಂದುವರೆದ ವಿದ್ಯುತ್‌ ಕಣ್ಣಾಮುಚ್ಚಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ ಮೂರು ದಿನಗಳಿಂದ ಅನಿರ್ದಿಷ್ಟಾವಧಿ ವಿದ್ಯುತ್‌ ಕಡಿತವಾಗುತ್ತಿದ್ದು, ಯಾವಾಗ ವಿದ್ಯುತ್‌ ಬರುತ್ತದೆ ಅಥವಾ ಹೋಗುತ್ತದೆ ಎಂಬುದು ತಿಳಿಯದೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯುತ್‌ ಸಮಸ್ಯೆಯಿಂದ ನಿತ್ಯದ ಕೆಲಸ ಸ್ಥಗಿತಗೊಂಡಿವೆ.

ವಿದ್ಯುತ್‌ ಕಾಮಗಾರಿ ಹೆಸರಿನಲ್ಲಿ ಕಳೆದ ಹಲವು ತಿಂಗಳಿಂದ ನಗರದಲ್ಲಿ ಯಾವಾಗ ಎಂದರೆ ಆವಾಗ ವಿದ್ಯುತ್‌ ಕಡಿತಗೊಳಿಸುವುದು ಸಾಮಾನ್ಯವಾಗಿದೆ. ಈಗ ವಿದ್ಯುತ್‌ ಕೊರತೆಯಿಂದ ಜನತೆ ಮತ್ತಷ್ಟು ಕಂಗಾಲಾಗಿದ್ದಾರೆ.ಇನ್ನು ಬೇಸಿಗೆ ಆರಂಭವಾಗಿಲ್ಲ. ಈಗಲೇ ಈ ರೀತಿ ವಿದ್ಯುತ್‌ ಕಡಿತಗೊಂಡರೆ ಮುಂದೆ ಗತಿ ಏನು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.

ನಗರ ಪ್ರದೇಶದಲ್ಲಿಯೇ ದಿನಕ್ಕೆ 10–15 ಗಂಟೆಗೂ ಹೆಚ್ಚು ಕಾಲ ವಿದ್ಯುತ್‌ ಕಡಿತವಾಗುತ್ತಿದೆ. ಇನ್ನು ಗ್ರಾಮೀಣ ಪ್ರದೇಶದ ಗೋಳು ಕೇಳುವಂತಿಲ್ಲ ಎನ್ನುವಂತಾಗಿದೆ. ಅದರಲ್ಲಿಯೂ ಕೃಷಿಕರು ವಿದ್ಯುತ್‌ಗಾಗಿ ಕಾದು ಕೂರುವಂತಾಗಿದೆ. ಕೈಗೆ ಬಂದ ಬೆಳೆ ಒಣಗಿ ಹೋಗುವ ಆತಂಕ ಕಾಡುತ್ತಿದೆ.ನಗರವಷ್ಟೇ ಅಲ್ಲದೆ ಜಿಲ್ಲೆಯ ಎಲ್ಲೆಡೆಯೂ ವಿದ್ಯುತ್ ಕಡಿತದ ಬಿಸಿ ಮುಟ್ಟಿದೆ. ನಗರದ ಬಹುತೇಕ ಭಾಗಗಳು ಕತ್ತಲೆಯಲ್ಲಿ ಮುಳುಗಿದ್ದವು. ಗುರುವಾರ ನಗರದಲ್ಲಿ ಐದತ್ತು ನಿಮಿಷ ವಿದ್ಯುತ್ ಇದ್ದರೆ, ಗಂಟೆಗಟ್ಟಲೆ ಕಡಿತ ಮಾಡಲಾಗಿತ್ತು. ಇಂಥ ಕಣ್ಣಾಮುಚ್ಚಾಲೆ ಇಡೀ ದಿನ ಮುಂದುವರೆದಿತ್ತು. ರಾತ್ರಿ ಕೂಡ ಇದೇ ಪರಿಸ್ಥಿತಿ ಕಂಡುಬಂತು. ಜಿಲ್ಲೆಯ ಇತರ ನಗರ, ಪಟ್ಟಣ ಪ್ರದೇಶಗಳ ಜನತೆ ವಿದ್ಯುತ್ ಇಲ್ಲದೆ ಪರಿತಪಿಸಿದರು.ವಿದ್ಯುತ್ ಕಡಿತದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕನಿಷ್ಠ ಬೋರ್‌ವೆಲ್‌ನಿಂದ ಕುಡಿಯುವ ನೀರು ತುಂಬಿಸಿಕೊಳ್ಳುವಷ್ಟು ಸಮಯವೂ ವಿದ್ಯುತ್ ಸರಬರಾಜು ಇರಲಿಲ್ಲ. ವಿದ್ಯುತ್ ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ಇಡೀ ದಿನ ಪರಿತಪಿಸುವಂತಾಯಿತು. ಯಾವ ಕೆಲಸವನ್ನೂ ಮಾಡಲಾಗಲಿಲ್ಲ ಎಂದು ಸಾರ್ವಜನಿಕರು ‘ಪ್ರಜಾವಾಣಿ’ ಕಚೇರಿಗೆ ದೂರವಾಣಿ ಕರೆಮಾಡಿ ತಮ್ಮ ಅಳಲು ತೋಡಿಕೊಂಡರು.ಪೂರೈಕೆಯಲ್ಲಿ ಕಡಿತ

ಜಿಲ್ಲೆಗೆ ಪ್ರತಿ ನಿತ್ಯ 650 ಮೆಗಾವಾಟ್‌ ವಿದ್ಯುತ್‌ ಅಗತ್ಯವಿದೆ. ಆದರೆ ಪ್ರಸ್ತುತ ಮೂರು ದಿನಗಳಿಂದ ಕೇವಲ 350 ಮೆಗಾವಾಟ್‌ ವಿದ್ಯುತ್‌ ಪೂರೈಕೆ ಆಗುತ್ತಿದೆ. ಬೇಡಿಕೆ ಅರ್ಧದಷ್ಟು ಪೂರೈಕೆ ಆಗುತ್ತಿರುವುದರಿಂದ ಸಮಸ್ಯೆ ಆಗಿದ್ದು, ಒಂದೆರಡು ದಿನದಲ್ಲಿ ಬಗೆಹರಿಯಬಹುದು ಎಂದು ಬೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ಗೋವಿಂದಪ್ಪ ತಿಳಿಸಿದ್ದಾರೆ.ರಾಯಚೂರು ವಿದ್ಯುತ್‌ ಉತ್ಪಾದನೆ ಘಟಕ ಮತ್ತು ಗಾಳಿ ವಿದ್ಯುತ್‌ ಉತ್ಪಾದನೆಯಲ್ಲಿ ಕೊರತೆ ಉಂಟಾಗಿರುವುದರಿಂದ ಸಮಸ್ಯೆ ಆಗಿದೆ. ಇದು ಜಿಲ್ಲೆಯ ಸಮಸ್ಯೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ

ಪ್ರತಿಕ್ರಿಯಿಸಿ (+)