ಮುಂಬೈ: ಕಟ್ಟಡಗಳ ಏಳು-ಬೀಳು

ಬುಧವಾರ, ಜೂಲೈ 17, 2019
30 °C

ಮುಂಬೈ: ಕಟ್ಟಡಗಳ ಏಳು-ಬೀಳು

Published:
Updated:

ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇತ್ತೀಚೆಗೆ ಕಟ್ಟಡಗಳು ಕುಸಿದು ಹಲವರು ಮೃತಪಟ್ಟರು. ಈ ಘಟನೆ ನಗರದಲ್ಲಿ ತಲೆ ಎತ್ತಿರುವ ಕಳಪೆ ಕಟ್ಟಡಗಳ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ. ಮಳೆಗಾಲದಲ್ಲಿ ಆಗಾಗ ಸಂಭವಿಸುವ ಈ ಅನಾಹುತವನ್ನು ನೋಡಿದರೆ ಮಹಾನಗರಿಯಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗಬಹುದೇನೋ ಎಂಬ ಆತಂಕ ಮೂಡುತ್ತದೆ.ಮುಂಬೈನಲ್ಲಿ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ಆರಂಭಿಕ ವರ್ಷಗಳಲ್ಲಿ ಕಟ್ಟಿದ ಕಟ್ಟಡಗಳು ಹಳೆಯದಾಗಿವೆ. ಆದ್ದರಿಂದ ಭಾರಿ ಮಳೆಗೆ ಇವು ಕುಸಿದು ಬೀಳುತ್ತಿವೆ ಎನ್ನುವುದು ಮಾಧ್ಯಮ ಹಾಗೂ ರಾಜಕೀಯ ವಲಯದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ. ಆದರೆ ಕೆಲವು ಘಟನೆಗಳನ್ನು ನೋಡಿದರೆ ಇಂಥ ಅನಾಹುತಕ್ಕೆ ಹಳೆಯ ಕಟ್ಟಡಗಳು ಮಾತ್ರವೇ ಕಾರಣವಲ್ಲ ಎನ್ನುವುದು ಗೊತ್ತಾಗುತ್ತದೆ.ಉದಾಹರಣೆಗೆ ಠಾಣೆ ಪ್ರಕರಣವನ್ನೇ ತೆಗೆದುಕೊಳ್ಳೋಣ. ಏಪ್ರಿಲ್ ತಿಂಗಳಿನಲ್ಲಿ ಇಲ್ಲಿ ಕಟ್ಟಡ ಕುಸಿದು ಸುಮಾರು 74 ಮಂದಿ ಅಸುನೀಗಿದ್ದರು. ಇದು ನಿರ್ಮಾಣ ಹಂತದಲ್ಲಿರುವ ಕಟ್ಟಡವಾಗಿತ್ತು. (ಠಾಣೆಯಲ್ಲಿನ ಬಹುತೇಕ ಕಟ್ಟಡಗಳಂತೆಯೇ ಇದನ್ನೂ ಅಕ್ರಮವಾಗಿ ಕಟ್ಟಲಾಗುತ್ತಿತ್ತು) ಕಳೆದ ತಿಂಗಳು, 34 ವರ್ಷ ಹಳೆಯ ಕಟ್ಟಡವೊಂದು ಬಿದ್ದು ಕನಿಷ್ಠ ಹತ್ತು ಜನ ಪ್ರಾಣ ಕಳೆದುಕೊಂಡಿದ್ದರು. ಅಷ್ಟೇ ಏಕೆ ಇತ್ತೀಚೆಗೆ ದಶಕದಷ್ಟು ಹಳೆಯ ಕಟ್ಟಡವೊಂದು ಕುಸಿದು ಕನಿಷ್ಠ ಆರು ಮಂದಿ ಮೃತಪಟ್ಟು, ಡಜನ್‌ಗೂ ಹೆಚ್ಚು ಜನರು ಗಾಯಗೊಂಡಿದ್ದರು. ಇವೆಲ್ಲ ತೀರ ಹಳೆಯ ಕಟ್ಟಡಗಳೇನೂ ಅಲ್ಲ.ಅವೈಜ್ಞಾನಿಕ ನಗರ ನೀತಿ, ಲಂಗುಲಗಾಮಿಲ್ಲದ ರಿಯಲ್ ಎಸ್ಟೇಟ್ ವ್ಯವಹಾರದಿಂದ ಮುಂಬೈನಲ್ಲಿ ಅಕ್ರಮ ಕಟ್ಟಡಗಳು ಎಲ್ಲೆಂದರಲ್ಲಿ ತಲೆ ಎತ್ತಿವೆ. ಇತ್ತೀಚೆಗೆ ಕಟ್ಟಡ ಕುಸಿದು ಮೃತಪಟ್ಟ ಪ್ರಕರಣಗಳನ್ನು ನೋಡಿದರೆ ಮುಂಬೈ ಹೊರವಲಯದಲ್ಲಿಯೇ ಹೆಚ್ಚಿನ ಅನಾಹುತಗಳು ಸಂಭವಿಸಿವೆ ಎನ್ನುವುದು ಸ್ಪಷ್ಟವಾಗುತ್ತದೆ. ಇಲ್ಲಿ ಮಧ್ಯಮ ವರ್ಗದ ಜನರ ಕೈಗೆಟುಕುವಂತೆ ವಸತಿ ಸಮುಚ್ಚಯಗಳು ನಿರ್ಮಾಣವಾಗಿವೆ.ರಿಯಲ್ ಎಸ್ಟೇಟ್ ವಲಯ ಬಲಗೊಳ್ಳುತ್ತಿದ್ದಂತೆಯೇ ಕಟ್ಟಡಗಳ ಬೆಲೆ ಹಾಗೂ ಎತ್ತರ ಕೂಡ ಗಗನಕ್ಕೇರಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸುವ ಭರದಲ್ಲಿ ಗುಣಮಟ್ಟವನ್ನು ಕೇಳುವವರೇ ಇಲ್ಲ. ಹಾಗೆ ನೋಡಿದರೆ ಮುಂಬೈ ನಗರ ಹಾಗೂ ಹೊರವಲಯದಲ್ಲಿ ಹೆಚ್ಚಿನವರು ಸುಲಭವಾಗಿ ಮಾರಾಟ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಖಾಲಿ ಫ್ಲಾಟ್‌ಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಮುಂಬೈನಂಥ ಅತಿ ಹೆಚ್ಚು ಜನಸಾಂದ್ರತೆಯ ನಗರದಲ್ಲಿ ಸುಮಾರು ಐದು ಲಕ್ಷದಷ್ಟು ಮನೆಗಳು ಹಾಗೂ ಫ್ಲಾಟ್‌ಗಳು ಯಾಕೆ ಖಾಲಿ ಇವೆ ಎನ್ನುವುದು (2011ರ ಸರ್ಕಾರದ ಗಣತಿ) ಈ ಮೇಲಿನ ಅಂಶದಿಂದ ಸ್ವಲ್ಪವಾದರೂ ಅರ್ಥವಾಗುತ್ತದೆ.ವಾಣಿಜ್ಯ ನಗರದಲ್ಲಿ ಗಗನಚುಂಬಿ ಕಟ್ಟಡಗಳಿಗೆ ಎಲ್ಲಿಲ್ಲದ ಮಹತ್ವ. ಒಂದು ಕಡೆ ಮಿತಿಮೀರಿದ ಜನಸಂಖ್ಯೆ, ಇನ್ನೊಂದೆಡೆ ಜಾಗದ ಕೊರತೆ-ಇವೆರಡು ಸಮಸ್ಯೆಗಳಿಗೆ ಎತ್ತರದ ಕಟ್ಟಡಗಳೇ ಏಕೈಕ ಪರಿಹಾರ ಎನ್ನುವ ಸಮರ್ಥನೆ ಕೊಡಲಾಗುತ್ತದೆ. ಇಲ್ಲಿ 300 ಅಡಿ ಅಥವಾ ಅದಕ್ಕಿಂತಲೂ ಎತ್ತರದ ಡಜನ್‌ಗಟ್ಟಲೆ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ.ಹೂಡಿಕೆದಾರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಂಬೈನಲ್ಲಿ ವಿಶ್ವದ ಎರಡನೇ ಅತಿ ಎತ್ತರದ ಕಟ್ಟಡ ( ಸುಮಾರು 2,300 ಅಡಿ) ನಿರ್ಮಿಸಲು ಹೊರಟಿದ್ದಾರೆ. ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕೆ ವಾಸ್ತುಶಾಸ್ತ್ರಜ್ಞರು ಎಂದಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತ ಬಂದಿದ್ದಾರೆ.ಪ್ರತಿಯೊಂದು ಎತ್ತರದ ಕಟ್ಟಡಕ್ಕೂ ಸಮತಲ ವಿಸ್ತಾರವಾಗಿರಬೇಕು. ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ರಸ್ತೆ, ತೆರೆದ ಜಾಗ ಮತ್ತಿತರ ಸೇವೆಗಳು ಲಭ್ಯವಾಗಬೇಕು. ಇನ್ನೊಂದು ಅಂಶವೆಂದರೆ ಒಂದು ಕಟ್ಟಡವನ್ನು ಎತ್ತರಕ್ಕೆ ಕಟ್ಟುತ್ತ ಹೋದಂತೆ ಅದರ ನಿರ್ಮಾಣ ಹಾಗೂ ನಿರ್ವಹಣಾ ವೆಚ್ಚ ದುಬಾರಿಯಾಗುತ್ತ ಹೋಗುತ್ತದೆ. ಕಳೆದ ದಶಕದಲ್ಲಿ ದಕ್ಷಿಣ ಮುಂಬೈನಲ್ಲಿ ಎತ್ತರದ ಕಟ್ಟಡಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಂಡವು. ಇದೇ ವೇಳೆ ಇಲ್ಲಿನ ಜನಸಂಖ್ಯೆಯೂ ಕ್ಷೀಣಿಸಿದೆ. ಕಡಿಮೆ ಆದಾಯದ ಬಜೆಟ್‌ಗೆ ಇಂಥ ಕಟ್ಟಡಗಳು ಗಗನ ಕುಸುಮ ಎನ್ನುವುದನ್ನು ಇದು ಸ್ಪಷ್ಟಪಡಿಸುತ್ತದೆ.ಕೊಳೆಗೇರಿ ಜನರ ಸ್ಥಳಾಂತರ...

ಮುಂಬೈನ ಕೊಳೆಗೇರಿ ಜನರ ಸ್ಥಳಾಂತರದಲ್ಲಿಯೂ ಅವೈಜ್ಞಾನಿಕ ನೀತಿಯನ್ನು ಕಾಣಬಹುದು. ನಗರದ ಜನಸಂಖ್ಯೆಯಲ್ಲಿ ಶೇ 60ಕ್ಕೂ ಹೆಚ್ಚು ಮಂದಿ ಕೊಳೆಗೇರಿಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಕೊಳೆಗೇರಿಗಳನ್ನು ತೆರವುಗೊಳಿಸಿ ಅಲ್ಲಿ ಬಡವರಿಗೆ ಹೊಸದಾಗಿ ಮನೆಗಳನ್ನು ಕಟ್ಟಿಕೊಡುವ ಕಾರ್ಯ 90ರ ದಶಕದಿಂದಲೂ ನಡೆಯುತ್ತಿದೆ.ಕೊಳೆಗೇರಿ ಇದ್ದ ಜಾಗದಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ. ಇವುಗಳ ನಿರ್ವಹಣಾ ವೆಚ್ಚ ದುಬಾರಿಯಾಗಿದೆ. ಕಳಪೆ ಕಾಮಗಾರಿಯಿಂದ ಕೆಲವೇ ವರ್ಷಗಳಲ್ಲಿ ಈ ಕಟ್ಟಡಗಳು ಸೋರುತ್ತಿವೆ. ಅಲ್ಲದೇ ಗೋಡೆಗಳು ಬಿರುಕುಬಿಟ್ಟಿವೆ. ಗೃಹ ಆಧಾರಿತ ಆರ್ಥಿಕ ಚಟುವಟಿಕೆ ನಡೆಸುವುದಕ್ಕೂ ಇವು ಲಾಯಕ್ಕಾಗಿಲ್ಲ. ಅಕ್ಕಪಕ್ಕ ಬೀದಿ ವ್ಯಾಪಾರ ಮಾಡುವುದಕ್ಕೂ ಅವಕಾಶವಿಲ್ಲದ ಸ್ಥಿತಿ ಇಲ್ಲಿನದು. ಆದ್ದರಿಂದ ಹಲವರು ಇಲ್ಲಿನ ಮನೆಗಳನ್ನು ಮಾರಿ ಮತ್ತೆ ಕೊಳೆಗೇರಿ ಕಡೆ ಮುಖ ಮಾಡುವಂತಾಗಿದೆ.ಜನಸಾಂದ್ರತೆಯ ನಗರ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಕಷ್ಟದ ಕೆಲಸವೇನೂ ಅಲ್ಲ. 80ರ ದಶಕದಲ್ಲಿ ಟೋಕಿಯೊ ಹಾಗೂ ಮುಂಬೈನ ಕೆಲವು ಕಡೆ ಇದು ಯಶಸ್ವಿಯಾಗಿದೆ. ಸದ್ಯ ದಕ್ಷಿಣ ಅಮೆರಿಕದ ಅನೇಕ ನಗರಗಳಲ್ಲಿಯೂ ಈ ಕಾರ್ಯ ನಡೆಯುತ್ತಿದೆ.ಗುಣಮಟ್ಟದ ವಿಷಯದಲ್ಲಿ ಹೇಳುವುದಾದರೆ ನಗರದ ಹೊರವಲಯಗಳಿಗಿಂತ ಒಳಗಿನ ಕಟ್ಟಡಗಳೇ ಹೆಚ್ಚು ಸದೃಢವಾಗಿವೆ. ಬಹುತೇಕ ಸಂದರ್ಭಗಳಲ್ಲಿ ಸ್ಥಳೀಯ ಮೇಸ್ತ್ರಿಗಳೇ ಇಲ್ಲಿನ ಮನೆಗಳನ್ನು ಕಟ್ಟುತ್ತಾರೆ. ಸ್ಥಳೀಯವಾಗಿ ತಮಗಿರುವ ಒಳ್ಳೆಯ ಹೆಸರಿನಿಂದಲೇ ಇವರು ಕಟ್ಟಡ ಕಾಮಗಾರಿಯ ಗುತ್ತಿಗೆ ಪಡೆದುಕೊಳ್ಳುತ್ತಾರೆ. ಆದರೆ ದೊಡ್ಡ ಗುತ್ತಿಗೆದಾರರಿಗೆ ಈ ಮಾತು ಅನ್ವಯಿಸುವುದಿಲ್ಲ. ಒಂದು ಕಟ್ಟಡ ಮಾರಾಟವಾಗಿದ್ದೇ ತಡ ಅವರು ಅಲ್ಲಿಂದ ನಾಪತ್ತೆಯಾಗಿಬಿಡುತ್ತಾರೆ.ಸ್ಥಳೀಯ ಮೇಸ್ತ್ರಿಗಳ ವೃತ್ತಿ ನಿಯಮ ಹಾಗೂ ಕಸುಬುದಾರಿಕೆಯನ್ನು ನೋಡಿಯಾದರೂ ದೊಡ್ಡ ಗುತ್ತಿಗೆದಾರರು ಪಾಠ ಕಲಿತುಕೊಳ್ಳಬೇಕು. ಆಗ ನಗರದಲ್ಲಿ ಕಟ್ಟಡ ಕುಸಿದು ಜನ ಪ್ರಾಣ ಕಳೆದುಕೊಳ್ಳುವುದು ತಪ್ಪೀತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry