ಮುಂಬಯಿ: ಕನ್ನಡ ರಂಗ ಘಮ!

7

ಮುಂಬಯಿ: ಕನ್ನಡ ರಂಗ ಘಮ!

Published:
Updated:

ರಂಗಬಿನ್ನಹ

ಮುಂಬಯಿ ಕನ್ನಡ ರಂಗಭೂಮಿಯ ಕ್ರಿಯಾಶೀಲತೆಗೆ- ಪ್ರತಿವರ್ಷ ನಡೆಯುವ `ಅಖಿಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆ~ಯ ಕೊಡುಗೆ ದೊಡ್ಡದು. 16ನೇ ನಾಟಕ ಸ್ಪರ್ಧೆಯು ಇತ್ತೀಚೆಗಷ್ಟೇ ಮುಗಿದಿದೆ.

 

ಅಖಿಲ ಭಾರತ ಎಂದಿದ್ದರೂ, ಕರ್ನಾಟಕದ ರಂಗತಂಡಗಳು ಅಲ್ಲಿ ಭಾಗವಹಿಸುವುದೇ ಹೆಚ್ಚು. ವಿಭಿನ್ನ ಪ್ರಯೋಗಗಳ ಮೂಲಕ ಗಮನ ಸೆಳೆದಿರುವ ಪ್ರತಿಷ್ಠಿತ ರಂಗತಂಡಗಳು ಇಲ್ಲಿ ಭಾಗವಹಿಸುತ್ತವೆ ಎನ್ನುವುದು ಇದರ ಹೆಚ್ಚುಗಾರಿಕೆ. `ಕನ್ನಡ ಸೇವಾ ಸಂಘ~ ಹಾಗೂ `ಚುಕ್ಕಿ ಸಂಕುಲ~ ಎಂಬ ಎರಡು ಮುಂಬಯಿ ರಂಗತಂಡಗಳ ಜತೆಗೆ ಪ್ರಸಕ್ತ ವರ್ಷ ಭಾಗವಹಿಸಿದ್ದು ಕರ್ನಾಟಕದ ಒಟ್ಟು 10 ತಂಡಗಳು.ಸ್ಪರ್ಧೆಯಲ್ಲಿ ಭಾಗವಹಿಸುವ ನಾಟಕಗಳೆಂದರೆ, ತುಸು ನಗಣ್ಯವಾಗಿ ನೋಡುವ ರೂಢಿಗತ ನಿಲುವು ಒಂದಿದೆ. ಆದರೆ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿರುವ ತಂಡಗಳೇ ಇಲ್ಲಿ ಭಾಗವಹಿಸುತ್ತವೆ. ಶಾಸ್ತ್ರೀಯವಾಗಿ, ಶಿಸ್ತುಬದ್ಧವಾಗಿ ಸ್ಪರ್ಧೆ ಆಯೋಜಿಸುವ ಮುಂಬಯಿ ಕರ್ನಾಟಕ ಸಂಘದ ಪರಿಶ್ರಮ ಈ ಸ್ಪರ್ಧೆಯ ಪ್ರತಿಷ್ಠೆ ಹೆಚ್ಚಲು ಕಾರಣವಾಗಿದೆ.ಹಾಗಾಗಿ ಸ್ಪರ್ಧೆಯ ನಾಟಕಗಳಾದರೂ, ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ರಂಗಸಜ್ಜಿಕೆ, ವಿನ್ಯಾಸ, ಸಂಗೀತ, ಬೆಳಕು, ವೇಷಭೂಷಣ- ಹೀಗೆ ನಾಟಕದ ಒಟ್ಟಂದಕ್ಕೆ ಬೇಕಾದ ಎಲ್ಲ ವಿಭಾಗಕ್ಕೂ ಪ್ರಶಸ್ತಿ ನೀಡುವುದರಿಂದ ನಾಟಕವನ್ನು ಎಚ್ಚರಿಕೆಯಿಂದ ಕಟ್ಟಬೇಕಾಗುತ್ತದೆ. ಎಲ್ಲ ವಿಭಾಗದ ಕುಸುರಿ ಕೆಲಸ ಮುಖ್ಯ.ಇದು ಹೆಸರಿಗೆ ಏಕಾಂಕ ನಾಟಕ ಸ್ಪರ್ಧೆ. ಯಾಕೆಂದರೆ ಹಲವು ತಂಡಗಳು ದೊಡ್ಡ ನಾಟಕಗಳನ್ನೇ ಪ್ರಯೋಗಕ್ಕೆ ತೆಗೆದುಕೊಳ್ಳುತ್ತವೆ. ಜಾಳಾಗಬಹುದಾದ ಭಾಗಗಳ ಕೈಬಿಟ್ಟು, ಸ್ವಾರಸ್ಯಕರ ಪ್ರಸಂಗಗಳನ್ನಷ್ಟೇ ಪ್ರಯೋಗಿಸುತ್ತವೆ. ಕಥೆ, ಕವಿತೆಯಲ್ಲಿ ಚಿಕ್ಕಚಿಕ್ಕ ವಿವರಗಳೂ ಸೂಕ್ಷ್ಮಗಳನ್ನು ಕಟ್ಟಿಕೊಡುತ್ತವೆ. ನಾಟಕಗಳಲ್ಲೂ ಸೂಕ್ಷ್ಮಾತಿಸೂಕ್ಷ್ಮ ವಿವರಗಳಿರುತ್ತವೆ.ಆದರೆ ರಂಗದ ಮೇಲೆ ಅದನ್ನು ಕಲಾತ್ಮಕವಾಗಿ ಒಡಮೂಡಿಸಲು ಸಂಗೀತ, ವೇಷಭೂಷಣ, ವಿನ್ಯಾಸ, ಪಾದರಸ ಚಲನೆಯ ನೆರವು ಬೇಕು. ಇದರಲ್ಲಿ ಯಾವುದು ವಿಫಲವಾದರೂ ಅಷ್ಟರಮಟ್ಟಿಗೆ ನಾಟಕ ಜಾಳಾಗುತ್ತದೆ. ಹವ್ಯಾಸಿ ರಂಗದ ಬಹುಪಾಲಿನ ಪ್ರಯೋಗಗಳಲ್ಲಿ ಹೀಗಾಗುತ್ತಿರುತ್ತದೆ. ಆದರೆ ಈ ಸ್ಪರ್ಧೆಯಲ್ಲಿ ಭಾಗವಹಿಸುವ ನಾಟಕಗಳು ಆಯ್ದ ಭಾಗಗಳನ್ನಷ್ಟೇ ಪ್ರಯೋಗಿಸುತ್ತವೆ. ಹಾಗಾಗಿ ಇಲ್ಲಿ ಪ್ರಯೋಗಗೊಳ್ಳುವ ಹಲವು ನಾಟಕಗಳಿಗೆ ಸಮಯದ ಮಿತಿಯೇ ವರವೂ ಆಗಿದ್ದಿದೆ!ಬೆಂಗಳೂರಿನ ರೂಪಾಂತರ ತಂಡ ಪ್ರದರ್ಶಿಸಿದ `ಯಹೂದಿ ಹುಡುಗಿ~ (ಉರ್ದು ಮೂಲ: ಆಗಾ ಹಶ್ರ್ ಕಶ್ಮೀರಿ, ಕನ್ನಡಕ್ಕೆ: ಇಟಗಿ ಈರಣ್ಣ) ಪ್ರಥಮ ಸೇರಿದಂತೆ ಒಟ್ಟು ಆರು ಪ್ರಶಸ್ತಿ ಬಾಚಿಕೊಂಡಿದೆ. ನಿರ್ದೇಶಕ ಕೆ.ಎಸ್.ಡಿ.ಎಲ್.ಚಂದ್ರುಗೆ ಪ್ರಥಮ, ದ್ವಿತೀಯ ಅತ್ಯುತ್ತಮ ನಟ ಆರ್.ನರೇಂದ್ರಬಾಬು, ಬೆಳಕು - ವಿನ್ಯಾಸಕ್ಕೆ ತೃತೀಯ, ಸಂಗೀತ, ವೇಷಭೂಷಣಕ್ಕೆ ಪ್ರಥಮ ಪ್ರಶಸ್ತಿ ಸಂದಿವೆ.ಹೊಸಪೇಟೆ ತಾಲ್ಲೂಕು ತುಂಗಭದ್ರಾ ಡ್ಯಾಂನ ಕನ್ನಡ ಕಲಾಸಂಘವು `ಚಾಳೇಶ~ (ಚಂದ್ರಶೇಖರ ಕಂಬಾರ) ನಾಟಕಕ್ಕೆ ತೃತೀಯ ಪ್ರಶಸ್ತಿ ಸೇರಿದಂತೆ ಒಟ್ಟು ಐದು ಪ್ರಶಸ್ತಿಗಳನ್ನು ತನ್ನ  ಮುಡಿಗೇರಿಸಿಕೊಂಡಿದೆ. ಧನಂಜಯ ಕುಲಕರ್ಣಿ ನಿರ್ದೇಶನಕ್ಕೆ ದ್ವಿತೀಯ, ಗುರುಪ್ರಸಾದ್ ನಟನೆಗೆ ಪ್ರಥಮ, ಡಿ.ಹನುಮಕ್ಕ ಅಭಿನಯಕ್ಕೆ ದ್ವಿತೀಯ, ಬೆಳಕಿನ ವಿನ್ಯಾಸಕ್ಕೆ ಪ್ರಥಮ ಪ್ರಶಸ್ತಿಯೂ ಸಂದಿದೆ.ಬೆಂಗಳೂರಿನ ಬಾಷ್ ಲಲಿತ ಕಲಾಸಂಘ ಪ್ರದರ್ಶಿಸಿದ `ಒಂದು ಬೊಗಸೆ ನೀರು~ (ರಾಜಪ್ಪ ದಳವಾಯಿ) ನಾಟಕಕ್ಕೆ ದ್ವಿತೀಯ, ನಿರ್ದೇಶಕ ಹು.ದಾ.ಮುತ್ತುರಾಜ ಅವರಿಗೆ ತೃತೀಯ, ಆರ್.ರವಿಶಂಕರ್‌ಗೆ ಪೋಷಕ ನಟ ಪ್ರಶಸ್ತಿ, ವಿನ್ಯಾಸ, ಸಂಗೀತಕ್ಕೆ ದ್ವಿತೀಯ, ವೇಷಭೂಷಣಕ್ಕೆ ಮೂರನೇ ಪ್ರಶಸ್ತಿ ಬಂದಿವೆ.ಮುಂಬಯಿಯ ಚುಕ್ಕಿ ಸಂಕುಲ ಪ್ರದರ್ಶಿಸಿದ `ಕುವೆಂಪು ಕಂಡ ಮಂಥರೆ~ (ರ,ನಿ: ಸಾ.ದಯಾ) ನಾಟಕದ ಅಹಲ್ಯಾ ಬಲ್ಲಾಳ್ ಅವರಿಗೆ ಅತ್ಯುತ್ತಮ ನಟಿ, ಸಾನ್ವಿ ರೈ ಅವರಿಗೆ ಅತ್ಯುತ್ತಮ ಬಾಲ ನಟಿ ಸೇರಿದಂತೆ ಸಂಗೀತಕ್ಕೆ ಮೂರನೇ ಪ್ರಶಸ್ತಿಯೂ ಸಂದಿದೆ. ಮೈಸೂರಿನ ಜಿ.ಪಿ.ಐ.ಇ.ಆರ್.ನ `ಧನ್ವಂತರಿ ಚಿಕಿತ್ಸೆ~ (ಕುವೆಂಪು ಕಥೆ ಆಧರಿಸಿ ಡಾ.ವಿಜಯಾ ರಚನೆ, ನಿರ್ದೇಶನ ಮೈಮ್ ರಮೇಶ್) ನಾಟಕದ ಬೆಳಕಿನ ವಿನ್ಯಾಸಕ್ಕೆ ದ್ವಿತೀಯ ಪ್ರಶಸ್ತಿ ಲಭ್ಯವಾಗಿದೆ.ಉಡುಪಿ ತಾಲ್ಲೂಕು ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆ ಲೋಹಿತ ನಾಯ್ಕರರ `ಬದುಕಲು ಬಿಡ್ರಪ್ಪೊ~ ನಾಟಕ ಪ್ರದರ್ಶಿಸಿತು. ನಾಟಕ ನಿರ್ದೇಶಿಸಿ ಪೋಷಕ ಪಾತ್ರದಲ್ಲಿ ನಟಿಸಿದ ಸುಗಂಧಿ ಉಮೇಶ ಕಲ್ಮಾಡಿ ಅವರಿಗೆ ದ್ವಿತೀಯ ಪ್ರಶಸ್ತಿ ಲಭಿಸಿತು. ಮುಂಬಯಿಯ ಕನ್ನಡ ಸೇವಾ ಸಂಘ ಪ್ರದರ್ಶಿಸಿದ `ಆತ್ಮ~ (ರ-ನಿ: ನಾಗರಾಜ ಗುರುಪುರ) ನಾಟಕದ ಬಾಲನಟ ಅಮಿತ್ ಶೆಟ್ಟಿಗೆ ದಿ.ಗಜಾನನ ಯಾಜಿ ಸ್ಮರಣಾರ್ಥ ಅತ್ಯುತ್ತಮ ಬಾಲನಟ ಪ್ರಶಸ್ತಿ ಪ್ರಾಪ್ತವಾದರೆ, ಬೆಂಗಳೂರಿನ ನಾಟ್ಯದರ್ಪಣದ `ಸದ್ದು ವಿಚಾರಣೆ ನಡೀತಿದೆ~ ನಾಟಕದ (ಮೂಲ; ವಿಜಯ ತೆಂಡೂಲ್ಕರ, ನಿ: ಅಬ್ಬೂರು ಜಯತೀರ್ಥ) ಸುಧಾ ಪ್ರಸನ್ನರಿಗೆ ತೃತೀಯ ಪ್ರಶಸ್ತಿ ಲಭಿಸಿತು.

 

ಲಂಕೇಶರ `ಗುಣಮುಖ~ ನಾಟಕ ಕೆ.ಚೌಡಯ್ಯ ನಿರ್ದೇಶನದಲ್ಲಿ ಬೆಂಗಳೂರಿನ ದರ್ಶನ ರಂಗ ಪ್ರಯೋಗಿಸಿತು. ಈ ನಾಟಕದ ವಿನ್ಯಾಸಕ್ಕೆ ಪ್ರಥಮ, ವೇಷಭೂಷಣಕ್ಕೆ ದ್ವಿತೀಯ ಪ್ರಶಸ್ತಿಯೂ ಪ್ರಾಪ್ತವಾಯಿತು. ತೃತೀಯ ನಟ ಪ್ರಶಸ್ತಿ `ಉರುಳು~ ನಾಟಕದ ರಾಜಗೋಪಾಲ ಶೇಟ್ ಅವರಿಗೆ ಲಭಿಸಿತು. ಸದಾನಂದ ಸುವರ್ಣ ಅವರ ಈ ನಾಟಕವನ್ನು ಬಾಸುಮ ಕೊಡಗು ನಿರ್ದೇಶನದಲ್ಲಿ ಸುಮನಸಾ ಕೊಡವೂರು ಪ್ರದರ್ಶಿಸಿತು.ರಂಗಸಜ್ಜಿಕೆ, ವೇಷಭೂಷಣ, ಸಂಗೀತ, ಬೆಳಕು ನೀಡಿದವರ ಹೆಸರುಗಳನ್ನೂ ಸಹ ಪ್ರಕಟಿಸಬೇಕು. ಇಲ್ಲವಾದರೆ ಈ ನೇಪಥ್ಯ ರಂಗಕರ್ಮಿಗಳು ನೇಪಥ್ಯದಲ್ಲೇ ಉಳಿದುಬಿಡುತ್ತಾರೆ! ನಾಟಕದ ಯಶಸ್ಸಿಗೆ ಒಟ್ಟು ಟೀಂ ವರ್ಕೇ ಮುಖ್ಯ.

ಹಿರಿಯ ರಂಗಕರ್ಮಿಗಳಾದ ಸತೀಶ ಕುಲಕರ್ಣಿ, ಸಾಸ್ವೆಹಳ್ಳಿ ಸತೀಶ್, ದ್ರಾಕ್ಷಾಯಣಿ ಭಟ್ ತೀರ್ಪುಗಾರರಾಗಿದ್ದರು.ಭಾಗವಹಿಸಿದ ತಂಡಗಳಲ್ಲಿ ಒಂದು ತಂಡ ಹೊರತುಪಡಿಸಿ, ಎಲ್ಲರಿಗೂ ಒಂದಲ್ಲ ಒಂದು ಪ್ರಶಸ್ತಿ ಸಂದಿವೆ. ಅಷ್ಟಕ್ಕೂ ಇಲ್ಲಿ ಪ್ರಶಸ್ತಿಯೇ ಮುಖ್ಯವಲ್ಲ. ಮುಂಬಯಿ  ಕನ್ನಡ ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೆ ಕರ್ನಾಟಕದಲ್ಲಿ ಆಗುತ್ತಿರುವ ಪ್ರಯೋಗಗಳ ಪರಿಚಯ ಇಲ್ಲಿ ಆಗುತ್ತದೆ.ಮುಂಬಯಿಯ ರಂಗಕರ್ಮಿಗಳು ಸುಸಜ್ಜಿತ ರಂಗಮಂದಿರದಲ್ಲಿ ಕುಳಿತು ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುವುದೇ ಈ ಸ್ಪರ್ಧೆಯ ದೊಡ್ಡ ಪ್ರಯೋಜನ. ಈ ಉತ್ಸವದ ಯಶಸ್ಸಿನ ನೇಪಥ್ಯದ ರೂವಾರಿಗಳು ಹಿರಿಯ ರಂಗಕರ್ಮಿ ಭರತ್‌ಕುಮಾರ್ ಪೊಲಿಪು, ಪತ್ರಕರ್ತ ಓಂದಾಸ್ ಕಣ್ಣಂಗಾರ್ ಹಾಗೂ ಅವರ ತಂಡ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry