ಸೋಮವಾರ, ಮೇ 16, 2022
30 °C

ಮುಂದೆ ನಾಲೆ ಅಭಿವೃದ್ಧಿ; ಹಿಂದೆ ಮರಳು ದಂಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಾಥಪುರ: ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆಯ ಹಿನ್ನೀರು ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ದಂಧೆ ಎಗ್ಗಿಲ್ಲದೇ ಸಾಗಿದ್ದರೂ, ಸಂಬಂಧಪಟ್ಟ ಇಲಾಖೆಯವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.  ರಾಜ್ಯದಲ್ಲಿ ಏ.1ರಂದು ಹೊಸ ಮರಳು ನೀತಿ ಜಾರಿಗೆ ಬರುವ ಹಿನ್ನೆಲೆಯಲ್ಲಿ ಗುತ್ತಿಗೆ ರದ್ದಾಗುವುದರಿಂದ ಕಡೇ ಕ್ಷಣದ ಲಾಭಕ್ಕಾಗಿ ಸರ್ವ ಯತ್ನಗಳೂ ಇಲ್ಲಿ ನಡೆಯುತ್ತಿವೆ.ಕಟ್ಟೇಪುರ, ಬಾನುಗೊಂದಿ, ಗೊಬ್ಬಳಿ, ಕಾವಲು, ಮಾದಾಪುರ, ಕಡುವಿನ ಹೊಸಹಳ್ಳಿ ಭಾಗದಲ್ಲಿ ಕೆಲ ತಿಂಗಳಿನಿಂದ ಸ್ಥಗಿತಗೊಂಡಿದ್ದ ಈ ದಂಧೆ ಮತ್ತೆ ಶುರುವಾಗಿದೆ. ಹೊರ ರಾಜ್ಯಗಳ ಕಾರ್ಮಿಕರನ್ನು ಈ ದಂಧೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಸ್ಥಳೀಯರು, ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳು ಈ ದಂಧೆ ರೂವಾರಿಗಳು. ಭಾಷೆ, ಇತರ ಸಮಸ್ಯೆ ಎದುರಿಸುತ್ತಿರುವ ಈ ಕಾರ್ಮಿಕರು ದುಪ್ಪಟ್ಟು ಕೂಲಿ ಆಸೆಗೆ ಆರೋಗ್ಯವನ್ನೂ ಲೆಕ್ಕಿಸದೆ ಹಗಲಿರುಳೆನ್ನದೆ ನದಿಯಿಂದ ಮರಳು ತೆಗೆದು ಸಂಗ್ರಹಿಸುವ ಕಾಯಕದಲ್ಲಿ ತೊಡಗಿದ್ದಾರೆ. ಈಗ ಬೇಸಿಗೆಯಾದ್ದರಿಂದ ನದಿಯಲ್ಲಿ ನೀರು ಹರಿಯುತ್ತಿಲ್ಲದ ಜಾಗದಲ್ಲಿನ ಮರಳನ್ನು ಹಿಟಾಚಿ ಯಂತ್ರ ಬಳಸಿ ಲಾರಿ, ಟ್ರ್ಯಾಕ್ಟರ್‌ಗಳಿಗೆ ತುಂಬಿ ಸಾಗಿಸಲಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.ಒಂದೆಡೆ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆ ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿದ್ದರೆ, ಹಿನ್ನೀರಿನಲ್ಲಿ ನದಿಯಿಂದ ರಾಶಿಗಟ್ಟಲೆ ಮರಳು ತೆಗೆಯುತ್ತಿರುವುದು ಅಣೆಕಟ್ಟೆ ತಳಪಾಯಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆ ಇದೆ. ಒಂದು ವೇಳೆ ಕಾಮಗಾರಿ ಪೂರ್ಣಗೊಳ್ಳದೆ ಮಳೆಗಾಲ ಶುರುವಾದರೆ ಹಿನ್ನೀರು ವ್ಯಾಪ್ತಿಯಲ್ಲಿ ನದಿ ನೀರು ತಡೆಗಟ್ಟಲು ಸಾಧ್ಯವಾಗದೆ ಹರಿವಿನ ಪ್ರಮಾಣ ಹೆಚ್ಚಿ ಡ್ಯಾಂ ಭದ್ರತೆಗೆ ಧಕ್ಕೆ ಉಂಟಾಗುವ ಸಾಧ್ಯತೆಯೂ ಇದೆ. ಮರಳು ಸಾಗಣೆ ವಾಹನಗಳು ತಾಲ್ಲೂಕಿನ ರಸ್ತೆಗಳನ್ನು ಪೂರ್ಣವಾಗಿ ಹದಗೆಡಿಸಿವೆ ಎಂದು ಗ್ರಾಮಸ್ಥರು  ದೂರಿದ್ದಾರೆ.ಕಳೆದ ವಾರವಷ್ಟೇ ಗುಂಡಿ ಬಿದ್ದು ಅದ್ವಾನವಾಗಿದ್ದ ರಸ್ತೆಗಳಿಗೆ ಜಲ್ಲಿ ಸುರಿದು ಡಾಂಬರು ಹಾಕಲಾಗಿತ್ತು. ಈಗ ಮತ್ತೆ ಮರಳು ಸಾಗಣೆ  ವಾಹನಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟು ದೂಳುಮಯವಾಗುತ್ತಿವೆ. ಹಿನ್ನೀರಿನ ಕಟ್ಟೇಪುರ ಪಕ್ಕದಲ್ಲಿಯೇ ಮರಳು ತೆಗೆಯುತ್ತಿರುವ ಪರಿಣಾಮ ನದಿ ನೀರು ಕಲುಷಿತಗೊಳ್ಳುತ್ತಿದೆ. ಗ್ರಾಮಕ್ಕೆ ಕುಡಿಯಲು  ಕಲುಷಿತ ನೀರು ಪೂರೈಕೆಯಾಗುತ್ತಿದೆ. ತಾಲ್ಲೂಕು ಆಡಳಿತ, ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ಅವ್ಯಾಹತವಾಗಿ ಸಾಗಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.